ಬೆಂಗಳೂರು: “ಕನ್ನಡ ಸಾಹಿತ್ಯ ಲೋಕದಲ್ಲಿ ಕಪಟವೇಷಧಾರಿಗಳಿದ್ದು, ಇವರು ಉರ್ದು ಭಾಷಿಕರನ್ನು ಕನ್ನಡದ ವಿರುದ್ಧ ಎತ್ತಿಕಟ್ಟುತ್ತಾ ಪ್ರಚೋದಿಸುವ ಕೆಲಸ ಮಾಡುತ್ತಿದ್ದಾರೆ,’ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ.ಎಸ್.ಜಿ.ಸಿದ್ಧರಾಮಯ್ಯ ಆಕ್ರೋಶ ವ್ಯಕ್ತಪಡಿಸಿದರು.
ಅಖೀಲ ಕರ್ನಾಟಕ ಕುವೆಂಪು ಸಾಂಸ್ಕೃತಿಕ ವೇದಿಕೆ ನಗರದ ರವೀಂದ್ರ ಕಲಾಕ್ಷೇತ್ರದ ನಯನ ಸಭಾಂಗಣದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಕನ್ನಡ ನುಡಿಹಬ್ಬ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, “ಈಗ ಉರ್ದು ಭಾಷಿಕರ ಪ್ರಚೋದನೆಯಲ್ಲಿ ತೊಡಗಿರುವ ಕಪಟ ಸಾಹಿತಿಗಳಿಗೂ, ಕೋಮುವಾದಿಗಳಿಗೂ ಯಾವುದೇ ವ್ಯಾತ್ಯಾಸ ಇಲ್ಲ. ಇವರು ರಾಜಕಾರಣಿಗಳಿಗಿಂತಲೂ ಹೆಚ್ಚು ಅಪಾಯಕಾರಿ,’ ಎಂದು ದೂರಿದರು.
“ಕನ್ನಡ ಅಭಿವೃದ್ಧಿ ಪ್ರಾಧಿಕಾರದಲ್ಲಿ ಉನ್ನತ ಸ್ಥಾನಮಾನಗಳನ್ನು ಅಲಂಕರಿಸಿದವರೇ ತಿಂದ ಮನೆಗೆ ದ್ರೋಹ ಬಗೆಯುವ ಕೆಲಸ ಮಾಡುತ್ತಿದ್ದಾರೆ. ಸ್ಥಳೀಯ ಭಾಷೆಗಳನ್ನು ನಾಶ ಮಾಡುವ ರೀತಿಯಲ್ಲಿ ಕೇಂದ್ರ ಸರ್ಕಾರ ನಡೆದುಕೊಳ್ಳುತ್ತಿದೆ. ಹೀಗಾಗಿ ಐತಿಹಾಸಿಕ ಭಾಷೆಗಳು ಆತಂಕವನ್ನು ಎದುರಿಸುತ್ತಿವೆ. ಈ ಹಿಂದೆ ಆಡಳಿತಾತ್ಮಕ ವ್ಯವಸ್ಥೆಯಲ್ಲಿ ಈ ರೀತಿಯ ಪ್ರಹಸನಗಳು ನಡೆದಿರಲಿಲ್ಲ,’ ಎಂದು ಯಾರ ಹೆಸರೂ ಹೇಳದೆ ತೀವ್ರ ವಾಗ್ಧಾಳಿ ನಡೆಸಿದರು.
“ಕೇಂದ್ರ ಸರ್ಕಾರ ಕೇವಲ ಗುಜರಾತ್ ಭಾಷೆಗೆ ಆದ್ಯತೆ ನೀಡುತ್ತಿದ್ದು, ಜವಬ್ದಾರಿಯುತ ಸ್ಥಾನದಲ್ಲಿರುವವವರು ಈ ಬಗ್ಗೆ ನೇರವಾಗಿ ಮಾತನಾಡಬೇಕು. ಆದರೆ ಸಾಹಿತ್ಯಲೋಕದಲ್ಲಿ ಇರುವ ಪ್ರಮುಖರು ಈ ಕುರಿತು ಪ್ರಶ್ನೆಯನ್ನೇ ಮಾಡದೆ, ವಿದ್ರೋಹದ ಮಾತುಗಳನ್ನಾಡುತ್ತಿದ್ದಾರೆ,’ ಎಂದು ಟೀಕಿಸಿದರು. “ಖಾಸಗಿ ಶಿಕ್ಷಣ ಸಂಸ್ಥೆಗಳ ಇಂಗ್ಲಿಷ್ ವ್ಯಾಮೋಹದ ಭರದಲ್ಲಿ ಕನ್ನಡ ಕಳೆದು ಹೋಗುತ್ತಿದೆ.
ಶಿಕ್ಷಣದಲ್ಲಿ ಆಡಳಿತ ಭಾಷೆಯಾಗಿ ಕನ್ನಡ ಅನುಷ್ಠಾನಗೊಳ್ಳದಿದ್ದರೆ ಸಿರಿಗನ್ನಡ ಉಳಿಯುವುದಿಲ್ಲ. ಈ ಬಗ್ಗೆ ಪ್ರತಿಭಟಿಸಬೇಕಿರುವ ಮನಸುಗಳು ಮಾತನಾಡುತ್ತಿಲ್ಲ,’ ಎಂದು ಬೇಸರ ವ್ಯಕ್ತಪಡಿಸಿದರು. ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಹಿರಿಯ ಪತ್ರಕರ್ತೆ ಡಾ.ವಿಜಯಾ ಮಾತನಾಡಿ, “ದೊಡ್ಡವರೀಗ ಮನಸ್ಸಿನ ಮಾತು (ಮನ್ ಕೀ ಬಾತ್) ಗುತ್ತಿಗೆಯಾಗಿ ಪಡೆದಿದ್ದು, ನಾವು ಮನಸ್ಸಿನ ಮಾತು ಹೇಳುವ ಸ್ಥಿತಿಯಲಿಲ್ಲ,’ ಎಂದರು.
ಪ್ರಶಸ್ತಿಗಳು ಜಾತಿ ಪ್ರತಿನಿಧಿಗಳಾಗಿವೆ!: “ಒಂದು ಕಾಲಘಟ್ಟದಲ್ಲಿ ಪ್ರಶಸ್ತಿಗಳು ಮೌಲ್ಯ ಉಳಿಸಿಕೊಂಡಿದ್ದವು. ಆದರೆ ಇಂದು ಪ್ರಶಸ್ತಿಗಳು ಜಾತಿಯ ಪ್ರತಿನಿಧಿಗಳಾಗಿ ಹರಿದು ಹಂಚಿಹೋಗುತ್ತಿವೆ. ಅವುಗಳು ಜಾತಿ ಸೂಚಕವಾಗಿರದೆ ಮೌಲ್ಯಯುತವಾಗಿದ್ದಾಗ ಮಾತ್ರ ಮತ್ತಷ್ಟು ತೂಕ ಬರುತ್ತದೆ,’ ಎಂದು ಸಾಧರಿಗೆ ಕಂದಂಬ ಪ್ರಶಸ್ತಿ ಪ್ರದಾನ ಮಾಡಿದ ಕರ್ನಾಟಕ ಸಂಸ್ಕೃತಿ ವಿಶ್ವವಿದ್ಯಾಲಯದ ಕುಲಪತಿ ಡಾ.ಪದ್ಮಾ ಶೇಖರ್ ಹೇಳಿದರು.
ಪ್ರಜಾಪ್ರಭುತ್ವದಲ್ಲಿ ಜವಬ್ದಾರಿಯುತ ಸ್ಥಾನದಲ್ಲಿರುವ ರಾಜಕಾರಣಿಗಳು ಭಾಷೆ ಬಳಕೆಯನ್ನು ಸರಿಯಾಗಿ ಮಾಡಬೇಕು. ಎಲ್ಲ ರಾಜಕಾರಣಿಗಳಿಗೂ ಇದು ಅನ್ವಯಿಸುತ್ತದೆ. ನಮ್ಮ ತಾಯಂದಿರ ಗೌರವ, ಘನತೆಯನ್ನು ಕಾಪಾಡಬೇಕು. ನಮ್ಮ ದ್ವೇಷ, ಸಿಟ್ಟನ್ನು ತೋರಿಸುವಾಗಲೂ ಪ್ರಾಮಾಣಿಕತೆ ಇರಬೇಕು.
-ಪ್ರೊ.ಎಸ್.ಜಿ.ಸಿದ್ಧರಾಮಯ್ಯ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