ಬೆಂಗಳೂರು: ದೇಶಾದ್ಯಂತ 2019-20ನೇ ಶೈಕ್ಷಣಿಕ ಸಾಲಿಗೆ ಹೋಲಿಸಿದರೆ ಕೊರೊನಾ ಕಾಲಘಟ್ಟವಾದ 2020-21ನೇ ಶೈಕ್ಷಣಿಕ ವರ್ಷದಲ್ಲಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಮಕ್ಕಳ ದಾಖಲಾತಿ ತೀವ್ರವಾಗಿ ಏರಿಕೆ ಕಂಡಿದ್ದು, ಕರ್ನಾಟಕ ದಾಖಲಾತಿಯಲ್ಲಿ ತೀವ್ರ ಕುಸಿತವಾಗಿರುವುದು ತಿಳಿದು ಬಂದಿದೆ.
ಕೇಂದ್ರ ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆಯು 2020-21ನೇ ಶೈಕ್ಷಣಿಕ ಸಾಲಿಗಾಗಿ ದೇಶಾದ್ಯಂತ ನಡೆಸಿರುವ ಸರ್ವೆ ವರದಿ “ಶಿಕ್ಷಣಕ್ಕಾಗಿ ಏಕೀಕೃತ ಜಿಲ್ಲಾ ಮಾಹಿತಿ ವ್ಯವಸ್ಥೆ’ (ಯುಡಿಎಸ್‌ಇ) ಪ್ಲಸ್ ವರದಿಯು ಇತ್ತೀಚೆಗೆ ಬಿಡುಗಡೆ ಮಾಡಲಾಗಿದೆ.
ವರದಿಯಲ್ಲಿ ಲಭ್ಯವಿರುವ ಮಾಹಿತಿ ಪ್ರಕಾರ, ಪ್ರಾಥಮಿಕ ಮತ್ತು ಪ್ರೌಢಶಿಕ್ಷಣಕ್ಕೆ (1ರಿಂದ 12ನೇ ತರಗತಿ) ದಾಖಲಾದ ಮಕ್ಕಳ ಸಂಖ್ಯೆ 2.82 ಲಕ್ಷ ಕಡಿಮೆಯಾಗಿದೆ. ಆದರೆ, ಆಶ್ಚರ್ಯಕರ ಸಂಗತಿ ಎಂದರೆ, ಒಟ್ಟಾರೆ ದಾಖಲಾತಿಯಲ್ಲಿ ಕುಸಿತ ಕಂಡಿದ್ದರೂ ಕರ್ನಾಟಕದ ಸರ್ಕಾರಿ ಶಾಲೆಗಳಲ್ಲಿ ದಾಖಲಾತಿ 1.25 ಲಕ್ಷದಷ್ಟು ಹೆಚ್ಚಳವಾಗಿದೆ ಎಂದು ತಿಳಿಸಿದೆ.
2019-20ಕ್ಕೆ ಹೋಲಿಸಿದರೆ 2020-21ನೇ ಸಾಲಿನಲ್ಲಿ ರಾಷ್ಟ್ರೀಯ ಮಟ್ಟದಲ್ಲಿ 1ರಿಂದ 12ನೇ ತರಗತಿ ವರೆಗೆ ದಾಖಲಾಗಿರುವ ಮಕ್ಕಳ ಸಂಖ್ಯೆ 28 ಲಕ್ಷ ಹೆಚ್ಚಳವಾಗಿದೆ. ಒಟ್ಟಾರೆ 25.38 ಕೋಟಿಗಿಂತ ಹೆಚ್ಚಿನ ದಾಖಲಾತಿಯಾಗಿದೆ. 13.17 ಕೋಟಿ ಬಾಲಕರು ಮತ್ತು 12.21 ಕೋಟಿ ಬಾಲಕಿಯರಿದ್ದಾರೆ ಎಂದು ವರದಿಯಲ್ಲಿ ಉಲ್ಲೇಖೀಸಲಾಗಿದೆ.
ಕೊರೊನಾ ಕಾರಣದಿಂದ ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸುವ ಮತ್ತು ದಾಖಲಾತಿ ಮಾಡುವ ಪ್ರಮಾಣ ಕುಸಿದಿದೆ. ಕೊರೊನಾ ಸಮಯದಲ್ಲಿ ಉದ್ಯೋಗ ಮತ್ತು ವ್ಯಾಪಾರ ವಹಿವಾಟು ಕಳೆದುಕೊಂಡವರು ತಮ್ಮ ಮಕ್ಕಳನ್ನು ಖಾಸಗಿ ಶಾಲೆಗಳಿಂದ ಸರ್ಕಾರಿ ಶಾಲೆಗೆ ಸ್ಥಳಾಂತರಿಸಿದ್ದಾರೆ. ಆರ್ಥಿಕ ಮುಗ್ಗಟ್ಟು ಎದುರಿಸಿದ ಮಧ್ಯಮ ವರ್ಗ ಮತ್ತು ಕೆಳ ವರ್ಗದ ಪೋಷಕರು, ಹೆಚ್ಚಿನ ಸಂಖ್ಯೆಯಲ್ಲಿ ಸರ್ಕಾರಿ ಶಾಲೆಗಳತ್ತ ಮುಖ ಮಾಡಿದ್ದಾರೆ ಎಂದು ತಿಳಿದು ಬಂದಿದೆ.
ಮಕ್ಕಳ ದಾಖಲಾತಿ ಪ್ರಮಾಣ :
ವಿಭಾಗ/ 2019-20/ 2020-21
ಸರ್ಕಾರಿ/ 49,06,231/ 50,31,606
ಅನುದಾನಿತ /15,46,326/ 15,06,780
ಖಾಸಗಿ/ 56,85,879/ 53,17,640
ಒಟ್ಟಾರೆ 1,21,39,105 1,18,56,736