ಉಡುಪಿ: ಇಡೀ ರಾಜ್ಯದಲ್ಲೇ ಎರಡೂ ಹಂತದ ಚುನಾವಣೆ ನಡೆದಿದ್ದು ಉಡುಪಿ ಜಿಲ್ಲೆಯಲ್ಲಿ ಮಾತ್ರ ಮೊದಲ ಹಂತದ ಚುನಾವಣೆಯಲ್ಲಿ ಉಡುಪಿ, ಕಾರ್ಕಳ, ಕುಂದಾಪುರ ಹಾಗೂ ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣೆ ನಡೆದಿದ್ದರೆ, ಎರಡನೇ ಹಂತದಲ್ಲಿ ಬೈಂದೂರು ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣೆ ನಡೆದಿದೆ.
ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಚುನಾವಣೆ ಎ.26ಕ್ಕೆ ಮುಗಿದಿದ್ದು, ಶಿವಮೊಗ್ಗ ಲೋಕಸಭಾ ಕ್ಷೇತ್ರದ ಚುನಾವಣೆ ಮೇ 7ಕ್ಕೆ ನಡೆದಿದ್ದರಿಂದ ಉಡುಪಿ ಜಿಲ್ಲೆ ಎರಡು ಹಂತದ ಚುನಾವಣೆಗೂ ಸಾಕ್ಷಿಯಾದ ರಾಜ್ಯದ ಏಕೈಕ ಜಿಲ್ಲೆಯಾಗಿದೆ.
ಎಲ್ಲ ಲೋಕಸಭಾ ಕ್ಷೇತ್ರದಲ್ಲೂ ಚುನಾವಣೆ ಮುಗಿದಿರುವುದರಿಂದ ಸದ್ಯ ಉಡುಪಿ ಜಿಲ್ಲೆಯೂ ನಿರಾಳ. ಮೊದಲ ಹಂತದ ಚುನಾವಣೆ ಮುಗಿದ ಬಳಿಕವೂ ಜಿಲ್ಲೆಯ ಗಡಿಭಾಗದಲ್ಲಿ ಚೆಕ್‌ಪೋಸ್ಟ್‌ಗಳನ್ನು ಉಳಿಸಿಕೊಳ್ಳಲಾಗಿತ್ತು. ಉಡುಪಿ ಜಿಲ್ಲೆಯಲ್ಲೂ ಎರಡೂ ಹಂತದ ಚುನಾವಣೆಯನ್ನು ಬಹುಪಾಲು ಅಧಿಕಾರಿಗಳು ನಿಭಾಯಿಸಿದರು. ಜಿಲ್ಲೆಯ ನಾಲ್ವರು ಶಾಸಕರು ಬೈಂದೂರು ಕ್ಷೇತ್ರದ ಶಾಸಕರ ಜತೆ ಸೇರಿ ಪ್ರಚಾರ ನಡೆಸಿದ್ದರಿಂದ ಜನ ಪ್ರತಿನಿಧಿಗಳು ಚುನಾವಣೆಯಲ್ಲಿ ಸಕ್ರಿಯರಾಗಿದ್ದರು. ನೀತಿ ಸಂಹಿತೆಯ ಬಿಸಿಯೂ ಇತ್ತು. ಒಟ್ಟಾರೆಯಾಗಿ ಜಿಲ್ಲೆಯಲ್ಲಿ ಮೇ 7ರವರೆಗೂ ಚುನಾವಣ ಹವಾ ಇತ್ತು.
ಕುಂದಾಪುರದಲ್ಲಿ ಶೇ.79.12, ಉಡುಪಿಯಲ್ಲಿ ಶೇ. 77.84, ಕಾಪುವಿನಲ್ಲಿ ಶೇ. 79.17 ಹಾಗೂ ಕಾರ್ಕಳದಲ್ಲಿ ಶೇ.79.66ರಷ್ಟು ಮತದಾನವಾಗಿತ್ತು. ಇದೀಗ ಬೈಂದೂರು ವಿಧಾನಸಭಾ ಕ್ಷೇತ್ರವ್ಯಾಪ್ತಿಯಲ್ಲಿ 76.40 ರಷ್ಟು ಮತದಾನವಾಗಿದೆ.
ಒಟ್ಟಾರೆಯಾಗಿ ಜಿಲ್ಲೆಯ ವಿಧಾನಸಭಾ ಕ್ಷೇತ್ರಗಳಲ್ಲಿ ಬೈಂದೂರಿನ ಮತದಾನವೇ ಕಡಿಮೆ ಪ್ರಮಾಣ ದ್ದಾದರೂ 2019ರ ಲೋಕಸಭಾ ಚುನಾವಣೆಗೆ ಹೋಲಿಸಿದರೆ ಬೈಂದೂರಿನಲ್ಲಿ ಶೇ.1ರಷ್ಟು ಮತದಾನ ಪ್ರಮಾಣ ಹೆಚ್ಚಾಗಿದೆ. ಬೆಂಗಳೂರಿನಿಂದ ಬರುವ ಮತದಾರರಿಗಾಗಿ ವಿಶೇಷ ರೈಲು ವ್ಯವಸ್ಥೆಯನ್ನು ಮಾಡಲಾಗಿತ್ತು. ಪಕ್ಷಗಳೂ ಬಸ್ ವ್ಯವಸ್ಥೆ ಮಾಡಿದ್ದವು. ಜಿಲ್ಲಾಡಳಿತದಿಂದ ಮತ ಪ್ರಮಾಣ ಏರಿಕೆಗೆ ನಡೆಸಿದ ಹಲವು ಪ್ರಯತ್ನಗಳು ನಿರೀಕ್ಷಿತ ಪ್ರಮಾಣದಲ್ಲಿ ಫಲ ಕೊಡಲಿಲ್ಲ.ಇನ್ನು ಎಲ್ಲರ ದೃಷ್ಟಿ ಫಲಿತಾಂಶದತ್ತ ನೆಟ್ಟಿರುವುದರಿಂದ ಗೆಲುವಿನ ಲೆಕ್ಕಾಚಾರಗಳು ಆರಂಭವಾಗಿವೆ. ಚುನಾವಣೆ ಚರ್ಚೆಗಳಂತೂ ಫಲಿತಾಂಶದ ವರೆಗೂ ಮುಂದುವರಿಯಲಿದೆ.