Advertisement

ಅವರೆ ಕಾಯಿಯ ತರಾವರಿ ಅವತಾರ

11:30 AM Jan 05, 2018 | |

ಬೆಂಗಳೂರು: ನಗರದ ಶ್ರೀವಾಸವಿ ಕಾಂಡಿಮೆಂಟ್ಸ್‌ನ 18ನೇ ವಾರ್ಷಿಕ ಅವರೆ ಬೇಳೆ ಮೇಳಕ್ಕೆ ಗುರುವಾರ ಚಾಲನೆ ದೊರೆತಿದೆ. ವಿವಿ ಪುರದ ಸಜ್ಜನರಾವ್‌ ವೃತ್ತದಲ್ಲಿನ ಕಾಂಡಿಮೆಂಟ್ಸ್‌ ಬಳಿ ವಿಧಾನ ಪರಿಷತ್‌ ಸದಸ್ಯೆ ತಾರಾ ಅನುರಾಧಾ ಚಾಲನೆ ನೀಡಿದ್ದು, ಜ.15ರವರೆಗೆ ಮೇಳ ನಡೆಯಲಿದೆ.

Advertisement

ಇದೇ ವೇಳೆ ಮಾತನಾಡಿದ ತಾರಾ ಅವರು, ಸಣ್ಣ ಪ್ರಮಾಣದಲ್ಲಿ ಆರಂಭವಾದ ಈ ಮೇಳ ಇಂದು ಬೆಂಗಳೂರಿನ ಪ್ರಮುಖ ಕಾರ್ಯಕ್ರಮವಾಗಿ ಬೆಳೆದಿರುವುದು ಹೆಮ್ಮೆಯ ಸಂಗತಿ. ರೈತರಿಗೂ ಉಪಯೋಗವಾಗುವಂತಹ ಇಂತಹ ಮೇಳಗಳು ಹೆಚ್ಚು ಹೆಚ್ಚು ನಡೆಯಬೇಕು ಎಂದರು.

ಅವರೆ ಕಾಯಿಂದ ಪಾಯಸ ಮಾಡುವುದು ನನಗೆ ತಿಳಿದಿತ್ತು. ಆದರೆ ಈ ಮೇಳಕ್ಕೆ ಭೇಟಿ ನೀಡಿದ ನಂತರ ತರಹೇವಾರಿ ಅವರೆ ಕಾಯಿ ಖಾದ್ಯಗಳನ್ನು ತಯಾರಿಸಬಹುದು ಎಂಬುವುದು ನನ್ನ ಅರಿವಿಗೆ ಬಂತು ಎಂದು ಹೇಳಿದರು. ಕಾರ್ಯಕ್ರಮದ ಆಯೋಜಕಿ ಗೀತಾ ಶಿವಕುಮಾರ್‌ ಅವರನ್ನ ತಾರಾ ಪ್ರಶಂಸಿಸಿದರು.

ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್‌ ಮಾತನಾಡಿ, ಸರ್ಕಾರ ಇಂತಹ ಮೇಳಗಳನ್ನು ಹೆಚ್ಚು ಪ್ರೋತ್ಸಾಹಿಸಿ ತರಹೇವಾರಿ ಅವರೆ ಬೇಳೆ ಖಾದ್ಯಗಳಿಗೆ ಮಾರುಕಟ್ಟೆ ಸೃಷ್ಟಿಸಬೇಕು. ಉಪ ಉತ್ಪನ್ನಗಳಿಗೆ ಮಾರುಕಟ್ಟೆ ಒದಗಿಸಿದಾಗ ರೈತರಿಗೂ ಸಾಕಷ್ಟು ಅನುಕೂಲ ಆಗಲಿದೆ ಎಂದರು.

ವಿದೇಶಿಯರು ಕೂಡ ಭಾರತೀಯ ಆಹಾರ ಪದ್ಧತಿ ಅನುಕರಿಸುತ್ತಿದ್ದಾರೆ. ಆದರೆ ನಾವು ವಿದೇಶಿ ಆಹಾರದ ಅನುಕರಣೆ ಮಾಡುತ್ತಿದ್ದೇವೆ. ನಮ್ಮಲ್ಲಿಯೇ ಸಿಗುವ ಪೌಷ್ಠಿಕ ಆಹಾರ ಸೇವಿಸುವುದನ್ನು ನಾವು ಮೊದಲು ಕಲಿಯಬೇಕು ಎಂದು ಹೇಳಿದರು.

