ಚಿಕ್ಕಬಳ್ಳಾಪುರ: ಸಾವಿರಾರು ವರ್ಷಗಳ ಭವ್ಯ ಇತಿಹಾಸ, ಪರಂಪರೆ ಹೊಂದಿರುವ ಭಾರತೀಯ ಸನಾತನ ಸಂಸ್ಕೃತಿ ಹಾಗೂ ಹಿಂದೂ ಧರ್ಮವನ್ನು ಯಾರಿಂದಲೂ ಸಹ ಅಳಿಸಲಾಗದು ಎಂದು ಋಷಿಕೇಶಿಯ ಕೈಲಾಸ ಆಶ್ರಮದ ನರೋತ್ತಮಾನಂದ ಸ್ವಾಮೀಜಿ ಅಭಿಪ್ರಾಯಪಟ್ಟರು.
ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ಮಂಚೇನಹಳ್ಳಿ ಹೋಬಳಿಯ ಬಿಕ್ಕಲಹಳ್ಳಿ ಗ್ರಾಮದಲ್ಲಿ ಭಾನುವಾರ ಆಯೋಜಿಸಲಾಗಿದ್ದ ಶ್ರೀ ಮುನೇಶ್ವರಸ್ವಾಮಿಯ ವಾರ್ಷಿಕ ಜಾತ್ರಾ ಮಹೋತ್ಸವದ ಪ್ರಯುಕ್ತ ವಿಶೇಷವಾಗಿ ನಿರ್ಮಿಸಲಾಗಿದ್ದ ಭಾರತಾ ಮಾತೆ ಮಂದಿರವನ್ನು ಲೋಕಾರ್ಪಣೆಗೊಳಿಸಿ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ವಿದೇಶಿಗರು ದೇಶಕ್ಕೆ ಬಂದು ಇಲ್ಲಿನ ಸಂಸ್ಕೃತಿ, ವೇದಗಳನ್ನು ಅಧ್ಯಯನ ಮಾಡಿ ಸನಾತನ ಸಂಸ್ಕೃತಿ ಹಾಗೂ ಆಚಾರ ವಿಚಾರಗಳನ್ನು ತಮ್ಮ ನಿತ್ಯ ಜೀವನದಲ್ಲಿ ಅಳವಡಿಸಿಕೊಳ್ಳುತ್ತಿದ್ದಾರೆ ಎಂದರು. ಹಿಂದೂ ಧರ್ಮ ಜಗತ್ತಿನಲ್ಲಿಯೇ ಶ್ರೇಷ್ಠ ಧರ್ಮವಾಗಿದ್ದು, ನಂಬಿಕೆಯೆ ಧರ್ಮದ ತಳಹದಿಯಾಗಿದೆ. ಪ್ರತಿಯೊಬ್ಬರು ಧರ್ಮದ ಹಾದಿಯಲ್ಲಿ ನಡೆಯಬೇಕು ಎಂದರು.
ಪ್ರಮುಖ ಭಾಷಣಕಾರರಾಗಿದ್ದ ಮಂಜುನಾಥಸ್ವಾಮಿ ಮಾತನಾಡಿ, ಮನುಷ್ಯನನ್ನು ಧರ್ಮ ಒಳ್ಳೆಯ ದಾರಿಯಲ್ಲಿ ಮುನ್ನಡೆಸುತ್ತದೆ. ಜೀವನಕ್ಕೆ ಒಳ್ಳೆಯ ಮಾರ್ಗದರ್ಶಕವಾಗಿ ನಮ್ಮ ಸನಾತನ ಧರ್ಮ ಸಹಕಾರಿಯಾಗುತ್ತದೆ ಎಂದರು.
ಗಮನ ಸೆಳೆದ ಶಿವಲಿಂಗ: ಶಿವಲಿಂಗದ ಗುಡಿಯೊಳಗೆ ವಿವಿಧ ಶಕ್ತಿ ದೇವತೆಗಳನ್ನು ಪ್ರತಿಷ್ಠಾಪಿಸಿ ಭಕ್ತರ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿದೆ. ಮುನೇಶ್ವರಸ್ವಾಮಿ ದೇವಾಲಯದ ಮೇಲೆ ನಿರ್ಮಿಸಿರುವ ಈಶ್ವರನ ಉತ್ಸವ ಮೂರ್ತಿ ಭಕ್ತರ ಗಮನ ಸೆಳೆಯಿತು.
ಮುನೇಶ್ವರಸ್ವಾಮಿಯ ವಾರ್ಷಿಕ ಜಾತ್ರೆ ಪ್ರಯುಕ್ತ ಗ್ರಾಮದ ಸುಂಗಲಿಯರಿಂದ ಮಳೆ, ಬೆಳೆಗಾಗಿ ಪ್ರಾರ್ಥಿಸಿ ದೀಪೋತ್ಸವ ನಡೆಸಿದರೆ, ರಾತ್ರಿ ಪೌರಾಣಿಕ ನಾಟಕದ ಭೂ ಕೈಲಾಸ ಪ್ರದರ್ಶನಗೊಂಡು ಗ್ರಾಮಸ್ಥರ ಗಮನ ಸೆಳೆಯಿತು.
ಜಿಲ್ಲಾ ವಿಶ್ವ ಹಿಂದೂ ಪರಿಷತ್ತಿನ ಗೌರವಾಧ್ಯಕ್ಷ ಆನಂದತೀರ್ಥ, ಚಿತ್ರಪಿನಾಕಿನಿ ಶಾಲೆಯ ಅಧ್ಯಕ್ಷ ರಾಮಚಂದ್ರರೆಡ್ಡಿ ಸೇರಿದಂತೆ ಮುನೇಶ್ವರಸ್ವಾಮಿ ದೇವಾಲಯದ ಅಭಿವೃದ್ಧಿ ಸಮಿತಿ ಸದಸ್ಯರು, ಸುತ್ತಮುತ್ತಲಿನ ಗ್ರಾಮಸ್ಥರು, ವಾರ್ಷಿಕೋತ್ಸವದ ಜಾತ್ರಾ ಮಹೋತ್ಸವದಲ್ಲಿ ಭಾಗವಹಿಸಿದ್ದರು.