ದಾವಣಗೆರೆ: ಪರಿಶಿಷ್ಟ ಜಾತಿ, ಪಂಗಡದ ಸರ್ಕಾರಿ ಬಡ್ತಿ ಮೀಸಲಾತಿ ಸೌಲಭ್ಯ ಒದಗಿಸುವುದು, ರಾಜ್ಯ ಸರ್ಕಾರ ನೂತನ ವಿಧೇಯಕ ಜಾರಿಗೊಳಿಸುವ ಮೂಲಕ ಅರ್ಹರಿಗೆ ಅನುಕೂಲ ಮಾಡಿಕೊಡುವುದು ಒಳಗೊಂಡಂತೆ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಪರಿಶಿಷ್ಟಸರ್ಕಾರಿ ನೌಕರರ ಬಡ್ತಿ ಮೀಸಲಾತಿಗೆ ಒತ್ತಾಯಿಸಿ ಮಂಗಳವಾರ ಕ್ರಿಯಾ ಸಮಿತಿ ನೇತೃತ್ವದಲ್ಲಿ ವಿವಿಧ ಇಲಾಖೆಯ ಪರಿಶಿಷ್ಟ ಜಾತಿ, ಪಂಗಡದ ನೌಕರರು ಪ್ರತಿಭಟನೆ ನಡೆಸಿದರು.
ಅಂಬೇಡ್ಕರ್ ವೃತ್ತದಿಂದ ಉಪ ವಿಭಾಗಾಧಿಕಾರಿ ಕಚೇರಿವರೆಗೆ ಮೆರವಣಿಗೆ ನಡೆಸಿ, ಉಪ ವಿಭಾಗಾಧಿಕಾರಿ ಕಚೇರಿ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು. ಸಂವಿಧಾನ ಪರಿಚ್ಛೇದ 16(4) ರಲ್ಲಿ ಪರಿಶಿಷ್ಟ ಜಾತಿ, ಪಂಗಡದವರಿಗೆ ಉದ್ಯೋಗದಲ್ಲಿ ಮೀಸಲಾತಿ ಪ್ರದತ್ತ ಮಾಡಲಾಗಿದೆ.
ಬಡ್ತಿ ಮೀಸಲಾತಿಯನ್ನು ಸಂವಿಧಾನಬದ್ಧವಾಗಿಒದಗಿಸಲು 1978 ಏ. 27 ರಿಂದ ಸಾಂದರ್ಭಿಕ ಸೇವಾ ಹಿರಿತನ ಕಲ್ಪಿಸುವ ಮೂಲಕ ರಾಜ್ಯ ಸರ್ಕಾರ ಕಾಯ್ದೆ ಜಾರಿ ಮಾಡಿತ್ತು. ಈಚೆಗೆ ಬಡ್ತಿ ಮೀಸಲಾತಿ ವಿಚಾರ ಕುರಿತಂತೆ ಸರ್ವೋತ್ಛ ನ್ಯಾಯಾಲಯ ಕಳೆದ ಫೆ. 9 ರಂದು ಬಡ್ತಿ ಮೀಸಲಾತಿ ರದ್ದುಪಡಿಸಿ, ಹೊರಡಿಸಿರುವ ತೀರ್ಪು ದಲಿತ ನೌಕರರಿಗೆ ಅಕ್ಷರಶಃ ಮರಣಶಾಸನವಾಗಿದೆ ಎಂದು ಪ್ರತಿಭಟನಾಕಾರರು ತೀವ್ರ ಆತಂಕ ವ್ಯಕ್ತಪಡಿಸಿದರು.
