ರಾಮದುರ್ಗ: ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ತುಳಿದು ಎತ್ತಿನ ಚಕ್ಕಡಿಯಲ್ಲಿ ಹೊಲಕ್ಕೆ ಹೊರಟ ಒಂದೇ ಕುಟುಂಬದ ನಾಲ್ವರು ಸೇರಿದಂತೆ ಎರಡು ಎತ್ತುಗಳು ಸಾವಿಗೀಡಾದ ದುರ್ಘಟನೆ ಬುಧವಾರ ನಸುಕಿನಲ್ಲಿ ರಾಮದುರ್ಗ ತಾಲೂಕಿನ ಕೆ.ತಿಮ್ಮಾಪೂರ ಗ್ರಾಮದಲ್ಲಿ ನಡೆದಿದೆ.
ರೈತ ರೇವಪ್ಪ ಕಲ್ಲೋಳ್ಳಿ (35), ಪತ್ನಿ ರತ್ನವ್ವ ರೇವಪ್ಪ ಕಲ್ಲೋಳ್ಳಿ(30), ಮಗ ಸಚಿನ ರೇವಪ್ಪ ಕಲ್ಲೋಳ್ಳಿ (8) ಹಾಗೂ ರೇವಪ್ಪನ ಸಹೋದರನ ಮಗ ಕೃಷ್ಣಾ ಶಿವಪ್ಪ ಕಲ್ಲೋಳ್ಳಿ (10) ಮೃತರು. ಚಕ್ಕಡಿಯಲ್ಲಿದ್ದ ಇಬ್ಬರು ಬಾಲಕಿಯರು ಹೊರ
ಜಿಗಿದು ಪ್ರಾಣ ಉಳಿಸಿಕೊಂಡಿದ್ದಾರೆ.
ರೇವಪ್ಪನ ಪುತ್ರಿ ಲಕ್ಷ್ಮೀ ರೇವಪ್ಪ ಕಲ್ಲೋಳ್ಳಿ (7), ಅಣ್ಣನ ಪುತ್ರಿ ಪ್ರಿಯಾಂಕ(ಫಕೀರವ್ವ) ಶಿವಪ್ಪ ಕಲ್ಲೋಳ್ಳಿ (5) ಬದುಕುಳಿದವರು. ಈ ಎಲ್ಲರೂ ಗ್ರಾಮದಲ್ಲಿ ಜಾತ್ರೆ ಇರುವುದರಿಂದಾಗಿ ಬಟ್ಟೆ ತೊಳೆಯಲೆಂದು ಗುರುವಾರ ನಸುಕಿನಲ್ಲಿ ಚಕ್ಕಡಿಯಲ್ಲಿ ಹಾಸಿಗೆ-ಹೊದಿಕೆ ತೆಗೆದುಕೊಂಡು ಹೊಲಕ್ಕೆ ಹೊರಟಿದ್ದರು. ಸಂತೋಷ ಮುದಕಪ್ಪ ಮಸ್ಕಿ ಎಂಬುವರ ಹೊಲದಲ್ಲಿ ಹಾಯ್ದು ಹೋದ ವಿದ್ಯುತ್ ತಂತಿ ಎರಡು ದಿನಗಳ ಹಿಂದೆ ತುಂಡಾಗಿ ಬಿದ್ದಿತ್ತು. ಈ ಬಗ್ಗೆ ಅಲ್ಲಿನ ಸಾರ್ವಜನಿಕರು ಹೆಸ್ಕಾಂ ಅಧಿಕಾರಿಗಳಿಗೆ ದೂರು ನೀಡಿದ್ದರು ಎಂದು ಹೇಳಲಾಗಿದೆ.
