Advertisement

ಜಲಮಂಡಳಿ ಹುದ್ದೆಗಳ ಭರ್ತಿ ಶೀಘ್ರ

12:55 PM Aug 09, 2018 | |

ಬೆಂಗಳೂರು: ನಗರದಲ್ಲಿ ಸರಿಸುಮಾರು ಹತ್ತು ಲಕ್ಷ ಕುಟುಂಬಗಳಿಗೆ ಕುಡಿಯುವ ನೀರು ಪೂರೈಕೆ ಹಾಗೂ ಒಳಚರಂಡಿ ವ್ಯವಸ್ಥೆ ಕಲ್ಪಿಸುವ ಕೆಲಸದಲ್ಲಿ ನಿರತವಾಗಿರುವ ಜಲಮಂಡಳಿಯಲ್ಲಿ ಖಾಲಿ ಹುದ್ದೆಗಳ ಭರ್ತಿಯ ನೇಮಕಾತಿ ಪ್ರಕ್ರಿಯೆಗೆ ಕೊನೆಗೂ ಮುಹೂರ್ತ ನಿಗದಿಯಾಗಿದೆ.

Advertisement

ಎಂಜಿನಿಯರಿಂಗ್‌, ಮೀಟರ್‌ ರೀಡಿಂಗ್‌, ಕಚೇರಿ ನಿರ್ವಹಣೆ ವಿಭಾಗಗಳಲ್ಲಿ ಹಲವಾರು ವರ್ಷಗಳಿಂದ ಸಿಬ್ಬಂದಿ ಕೊರತೆಯಿಂದಾಗಿ ದೈನಂದಿನ ಕೆಲಸ-ಕಾರ್ಯಗಳಿಗೆ ತೊಂದರೆಯಾಗುತ್ತಿದ್ದ ಬಗ್ಗೆ ಸಾರ್ವಜನಿಕರಿಂದ ಸಾಕಷ್ಟು
ದೂರುಗಳು ಬಂದಿದ್ದವು. 

ಜತೆಗೆ, ಕಳೆದ ಮೇ ತಿಂಗಳಲ್ಲಿ ಕಾವೇರಿ ವಿಭಾಗ, ತ್ಯಾಜ್ಯ ನೀರು , ನಿರ್ವಹಣಾ ವಿಭಾಗಗಳ ಮುಖ್ಯ ಅಭಿಯಂತರ ಹಾಗೂ ಸಹಾಯಕ ಅಭಿಯಂತರರು ಸೇರಿ 21 ಅಧಿಕಾರಿಗಳು ನಿವೃತ್ತಿ ಹೊಂದಿದ್ದಾರೆ. ಈ ಪರಿಣಾಮ ಹಾಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಯ ಮೇಲೆ ಒತ್ತಡ ಹೆಚ್ಚಾಗಿತ್ತು. ಈ ಹಿನ್ನೆಲೆಯಲ್ಲಿ 270 ಹುದ್ದೆಗಳ ಭರ್ತಿಗೆ ಈ ಮಾಸಾಂತ್ಯದ ವೇಳೆಗೆ ಅಧಿಸೂಚನೆ ಹೊರಡಿಸಲು ಸಿದ್ಧತೆ ನಡೆಸಲಾಗುತ್ತಿದೆ.

ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿಯೇ ಖಾಲಿಯಿರುವ ಹುದ್ದೆಗಳ ಭರ್ತಿಗೆ ರಾಜ್ಯ ಸರ್ಕಾರ ಹಾಗೂ ಹಣಕಾಸು ಇಲಾಖೆಯಿಂದ ಜಲಮಂಡಳಿ ಅನುಮೋದನೆ ಪಡೆದಿತ್ತು. ಈ ಸಂಬಂಧ ನೇಮಕಾತಿ ಪರೀಕ್ಷೆ ನಡೆಸಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ (ಕೆಇಎ)ನಾಲ್ಕು ತಿಂಗಳ ಹಿಂದೆ ಜಲಮಂಡಳಿ ಮನವಿ ಮಾಡಿತ್ತು. ಈ ತಿಂಗಳು ಜಲಮಂಡಳಿ ಪ್ರಸ್ತಾವನೆಗೆ ಕೆಇಎ ಒಪ್ಪಿಗೆ ಸೂಚಿಸಿದೆ. 

