Advertisement

ಸಾಹಸ ಮೆರೆದ ಚಿಣ್ಣರಿಗೆ “ಶೌರ್ಯ’ಗರಿ

11:43 AM Dec 06, 2018 | |

ಬೆಂಗಳೂರು: ನೀರಿನಲ್ಲಿ ತೇಲು ಹೋಗುತ್ತಿದ್ದ ಬಾಲಕನ ರಕ್ಷಣೆ, ಪ್ರವಾಹದಲ್ಲಿ ಕೊಚ್ಚಿ ಹೋಗುತ್ತಿದ್ದ ಹಿರಿಯ ದಂಪತಿ ಪ್ರಯಾಣ ರಕ್ಷಣೆ… ಹೀಗೆ ಹತ್ತಾರು ಪ್ರಸಂಗಗಳು ನೆರೆದಿದ್ದ ಸಭಿಕರಲ್ಲಿ ಅಚ್ಚರಿ ಮೂಡಿಸಿದವು. ಇಂತಹ ಸಾಹಸ ಮಾಡಿದ್ದು ಚಿಣ್ಣರು ಎಂಬುದು ವಿಶೇಷ. ಪ್ರಾಣ ಲೆಕ್ಕಸದೆ ಸಾಹಸದಿಂದ ಮತ್ತೂಬ್ಬರ ಜೀವ ಕಾಪಾಡಿದ  ಈ ಪ್ರಸಂಗಗಳು ತೆರೆದುಕೊಂಡಿದ್ದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಮ್ಮಿಕೊಳ್ಳಲಾದ ಮಕ್ಕಳ ದಿನಾಚರಣೆಯಲ್ಲಿ.

Advertisement

ಮನೆಯ ಬಳಿ ಆಟವಾಡುತ್ತಿದ್ದ ಮಗು ಆಕಸ್ಮಿಕವಾಗಿ ಬಾವಿಗೆ ಬಿದ್ದಿದ್ದನ್ನು ಕಂಡ ಬೆಳಗಾವಿಯ ನಿಖೀಲ ದಯಾನಂದ ತನ್ನ ಪ್ರಾಣವನ್ನು ಲೆಕ್ಕಿಸದೆ ನೀರೆತ್ತುವ ಮೋಟಾರಿನ ಪೈಪನ್ನು ಹಿಡಿದು ಬಾವಿಯೊಳಗೆ ಇಳಿದು ಮಗುವನ್ನು ರಕ್ಷಿಸಿದ್ದ. ವಡೇರಹಟ್ಟಿ ಗ್ರಾಮದಲ್ಲಿ ಭಜಂತ್ರಿಯವರ ಓಣಿಯಲ್ಲಿರುವ ಇಂದ್ರವೇಣಿ ಹಳ್ಳದಲ್ಲಿ ಮಳೆ ನೀರು ಸಂಗ್ರಹವಾಗಿತ್ತು. ಇದರಲ್ಲಿ ಆಕಸ್ಮಿಕವಾಗಿ ಬಿದ್ದು ತೇಲಿ ಹೋಗುತ್ತಿದ್ದ ಹುಡುಗನ ಚೀರಾಟ ಕೇಳಿ ಸ್ಥಳಕ್ಕೆ ಧಾವಿಸಿದ ಬೆಳಗಾವಿಯ ಶಿವಾನಂದ ಹೊಸಟ್ಟಿ ಹಾಗೂ ಸಿದ್ದಪ್ಪ ಕೆಂಪಣ್ಣ ಹೊಸಟ್ಟಿ ಹಳ್ಳಕ್ಕೆ ಹಾರಿ ಮುಳುಗುತ್ತಿದ್ದ ಬಾಲಕನ ರಕ್ಷಣೆ ಮಾಡಿದ್ದರು. 

