ಮಂಗಳೂರು: ಕ್ಷಯ ರೋಗ ಸೋಲಿಸಿ ದೇಶವನ್ನು ಗೆಲ್ಲಿಸಬೇಕಿದೆ. ಕ್ಷಯ ಮುಕ್ತ ದೇಶವಾಗಿಸುವ ನಿಟ್ಟಿನಲ್ಲಿ ಪಣತೊಟ್ಟು, 2030ಯಲ್ಲಿ ಸಂಪೂರ್ಣ ಹತೋಟಿಗೆ ತರುವ ಗುರಿ ಹೊಂದಲಾಗಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಆರೋಗ್ಯಾಧಿಕಾರಿ ಡಾ| ಎಚ್.ಆರ್. ತಿಮ್ಮಯ್ಯ ಹೇಳಿದರು.
ವೆನ್ಲಾಕ್ ಜಿಲ್ಲಾಸ್ಪತ್ರೆಯ ಆರ್‌ಪಿಸಿಸಿ ಸಭಾಂಗಣದಲ್ಲಿ ಶನಿವಾರ ಜರಗಿದ 100 ದಿನಗಳ ಕ್ಷಯರೋಗ ಜಾಗೃತಿ ಅಭಿಯಾನಯನ್ನು ಉದ್ಘಾಟಿಸಿ ಮಾತನಾಡಿ ಅತ್ಯಂತ ಪ್ರಾಚೀನ ಕಾಯಿಲೆಯಾದ ಕ್ಷಯರೋಗ ಪ್ರಸ್ತುತ ದಿನಗಳಲ್ಲೂ ಅಪಾಯಕಾರಿಯಾಗಿಯೇ ಉಳಿದಿದೆ. ಅದರ ವಿರುದ್ಧ ಸವಾರಿ ನಡೆಸಲು ಜನರನ್ನು ಶಿಕ್ಷಿತರನ್ನಾಗಿಸಬೇಕಿದೆ. ಬಡತನ, ಅನಕ್ಷರತೆ, ನೈರ್ಮಲ್ಯದ ಕೊರತೆ, ಅಪೌಷ್ಟಿಕತೆಯಿಂದಾಗಿ ಜನ ಕ್ಷಯ ರೋಗಕ್ಕೆ ತುತ್ತಾಗುತ್ತಿದ್ದಾರೆ ಎಂದರು.
ಜಿಲ್ಲಾ ತರಬೇತು ಸಂಸ್ಥೆಯ ಪ್ರಾಂಶುಪಾಲ ಡಾ| ಕಿಶೋರ್ ಕುಮಾರ್ ಮಾತನಾಡಿ, ಕ್ಷಯರೋಗ ಮುಕ್ತ ಭಾರತಕ್ಕೆ ಇರುವ ಜವಾಬ್ದಾರಿಯನ್ನು ಪ್ರತಿಯೊಬ್ಬರೂ ಪಾಲಿಸಬೇಕು. ಆರೋಗ್ಯ ಕಾರ್ಯಕರ್ತೆಯರು ಹಾಗೂ ಸಿಬಂದಿ ವರ್ಗದವರು ಜನರಲ್ಲಿ ಅರಿವು ಮೂಡಿಸುವ ಕೆಲಸವನ್ನು ನಿರಂತರವಾಗಿ ನಡೆಸಬೇಕು ಎಂದು ಹೇಳಿಃದರು.
ವೆನ್ಲಾಕ್ ಅಧೀಕ್ಷಕ ಡಾ| ಶಿವಪ್ರಕಾಶ್, ಕ್ಷಯರೋಗ ನಿಯಂತ್ರಣಾಧಿಕಾರಿ ಖತೀಜಾ ದಿಲ್ಶದ್, ಜಿಲ್ಲಾ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ| ಜೆಸಿಂತಾ, ಕುಷ್ಟರೋಗ ನಿಯಂತ್ರಣಾಧಿಕಾರಿ ಡಾ| ಸುದರ್ಶನ್ ಉಪಸ್ಥಿತರಿದ್ದರು. ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಜ್ಯೋತಿ ಸ್ವಾಗತಿಸಿ, ನಿರೂಪಿಸಿದರು. ಲೋಕೇಶ್ ವಂದಿಸಿದರು.
ವೈಯಕ್ತಿಕ ಶುಚಿತ್ವದತ್ತ ಗಮನ ನೀಡಿ
ಗರ್ಭಿಣಿ, ಬಾಣಂತಿ, ನವಜಾತ ಶಿಶುಗಳ ಮರಣ ಪ್ರಮಾಣವನ್ನು ಹತೋಟಿಗೆ ತರಲು ಅಪೌಷ್ಟಿಕತೆ, ರಕ್ತಹೀನತೆ ನಿಯಂತ್ರಿಸುವ ಜತೆ ವೈಯಕ್ತಿಕ ಶುಚಿತ್ವದತ್ತ ಗಮನ ನೀಡಬೇಕು. ಆರೋಗ್ಯ ಕಾರ್ಯಕರ್ತೆಯರು ಮಹಿಳೆಯರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಬೇಕು ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ| ಎಚ್.ಆರ್. ತಿಮ್ಮಯ್ಯ ತಿಳಿಸಿದ್ದಾರೆ.