Advertisement

ಮಹಿಳಾ ಸಾಂಸ್ಕೃತಿಕ ಉತ್ಸವದಲ್ಲಿ ಉತ್ಸಾಹ ಕ್ಷೀಣ

08:51 PM Jan 29, 2020 | Lakshmi GovindaRaj |

ಮೈಸೂರು: ಮಹಿಳೆಯರ ಸಬಲೀಕರಣ ಹಾಗೂ ಅಭ್ಯುದಯಕ್ಕಾಗಿ ಸರ್ಕಾರ ರೂಪಿಸಿರುವ ಹಲವು ಕಾರ್ಯಕ್ರಮ ಮತ್ತು ಯೋಜನೆಗಳನ್ನು ಮಹಿಳೆಯರು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಶಾಸಕ ಎಲ್‌. ನಾಗೇಂದ್ರ ಹೇಳಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ನಗರದ ಕಲಾಮಂದಿರದಲ್ಲಿ ಆಯೋಜಿಸಿದ್ದ ಮಹಿಳಾ ಸಾಂಸ್ಕೃತಿಕ ಉತ್ಸವಕ್ಕೆ ಚಾಲನೆ ನೀಡಿ ಮಾತನಾಡಿದರು.

Advertisement

ಯೋಜನೆ ಸದ್ಬಳಕೆ ಮಾಡಿಕೊಳ್ಳಿ: ಇಂದು ಸಂಸ್ಕೃತಿ ಮತ್ತು ಕಲೆ ಉಳಿದಿರುವುದು ಗ್ರಾಮೀಣ ಭಾಗದಲ್ಲಿ ಅದರಲ್ಲೂ ಗ್ರಾಮೀಣ ಪ್ರದೇಶದ ಮಹಿಳೆಯರು ಕಲೆ, ಸಂಸ್ಕೃತಿ ಹಾಗೂ ಜಾನಪದಕ್ಕೆ ನೀಡಿರುವ ಕೊಡುಗೆ ಅಪಾರ. ಮಹಿಳೆಯರಲ್ಲಿ ಅಡಗಿರುವ ಪ್ರತಿಭೆ ಮತ್ತು ಕಲೆಯನ್ನು ಅಭಿವ್ಯಕ್ತಗೊಳಿಸಲು ಉತ್ತಮ ವೇದಿಕೆ ಕಲ್ಪಿಸುತ್ತಿದೆ. ಜೊತೆಗೆ ಮಹಿಳಾ ಸಬಲೀಕರಣ ಹಾಗೂ ಅಭ್ಯುದಯಕ್ಕಾಗಿ ಸರ್ಕಾರ ಹಲವು ಕಾರ್ಯಕ್ರಮ ಮತ್ತು ಯೋಜನೆ ರೂಪಿಸಿದೆ. ಇವುಗಳನ್ನು ಮಹಿಳೆಯರು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಮಹಿಳೆಯರಿಗೆ ವಿಶಿಷ್ಟ ಸ್ಥಾನ: ವಿಶ್ವದ ಬೇರೆ ಬೇರೆ ದೇಶಗಳಲ್ಲಿ ಮಹಿಳೆಯರನ್ನು ಕಾಣುವ ರೀತಿಯೇ ಬೇರೆ. ಆದರೆ ನಮ್ಮ ದೇಶದಲ್ಲಿ ಮಹಿಳೆಗೆ ವಿಶಿಷ್ಟ ಸ್ಥಾನ ನೀಡಲಾಗಿದ್ದು, ಪೂಜ್ಯನೀಯ ಭಾವನೆಯಿಂದ ನೋಡಲಾಗುತ್ತಿದೆ. ಇಂದು ಮಹಿಳೆ ಎಲ್ಲಾ ಕ್ಷೇತ್ರಗಳಲ್ಲಿಯೂ ಮುಂದಿದ್ದಾಳೆ. ಅವರಿಗೆ ಮತ್ತಷ್ಟು ಪ್ರೋತ್ಸಾಹ ಮತ್ತು ಅವಕಾಶ ಕಲ್ಪಿಸಿಕೊಡುವ ಅಗತ್ಯವಿದೆ ಎಂದು ಹೇಳಿದರು.

ಕಾಟಾಚಾರಕ್ಕೆ ಕಾರ್ಯಕ್ರಮ ಮಾಡಬೇಡಿ: ಸರ್ಕಾರದಿಂದ ಹಲವು ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ. ಈ ಕಾರ್ಯಕ್ರಮಗಳು ಜನರನ್ನು ತಲುಪಬೇಕು. ಮಹಿಳೆಯರಿಗಾಗಿ ಸರ್ಕಾರ ರೂಪಿಸಿರುವ ಮಹಿಳಾ ಸಾಂಸ್ಕೃತಿಕ ಉತ್ಸವದಲ್ಲಿ ಮಹಿಳೆಯರೇ ಭಾಗವಹಿಸದಿರುವುದು ಬೇಸರದ ಸಂಗತಿ ಎಂದರು.

ಅಧಿಕಾರಿಗಳ ವಿರುದ್ಧ ವಾಗ್ಧಾಳಿ: ಆಹ್ವಾನ ಪತ್ರಿಕೆಯಲ್ಲಿ ಜಿಲ್ಲೆಯ ಎಲ್ಲಾ ಸಂಸದರು ಮತ್ತು ಶಾಸಕರು ಹಾಗೂ ಜನಪ್ರತಿನಿಧಿಗಳು ಸೇರಿದಂತೆ 24 ಮಂದಿಯ ಹೆಸರನ್ನು ನಮೂದಿಸಲಾಗಿದೆ. ಆದರೆ ಯಾರೊಬ್ಬರು ಬಂದಿಲ್ಲ. ಜನರೂ ಇಲ್ಲದ, ಜನಪ್ರತಿನಿಧಿಗಳೂ ಇಲ್ಲದ ಇಂತಹ ಕಾಟಾಚಾರದ ಕಾರ್ಯಕ್ರಮಗಳನ್ನು ಏಕೆ ಮಾಡಬೇಕು. ಯಾರಿಗಾಗಿ ಈ ಕಾರ್ಯಕ್ರಮ ಎಂದು ಶಾಸಕ ಎಲ್‌. ನಾಗೇಂದ್ರ ಅಧಿಕಾರಿಗಳ ವಿರುದ್ಧ ವಾಗ್ಧಾಳಿ ನಡೆಸಿದರು. ಜನಪ್ರತಿನಿಧಿಗಳನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದರೂ, ಬರದೆ ಇರುವ ಬಗ್ಗೆ ಜಿಲ್ಲಾಧಿಕಾರಿಗೆ ವರದಿ ನೀಡಿ ಎಂದು ತಿಳಿಸಿದರು.

Advertisement

ಹೆಣ್ಣು ಮಕ್ಕಳಲ್ಲಿ ದೈವಿಕ ಕಲೆ ಇದೆ: ಜಿಪಂ ಸದಸ್ಯೆ ಮಂಗಳಾ ಸೋಮಶೇಖರ್‌ ಮಾತನಾಡಿ, ಜನಪದ ಕಲೆಯಿಂದ ಆಧುನಿಕ ಸಂಗೀತದವರೆಗೂ ಅನಕ್ಷರಸ್ಥ ಮಹಿಳೆಯೂ ತನ್ನನ್ನು ತೊಡಗಿಸಿಕೊಂಡಿದ್ದಾರೆ. ರಾಗಿ ಬೀಸುತ್ತಾ ಜನಪದ ಗೀತೆ ಹಾಡುವ ರೂಢಿ, ಭೂಮಿತಾಯಿ ನೆನೆಯುತ್ತಾ ನಿತ್ಯ ಕರ್ತವ್ಯ ಆರಂಭಿಸುತ್ತಿದ್ದರು. ಜೊತೆಗೆ ಗಂಡು ಕಲೆಯಾದ ಯಕ್ಷಗಾನವನ್ನು ಮಹಿಳೆ ಪ್ರದರ್ಶಿಸುತ್ತಿರುವುದು ಗಮನಾರ್ಹ. ಹೆಣ್ಣು ಮಕ್ಕಳಲ್ಲಿ ದೈವಿಕ ಕಲೆ ಇರುತ್ತದೆ. ಈ ನಿಟ್ಟಿನಲ್ಲಿ ಸಿಗುವ ವೇದಿಕೆ ಬಳಸಿಕೊಂಡು ಪ್ರತಿಭೆಯನ್ನು ಹೊರಹಾಕಬೇಕು ಎಂದು ಸಲಹೆ ನೀಡಿದರು .

