Advertisement

ಹತ್ತರ ಜತೆ ಬರಲಿದೆ ಪಾಲಿಕೆಯ ಹನ್ನೊಂದನೆ ಆ್ಯಪ್‌!

12:15 PM Dec 11, 2017 | |

ಬೆಂಗಳೂರು: ಆಡಳಿತ ಸುಧಾರಣೆ, ನಾಗರಿಕರ ಸಮಸ್ಯೆಗಳಿಗೆ ಶೀಘ್ರ ಪರಿಹಾರ ಒದಗಿಸಲು ಬಿಬಿಎಂಪಿಯಿಂದ ಈಗಾಗಲೇ ಇರುವ ಹತ್ತಾರು ಮೊಬೈಲ್‌ ಆ್ಯಪ್‌ಗ್ಳಸಾಲಿಗೆ ಸೋಮವಾರ “ಫಿಕ್ಸ್‌ ಮೈ ಸ್ಟ್ರೀಟ್‌’ ಎಂಬ ಹೊಸ ಆ್ಯಪ್‌ ಸೇರ್ಪಡೆಗೊಳ್ಳಲಿದೆ.

Advertisement

ಪಾಲಿಕೆಯ ವ್ಯಾಪ್ತಿಯಲ್ಲಿನ ರಸ್ತೆಗುಂಡಿ, ಬೀದಿ ದೀಪ, ತ್ಯಾಜ್ಯ ವಿಲೇವಾರಿ ಹೀಗೆ ಹತ್ತು ಹಲವು ಸಮಸ್ಯೆಗಳಿಗೆ ಶೀಘ್ರ ಪರಿಹಾರ ನೀಡಜಲು “ಫಿಕ್ಸ್‌ ಮೈ ಸ್ಟ್ರೀಟ್‌’ ಆ್ಯಪ್‌ ಅಭಿವೃದ್ಧಿಪಡಿಸಲಾಗಿದೆ. ಆ್ಯಪ್‌ ಮೂಲಕ ನಾಗರಿಕರು ಫೋಟೋ ಸಹಿತ ತಮ್ಮ ಸಮಸ್ಯೆಗಳನ್ನು ಅಧಿಕಾರಿಗಳ ಗಮನಕ್ಕೆ ತಂದು ಶೀಘ್ರ ಪರಿಹಾರ ಪಡೆಯಬಹುದು.

ಪಾಲಿಕೆಯಿಂದ ಈಗಾಗಲೇ ಹಲವು ಆ್ಯಪ್‌ ಪರಿಚಯಿಸಲಾಗಿದೆ. ಆದರೆ, ಅವುಗಳ ಕುರಿತು ನಗರದ ಜನತೆಗೆ ಸಮರ್ಪಕ ಮಾಹಿತಿ ನೀಡದ ಹಿನ್ನೆಲೆಯಲ್ಲಿ ನಾಗರಿಕರು ಆ್ಯಪ್‌ಗ್ಳನ್ನು ಬಳಸುತ್ತಿಲ್ಲ. ಇದರೊಂದಿಗೆ ಆ್ಯಪ್‌ಗ್ಳಲ್ಲಿ ಕೆಲ ತಾಂತ್ರಿಕ ದೋಷಗಳಿರುವ ಕುರಿತು ದೂರು ನೀಡಿದರೂ ಪಾಲಿಕೆ ಅಧಿಕಾರಿಗಳು ಕ್ರಮ ಕೈಗೊಳ್ಳದಿರುವುದು ಜನತೆ ಆ್ಯಪ್‌ನಿಂದ ವುಮುಖರಾಗಲು ಕಾರಣವಾಗಿದೆ. 

ಜನ ಆ್ಯಪ್‌ ಬಳಸೋದಿಲ್ಲ: ಅತ್ಯಾಧುನಿಕ ತಂತ್ರಾಜ್ಞಾನದ ಮೂಲಕ ನಗರದ ಜನರ ಸಮಸ್ಯೆಗಳನ್ನು ಶೀಘ್ರ ಪರಿಹರಿಸಲು “ಬಿಬಿಎಂಪಿ ಸಹಾಯ’, “ಬಿಬಿಎಂಪಿ ಇ-ಟಾಯ್ಲೆಟ್ಸ್‌’, “ಕ್ಲೀನ್‌ ಬೆಂಗಳೂರು’, “ಇಂದಿರಾ ಕ್ಯಾಂಟೀನ್‌’, “ಬೆಂಗಳೂರು ಗ್ರೀನ್‌’, “ಆನ್‌ಲೈನ್‌ ಯುಟಿಲಿಟಿ ಸರ್ವೀಸ್‌’ ಸೇರಿ ಹಲವು ಆ್ಯಪ್‌ಗ್ಳಿದ್ದರೂ ಹೆಚ್ಚು ಬಳಕೆಯಾಗುತ್ತಿಲ್ಲ. ಹೀಗಿರುವಾಗ ಪಾಲಿಕೆ ಅಧಿಕಾರಿಗಳು ಲೋಕಾರ್ಪಣೆಗೊಳಿಸಲು ಮುಂದಾಗಿರುವ ಹೊಸ ಆ್ಯಪ್‌ ಎಷ್ಟು ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸಲಿದೆ ಎಂದು ಕಾದುನೋಡಬೇಕಿದೆ. 