Advertisement

ಅದಮ್ಯ ಚೇತನ ಸಂಸ್ಥೆಯ ಮುಖ್ಯಸ್ಥೆ ತೇಜಸ್ವಿನಿ ಅನಂತಕುಮಾರ್‌ ಮಾತನಾಡಿ, ವಿದೇಶಿ ಆಹಾರಗಳನ್ನು ನಾವು ಕೊಳ್ಳುವುದರಿಂದ ಆರ್ಥಿಕವಾಗಿ ನಮಗೇ ನಷ್ಟ. ನಮ್ಮ ರೈತರು ಬೆಳೆದ ಬೆಳೆಗಳಲ್ಲಿ ಪೌಷ್ಠಿಕಾಂಶ ಹೆಚ್ಚಿರುತ್ತದೆ. ಅಲ್ಲದೆ ನಮ್ಮ ಬೆಳೆಗಳು ತಾಜಾತನದಿಂದ ಕೂಡಿರಲಿದ್ದು ಆರೋಗ್ಯಕ್ಕೂ ಯೋಗ್ಯ ಎಂದರು. ಈ ವೇಳೆ ಚಿತ್ರನಟಿ ಮಯೂರಿ, ಗಿರಿಜಾ ಲೋಕೇಶ್‌, ಜೆಡಿಎಸ್‌ ಮುಖಂಡ ಶರವಣನ್‌, ಮಮತಾ ಆರ್‌.ವಿ. ದೇವರಾಜ್‌ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

ಅವರೆ ಖಾದ್ಯಗಳೂ ಇಲ್ಲಿವೆ: ಹಿತಕಿದ ಅವರೆ ಬೇಳೆ ಹೋಳಿಗೆ, ಅವರೆ ಬೇಳೆ ದೋಸೆ, ಹಿತಕಿದ ಅವರೆ ಬೇಳೆ ಜಾಮೂನು, ಹಿತಕಿದ ಅವರೆ ಬೇಳೆ ಹನಿ ಜಿಲೇಬಿ, ಅವರೆಬೇಳೆ ರೋಲ್‌, ಮಂಚೂರಿ, ರುಮಾಲಿ ರೋಟಿ, ರಾಗಿ ಮುದ್ದೆ-ಅವರೆ ಕಾಳು ಸಾರು ಸೇರಿದಂತೆ ಹಲವು ಬಗೆಯ ಖಾದ್ಯಗಳು ಮೇಳದಲ್ಲಿ ದೊರೆಯಲಿವೆ. ಅವರೆಕಾಯಿ ಕಟ್ಲಿ, ಅವರೆ ಕಾಯಿ ಸ್ಟಿಕ್ಸ್‌ ಈ ಸಲದ ವಿಶೇಷ ಖಾದ್ಯವಾಗಿದ್ದು, ಭೋಜನಪ್ರಿಯರ ಮೆಚ್ಚುಗೆಗೆ ಪಾತ್ರವಾಗಿದೆ.

ಅವರೆ ಬೇಳೆ ಮೇಳ ಅಂದ್ರೆ ನನಗಿಷ್ಟ. ಪ್ರತಿ ವರ್ಷವೂ ನಾನು ಅವರೆ ಬೇಳೆ ಮೇಳಕ್ಕೆ ಭೇಟಿ ನೀಡಿ ನನಗಿಷ್ಟವಾದ ಭಕ್ಷ್ಯಗಳನ್ನು ಸವಿಯುತ್ತೇನೆ. ಅವರೆ ಕಾಯಿ ದೋಸೆ ಅಂದ್ರೆ ನನಗೆ ಅಚ್ಚುಮೆಚ್ಚು.
-ಮಯೂರಿ, ಚಿತ್ರ ನಟಿ

Advertisement

Udayavani is now on Telegram. Click here to join our channel and stay updated with the latest news.

Next