ಜಿಪಂ ಉಪಾಧಕ್ಷೆ ಗೌರಮ್ಮ ಸೋಮಶೇಖರ್‌, ತಾಪಂ ಅಧ್ಯಕ್ಷೆ ಕಾಳಮ್ಮ ಕೆಂಪರಾಮಯ್ಯ, ಜಿಪಂ ಸದಸ್ಯೆ ಮಂಗಳಾ ಸೋಮಶೇರ್ಖ, ರಂಗಾಯಣ ನಿರ್ದೇಶಕ ಅಡ್ಡಂಡ ಸಿ.ಕಾರ್ಯಪ್ಪ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಂಟಿ ನಿರ್ದೇಶಕ ವಿ.ಎನ್‌. ಮಲ್ಲಿಕಾರ್ಜುನ ಸ್ವಾಮಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಎಚ್‌. ಚನ್ನಪ್ಪ, ಜನಪದ ಗಾಯಕಿ ಬನ್ನೂರು ಕೆಂಪಮ್ಮ, ಅಭ್ಯುದಯ ಸಂಘದ ಸುಶೀಲಾ, ಜಿಲ್ಲಾ ಕಲಾವಿದರ ಸಂಘದ ಅಧ್ಯಕ್ಷೆ ವಸಂತ, ಕಲಾವಿದೆ ಶಾಂತಾದೇವಿ, ಮಹಿಳಾ ಸಂಘ ಸಂಸ್ಥೆ ನಿರ್ದೇಶಕರು, ಸದಸ್ಯರು ಪಾಲ್ಗೊಂಡಿದ್ದರು.

ವಿವಿಧ ಕಲೆಗಳ ಪ್ರದರ್ಶನ: ಕಾರ್ಯಕ್ರಮದಲ್ಲಿ ಬೆಳಗ್ಗೆ 10ಕ್ಕೂ ಹೆಚ್ಚು ಮಂದಿ ರಂಗೋಲಿ ಸ್ಪರ್ಧೆಯಲ್ಲಿ ಭಾಗವಹಿಸಿ ಬಣ್ಣ ಬಣ್ಣದ ಚಿತ್ತಾರ ಮೂಡಿಸಿದರು. ಬಳಿಕ ಡೊಳ್ಳು ಕುಣಿತ, ಪಟಕುಣಿತ, ಸುಗ್ಗಿ ಕುಣಿತ, ಛದ್ಮವೇಶ ತಂಡಗಳಿಂದ ನೃತ್ಯ ನಡೆಯಿತು. ಚಿತ್ರಕಲೆ, ಸೋರೆಕಾಯಿ ಕಲೆ, ಕಪ್ಪಚಿಪ್ಪು ಕಲಾಕೃತಿ ಹಾಗೂ ಸಾಂಪ್ರದಾಯಿಕ ಕಲೆಗಳ ಪ್ರದರ್ಶನ ಗಮನ ಸೆಳೆಯಿತು. ಮೈಸೂರು ನಗರ ಮತ್ತು ಗ್ರಾಮಾಂತರ ಪ್ರದೇಶದ ಕಲಾವಿದೆಯರಿಂದ ಸುಗಮ ಸಂಗೀತ, ಜಾನಪದ ಗೀತಯಾನ, ಜಾನಪದ ನೃತ್ಯ, ನಾಟಕ, ವಿಚಾರ ಸಂಕಿರಣ ನಡೆಯಿತು.

2 ಗಂಟೆ ತಡವಾದ ಕಾರ್ಯಕ್ರಮ: ನಗರದ ಕಲಾಮಂದಿರದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಆಯೋಜಿಸಿದ್ದ ಮಹಿಳಾ ಸಾಂಸ್ಕೃತಿಕ ಉತ್ಸವದಲ್ಲಿ ಮಹಿಳೆಯರು ಮತ್ತು ವಿದ್ಯಾರ್ಥಿನಿಯರು ಬಾರದೇ ಇಡೀ ಸಭಾಂಗಣ ಕಾಲಿ ಕಾಲಿಯಾಗಿತ್ತು. ಕಾರ್ಯಕ್ರಮ ನಡೆಸಿಕೊಡಲು ಬಂದಿದ್ದ 40 ಮಂದಿ ಕಲಾವಿದರು ಹೊರತುಪಡಿಸಿ, ಆಯೋಜಕರಷ್ಟೇ ಸಭಾಂಗಣದಲ್ಲಿದ್ದುದ್ದು ಎದ್ದು ಕಾಣುವಂತಿತ್ತು. ಬೆಳಗ್ಗೆ 10ಕ್ಕೆ ನಿಗದಿಯಾಗಿದ್ದ ಕಾರ್ಯಕ್ರಮ ಮಧ್ಯಾಹ್ನ 12.20ಕ್ಕೆ ಆರಂಭವಾಯಿತಾದರೂ ಮಹಿಳಾ ಉತ್ಸವದಲ್ಲಿ ಉತ್ಸಾಹ ಕ್ಷೀಣವಾದಂತಿತ್ತು.

Advertisement

Udayavani is now on Telegram. Click here to join our channel and stay updated with the latest news.

Next