Advertisement
1882ರ ಮಾರ್ಚ್ 24ರಂದು ಜರ್ಮನಿಯ ವಿಜ್ಞಾನಿ ಡಾ| ರಾಬರ್ಟ್ ಕಾಕ್ ಕ್ಷಯ ರೋಗವು ಮೈಕೊಬ್ಯಾಕ್ಟೀರಿಯಮ್ ಟ್ಯುಬರ್‌ಕ್ಯುಲೋಸಿಸ್ ಎಂಬ ರೋಗಾಣುವಿನಿಂದ ಹರಡುತ್ತದೆ ಎಂದು ತಮ್ಮ ಸಂಶೋಧನೆಯಿಂದ ಕಂಡುಕೊಂಡರು. ಇದಾದ ಬಳಿಕ ತ್ವರಿತಗತಿಯಲ್ಲಿ ರೋಗ ನಿರ್ಣಯವನ್ನು ಮಾಡಲು ಮತ್ತು ಈ ರೋಗಕ್ಕೆ ಔಷಧವನ್ನು ಸಂಶೋಧಿಸಲು ವೈದ್ಯಕೀಯ ಜಗತ್ತಿಗೆ ಸಾಧ್ಯವಾಯಿತು. ಈ ಹಿನ್ನೆಲೆಯಲ್ಲಿ ಪ್ರತೀ ವರ್ಷ ಮಾರ್ಚ್ 24ರಂದು ವಿಶ್ವ ಕ್ಷಯ ರೋಗ ದಿನವನ್ನಾಗಿ ಆಚರಿಸಲಾಗುತ್ತದೆ. ಈ ಮೂಲಕ ಕ್ಷಯ ರೋಗದ ಬಗೆಗೆ ಜನರಿಗೆ ಅರಿವು ಮೂಡಿಸುವ ಕಾರ್ಯವನ್ನು ನಿರಂತರವಾಗಿ ಮಾಡಿಕೊಂಡು ಬರಲಾಗುತ್ತಿದೆ.
Related Articles
Advertisement
ಮೂಳೆ, ಕರುಳು, ದುಗ್ಧರಸ ಗ್ರಂಥಿಗಳು, ಮೆದುಳಿನ ಪರದೆ, ಎದೆಗೂಡಿನ ಪರದೆ ಮುಂತಾದ ಅಂಗಾಂಗಗಳಲ್ಲಿಯೂ ಕ್ಷಯ ರೋಗವು ಕಾಣಿಸಿಕೊಳ್ಳುವುದು. ಆದರೆ ಈ ವಿಧದ ಶ್ವಾಸಕೋಶೇತರ ಕ್ಷಯವು ಒಬ್ಬರಿಂದ ಇನ್ನೊಬ್ಬರಿಗೆ ಹರಡುವುದಿಲ್ಲ.ಕ್ಷಯ ರೋಗವು ಅಧಿಕವಾಗಿ ಎಚ್.ಐ.ವಿ. ಸೋಂಕಿತರಲ್ಲಿ, ಮಾದಕ ವ್ಯಸನಿಗಳಲ್ಲಿ, ಧೂಮಪಾನ ಮತ್ತು ಮದ್ಯಪಾನ ಮಾಡುವವರಲ್ಲಿ, ಮಧುಮೇಹ ರೋಗಿಗಳಲ್ಲಿ, ಡಯಾಲಿಸಿಸ್ ರೋಗಿಗಳಲ್ಲಿ ಹಾಗೂ ಅನಾಥಾಶ್ರಮ ಮತ್ತು ನಗರ ಪ್ರದೇಶ ಗಳ ಕೊಳೆಗೇರಿ ಪ್ರದೇಶದಲ್ಲಿ ವಾಸಿಸುವವರಲ್ಲಿ ಹೆಚ್ಚಾಗಿ ಕಂಡುಬರುವುದು. ಕ್ರಮಬದ್ಧ ಔಷಧ ಸೇವನೆ ಅಗತ್ಯ: ಕ್ಷಯ ರೋಗವನ್ನು ಪ್ರಾರಂಭಿಕ ಹಂತದಲ್ಲಿ ಪತ್ತೆ ಹಚ್ಚಿ, ಕ್ರಮಬದ್ಧ ಔಷಧ ಸೇವನೆಯಿಂದ (6 ತಿಂಗಳು) ಸಂಪೂರ್ಣವಾಗಿ ಗುಣಪಡಿಸಬಹುದು. ಇತರ ಸಾಂಕ್ರಾಮಿಕ ರೋಗಗಳಂತೆ ಕೆಲವೇ ದಿನಗಳ ಚಿಕಿತ್ಸೆಯಿಂದ ಇದನ್ನು ಗುಣಪಡಿಸಲು ಅಸಾಧ್ಯ. ಇತ್ತೀಚಿನ ನೂತನ ಚಿಕಿತ್ಸೆಯಲ್ಲಿ ರೋಗಿಯು ಅವನ ತೂಕಾನುಸಾರ ಪ್ರತಿನಿತ್ಯ ಔಷಧವನ್ನು ಕ್ರಮಬದ್ಧವಾಗಿ 6 ತಿಂಗಳುಗಳ ಕಾಲ ಸೇವಿಸಬೇಕು. ಔಷಧ ಸೇವಿಸಿ 10-15 ದಿನಗಳಲ್ಲಿ ರೋಗಲಕ್ಷಣಗಳು ಕಡಿಮೆಯಾದರೂ ಔಷಧ ಸೇವನೆಯನ್ನು ಮುಂದುವರಿಸಬೇಕು. ಯಾಕೆಂದರೆ ರೋಗಾಣುಗಳು ಶ್ವಾಸಕೋಶದಲ್ಲಿ ಜೀವಂತವಾಗಿರುತ್ತವೆ. ಕ್ರಮಬದ್ಧವಲ್ಲದ ಹಾಗೂ ಅಸಂಪೂರ್ಣ ಚಿಕಿತ್ಸೆಯಿಂದ ಕ್ಷಯರೋಗವು ಮರುಕಳಿಸಬಹುದು. ಈ ತೆರನಾದ ಅಸಮರ್ಪಕ ಚಿಕಿತ್ಸೆಯಿಂದ ರೋಗಾಣುಗಳು ಔಷಧಗಳಿಗೆ ಪ್ರತಿರೋಧಕ ಶಕ್ತಿಯನ್ನು ಉತ್ಪತ್ತಿ ಮಾಡುತ್ತವೆ. ಈ ಕ್ಷಯ ರೋಗವನ್ನು ಔಷಧ ನಿರೋಧಕ ಕ್ಷಯವೆಂದು ಕರೆಯಲಾಗುವುದು. ಇದನ್ನು ದೀರ್ಘಕಾಲದ (12-24 ತಿಂಗಳು) ಚಿಕಿತ್ಸೆಯಿಂದ ಮಾತ್ರ ಗುಣಪಡಿಸಬಹುದು. ಔಷಧ ನಿರೋಧಕ ಕ್ಷಯ ರೋಗಿಗಳು ಬಹಳ ಅಪಾಯಕಾರಿ ಹಾಗೂ ಇತರರಿಗೆ (ಕುಟುಂಬದವರಿಗೆ ಮತ್ತು ಉದ್ಯೋಗ ಸ್ಥಳದಲ್ಲಿ ನಿಕಟವರ್ತಿಗಳಿಗೆ) ಬಹಳ ತ್ವರಿತಗತಿಯಲ್ಲಿ ಹರಡ ಬಲ್ಲದು. ಆದುದರಿಂದ ರೋಗ ನಿರೋಧಕ ಶಕ್ತಿ ಕಡಿಮೆ ಉಳ್ಳವರು ಸದಾ ಮುಂಜಾಗ್ರತ ಕ್ರಮಗಳನ್ನು ಅನುಸರಿಸಿ ತಮ್ಮನ್ನು ರಕ್ಷಿಸಿಕೊಳ್ಳಬೇಕು. ಅಭಿವೃದ್ಧಿ ಹೊಂದಿದ ದೇಶಗಳಲ್ಲಿ ಕ್ಷಯರೋಗಿಯ ನಿಕಟ ಸಂಪರ್ಕದಲ್ಲಿರುವ ಎಲ್ಲ ಜನರನ್ನು ತಪಾಸಣೆ ಹಾಗೂ ಪರೀಕ್ಷೆಗೆ ಒಳಪಡಿಸಿ ಪ್ರಾರಂಭಿಕ ಹಂತದ ಲ್ಲಿಯೇ ರೋಗವನ್ನು ಪತ್ತೆಹಚ್ಚಲಾಗುತ್ತದೆ. ತಡೆಗಟ್ಟುವ ವಿಧಾನಗಳು: 1. ಕೆಮ್ಮುವಾಗ, ಸೀನುವಾಗ ತಪ್ಪದೇ ಕರವಸ್ತ್ರ/ಮಾಸ್ಕ್ ಧರಿಸುವುದು. 2. ಅಲ್ಲಲ್ಲಿ ಉಗುಳುವ ದುರಾಭ್ಯಾಸವನ್ನು ನಿಲ್ಲಿಸಬೇಕು. 3. ಚಿಕ್ಕ ಮಕ್ಕಳಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆ ಇರುವುದರಿಂದ ಮಕ್ಕಳನ್ನು ಕ್ಷಯ ರೋಗಿಗಳಂದ ದೂರವಿಡಬೇಕು. 4. ಹುಟ್ಟಿದ ಒಂದು ತಿಂಗಳೊಳಗೆ ಎಲ್ಲ ಮಕ್ಕಳಿಗೂ ತಪ್ಪದೇ ಬಿ.ಸಿ.ಜಿ. ಲಸಿಕೆಯನ್ನು ಹಾಕಿಸುವುದು. 5. ಧೂಮಪಾನ, ಮದ್ಯಪಾನದಿಂದ ದೂರವಿರು ವುದು. 6. ಪೌಷ್ಟಿಕ ಮತ್ತು ಸಮತೋಲನ ಆಹಾರ ಸೇವನೆ. ಸವಾಲುಗಳು: ರೋಗದ ನಿರ್ಮೂಲನೆ ಮಾಡಲು ನಮ್ಮ ಮುಂದೆ ಇರುವ ಅನೇಕ ಸವಾಲುಗಳು; 1. ಬಡತನ, 2. ಅಪೌಷ್ಟಿಕತೆ, 3. ಎಚ್.ಐ.ವಿ. ಸೋಂಕು, 4. ಹೆಚ್ಚುತ್ತಿರುವ ಮಧುಮೇಹ ರೋಗಿಗಳು, 5. ನಗರ ಪ್ರದೇಶಗಳಲ್ಲಿ ಹೆಚ್ಚುತ್ತಿರುವ ಕೊಳೆಗೇರಿಗಳು, 6. ಹೆಚ್ಚುತ್ತಿರುವ ಜೀವನಶೈಲಿಗೆ ಸಂಬಂಧಪಟ್ಟ ರೋಗಗಳು (ಸ್ಥೂಲಕಾಯ)
ಮೇಲಿನ ಎಲ್ಲ ಸವಾಲುಗಳನ್ನು ಎದುರಿಸಿ ಹಂತಹಂತವಾಗಿ ಅವುಗಳನ್ನು ನಿವಾರಿಸಲು ಸರಕಾರ ಹಾಗೂ ಸರಕಾರೇತರ ಸಂಸ್ಥೆಗಳು ಒಟ್ಟುಗೂಡಿ ಶ್ರಮಿಸಬೇಕು. ಆರೋಗ್ಯ ಇಲಾಖೆ ಮಾತ್ರವಲ್ಲದೇ ಸಂಬಂಧಪಟ್ಟ ಎಲ್ಲ ಇಲಾಖೆಗಳು ಸಮನ್ವಯತೆಯಿಂದ ಕಾರ್ಯ ನಿರ್ವಹಿಸಬೇಕು. ಇವೆಲ್ಲಕ್ಕಿಂತ ಮುಖ್ಯವಾಗಿ ಜನರು ವೈಯಕ್ತಿಕ ಸ್ವತ್ಛತೆಯತ್ತ ಗಮನಹರಿಸಬೇಕಿದೆ. ಹೀಗಾದಲ್ಲಿ ಕ್ಷಯ ರೋಗವನ್ನು ನಿರ್ಮೂಲನೆ ಮಾಡಲು ತಕ್ಕಮಟ್ಟಿಗೆ ಸಾಧ್ಯ. ಡಾ| ರಾಮಚಂದ್ರ ಕಾಮತ್, ಮಣಿಪಾಲ