ಆದರೆ ರೇವಪ್ಪ ಹೊಲದಲ್ಲಿ ಬಿದ್ದ ತಂತಿಯನ್ನು ಗಮನಿಸದೇ ಚಕ್ಕಡಿ ಮುಂದೆ ಹೊಡೆದಾಗ ತಂತಿ ಎತ್ತಿನ ಕಾಲಿಗೆ ತಾಗಿ
ಅವಘಡ ಸಂಭವಿಸಿದೆ. ಅಪಾಯ ಅರಿತ ಇಬ್ಬರು ಬಾಲಕಿಯರು ಕೂಡಲೇ ಹಿಂದಿನಿಂದ ಜಿಗಿದು ಪಾರಾಗಿದ್ದಾರೆ. ಉಳಿದ ನಾಲ್ವರಿಗೆ ವಿದ್ಯುದಾಘಾತವಾಗಿ ನರಳಾಡುತ್ತಿದ್ದಾಗ ಇಬ್ಬರೂ ಓಡಿ ಊರಿಗೆ ಬಂದು ಮನೆಯವರಿಗೆ ಸುದ್ದಿ ಮುಟ್ಟಿಸಿದ್ದಾರೆ. ಮನೆಯವರು ಸ್ಥಳಕ್ಕೆ ಧಾವಿಸುವಷ್ಟರಲ್ಲಿ ಎಲ್ಲರೂ ಸಾವಿಗೀಡಾಗಿದ್ದರು. ಘಟನೆ ಕುರಿತು ಕಟಕೋಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಿಬ್ಬಂದಿ ಅಮಾನತಿಗೆ ಶಿಫಾರಸು: ಘಟನೆಗೆ ಸಂಬಂಧಿಸಿದಂತೆ ಸಾಲಹಳ್ಳಿ ಪ್ರಭಾರಿ ಶಾಖಾಧಿಕಾರಿ ಈರಣ್ಣ ಆರ್. ನಾಯ್ಕರ ಹಾಗೂ ಪವರ್‌ಮನ್ ಬಸವರಾಜ ಕಟಕೋಳ ಎಂಬುವರ ಅಮಾನತಿಗೆ ಮೇಲಧಿಕಾರಿಗೆ ವರದಿ ನೀಡಲಾಗಿದೆ ಎಂದು ಇಲಾಖೆಯ ಮೂಲಗಳು ತಿಳಿಸಿವೆ.
ಘಟನಾ ಸ್ಥಳಕ್ಕೆ ಶಾಸಕ ಮಹಾದೇವಪ್ಪ ಯಾದವಾಡ, ಮಾಜಿ ಕೇಂದ್ರ ಸಚಿವ ಬಾಬಾಗೌಡ ಪಾಟೀಲ, ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯ ಸಂಘಟನಾ ಕಾರ್ಯದರ್ಶಿ ಮಲ್ಲಿಕಾರ್ಜುನ ರಾಮದುರ್ಗ, ಜಿಲ್ಲಾಧ್ಯಕ್ಷ ಸತ್ಯಪ್ಪ ಮಲ್ಲಾಪೂರೆ, ತಾಲೂಕಾಧ್ಯಕ್ಷ ಜಗದೀಶ ದೇವರಡ್ಡಿ, ಸಂಚಾಲಕ ಯಲ್ಲಪ್ಪ ದೊಡಮನಿ, ಹಸಿರು ಸೇನೆ ಅಧ್ಯಕ್ಷ ಶಿವಾನಂದ ದೊಡವಾಡ ಸೇರಿದಂತೆ ಇರರು ಭೇಟಿ ನೀಡಿದರು.
ಅಧಿಕಾರಿಗಳ ಭೇಟಿ: ಹೆಚ್ಚುವರಿ ಪೊಲೀಸ್ ಅಧೀಕ್ಷಕ ರಾಮಲಕ್ಷ್ಮಣ ಅರಸಿದ್ದಿ, ತಹಶೀಲ್ದಾರ ಬಸನಗೌಡ ಕೋಟುರ, ಹೆಸ್ಕಾಂ ಬೆಳಗಾವಿ ಸುಪರಿಂಟೆಂಡೆಂಟ್ ಇಂಜಿನಿಯರ್ ಗಿರಿಧರ ಕುಲಕರ್ಣಿ, ಡಿ.ವೈ.ಎಸ್.ಪಿ ಬಿ.ಎಸ್.ಪಾಟೀಲ, ಸಿ.ಪಿ.ಐ ಶ್ರೀನಿವಾಸ ಹಂಡಾ, ಪಿ.ಎಸ್.ಐ ಗಳಾದ ವಿಜಯ ಕಾಂಬಳೆ, ಆರ್.ಎಂ.ಸಂಕನಾಳ ಭೇಟಿ ನೀಡಿ ಘಟನೆ ಕುರಿತು ಪರಿಶೀಲಿಸಿದರು.