ಸರ್ವೋತ್ಛ ನ್ಯಾಯಾಲಯದ ತೀರ್ಪಿನಿಂದ 2002 ರಿಂದ ಈವರೆಗೆ ಮುಂಬಡ್ತಿ ಪಡೆದಿರುವ ರಾಜ್ಯ ಸರ್ಕಾರದ ವಿವಿಧ 36 ಇಲಾಖೆಯ 12 ಸಾವಿರ ನೌಕರರು ಬಡ್ತಿ ಮೀಸಲಾತಿಯಿಂದ ವಂಚಿತರಾಗಲಿದ್ದಾರೆ. ರಾಜ್ಯ ಸರ್ಕಾರ ಸರ್ವೋತ್ಛ ನ್ಯಾಯಾಲಯದಲ್ಲಿ ಸಮರ್ಥ ವಾದ ಮಂಡಿಸುವಲ್ಲಿ ವಿಫಲವಾದ ಕಾರಣ ಅರ್ಹ ನೌಕರರು ಬಡ್ತಿ ಮೀಸಲಾತಿಯಿಂದ ವಂಚಿತರಾಗುವಂತಾಗಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ಕೇಂದ್ರ ಸರ್ಕಾರ ಸ್ವಾತಂತ್ರ ಬಂದಾಗನಿಂದ ಈವರೆಗೆ ಮೀಸಲಾತಿ, 1978 ರಿಂದ ಬಡ್ತಿ ಮೀಸಲಾತಿ ಜಾರಿಯಲ್ಲಿ ತೋರುತ್ತಿರುವ ಅತೀವ ವಿಳಂಬ ನೀತಿ ಅರ್ಹ ದಲಿತ ನೌಕರರು ಬಡ್ತಿ ಮೀಸಲಾತಿಯಿಂದ ವಂಚಿತರಾಗುತ್ತಿದ್ದಾರೆ. ಕೇಂದ್ರ ಸರ್ಕಾರ ಬಡ್ತಿ ಮೀಸಲಾತಿ ವಿಚಾರವನ್ನು ಲೋಕಸಭೆಯಲ್ಲಿ ಮಂಡಿಸಿ, ಸಂವಿಧಾನದ 117ನೇ ಕಲಂಗೆ ತಿದ್ದುಪಡಿ ತರುವ ಮೂಲಕ ಬಡ್ತಿ ಮೀಸಲಾತಿ ಸೌಲಭ್ಯ ಒದಗಿಸಬೇಕು ಎಂದು ಒತ್ತಾಯಿಸಿದರು.
ಅರ್ಹ ದಲಿತ ನೌಕರರು ಬಡ್ತಿ ಮೀಸಲಾತಿಯಿಂದ ವಂಚಿತರಾಗುವ ಕುರಿತಂತೆ ರಾಜ್ಯ ಸರ್ಕಾರ ಸರ್ವೋತ್ಛ ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸುವ ಜೊತೆಗೆ ಈ ಬಜೆಟ್ ಅಧಿವೇಶನದಲ್ಲಿ ಬಡ್ತಿ ಮೀಸಲಾತಿ ಕುರಿತಂತೆ ನೂತನ ವಿಧೇಯಕ ಮಂಡಿಸಿ, ಅಂಗೀಕರಿಸಿ, ಸಂವಿಧಾನದ 9ನೇ ಅನುಚ್ಛೇದದಲ್ಲಿ ಸೇರಿಸುವತ್ತ ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು.
ಹಿರಿಯ ಕಾರ್ಮಿಕ ಮುಖಂಡ ಎಚ್.ಕೆ. ರಾಮಚಂದ್ರಪ್ಪ, ಸಮಿತಿ ಗೌರವ ಅಧ್ಯಕ್ಷ ಡಾ| ಎ.ಬಿ. ರಾಮಚಂದ್ರಪ್ಪ, ಕಾರ್ಯಾಧ್ಯಕ್ಷ ಡಾ| ಎಸ್. ರಂಗಸ್ವಾಮಿ, ಅಧ್ಯಕ್ಷ ಕೆ.ಎಸ್. ಜಯಣ್ಣ, ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎಸ್. ಹಾಲೇಶಪ್ಪ, ಮಂಜುನಾಥ್ ಸಾಸೀÌಹಳ್ಳಿ, ಬಿ.ಎಸ್. ವೆಂಕಟೇಶ್, ಜಯಪ್ಪನಾಯ್ಕ, ಕೆ. ಸುನೀತಾ, ಪ್ರೊ. ಮಂಜಣ್ಣ, ಪರಶುರಾಮ್, ಮಹಾರುದ್ರಪ್ಪ, ಪ್ರಕಾಶ್, ಬಸವರಾಜ್, ರವಿ ಇತರರು ಇದ್ದರು.