ಇನ್ನು ದಕ್ಷಿಣ ಕನ್ನಡದ ಜೆ.ಪ್ರಮೀತ್‌ ರಾಜ್‌, ಮಳೆಯಿಂದ ಮನೆಯೊಳಗೆ ನೀರು ನುಗ್ಗಿ ಸಂಪೂರ್ಣವಾಗಿ ಮುಳುಗುತ್ತಿದ್ದ ಹಿರಿಯ ದಂಪತಿಗಳನ್ನು ಹಗ್ಗದ ಸಹಾಯದಿಂದ ರಕ್ಷಿಸಿದ ಘಟನೆಗಳು ಚಿಣ್ಣರ ಸಾಹಸಗಾಥೆಯಾದರೆ, ಕಾರವಾರದ ಹೇಮಂತ್‌ ಎಸ್‌.ಎಂ ಶಿರಸಿಯ ಗುರುವಳ್ಳಿ ಬಿಲ್ಲೂಗದ್ದೆಯ ಸಮೀಪವಿರುವ ಪಟ್ಟಣದ ಹೊಳೆಯಲ್ಲಿ ಈಜಾಡಲು ಹೋಗಿ ನೀರಿನಲ್ಲಿ ಮುಳುಗುತ್ತಿದ್ದ ಇಬ್ಬರು ಸ್ನೇಹಿತರನ್ನು ರಕ್ಷಿಸಿ ನೀರಿನ ಸೆಳೆತಕ್ಕೆ ಸಿಲುಕಿ ಸಾವನಪ್ಪಿದ ಪ್ರಸಂಗದ ಪ್ರಸ್ತಾಪ ಸಮಾರಂಭದಲ್ಲಾಯಿತು.

ಹೊನ್ನಾವರದ ಆರ್ತಿ ಕಿರಣ್‌ ಶೇಟ್‌ ತನ್ನ 2 ವರ್ಷದ ಸಹೋದರನನ್ನು ಆಟವಾಡಿಸುತ್ತಿದ್ದಾಗ ಹೋರಿ ಬಂದು ಪುಟ್ಟ ಕಂದನ ಮೇಲೆ ದಾಳಿ ಮಾಡಿದ ಸಂದರ್ಭದಲ್ಲಿ ಬಾಲಕಿಯು ತನ್ನ ಬೆನ್ನನ್ನು ಅಡ್ಡವಾಗಿ ನೀಡಿ, ಹೋರಿ ತಿವಿದರೂ ಅದನ್ನು ಲೆಕ್ಕಿಸದೇ ತಮ್ಮನನ್ನು ಎತ್ತಿಕೊಂಡು ಓಡಿ ಹೋಗಿ ಪ್ರಾಣಾಪಾಯದಿಂದ ರಕ್ಷಿಸಿದ್ದು ಮೈಸೂರಿನ ಎಸ್‌.ಎನ್‌.ಮೌರ್ಯ ಸ್ನೇಹಿತನೊಂದಿಗೆ ಹಾರಂಗಿ ಜಲಾಶಯ ನೋಡಲು ಹೋಗಿದ್ದು,

ತಿಂಡಿ ತಿಂದು ತಟ್ಟೆ ತೊಳೆಯುವ ನದಿಯ ಹತ್ತಿರ ಹೋದಾಗ ವೃದ್ಧೆಯೊಬ್ಬರು ಕಾಲು ಜಾರಿ ನೀರಿನಲ್ಲಿ ಬಿದ್ದಿರುವುದನ್ನು ಕಂಡು ಅವರನ್ನು ಪ್ರಾಣಾಪಾಯದಿಂದ ರಕ್ಷಿಸಿದ ಘಟನೆಗಳನ್ನು ಅಧಿಕಾರಿಗಳು ತಿಳಿಸಿದರು. ಈ ಮಕ್ಕಳಿಗೆ ತಲಾ 10 ಸಾವಿರ ರೂ.ಗಳನ್ನೊಳಗೊಂಡ ಹೊಯ್ಸಳ ಮತ್ತು ಕೆಳದಿ ಚೆನ್ನಮ್ಮ ಶೌರ್ಯ ಪ್ರಶಸ್ತಿ ನೀಡಿ ಗೌರವಿಸಲಾಯಿತು.

