Advertisement

ಜ್ವರಪೀಡಿತ ಮಗುವಿನೊಂದಿಗೆ ಆಕ್ಸಿಜನ್‌ ಟ್ಯಾಂಕ್‌ ಹೊತ್ತೂಯ್ದ ತಂದೆ

10:41 AM Oct 15, 2017 | Team Udayavani |

ಹುಬ್ಬಳ್ಳಿ: ವೈದ್ಯಕೀಯ ಸಿಬ್ಬಂದಿಯಿಲ್ಲದೆ ರೋಗಿಯ ಸಂಬಂಧಿಕರೇ ಆಕ್ಸಿಜನ್‌ ಟ್ಯಾಂಕ್‌ ಹೊತ್ತುಕೊಂಡು ಜ್ವರದಿಂದ ಬಳಲುತ್ತಿದ್ದ ಮಗುವನ್ನು ಸ್ಕ್ಯಾನಿಂಗ್‌ಗೆ ಕರೆದು ಕೊಂಡು ಹೋಗುತ್ತಿದ್ದ ಘಟನೆ ವೈದ್ಯಕೀಯ ಶಿಕ್ಷಣ ಸಚಿವ ಡಾ| ಶರಣಪ್ರಕಾಶ ಪಾಟೀಲ ಎದುರೇ ಕಿಮ್ಸ್‌ ಆವರಣದಲ್ಲಿ ಶನಿವಾರ ನಡೆಯಿತು.

Advertisement

ತೀವ್ರ ಜ್ವರದಿಂದ ಬಳಲುತ್ತಿದ್ದ ಸವದತ್ತಿ ತಾಲೂಕಿನ ಹೂಲಿ ಗ್ರಾಮದ ಗೌತಮಿ ಸರ್ಪಣ್ಣವರ ಎಂಬ 2 ವರ್ಷದ ಮಗುವನ್ನು ಕಳೆದ ಎರಡು ದಿನಗಳ ಹಿಂದೆ ಕಿಮ್ಸ್‌ಗೆ ದಾಖಲಿಸಲಾಗಿತ್ತು. ಶನಿವಾರ ಬೆಳಗ್ಗೆ ವೈದ್ಯರು ಸ್ಕ್ಯಾನಿಂಗ್‌ಗೆ ಸೂಚಿಸಿದ್ದರು. ಆದರೆ, ಸೂಕ್ತ ವ್ಯವಸ್ಥೆ ಇಲ್ಲದ ಕಾರಣ ಮಗುವಿನ ಸಂಬಂಧಿಕರು ಪರದಾಡುವಂತಾಗಿತ್ತು. ಸಿಬ್ಬಂದಿಯಿಲ್ಲದ ಕಾರಣ ಪಾಲಕರೇ ಕೃತಕ ಉಸಿರಾಟದಲ್ಲಿದ್ದ ಮಗುವನ್ನು ಎತ್ತಿಕೊಂಡು ಆಕ್ಸಿಜನ್‌ ಟ್ಯಾಂಕ್‌ ಸಮೇತ ಸ್ಕ್ಯಾನಿಂಗ್‌ ಮಾಡಿಸಲು ತೆರಳುತ್ತಿದ್ದ ದೃಶ್ಯ ಕಂಡುಬಂತು.

ಘಟನೆ ಕುರಿತು ಮಾಧ್ಯಮಗಳು ಸಚಿವ ಡಾ| ಶರಣ ಪ್ರಕಾಶ ಪಾಟೀಲ ಅವರ ಗಮನ ಸೆಳೆಯುವ ಪ್ರಯತ್ನ ಮಾಡಿದವು. ಮಗು ಕೃತಕ ಉಸಿರಾಟದ ವ್ಯವಸ್ಥೆ ಮೇಲಿದೆ.

ಇಂತಹ ಸಮಯದಲ್ಲಿ ವೈದ್ಯಕೀಯ ಸಿಬ್ಬಂದಿ ಇಲ್ಲ. ಒಂದು ವೇಳೆ ಮಗುವಿನ ಜೀವಕ್ಕೆ ತೊಂದರೆಯಾದರೆ ಯಾರು ಹೊಣೆ ಎಂದು ಸಚಿವರನ್ನು ಪ್ರಶ್ನಿಸಲಾಯಿತು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, “ಸಿಬ್ಬಂದಿ ಇಲ್ಲದ ವೇಳೆ ಸಂಬಂಧಿಕರು ಕರೆದುಕೊಂಡು ಹೋಗುವುದು ಸಹಜ. ಇದನ್ನೇ ದೊಡ್ಡದಾಗಿ ಬಿಂಬಿಸುವುದು ಸರಿಯಲ್ಲ’ ಎಂದರು.

ಈ ಕುರಿತು ಪರಿಶೀಲಿಸುವಂತೆ ಕಿಮ್ಸ್‌ ನಿರ್ದೇಶಕ ಡಾ| ದತ್ತಾತ್ರೇಯ ಬಂಟ್‌ ಹಾಗೂ ಆಡಳಿತಾಧಿಕಾರಿ ಬಸವರಾಜ ಸೋಮಣ್ಣನವರ ಅವರಿಗೆ ಸೂಚಿಸಿದರು.

Advertisement

ಘಟನೆ ಬಗ್ಗೆ ಪ್ರತಿಕ್ರಿಯಿಸಿದ ನಿರ್ದೇಶಕ ಡಾ| ದತ್ತಾತ್ರೇಯ ಬಂಟ್‌, ಈ ಬಗ್ಗೆ ಪರಿಶೀಲಿಸಿ ಸೂಕ್ತ ಕ್ರಮಕೈಗೊಳ್ಳಲಾಗುವುದು. ಆಕ್ಸಿಜನ್‌ ಟ್ಯಾಂಕ್‌ ತೆಗೆದುಕೊಂಡು ಹೋಗಲು ಸಿಬ್ಬಂದಿ ವ್ಯವಸ್ಥೆಯಿದೆ. ಈ ಕುರಿತು ಸಿಬ್ಬಂದಿಯನ್ನು ವಿಚಾರಿಸಿ ಮುಂದಿನ ಕ್ರಮ ಜರುಗಿಸಲಾಗುವುದು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next