Advertisement
ಮತ ಎಣಿಕೆಗೆ ರಾಜ್ಯದ 34 ಚುನಾವಣ ಜಿಲ್ಲೆಗಳಲ್ಲಿ ಒಟ್ಟು 36 ಮತ ಎಣಿಕೆ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಬೆಂಗಳೂರು ನಗರ ಜಿಲ್ಲೆ ಹಾಗೂ ಬಿಬಿಎಂಪಿ ವ್ಯಾಪ್ತಿಯ ಮೂರು ಚುನಾವಣ ಜಿಲ್ಲೆಗಳಲ್ಲಿ ತಲಾ ಒಂದರಂತೆ ಒಟ್ಟು ನಾಲ್ಕು, ತುಮಕೂರು ಜಿಲ್ಲೆಯಲ್ಲಿ ಮೂರು ಮತ ಎಣಿಕೆ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಉಳಿದಂತೆ ಪ್ರತಿ ಜಿಲ್ಲೆಗೆ ಒಂದು ಮತ ಎಣಿಕೆ ಕೇಂದ್ರ ಇರಲಿದೆ. ಬಹುತೇಕ ಎಲ್ಲ ಮತ ಎಣಿಕೆ ಕೇಂದ್ರಗಳು ಜಿಲ್ಲಾ ಕೇಂದ್ರದಲ್ಲಿದ್ದು, ಉತ್ತರ ಕನ್ನಡ ಜಿಲ್ಲೆಯ ಮತ ಎಣಿಕೆ ಕೇಂದ್ರ ಕುಮಟಾದಲ್ಲಿ ಮಾಡಲಾಗಿದೆ.ಮತ ಎಣಿಕೆಗಾಗಿ 306 ಹಾಲ್‌ಗಳು ಮತ್ತು 4,256 ಟೇಬಲ್‌ಗಳ ವ್ಯವಸ್ಥೆ ಮಾಡಲಾಗಿದೆ. 224 ಚುನಾವಣಾಧಿಕಾರಿಗಳು, 317 ಸಹಾಯಕ ಚುನಾವಣಾಧಿಕಾರಿಗಳು (ಎಆರ್‌ಒ), ಪ್ರತಿ ಟೇಬಲ್‌ಗೆ ಒಬ್ಬರಂತೆ 4,256 ಮತ ಎಣಿಕೆ ಮೇಲ್ವಿಚಾರಕರು ಹಾಗೂ 4,256 ಮೈಕ್ರೋ ಅಬ್ಸರ್‌ವರ್‌ಗಳನ್ನು ನಿಯೋಜಿಸಲಾಗಿದೆ. ಇದಲ್ಲದೇ 450 ಹೆಚ್ಚುವರಿ ಎಆರ್‌ಒಗಳು ಇರಲಿದ್ದಾರೆ. ಈಗಾಗಲೇ ಮತ ಎಣಿಕೆ ಕಾರ್ಯದ ಸಿಬಂದಿಗೆ ಅಗತ್ಯ ತರಬೇತಿ ಮತ್ತು ಮಾರ್ಗದರ್ಶನ ನೀಡಲಾಗಿದೆ ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ಮನೋಜ್ ಕುಮಾರ್ ಮೀನಾ ತಿಳಿಸಿದ್ದಾರೆ.
ರಾಜ್ಯಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದ್ದು, 87 ಕಂಪೆನಿ ಅರೆಸೇನಾ ಪಡೆಗಳನ್ನು ಮತ ಎಣಿಕೆ ಕೇಂದ್ರಗಳಲ್ಲಿ ಭದ್ರತೆಗೆ ನಿಯೋಜಿಸಲಾಗಿದೆ.
ಒಂದು ಮತ ಎಣಿಕಾ ಕೇಂದ್ರಕ್ಕೆ 1 ಪ್ಲಟೂನ್ ಅರೆಸೇನಾ, 2 ಪ್ಲಟೂನ್ ಕೆಎಸ್‌ಆರ್‌ಪಿ, 2 ಪ್ಲಟೂನ್ ಡಿಎಆರ್ ಸಿಬಂದಿಯನ್ನು ಸ್ಥಳೀಯ ಪೊಲೀಸರ ಜತೆಗೆ ನಿಯೋಜಿಸಲಾಗಿದೆ. ಪ್ರತಿಯೊಂದು ಮತ ಎಣಿಕೆ ಕೇಂದ್ರಗಳಲ್ಲಿ ಪ್ರತಿ ಪಾಳಿಯಲ್ಲೂ ಒಬ್ಬರು ಇನ್‌ಸ್ಪೆಕ್ಟರ್‌ಗಳು ಉಸ್ತುವಾರಿ ವಹಿಸಲಿದ್ದಾರೆ. ಸಬ್ ಇನ್‌ಸ್ಪೆಕ್ಟರ್‌ಗಳು, ಎಎಸ್‌ಐ, ಹೆಡ್ ಕಾನ್‌ಸ್ಟೆಬಲ್‌ಗಳು ಹೆಚ್ಚಿನ ಸಂಖ್ಯೆಯಲ್ಲಿ ಇರಲಿದ್ದಾರೆ.