Advertisement

ಮಕ್ಕಳ ಕಲ್ಯಾಣ ಪ್ರಶಸ್ತಿ: ಬೆಂಗಳೂರಿನ ಸುರಭಿ ಫೌಂಡೇಷನ್‌ ಟ್ರಸ್ಟ್‌, ಕೊಡಗಿನ ಚೆಶೈರ್‌ ಹೋಮ್ಸ್‌ ಇಂಡಿಯಾ, ಬೆಳಗಾವಿಯ ನಂದನ ಮಕ್ಕಳ ಧಾಮ ಮತ್ತು ಕಲಬುರಗಿಯ ಡಾನ್‌ ಬಾಸ್ಕೋ ಸೊಸೈಟಿಗೆ ಸಂಘ ಸಂಸ್ಥೆಗಳ ವಿಭಾಗದಲ್ಲಿ ತಲಾ 1 ಲಕ್ಷ ರೂ. ನಗದನ್ನೊಳಗೊಂಡಿರುವ ಮಕ್ಕಳ ಕಲ್ಯಾಣ ಪ್ರಶಸ್ತಿ ನೀಡಲಾಯಿತು. ತುಮಕೂರಿನ ಅನ್ನಪೂರ್ಣ ವೆಂಕಟಪನಂಜಪ್ಪ, ಉಡುಪಿಯ ಜಯಶ್ರೀ ಭಟ್‌, ಬೆಳಗಾವಿಯ ಉಮೇಶ ಜಿ.ಕಲಘಟಗಿ, ಬಳ್ಳಾರಿಯ ಎಚ್‌.ಸಿ.ರಾಘವೇಂದ್ರ ಅವರಿಗೆ ವೈಯಕ್ತಿಕ ವಿಭಾಗದಲ್ಲಿ ತಲಾ 25 ಸಾವಿರ ರೂ. ನಗದು ಬಹುಮಾನವನ್ನೊಳಗೊಂಡಿರುವ ಮಕ್ಕಳ ಕಲ್ಯಾಣ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಸ್ನೇಹಿತರಿಗಾಗಿ ತನ್ನ ಪ್ರಾಣ ಬಲಿಕೊಟ್ಟ: ಎಂಟನೇ ತರಗತಿಯಲ್ಲಿ ಓದುತ್ತಿದ್ದ ನಮ್ಮ ಮಗ ಹೇಮಂತ್‌ ಎಸ್‌.ಎಂ. ಕ್ರೀಡೆಯಲ್ಲಿ ಪ್ರತಿಭಾವಂತ. ಅಲ್ಲದೆ, ಓದಿನಲ್ಲೂ ಮುಂದಿದ್ದ. ಆದರೆ, ಸ್ನೇಹಿತರ ರಕ್ಷಣೆ ಮಾಡಲು ಹೋಗಿ ತನ್ನ ಪ್ರಾಣವನ್ನೇ ಬಲಿಕೊಟ್ಟುಬಿಟ್ಟ. ಈ ಘಟನೆ ನಡೆದ ನಂತರ ರಕ್ಷಣೆಗೊಳಗಾದವರ ಪೋಷಕರು ಪೊಲೀಸ್‌ ಠಾಣೆಯಲ್ಲಿ ಆಕಸ್ಮಿಕ ಘಟನೆ ಎಂದು ನಮೂದಿಸಲು ಪಿತೂರಿ ನಡೆಸಿದ್ದಾರೆ. ನಮಗೆ ಶಿಕ್ಷಣ ಇಲಾಖೆಯಿಂದ ಒಂದಿಷ್ಟು ಪರಿಹಾರ ಸಿಕ್ಕಿದೆ ಬಿಟ್ಟರೆ ಬೇರೆ ಯಾವುದೇ ಪರಿಹಾರವೂ ಸಿಕ್ಕಿಲ್ಲ ಎಂದು ಮಗನನ್ನು ಕಳೆದುಕೊಂಡ ತಂದೆ-ತಾಯಿ ಚೆನ್ನಮ್ಮ ಹಾಗೂ ಶ್ರೀನಿವಾಸ ಆಚಾರ್‌ ನೋವನ್ನು ಹೇಳಿಕೊಂಡರು.

ಮನೆಯೊಳಗೆ ನೀರು ನುಗ್ಗಿ ಆ ಅಜ್ಜ ಅಜ್ಜಿ ಇಬ್ಬರು ನೀರಿನಲ್ಲಿ ಮುಳುಗುತ್ತಿದ್ದರು. ನನಗೆ ಅದನ್ನು ನೋಡಿ ಒಮ್ಮೆಲೆ ಗಾಬರಿಯಾಯಿತು. ಅವರನ್ನು ರಕ್ಷಿಸುವುದು ನನ್ನ ಕರ್ತವ್ಯವಾಗಿತ್ತು. ಅವರ ಜಾಗದಲ್ಲಿ ನನ್ನ ಅಜ್ಜ ಅಜ್ಜಿ ಇದ್ದಿದ್ದರೇ… ಎಂದು ಭಾವಿಸಿ ಅವರ ರಕ್ಷಣೆಗೆ ಮುಂದಾದೆ.
-ಜೆ.ಪ್ರಮಿತ್‌ ರಾಜ್‌, ಶೌರ್ಯ ಪ್ರಶಸ್ತಿ ಪಡೆದ ಬಾಲಕ

Advertisement

Udayavani is now on Telegram. Click here to join our channel and stay updated with the latest news.

Next