ಗುವಾಹಟಿ: ಪ್ರವಾಸಿ ಇಂಗ್ಲೆಂಡ್ ವಿರುದ್ಧದ ದ್ವಿತೀಯ ಚುಟುಕು ಪಂದ್ಯದಲ್ಲೂ ಭಾರತೀಯ ಮಹಿಳೆಯರು ಮುಗ್ಗರಿಸಿದ್ದಾರೆ. ಸ್ಮೃತಿ ಮಂಧನಾ ನಾಯಕತ್ವದ ಟೀಂ ಇಂಡಿಯಾವನ್ನು ಎರಡೂ ಪಂದ್ಯವನ್ನು ಸೋಲಿಸಿದ ಇಂಗ್ಲೆಂಡ್ ವನಿತೆಯರು ಸರಣಿಯಲ್ಲಿ ಒಂದು ಪಂದ್ಯ ಬಾಕಿ ಇರುವಂತೆ ಸರಣಿಯನ್ನು 2-0 ಅಂತರದಿಂದ ಗೆದ್ದು ಬೀಗಿದೆ.
ಇಲ್ಲಿನ ಬರ್ಸಾಪುರ ಕ್ರಿಕೆಟ್ ಮೈದಾನದಲ್ಲಿ ಗುರುವಾರ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಇಂಗ್ಲೆಂಡ್ ಭಾರತ ತಂಡವನ್ನು ಮೊದಲು ಬ್ಯಾಟಿಂಗ್ ಗೆ ಆಹ್ವಾನಿಸಿತು. ಇಂಗ್ಲೆಂಡ್ ನಾಯಕಿ ಹೀತರ್ ನೈಟ್ಸ್ ಈ ಲೆಕ್ಕಚಾರ ವಿಫಲವಾಗಲಿಲ್ಲ. ಭಾರತ 34 ರನ್ ಗಳಿಸಿಕೊಳ್ಳುವಷ್ಟರಲ್ಲಿ ಮೊದಲ ಮೂರು ವಿಕೆಟ್ ಕಳೆದುಕೊಂಡಾಗಿತ್ತು.
ಹರ್ಮನ್ ಪ್ರೀತ್ ಅನುಪಸ್ಥಿತಿಯಲ್ಲಿ ತಂಡದ ನಾಯಕಿಯಾಗಿರುವ ಸ್ಮೃತಿ ಮಂಧನಾ ಈ ಪಂದ್ಯದಲ್ಲೂ ವಿಫಲಾರದರು. ಮಂಧನಾ ಗಳಿಸಿದ್ದು ಕೇವಲ 12 ರನ್. ಜೆಮಿಮಾ ರೋಡ್ರಿಗಸ್ ತನ್ನ ಖಾತೆಗೆ ಎರಡು ರನ್ ಸೇರಿಸಿ ಪೆವಿಲಿಯನ್ ಗೆ ಸೇರಿದರು. ಮೊದಲ ಸರಣಿ ಆಡುತ್ತಿರುವ ಹರ್ಲಿನ್ ಡಿಯೋಲ್ ಕೂಡಾ 14 ರನ್ ಗಳಿಸಲಷ್ಟೇ ಶಕ್ತರಾದರು.
ಮಧ್ಯಮ ಕ್ರಮಾಂಕದಲ್ಲಿ ಮಿಥಾಲಿ ರಾಜ್ 20 ರನ್ ಗಳಿಸಿದರೆ, ದೀಪ್ತಿ ಶರ್ಮಾ ಮತ್ತು ಭಾರತಿ ಫುಲ್ಮಾಲಿ ತಲಾ 18 ರನ್ ಗಳಿಸಿದರು. ಅಂತಿಮವಾಗಿ ಭಾರತ ನಿಗದಿತ 20 ಓವರ್ ಗಳಲ್ಲಿ 111 ರನ್ ಗಳಿಸಿತು. ಇಂಗ್ಲೆಂಡ್ ಪರ ಕ್ಯಾಥರಿನ್ ಬ್ರಂಟ್ ಮೂರು ವಿಕೆಟ್ ಪಡೆದರೆ, ಲಿನ್ಸೆ ಸ್ಮಿತ್ ಎರಡು ವಿಕೆಟ್ ಪಡೆದರು.
ಆಂಗ್ಲರ ಆಧರಿಸಿದ ಡೇನಿಯಲ್ ವ್ಯಾಟ್: ಭಾರತ ನೀಡಿದ ಸಾಧಾರಣ ಗುರಿಯನ್ನು ಬೆನ್ನತ್ತಿದ ಇಂಗ್ಲೆಂಡ್ ಕೂಡಾ ಸ್ವಲ್ಪ ತಿಣುಕಾಡಿತು. ಟಾಮಿ ಬೇಮಂಟ್, ಆಮಿ ಜೋನ್ಸ್, ನಥಾಲಿ ಶಿವರ್ ಮತ್ತು ನಾಯಕಿ ಹೇತರ್ ನೈಟ್ ಎರಡಂಕಿ ರನ್ ಗಳಿಸಲೂ ವಿಫಲರಾದರು. ಆದರೆ ಮತ್ತೊಂದೆಡೆ ಕ್ರೀಸ್ ಕಚ್ಚಿ ನಿಂತು ಭಾರತೀಯ ಬೌಲರ್ ಗಳನ್ನು ಕಾಡಿದ ಡ್ಯಾನಿಯೆಲ್ ವ್ಯಾಟ್ ಅಜೇಯ ಅರ್ಧಶತಕ ಬಾರಿಸಿದರು. 55 ಎಸೆತ ಎದುರಿಸಿದ ವ್ಯಾಟ್ 64 ರನ್ ಗಳಿಸಿದರು. ಅವರಿಗೆ ಉತ್ತಮ ಸಾಥ್ ನೀಡಿದ ಲಾರೆನ್ ವಿನ್ ಫೀಲ್ಡ್ 29 ರನ್ ಗಳಿಸಿದರು.
ಅಂತಿಮವಾಗಿ ಇಂಗ್ಲೆಂಡ್ 19.1 ಓವರ್ ನಲ್ಲಿ ಐದು ವಿಕೆಟ್ ಕಳೆದುಕೊಂಡು 114 ರನ್ ಗಳಿಸಿ ಗೆಲುವಿನ ಗೆರೆ ದಾಟಿತು. ಭಾರತದ ಪರ ಏಕ್ತಾ ಬಿಷ್ಟ್ ಎರಡು ವಿಕೆಟ್ ಪಡೆದರು. ಉತ್ತಮ ಇನ್ನಿಂಗ್ಸ್ ಆಡಿದ ಡ್ಯಾನಿಯೆಲ್ ವ್ಯಾಟ್ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು.