ತಿ.ನರಸೀಪುರ: ಮಹಿಳೆಯರಿಗೆ ಹೆಚ್ಚು ಸಾಲ ಸೌಲಭ್ಯ ಕಲ್ಪಿಸುವಂತೆ ಸಿಎಂ ಸಿದ್ದರಾಮಯ್ಯ ಸೂಚಿಸಿರುವ ಹಿನ್ನೆಲೆಯಲ್ಲಿ ತಾಲೂಕಿನಲ್ಲಿಯೂ ಕೂಡ ಮಹಿಳೆಯರಿಗೆ ಸಾಲ ಸೌಲಭ್ಯ ನೀಡುವುದಾಗಿ ಎಂಡಿಸಿಸಿ ಬ್ಯಾಂಕ್ ಅಧ್ಯಕ್ಷ ಎಸ್. ಚಂದ್ರಶೇಖರ್ ತಿಳಿಸಿದರು.
ಪಟ್ಟಣದ ಕಸಬಾ ಪಿಎಸಿಸಿಎಸ್ ಬ್ಯಾಂಕ್‌ನ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಸಂಘಗಳ ಕಚೇರಿಗೆ ಪೀಠೊಪಕರಣ ಖರೀದಿಸಲು ಚೆಕ್ ವಿತರಿಸಿ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೋಲಾರಕ್ಕೆ ಭೆೇಟಿ ನೀಡಿದ್ದ ವೇಳೆ ಅಲ್ಲಿನ ಡಿಸಿಸಿ ಬ್ಯಾಂಕ್‌ನಲ್ಲಿ ಮಹಿಳೆಯರಿಗೆ ಸಾಲ ನೀಡಿದ್ದು, ಶೇ.98 ಮರುಪಾವತಿ ಇದೆ.
ಬಳಿಕ ಮೈಸೂರಿಗೆ ಭೇಟಿ ನೀಡಿದ್ದ ಅವರು ನನಗೆ ನಮ್ಮ ಬ್ಯಾಂಕ್‌ನಿಂದ ಸಹಕಾರಿ ಬ್ಯಾಂಕ್‌ಗಳ ಮೂಲಕ ಮಹಿಳೆಯರಿಗೆ ಸ್ವಾವಲಂಬಿ ಜೀವನ ನಡೆಸಲು ಅಗತ್ಯವಾದ ಸ್ವಯಂ ಉದ್ಯೋಗ ಕಂಡು ಕೊಳ್ಳಲು ಅಗತ್ಯವಾದ ಸಾಲ ಸೌಲಭ್ಯ ನೀಡುವಂತೆ ಸೂಚಿಸಿದ್ದಾರೆ. ಈ ಹಿನ್ನೆಲೆಯಲ್ಲಿ ನಮ್ಮ ಬ್ಯಾಂಕ್‌ನಲ್ಲಿ ಖಾತೆ ತೆರೆದಿರಬೇಕು. ಈಗ ನೇರವಾಗಿ ಸಾಲ ಅವರ ಬ್ಯಾಂಕ್ ಖಾತೆಗೆ ಜಮಾ ಆಗುವುದರಿಂದ ಯಾವದೇ ಸಮಸ್ಯೆ ಇಲ್ಲ ಎಂದರು.
ಆರ್ಥಿಕ ಸ್ವಾವಲಂಬನೆ ಸಾಧಿಸಿ: ಕಸಬಾ ಪಿಎಸಿಸಿಎಸ್ ಅಧ್ಯಕ್ಷ ಡಣಾಯಕನಪುರ ಮಲ್ಲಣ್ಣ ಮಾತನಾಡಿ, ಬ್ಯಾಂಕ್ ಹಂತ ಹಂತವಾಗಿ ಅಭಿವೃದ್ಧಿಯ ಹಾದಿಯಲ್ಲಿದ್ದು, ಮಹಿಳಾ ಸಂಘದ ಸದಸ್ಯರು, ರೈತರು ಹೆಚ್ಚಿನ ಸಾಲ ಸೌಲಭ್ಯ ಪಡೆದು ಆರ್ಥಿಕ ಸ್ವಾವಲಂಬನೆ ಸಾಧಿಸಲು ಮನವಿ ಮಾಡಿದರು. ಇದೇ ವೇಳೆ ಸಂಘದ ಕಟ್ಟಡ ಹಿಂಭಾಗದಲ್ಲಿರುವ ನಿವೇಶನದಲ್ಲಿ ಕಲ್ಯಾಣ ಮಂಟಪ ನಿರ್ಮಿಸಲು ಸಾಲ ಸೌಲಭ್ಯ ಕೊಡುವಂತೆ ಮನವಿ ಮಾಡಿದಾಗ ಎಂಡಿಸಿಸಿ ಅಧ್ಯಕ್ಷ ಚಂದ್ರಶೇಖರ್ ನಿವೇಶನದ ಸಂಪೂರ್ಣ ದಾಖಲಾತಿಗಳನ್ನು ನೀಡಿದರೆ ಸಾಲ ನೀಡುವ ಭರವಸೆ ನೀಡಿದರು.
ಎಂಡಿಸಿಸಿ ಬ್ಯಾಂಕ್ ನಿರ್ದೇಶಕ ಕೆ. ಕೃಷ್ಣ, ಲೋಕೇಶ್, ರಾಮಕೃಷ್ಣೇಗೌಡ, ರಮೇಶ್, ವ್ಯವಸ್ಥಾಪಕ ಎಂ. ಮಹದೇವಸ್ವಾಮಿ, ಮೇಲ್ವಿಚಾರಕ ರಾಜಪ್ಪ, ಸಿಇಒ ಟಿ.ಎನ್. ಕಿರಣ್, ಉಪಾಧ್ಯಕ್ಷ ವೆಂಕಟೇಶ್, ನಿರ್ದೇಶಕರಾದ ಪಣೀಶ್, ಅಂಗಡಿ ಶೇಖರ್, ಸಿದ್ದೇಗೌಡ, ಮುಖಂಡರಾದ ದೊಡ್ಡೇಬಾಗಿಲು ಮಲ್ಲಿಕಾರ್ಜುನಸ್ವಾಮಿ ಗೌಡರ ಪ್ರಕಾಶ್, ಗುರುಸ್ವಾಮಿ ಸಿಇಒಗಳಾದ ಹೆಮ್ಮಿಗೆ ಶೇಷಾದ್ರಿ, ಮೂಗೂರು ನಂದೀಶ್, ಹೊರಳಹಳ್ಳಿ ಶಿವರಾಜು, ಮಾದಾಪುರ ಉಮೇಶ್, ಕುರುಬೂರು ಬಸವಣ್ಣ, ಸೋಸಲೆ ಜಗದೀಶ್, ಆಲಗೂಡು ಗುರುಮಲ್ಲಪ್ಪ, ಉಪಾಧ್ಯಕ್ಷ ಮಲ್ಲಣ್ಣ ಇತರರು ಇದ್ದರು.