Advertisement
ಮಳೆ ಬೀಳದ ಕೊರಗು ಬೈಲಹೊಂಗಲದ ಸುತ್ತಮುತ್ತಲಿನ ಹೆಚ್ಚಿನ ರೈತರನ್ನು ವಿಪರೀತ ಬಾಧಿಸಿದೆ. ಹೆಚ್ಚಿನ ಜಮೀನುಗಳು ಬಿತ್ತನೆ ಕಾಣದೆ ಬಟಾಬಯಲಿನಂತೆ ಗೋಚರಿಸುತ್ತಿವೆ. ಅಲ್ಲಲ್ಲಿ ಕೆಲವು ಜಮೀನುಗಳಲ್ಲಿ ಬಿತ್ತಿದ್ದ ಬೀಜಗಳು ಸಣ್ಣ ಮಳೆಗೆ ಚಿಗುರಿಕೊಂಡವಾದರೂ ಬಿಸಿಲಿನ ಝಳಕ್ಕೆ ಒಣಗಿ ಹೋಗಿವೆ. ಬಿತ್ತಿದ ಬೀಜ, ಹಾಕಿದ ಗೊಬ್ಬರದ ಬಾಬ್ತು ಕೈಗೆಟುಕುವ ಅವಕಾಶ ಬಹಳ ಕಡಿಮೆಯಾದಂತಾಗಿದೆ. ಇದೇ ಕಾರಣದಿಂದ ಬೈಲಹೊಂಗಲ ಸೀಮೆಯ ರೈತರ ಮೊಗದಲ್ಲಿ ಗೆಲುವಿಲ್ಲ. ಆದರೆ ಈ ಸೀಮೆಯ ರೈತ ಮಾರುತಿ ನಿಂಗಪ್ಪ ತಿಗಡಿ ಇವರಲ್ಲಿ ಮಾತ್ರ ಕೃಷಿಯ ಖುಷಿ ಮಾಸಿಲ್ಲ. ಕಾರಣ, ಈತ ಬೀಜ ಬಿತ್ತಿದ ಒಂದು ತಿಂಗಳ ನಂತರ ಸುರಿದ ಒಂದೇ ಒಂದು ಮಳೆಯಿಂದ ಗಿಡಗಳು ಹುಲುಸಾಗಿ ಬೆಳೆದು ಫಸಲು ನೀಡಿವೆ. ಕೊಯ್ಲು ಮುಗಿಸಿ ಕಾಳು ಬೇರ್ಪಡಿಸಲು ಸಂಗ್ರಹಿಸಿಟ್ಟಿದ್ದಾರೆ.
ಮಾರುತಿ ತಿಗಡಿ ಬೆಳಗಾವಿ ಜಿಲ್ಲೆ ಬೈಲಹೊಂಗಲದ ಮೃತ್ಯುಂಜಯ ನಗರದವರು. ಇವರಿಗೆ ಹತ್ತು ಎಕರೆ ಜಮೀನಿದೆ. ಅಲ್ಲಿ ಹೆಸರು ಬಿತ್ತಿದ್ದಾರೆ. ಹದಿನೈದು ಎಕರೆ ಭೂಮಿಯನ್ನು ಲಾವಣಿ ಪಡೆದು ಕೃಷಿ ಮಾಡುತ್ತಿದ್ದಾರೆ. ಅದರಲ್ಲಿ ಐದು ಎಕರೆಯಲ್ಲಿ ಸೋಯಾಬಿನ್, ಒಂದು ಎಕರೆಯಲ್ಲಿ ಮೆಣಸು, ಎರಡು ಎಕರೆಯಲ್ಲಿ ಶೇಂಗಾ, ಒಂದು ಎಕರೆಯಲ್ಲಿ ಜಾನುವಾರುಗಳ ಮೇವಿಗೆ ಹಸಿರು ಹುಲ್ಲು ಬೆಳೆಸಿದ್ದಾರೆ. ಮತ್ತೂಂದು ಎಕರೆಯಲ್ಲಿ ಸಜ್ಜೆ, ರಾಗಿ, ಜೋಳವನ್ನು ಮಿಶ್ರವಾಗಿ ಬೆಳೆಸಿದ್ದಾರೆ. ಇದು ಪಶು ಆಹಾರ ತಯಾರಿಕೆಯ ಸರಕು. ಹತ್ತು ಎಕರೆಯಲ್ಲಿನ ಹೆಸರು ಬೆಳೆಯ ಕೊಯ್ಲು ಮುಗಿದಿದೆ. ಮೇ ತಿಂಗಳ ಮೂರನೆಯ ವಾರ ಬಿತ್ತನೆ ಮಾಡಿದ್ದರು. ಜೂನ್ ಎರಡನೆಯ ವಾರದಲ್ಲಿ ಹನಿಸಿದ ಮಳೆಯಿಂದ ಬೆಳೆದು ನಿಂತ ಹೆಸರು ಫಸಲು ಹೊತ್ತು ನಿಂತಿದ್ದವು. ಎಕರೆಗೆ ಐದು ಕ್ವಿಂಟಾಲ್ ಇಳುವರಿ ಪಡೆದಿದ್ದಾರೆ. ನಿರೀಕ್ಷಿತ ಇಳುವರಿ ದೊರೆಯದಿದ್ದರೂ ಸಮಾಧಾನದ ಕಳೆ ಇವರಲ್ಲಿದೆ. ಹೆಸರಿನ ಜೊತೆಯಲ್ಲಿಯೇ ಬಿತ್ತಿದ ಸೋಯಾಬಿನ್ ಇನ್ನೊಂದು ತಿಂಗಳಿನಲ್ಲಿ ಕಟಾವಿಗೆ ಬರುವ ನಿರೀಕ್ಷೆಯಲ್ಲಿದ್ದಾರೆ.
