Advertisement
ಮುನ್ರೊ ಅವರ ಚಜೇಯ 109 ರನ್ ಸಾಹಸದಿಂದ ನ್ಯೂಜಿಲ್ಯಾಂಡ್ ಕೇವಲ 2 ವಿಕೆಟಿಗೆ 196 ರನ್ ಪೇರಿಸಿ ಸವಾಲೊಡ್ಡಿತ್ತು. ಇದನ್ನು ಬೆನ್ನಟ್ಟುವ ವೇಳೆ ಕಿವೀಸ್ ವೇಗಿ ಟ್ರೆಂಟ್ ಬೌಲ್ಟ್ ತಮ್ಮ ಮೊದಲ ಓವರಿನಲ್ಲೇ ಭಾರತದ ಆರಂಭಿಕರಾದ ಶಿಖರ್ ಧವನ್ ಮತ್ತು ರೋಹಿತ್ ಶರ್ಮ ಅವರನ್ನು ಪೆವಿಲಿಯನ್ನಿಗೆ ಅಟ್ಟಿದರು. ಆಗ ಸ್ಕೋರ್ ಬೋರ್ಡ್ ಕೇವಲ 11 ರನ್ ದಾಖ ಲಿಸುತ್ತಿತ್ತು. ಇದೇ ಪಂದ್ಯದ ಟರ್ನಿಂಗ್ ಪಾಯಿಂಟ್ ಆಗಿತ್ತು ಎಂದು ಪಂದ್ಯ ಶ್ರೇಷ್ಠ ಮುನ್ರೊ ಹೇಳಿದರು. ಇದಕ್ಕೆ ವ್ಯತಿರಿಕ್ತವೆಂಬಂತೆ ನ್ಯೂಜಿಲ್ಯಾಂಡ್ ಮೊದಲ ವಿಕೆಟಿಗೆ 11.1 ಓವರ್‌ಗಳಿಂದ 105 ರನ್ ಸೂರೆಗೈದಿತ್ತು.
ತಮ್ಮ ಶತಕದ ಬಗ್ಗೆಯೂ ಮುನ್ರೊ ಖುಷಿಯಿಂದ ಹೇಳಿಕೊಂಡರು. “ದೇಶದ ಪರ ಮೊದಲ ಶತಕ ಬಾರಿಸು ವುದೇ ಹೆಮ್ಮೆಯ ಸಂಗತಿ. ಕಳೆದ ಬಾಂಗ್ಲಾ ಸರಣಿಯಲ್ಲಿ ನನಗೆ ಈ ಅನುಭವವಾಗಿತ್ತು. ಆದರೆ ಭಾರತ ಕಠಿನ ಎದುರಾಳಿ. ಶತಕ ಬಾರಿಸುವುದು, ಪೂರ್ತಿ 20 ಓವರ್ ತನಕ ಬ್ಯಾಟಿಂಗ್ ವಿಸ್ತರಿಸುವುದು ಸುಲಭವಲ್ಲ. “ಗಪ್ಪಿ’ (ಗಪ್ಟಿಲ್) ಆರಂಭದಲ್ಲಿ ಹೆಚ್ಚಿನ ಸ್ಟ್ರೈಕ್ ಪಡೆದು ಬೀಸಲಾರಂಭಿಸಿದ್ದು ನನಗೆ ಸ್ಫೂರ್ತಿ ಕೊಟ್ಟಿತು. ಇದು ಬ್ಯಾಟಿಂಗಿಗೆ ಉತ್ತಮವಾದ ಟ್ರ್ಯಾಕ್ ಆಗಿತ್ತು. ಇಂಥ ಅಂಗಳದಲ್ಲೂ ನಮ್ಮ ಬೌಲರ್‌ಗಳು ದಿಟ್ಟ ದಾಳಿ ಸಂಘಟಿಸಿದರು’ ಎಂದರು.
Related Articles
Advertisement
ಎಕ್ಸ್‌ಟ್ರಾ ಇನ್ನಿಂಗ್ಸ್ಕಾಲಿನ್ ಮುನ್ರೊ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 2 ಶತಕ ಹೊಡೆದ 4ನೇ ಬ್ಯಾಟ್ಸ್‌ಮನ್ ಎನಿಸಿದರು. ಉಳಿದವರೆಂದರೆ ಬ್ರೆಂಡನ್ ಮೆಕಲಮ್, ಕ್ರಿಸ್ ಗೇಲ್ ಮತ್ತು ಎವಿನ್ ಲೆವಿಸ್. ಮುನ್ರೊ ಒಂದೇ ವರ್ಷದಲ್ಲಿ 2 ಟಿ20 ಶತಕ ಹೊಡೆದ ವಿಶ್ವದ ಮೊದಲ ಬ್ಯಾಟ್ಸ್‌ಮನ್. ಅವರ ಮೊದಲ ಸೆಂಚುರಿ ಇದೇ ಜನವರಿಯಲ್ಲಿ ಬಾಂಗ್ಲಾದೇಶ ವಿರುದ್ಧ ದಾಖಲಾಗಿತ್ತು (54 ಎಸೆತಗಳಿಂದ 101 ರನ್). ಮುನ್ರೊ ಭಾರತದೆದುರು ಶತಕ ಬಾರಿಸಿದ 3ನೇ ಕ್ರಿಕೆಟಿಗ. ಎವಿನ್ ಲೆವಿಸ್ (2) ಮತ್ತು ಶೇನ್ ವಾಟ್ಸನ್ ಉಳಿದಿಬ್ಬರು. ಮುನ್ರೊ ಭಾರತದ ವಿರುದ್ಧ ಭಾರತದಲ್ಲಿ ಶತಕ ಬಾರಿಸಿದ ಮೊದಲ ಆಟಗಾರ. 2012ರ ಚೆನ್ನೈ ಪಂದ್ಯದಲ್ಲಿ ಬ್ರೆಂಡನ್ ಮೆಕಲಮ್ 91 ರನ್ ಹೊಡೆದದ್ದು ಈವರೆಗಿನ ಗರಿಷ್ಠ ವೈಯಕ್ತಿಕ ಮೊತ್ತವಾಗಿತ್ತು. ಟ್ರೆಂಟ್ ಬೌಲ್ಟ್ ಜೀವನಶ್ರೇಷ್ಠ ಬೌಲಿಂಗ್ ಪ್ರದರ್ಶಿಸಿದರು (34ಕ್ಕೆ 4). ಅವರು ಭಾರತದೆದುರು 4 ವಿಕೆಟ್ ಕಿತ್ತ ನ್ಯೂಜಿಲ್ಯಾಂಡಿನ 3ನೇ ಬೌಲರ್. ಡೇನಿಯಲ್ ವೆಟರಿ (20ಕ್ಕೆ 4) ಮತ್ತು ಮಿಚೆಲ್ ಸ್ಯಾಂಟ್ನರ್ (11ಕ್ಕೆ 4) ಉಳಿದಿಬ್ಬರು. ಭಾರತ ತವರಿನ 12 ಚೇಸಿಂಗ್‌ಗಳಲ್ಲಿ 4ನೇ ಸೋಲನುಭವಿಸಿತು. ಇದರಲ್ಲಿ 3 ಸೋಲು ನ್ಯೂಜಿಲ್ಯಾಂಡ್ ಎದುರೇ ಬಂದಿದೆ. ವಿರಾಟ್ ಕೊಹ್ಲಿ ಟಿ20 ಪಂದ್ಯಗಳಲ್ಲಿ 7 ಸಾವಿರ ರನ್ ಪೂರ್ತಿಗೊಳಿಸಿದ ಭಾರತದ ಮೊದಲ, ವಿಶ್ವದ 8ನೇ ಆಟಗಾರ ಎನಿಸಿದರು. 10,571 ರನ್ ಬಾರಿಸಿರುವ ಕ್ರಿಸ್ ಗೇಲ್ ಮೊದಲ ಸ್ಥಾನದಲ್ಲಿದ್ದಾರೆ. ಉಳಿದವರೆಂದರೆ ಬ್ರೆಂಡನ್ ಮೆಕಲಮ್ (8,245), ಕೈರನ್ ಪೊಲಾರ್ಡ್ (7,589), ಡೇವಿಡ್ ವಾರ್ನರ್ (7,572), ಬ್ರಾಡ್ ಹಾಜ್ (7,338), ಡ್ವೇನ್ ಸ್ಮಿತ್ (7,270) ಮತ್ತು ಶೋಯಿಬ್ ಮಲಿಕ್ (7,226). ಕೊಹ್ಲಿ ಎಲ್ಲ ಮಾದರಿಯ ಟಿ20 ಪಂದ್ಯಗಳ 212 ಇನ್ನಿಂಗ್ಸ್ ಗಳಲ್ಲಿ 7 ಸಾವಿರ ರನ್ ಬಾರಿಸಿದರು. ಅತೀ ವೇಗದ ಇನ್ನಿಂಗ್ಸ್ ಲೆಕ್ಕಾಚಾರದಲ್ಲಿ ಇದಕ್ಕೆ 2ನೇ ಸ್ಥಾನ. ದಾಖಲೆ ಗೇಲ್ ಹೆಸರಲ್ಲಿದೆ (192 ಇನ್ನಿಂಗ್ಸ್). ಕೊಹ್ಲಿ 18ನೇ ಅರ್ಧ ಶತಕ ಹೊಡೆದರು. ಪರಾಜಿತ ಪಂದ್ಯಗಳಲ್ಲಿ ಕೊಹ್ಲಿ ಅವರಿಂದ ದಾಖಲಾದ 5ನೇ ಅರ್ಧ ಶತಕ ಇದಾಗಿದೆ. ಕೊಹ್ಲಿ ಟಿ20ಯಲ್ಲಿ 200 ಬೌಂಡರಿ ಬಾರಿಸಿದ 3ನೇ ಬ್ಯಾಟ್ಸ್ ಮನ್ ಎನಿಸಿದರು (207). ಉಳಿದ ಇಬ್ಬರೆಂದರೆ ತಿಲಕರತ್ನ ದಿಲ್ಶನ್ (223) ಮತ್ತು ಮೊಹಮ್ಮದ್ ಶಾಜಾದ್ (200). ಮುನ್ರೊ-ಗಪ್ಟಿಲ್ ಮೊದಲ ವಿಕೆಟಿಗೆ 105 ರನ್ ಒಟ್ಟುಗೂಡಿಸಿದರು. ಇದು ಮೊದಲ ವಿಕೆಟಿಗೆ ನ್ಯೂಜಿಲ್ಯಾಂಡಿನ 7ನೇ ಶತಕದ ಜತೆಯಾಟವಾದರೆ, ಭಾರತದ ವಿರುದ್ಧ ಎಲ್ಲ ವಿಕೆಟ್‌ಗಳಿಗೆ ಅನ್ವಯಿಸುವಂತೆ ನ್ಯೂಜಿಲ್ಯಾಂಡ್ ದಾಖಲಿಸಿದ ಮೊದಲ ಶತಕದ ಜತೆಯಾಟ.