ನಮ್ಮ ಭಾರತೀಯ ಸಂಸ್ಕೃತಿ ಎಷ್ಟೆಲ್ಲಾ ವಿಶೇಷತೆಗಳನ್ನು ಹೊಂದಿದೆ ಎಂದರೆ ನಂಬಲೂ ಅಸಾಧ್ಯವಾದದ್ದು. ಒಂದೊಂದು ಪ್ರದೇಶದಲ್ಲಿ ಭಿನ್ನ ವಿಭಿನ್ನ ಆಚಾರ ವಿಚಾರಗಳನ್ನು ಕಾಣಬಹುದು. ನಮ್ಮಲ್ಲಿ ವಿಭಿನ್ನ ಸಂಸ್ಕೃತಿ, ನಂಬಿಕೆಗಳಿವೆ. ಇನ್ನು ಆಹಾರ ಪದ್ದತಿಯ ವಿಚಾರಕ್ಕೆ ಬಂದ್ರೆ ಕೇಳುವ ