Advertisement

ಪ್ರಜಾಪ್ರಭುತ್ವದ ಯಶಸ್ಸಿಗೆ ನೈತಿಕ ಮೌಲ್ಯ ಮುಖ್ಯ: ಎಸ್‌.ಎಲ್‌. ಬೈರಪ್ಪ

06:00 AM Jul 23, 2018 | |

ಬೆಂಗಳೂರು: ಸಾಮಾಜಿಕ ವ್ಯವಹಾರದಲ್ಲಿ ನೈತಿಕ ಪ್ರಜ್ಞೆ ಇಲ್ಲದಿದ್ದರೆ ಯಾವ ಕಾನೂನು ಇದ್ದರೂ ಉಪಯೋಗ ಆಗುವುದಿಲ್ಲ. ಪ್ರಜಾಪ್ರಭುತ್ವದ ಯಶಸ್ಸು ಜನರಲ್ಲಿನ “ನೈತಿಕ ಮೌಲ್ಯ’ಯನ್ನು ಅವಲಂಬಿಸಿದೆ ಎಂದು ಕಾದಂಬರಿಕಾರ ಡಾ.ಎಸ್‌.ಎಲ್‌.ಬೈರಪ್ಪ ಅಭಿಪ್ರಾಯಪಟ್ಟಿದ್ದಾರೆ.

Advertisement

ನಗರದ ಡಿವಿಜಿ ಸಭಾಂಗಣದಲ್ಲಿ ಭಾನುವಾರ ಗೋಖಲೆ ಸಾರ್ವಜನಿಕ ವಿಚಾರ ಸಂಸ್ಥೆ ಹಮ್ಮಿಕೊಂಡಿದ್ದ “ಡಿವಿಜಿ ಸಾರಸಂಗ್ರಹ’ (ಭಾಗ-1 ಮತ್ತು 2) ಕೃತಿಗಳ ಲೋಕಾರ್ಪಣೆ ಮಾಡಿ ಅವರು ಮಾತನಾಡಿದರು.

ನಮ್ಮದು ಅತಿ ದೊಡ್ಡ ಸಂವಿಧಾನವಾಗಿದ್ದು, ಅದನ್ನು ವೇದಗಳಿಗಿಂತ ಶ್ರೇಷ್ಠವಾದುದು ಎಂದು ಹೆಮ್ಮೆಪಡುತ್ತೇವೆ. ಆದರೆ, ಅದರ ಪಾಲನೆ ಆಗದಿದ್ದರೆ ಯಾವ ಕಾನೂನು ಇದ್ದರೂ ಏನು ಉಪಯೋಗ ಎಂದು ಪ್ರಶ್ನಿಸಿದ ಅವರು, ಸಾರ್ವಜನಿಕ ವ್ಯವಹಾರದಲ್ಲಿ ನೈತಿಕ ಪ್ರಜ್ಞೆ ಅತ್ಯಗತ್ಯ. ಇಲ್ಲದಿದ್ದರೆ ಪ್ರಜಾಪ್ರಭುತ್ವ ಯಶಸ್ವಿಯಾಗದು. ಡಿವಿಜಿ ಮತ್ತು ಗೋಖಲೆ ಅವರ ನಂಬಿಕೆ ಕೂಡ ಇದೇ ಆಗಿತ್ತು ಎಂದು ಹೇಳಿದರು.

ಪ್ರಜಾಪ್ರಭುತ್ವದ ಮಾತೃಭೂಮಿ ಇಂಗ್ಲೆಂಡ್‌. ಅಲ್ಲಿ ಯಾವುದೇ ಲಿಖೀತ ಸಂವಿಧಾನ ಇಲ್ಲ. ಆದರೆ, ಅಲ್ಲಿನ ಪ್ರಧಾನಿ ಕ್ಯಾಮರಾನ್‌ ತಮ್ಮ ವಿರುದ್ಧ ಕೂಗು ಬಂದಿದೆ ಎಂಬ ಒಂದೇ ಕಾರಣಕ್ಕೆ ರಾಜೀನಾಮೆ ಕೊಟ್ಟರು. ಅಷ್ಟೇ ಏಕೆ, ಅದೇ ಪಕ್ಷದ ಮತ್ತೂಬ್ಬರನ್ನು ಪ್ರಧಾನಿ ಎಂದು ಘೋಷಿಸಿದಾಗಲೂ ಕೇವಲ ಪತ್ರಿಕೆಗಳಲ್ಲಿ ಅಪಸ್ವರ ಕೇಳಿಬಂದ ಹಿನ್ನೆಲೆಯಲ್ಲಿ ಚುನಾವಣೆ ಘೋಷಿಸಿಬಿಟ್ಟರು. ಇದು ಅವರೊಳಗೆ ಇದ್ದ ನೈತಿಕ ಪ್ರಜ್ಞೆಯಿಂದ ಸಾಧ್ಯವಾಯಿತು. ಆದರೆ, ನಮ್ಮಲ್ಲಿ ಲಿಖೀತ ಮತ್ತು ಅತಿ ದೊಡ್ಡ ಸಂವಿಧಾನ ಇದೆ. ಆದರೆ, ನಮ್ಮ ವರ್ತನೆ ಅದಕ್ಕೆ ತದ್ವಿರುದ್ಧವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಡಿವಿಜಿ ಬಡತನದಲ್ಲೂ ತಾವು ಕಾಯ್ದುಕೊಂಡಿದ್ದ “ಇಂಟಿಗ್ರಿಟಿ’ಯಿಂದಲೇ ದೊಡ್ಡವರಾದರು. ಅವರ ಬರವಣಿಗೆಯಲ್ಲಿ ಉನ್ನತ ಆದರ್ಶಗಳನ್ನು ಕಾಣಬಹುದು. ಹಾಗೆಯೇ ಬದುಕಿದರು ಕೂಡ. ಆದರೆ, ಆ ರೀತಿ ಬೇರೆ ಯಾರೇ ಬರೆದರೂ ಅಕ್ಷರ ವಿಜೃಂಭಣೆ ಆಗುತ್ತದೆ ಎಂದರು.

Advertisement

ಮೌಲ್ಯಗಳ ಮೀಮಾಂಸೆ:
ಅನುಭವದಿಂದ ಬಂದ ಜ್ಞಾನವನ್ನು ಡಿವಿಜಿ ಪಕ್ವ ಮಾಡಿಕೊಂಡರು. ಅವರಿಗೆ ಪಾಶ್ಚಿಮಾತ್ಯ ತತ್ವಶಾಸ್ತ್ರ ಗೊತ್ತಿತ್ತು. ಅವರ ವಿದ್ವತ್ತು ವಿಶಾಲವಾದದ್ದು. ಆ ವಿದ್ವತ್ತನ್ನು ಗಳಿಸಿದ ರೀತಿಯೂ ವಿಶಾಲವಾದದ್ದು. ಅವರು ಬರೆದ ಮಂಕುತಿಮ್ಮನ ಕಗ್ಗವನ್ನು ಎಷ್ಟೋ ಜನ ಉಪನಿಷತ್ತು ಎಂದು ಭಾವಿಸಿದವರಿ¨ªಾರೆ. ಅವರ ಬರಹಗಳಿಗೆ ಆ ರೀತಿಯ ಶಕ್ತಿ ಇತ್ತು ಎಂದು ಬಣ್ಣಿಸಿದರು.

ಮೌಲ್ಯಗಳ ಮೀಮಾಂಸೆ ಅವರಾಗಿದ್ದರು. ಜೀವನದ ಬೇರೆ ಬೇರೆ ಮೌಲ್ಯಗಳು ಮತ್ತು ಅವುಗಳ ನಡುವಿನ ಸಂಬಂಧ-ತರಮಗಳ ಬಗ್ಗೆ ಹೇಳಿದ್ದಾರೆ. ಅಷ್ಟು ದೊಡ್ಡ ವ್ಯಕ್ತಿಯಾಗಿಯೂ ಎಲ್ಲರಿಗೂ ಸಿಗುವ ಸಂಪನ್ನ ಮನುಷ್ಯ ಡಿವಿಜಿ ಎಂದು ವಿಶ್ಲೇಷಿಸಿದರು.

ಶತಾವಧಾನಿ ಡಾ.ರಾ.ಗಣೇಶ್‌, ಸಂಪಾದಕ ಬಿ.ಎನ್‌. ಶಶಿಕಿರಣ, ಎಸ್‌.ಆರ್‌. ರಾಮಸ್ವಾಮಿ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next