ರಸ್ತೆಗುಂಡಿ, ತ್ಯಾಜ್ಯ ವಿಲೇವಾರಿ, ಬೀದಿ ದೀಪ, ರಸ್ತೆ ಅಗೆತ ಸೇರಿದಂತೆ ಇತರೆ ಸಮಸ್ಯೆಗಳನ್ನು ಅಧಿಕಾರಿಗಳ ಗಮನಕ್ಕೆ ತರಲು “ಫಿಕ್ಸ್‌ ಮೈ ಸ್ಟ್ರೀಟ್‌’ ಆ್ಯಪ್‌ ಜಾರಿಗೆ ತರಲಾಗುತ್ತಿದೆ. ಸಾರ್ವಜನಿಕರು ತಮ್ಮ ಸಮಸ್ಯೆಗಳನ್ನು ಫೋಟೋ ಸಮೇತವಾಗಿ ಆ್ಯಪ್‌ನಲ್ಲಿ ಅಪ್‌ಲೋಡ್‌ ಮಾಡಿದರೆ, ಅಧಿಕಾರಿಗಳು ನಿಗದಿತ ಅವಧಿಯಲ್ಲಿ ಅವುಗಳನ್ನು ಪರಿಹರಿಸಿ, ಸಾರ್ವಜನಿಕರಿಗೆ ಮಾಹಿತಿ ನೀಡಲಿದ್ದಾರೆ ಎಂದು ಪಾಲಿಕೆಯ ಅಧಿಕಾರಿಗಳು ತಿಳಿಸಿದ್ದಾರೆ. 

Advertisement

ಆ್ಯಪ್‌ಗ್ಳನ್ನು ಟೀಕಿಸಿರುವ ನಾಗರಿಕರು: ರಸ್ತೆಗುಂಡಿ ಸಮಸ್ಯೆ, ಬೀದಿ ದೀಪ, ತ್ಯಾಜ್ಯ ವಿಲೇವಾರಿ ಸೇರಿದಂತೆ ವಿವಿಧ ಸಮಸ್ಯೆಗಳನ್ನು ಅಧಿಕಾರಿಗಳು ತಿಳಿಸಲು ಗೂಗಲ್‌ ಪ್ಲೇಸ್ಟೋರ್‌ನಲ್ಲಿ ಪಾಲಿಕೆಯ ಹಲವು ಆ್ಯಪ್‌ಗ್ಳು ಲಭ್ಯವಿದೆ. ಆ್ಯಪ್‌ಗ್ಳನ್ನು ಡೌನ್‌ಲೋಡ್‌ ಮಾಡಿಕೊಂಡಿರುವ ಹಾಗೂ ಆ್ಯಪ್‌ ಕಾರ್ಯನಿರ್ವಹಣೆಯ ಕುರಿತು ಸಾರ್ವಜನಿಕರು ನಾಗರಿಕರು ಅಲ್ಲಿ ಪ್ರತಿಕ್ರಿಯಿಸಿದ್ದು,

ಆ್ಯಪ್‌ ಮೂಲಕ ನೀಡುವ ದೂರುಗಳಿಗೆ ಅಧಿಕಾರಿಗಳು ಸ್ಪಂದಿಸುವುದಿಲ್ಲ ಎಂದು ಟೀಕಿಸಿದ್ದಾರೆ. ಜತೆಗೆ ಆ್ಯಪ್‌ಗ್ಳಿಗೆ ಕಡಿಮೆ ರೇಟಿಂಗ್‌ ನೀಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪಾಲಿಕೆಯ ಆ್ಯಪ್‌ಗ್ಳ ಪೈಕಿ “ಇಂದಿರಾ ಕ್ಯಾಂಟೀನ್‌ ಆ್ಯಪ್‌’ (4.1) ಅತಿ ಹೆಚ್ಚು ರೇಟಿಂಗ್‌ ಪಡೆದಿದ್ದು, “ಬಿಬಿಎಂಪಿ ಗ್ರೀನ್‌ ಆ್ಯಪ್‌’ (4.0) ಎರಡನೇ ಸ್ಥಾನದಲ್ಲಿದೆ.  

