ಉಳ್ಳಾಲ: ಅನಾರೋಗ್ಯದಿಂದ ಮೃತಪಟ್ಟ ಕಾರವಾರ ಮೂಲದ ಮಹಿಳೆಯೊಬ್ಬರ ಮೃತದೇಹವನ್ನು ತವರೂರಿಗೆ ಸಾಗಿಸಲು ಆರ್ಥಿಕ ಸಹಾಯ ಮಾಡುವ ಮೂಲಕ ವಿಧಾನಾಭಾ ಅಧ್ಯಕ್ಷ ಯು.ಟಿ.ಖಾದರ್ ಮಾನವೀಯತೆ ಮೆರೆದಿದ್ದಾರೆ.
ಕೆಎಸ್ ಆರ್ ಪಿಯಲ್ಲಿ ಕ್ಲೀನಿಂಗ್ ಕಾರ್ಯನಿರ್ವಹಿಸುತ್ತಿದ್ದ ಕಾರವಾರ ಬವಲ್ ಗ್ರಾಮದ ಮೂಲದ ಗೋವಿಂದ ಟಿ.ಸಾಲಿ ಎಂಬವರ ಪುತ್ರಿ ವಿದ್ಯಾ ವಿಕ್ರಮ್ ಅಂಬಿಗ್ (33) ಎಂಬವರು ದೇರಳಕಟ್ಟೆಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸ ಫಲಕಾರಿಯಾಗದೆ ಮೃತಪಟ್ಟಿದ್ದರು.
ಕಾಮಾಲೆ ರೋಗಕ್ಕೆ ತುತ್ತಾಗಿ ಹಲವು ದಿನಗಳ ಕಾಲ ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ಆಸ್ಪತ್ರೆಯ ಚಿಕಿತ್ಸೆ ಭರಿಸಲಾಗದೆ ಅತಂತ್ರ ಸ್ಥಿತಿಯಲ್ಲಿದ್ದ ಕುಟುಂಬದ ವಿಚಾರವನ್ನು ಕೊಣಾಜೆ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ , ಹಾಲಿ ಸದಸ್ಯ ನಝರ್ ಷಾ ಪಟ್ಟೋರಿ ಅವರು ವಿಧಾನಸಭಾಧ್ಯಕ್ಷರಲ್ಲಿ ತಿಳಿಸಿದ್ದು, ತಕ್ಷಣ ಸ್ಪಂಧಿಸಿದ ಸಭಾಧ್ಯಕ್ಷ ಯು.ಟಿ ಖಾದರ್ ಆಸ್ಪತ್ರೆ ಚಿಕಿತ್ಸೆ ಹಣವನ್ನು ಭರಿಸಿದ್ದಾರೆ.
ಬಳಿಕ ಮೃತದೇಹವನ್ನು ಕಾರವಾರದ ಹುಟ್ಟೂರಿಗೆ ಕೊಂಡೊಯ್ಯಲು ನಮ್ಮೂರ ಧ್ವನಿ ಆಂಬ್ಯುಲೆನ್ಸ್ ಮೂಲಕ ಕಾರವಾರಕ್ಕೆ ಉಚಿತವಾಗಿ ತಲುಪಿಸಲು ಸಹಕರಿಸಿದ್ದಾರೆ.
ಗೋವಿಂದ ಅವರು ಕೆ ಎಸ್ ಆರ್ ಪಿ ಬೆಟಾಲಿಯನ್ ನಲ್ಲಿ ಸ್ವಚ್ಛತಾ ಕಾರ್ಯ ನಿರ್ವಹಿಸುತ್ತಿದ್ದರು. ಅನರೋಗ್ಯದಿಂದಾಗಿ ಕೆಲಸಕ್ಕೆ ತೆರಳಲಾಗದೆ ಕಳೆದ 5 ವರ್ಷಗಳಿಂದ ಕೊಣಾಜೆಯ ನಡುಪದವಿನ ಸಣ್ಣ ಬಾಡಿಗೆ ಮನೆಯಲ್ಲಿ ನಾಲ್ವರು ಪುತ್ರಿಯರೊಂದಿಗೆ ವಾಸವಾಗಿದ್ದರು. ಇದರಲ್ಲಿ ಇಬ್ಬರು ಪುತ್ರಿಯರಿಗೆ ವಿವಾಹವಾಗಿದ್ದರೂ, ತಂದೆಯ ಜತೆಗೆ ವಾಸವಾಗಿದ್ದರು. ಇದರಲ್ಲಿ ಹಿರಿಯ ಪುತ್ರಿ ಕಾಮಾಲೆ ರೋಗಕ್ಕೆ ತುತ್ತಾಗಿ , ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದು, ಮೃತದೇಹವನ್ನು ಊರಿಗೆ ಕೊಂಡೊಯ್ಯಲು ಸಾಧ್ಯವಾಗದೆ ಕುಟುಂಬಸ್ಥರು ದಿಕ್ಕು ತೋಚದಂತಾಗಿದ್ದರು. ಮೃತ ಮಹಿಳೆಗೆ ಇಬ್ಬರು ಪುಟ್ಟ ಮಕ್ಕಳಿದ್ದಾರೆ. ಪತಿಯೂ ಕೂಲಿ ಕೆಲಸ ಮಾಡಿಕೊಂಡು ನಡುಪದವಿನ ಒಂದೇ ಕೊಠಡಿಯಿರುವ ಬಾಡಿಗೆ ಮನೆಯಲ್ಲಿ ನೆಲೆಸಿದ್ದರು.