ಮೊದಲ ಹಂತದಲ್ಲಿ ತಾಂತ್ರಿಕ ಹಾಗೂ ತಾಂತ್ರಿಕೇತರ ಸೇರಿ ಒಟ್ಟು 270 ಹುದ್ದೆಗಳ ನೇಮಕಕ್ಕೆ ಜಲಮಂಡಳಿ ಮುಂದಾಗಿದ್ದು, ನೇಮಕಾತಿಯಲ್ಲಿ 100 ಮೀಟರ್‌ ಮಾಪಕ ಹುದ್ದೆಗಳ ಭರ್ತಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಈ ಹುದ್ದೆಗಳ ಭರ್ತಿಗೆ ಪಿಯುಸಿ ವಿದ್ಯಾರ್ಹತೆ ನಿಗದಿಪಡಿಸಲಾಗಿದೆ.

Advertisement

ಹೆಚ್ಚಿದ ಒತ್ತಡ: ಜಲಮಂಡಳಿಗೆ ಒಟ್ಟು 3,500 ಹುದ್ದೆಗಳು ಮಂಜೂರಾಗಿದ್ದು, ಆ ಪೈಕಿ 1,297 ಹುದ್ದೆಗಳು ಖಾಲಿ ಉಳಿದಿವೆ. ಕಾಯಂ ನೇಮಕಾತಿ ಪ್ರಕ್ರಿಯೆ ತಡವಾದ ಕಾರಣ ಅನಿವಾರ್ಯವಾಗಿ ಸಿ ಹಾಗೂ ಡಿ ದರ್ಜೆಯ ಹುದ್ದೆಗಳಿಗೆ ಗುತ್ತಿಗೆ ಆಧಾರದಲ್ಲಿ ಸಿಬ್ಬಂದಿಯನ್ನು ನಿಯೋಜಿಸಿಕೊಳ್ಳಲಾಗಿದೆ.

ಮುಖ್ಯವಾಗಿ ನೀರು ಸೋರಿಕೆ ತಡೆಗಟ್ಟುವ ಕಾಮಗಾರಿ, ಕಾವೇರಿ ಐದನೇ ಹಂತದ ವಿಸ್ತರಣೆ, ಎಸ್‌ಟಿಪಿಗಳ ನಿರ್ಮಾಣ, 110 ಹಳ್ಳಿಗಳಿಗೆ ಕಾವೇರಿ ನೀರು ಒದಗಿಸುತ್ತಿರುವ ಯೋಜನೆಯಲ್ಲಿಯೂ ಅಧಿಕಾರಿಗಳಿಗೆ ಕಾರ್ಯಭಾರವಿದ್ದು, ಅದರ ಜತೆಗೆ ಎರಡು ವಿಭಾಗ, ಉಪವಿಭಾಗಗಳ ಹೊಣೆಯನ್ನು ಒಬ್ಬರೇ ಅಧಿಕಾರಿ ನಿಭಾಯಿಸುವಂತಾಗಿದೆ.

ಮೊದಲ ಹಂತದಲ್ಲಿ ಮಂಡಳಿಗೆ ಅಗತ್ಯವಾಗಿ ಬೇಕಿರುವ ಮೀಟರ್‌ ಮಾಪಕರು ಹಾಗೂ ಸಹಾಯಕ ಇಂಜಿನಿಯರ್‌ಗಳ ನೇಮಕಕ್ಕೆ ಆದ್ಯತೆ ನೀಡಿದ್ದೇವೆ. ಉಳಿದ ಹುದ್ದೆಗಳನ್ನು ಏಜೆನ್ಸಿ ಮೂಲಕ ಪಡೆಯಲಾಗುವುದು. ಮುಂದಿನ ದಿನಗಳಲ್ಲಿ ಮಂಡಳಿಯ ಗ್ರಾಹಕರು ಅಥವಾ ಸಂಪರ್ಕ ಸಂಖ್ಯೆಗೆ ಅನುಗುಣವಾಗಿ ಶೀಘ್ರವಾಗಿ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳುವ ಕುರಿತಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುತ್ತೇವೆ.
 ತುಷಾರ್‌ ಗಿರಿನಾಥ್‌, ಅಧ್ಯಕ್ಷರು ಜಲಮಂಡಳಿ

ಜಯಪ್ರಕಾಶ್‌ ಬಿರಾದಾರ್‌

Advertisement

Udayavani is now on Telegram. Click here to join our channel and stay updated with the latest news.

Next