ಹೊಸ ಆ್ಯಪ್‌ನಲ್ಲಿ ದೂರು ಸಲ್ಲಿಸುವುದು ಹೇಗೆ?: ಫಿಕ್ಸ್‌ ಮೈ ಸ್ಟ್ರೀಟ್‌ ಆ್ಯಪ್‌ನಲ್ಲಿ ದೂರು ದಾಖಲಿಸುವವರು ಮೊದಲು ತಮ್ಮ ವಿವರಗಳನ್ನು ಭರ್ತಿ ಮಾಡಬೇಕು. ನಂತರ ಯಾವ ವಿಷಯವಾಗಿ ದೂರು ನೀಡಲಾಗುತ್ತಿದೆ, ಸ್ಥಳ ಮತ್ತು ವಾರ್ಡ್‌ನ ಮಾಹಿತಿ ನೀಡಬೇಕು. ಜತೆಗೆ ದೂರಿನ ವಿವರ ಅಥವಾ ಫೋಟೋ ಅಪ್‌ಲೋಡ್‌ ಮಾಡಬಹುದಾಗಿದೆ.

ಹೀಗೆ ಸಲ್ಲಿಕೆಯಾದ ದೂರು ಸ್ವೀಕೃತವಾದ ನಂತರದಲ್ಲಿ ದೂರುದಾರರ ಮೊಬೈಲ್‌ ಸಂಖ್ಯೆಗೆ ಸಂದೇಶ ರವಾನೆಯಾಗಲಿದೆ. ಸಾರ್ವಜನಿಕರು ದೂರು ನೀಡಿದ ಕೂಡಲೇ ಸಂಬಂಧಿಸಿದ ವಾರ್ಡ್‌ ಎಂಜಿನಿಯರ್‌ ಮೊಬೈಲ್‌ಗೆ ನೋಟಿಫಿಕೇಷನ್‌ ಹೋಗಲಿದೆ.

ಅದರನ್ನು ಆಧರಿಸಿ ಅಧಿಕಾರಿ ಕೂಡಲೇ ದೂರುಗಳಿಗೆ ಪರಿಹಾರ ನೀಡಲು ಮುಂದಾಗಬೇಕು. ಸಮಸ್ಯೆ ಬಗೆಹರಿಸಲು ಕಾಲಾವಕಾಶ ಬೇಕಿದ್ದಲ್ಲಿ ಆ ಮಾಹಿತಿಯನ್ನೂ ಆ್ಯಪ್‌ನಲ್ಲಿ ಅಪ್‌ಲೋಡ್‌ ಮಾಡಬೇಕಾಗುತ್ತದೆ. ಅಧಿಕಾರಿಗಳು ದೂರುಗಳಿಗೆ ಸ್ಪಂದಿಸದೆ ನಿರ್ಲಕ್ಷ್ಯ ತೋರುವ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮಕೈಗೊಳ್ಳುವ ಎಚ್ಚರಿಕೆಯನ್ನು ಆಯುಕ್ತರು ನೀಡಿದ್ದಾರೆ. 

ಪಾಲಿಕೆಯ ಅಧಿಕೃತ ಆ್ಯಪ್‌ಗ್ಳ ವಿವರ
ಆ್ಯಪ್‌ ಹೆಸರು    ಡೌನ್‌ಲೋಡ್‌ ಸಂಖ್ಯೆ    ರೇಟಿಂಗ್‌ 

-ಬಿಬಿಎಂಪಿ ಸಹಾಯ    10000+    2.8
-ಬಿಬಿಎಂಪಿ ಗ್ರೀನ್‌    10000+    4.0
-ಕ್ಲೀನ್‌ ಬೆಂಗಳೂರು    1000+    2.6
-ಬಿಬಿಎಂಪಿ ಇ-ಟಾಯ್ಲೆಟ್ಸ್‌    100+    4.8
-ಇಂದಿರಾ ಕ್ಯಾಂಟೀನ್‌    10,000    4.1

Advertisement

Udayavani is now on Telegram. Click here to join our channel and stay updated with the latest news.

Next