Related Articles
ಒಂದುವೇಳೆ, ಕೃಷಿಯಲ್ಲಿ ಸೋತರೂ ಇವರು ಸಂಪೂರ್ಣ ಕುಗ್ಗಲಾರರು. ಹೈನುಗಾರಿಕೆಯಲ್ಲಿ ಆದಾಯದ ಭದ್ರತೆ ಕಂಡುಕೊಂಡಿದ್ದಾರೆ. ಏಳು ವರ್ಷಗಳ ಹಿಂದೆ ಒಂದು ಎಮ್ಮೆಯಿಂದ ಹೈನುಗಾರಿಕೆ ಆರಂಭಿಸಿದ್ದರು. ಪ್ರಸ್ತುತ ನಾಲ್ಕು ಮುರ್ರಾ ತಳಿಯ ಎಮ್ಮೆ, ಎರಡು ಎಚ್.ಎಫ್ ತಳಿಯ ಆಕಳು ಹೊಂದಿದ್ದಾರೆ. ದಿನಕ್ಕೆ ಎಮ್ಮೆಯಿಂದ 30-35 ಲೀಟರ್, ಆಕಳಿನಿಂದ 10-15 ಲೀಟರ್ ಹಾಲು ಪಡೆಯುತ್ತಿದ್ದಾರೆ.
Advertisement
ಪಟ್ಟಣದ ಮಧ್ಯಭಾಗದಲ್ಲಿ ಮನೆಯಿರುವುದರಿಂದ ಓಣಿಯಲ್ಲಿರುವ ಅಕ್ಕಪಕ್ಕದವರು ಇವರ ಕಾಯಂ ಗ್ರಾಹಕರು. ಮನೆಬಾಗಿಲಿಗೆ ಬಂದು ಖರೀದಿಸುತ್ತಾರೆ. ದಿನಕ್ಕೆ 20-25 ಲೀಟರ್ ಹಾಲು ನೆರೆಹೊರೆಯವರಿಗೇ ಮಾರಾಟವಾಗುತ್ತದೆ. ಉಳಿದಿರುವ ಹಾಲನ್ನು ಡೈರಿಗೆ ಹಾಕುತ್ತಾರೆ. ಎಮ್ಮೆ ಹಾಲಿಗೆ ಐವತ್ತು ರೂಪಾಯಿ ಹಾಗೂ ಆಕಳ ಹಾಲಿಗೆ ಮೂವತ್ತು ರೂಪಾಯಿ ದರ ಸಿಗುತ್ತದೆ.
ಜಾನುವಾರುಗಳಿಗೆ ಬೇಕಾದ ಆಹಾರವನ್ನು ತಾವೇ ತಯಾರಿಸಿಕೊಳ್ಳುತ್ತಾರೆ. ತಿಂಗಳಿಗೆ ಎರಡು ಕ್ವಿಂಟಾಲ್ ಹತ್ತಿ ಹಿಂಡಿ, ಗೋವಿನ ಜೋಳ, ಅರ್ಧ ಕ್ವಿಂಟಾಲ್ ಭತ್ತದ ತೌಡು, ಒಂದು ಕ್ವಿಂಟಾಲ್ ತೊಗರಿ ತೌಡು ಖರ್ಚಾಗುತ್ತದೆ. ಇವೆಲ್ಲವುಗಳನ್ನು ಖರೀದಿಸಿ ಮಿಶ್ರಣ ಮಾಡಿ ದಿನನಿತ್ಯ ಜಾನುವಾರುಗಳಿಗೆ ಆಹಾರವಾಗಿ ನಿಗದಿತ ಪ್ರಮಾಣದಲ್ಲಿ ದಿನಕ್ಕೆರಡು ಬಾರಿ ನೀಡುತ್ತಾರೆ. ಒಂದು ವರ್ಷಕ್ಕೆ ಬೇಕಾದ ಒಣ ಮೇವಿನ ಸಂಗ್ರಹ ಇವರಲ್ಲಿದೆ. ಸೋಯಾಬಿನ್, ಸಜ್ಜೆ, ಕಡಲೆ, ಶೇಂಗಾ, ಗೋಧಿ ಕಟಾವಿನ ನಂತರ ಸಿಗುವ ಕೃಷಿ ತ್ಯಾಜ್ಯ, ಸಂಸ್ಕರಣೆಯ ನಂತರ ಸಿಗುವ ಹೊಟ್ಟುಗಳನ್ನು ಸಂಗ್ರಹಿಸಿಟ್ಟುಕೊಳ್ಳುತ್ತಾರೆ. ಒಣ ಮೇವಿನ ಉದ್ದೇಶಕ್ಕಾಗಿಯೇ ಒಂದು ಎಕರೆಯಲ್ಲಿ ಬಿತ್ತಿದ ಸಜ್ಜೆ, ರಾಗಿ, ಜೋಳ ಮಿಶ್ರಣ ಕೃಷಿಯಿಂದ ದೊರೆತ ಮೇವನ್ನು ಚಾಪ್ ಕಟ್ಟರ್ ಸಹಾಯದಿಂದ ಸಣ್ಣದಾಗಿ ಕತ್ತರಿಸಿ ಸಂಗ್ರಸಿಟ್ಟುಕೊಂಡಿದ್ದಾರೆ. ಹೆಚ್ಚಿನ ವೆಚ್ಚಕ್ಕೆ ಆಸ್ಪದ ನೀಡದೇ ಹೈನುಗಾರಿಕೆ ಲಾಭದಾಯಕವಾಗಿಸಿಕೊಂಡಿದ್ದಾರೆ.
ಕೋಡಕಣಿ ಜೈವಂತ ಪಟಗಾರ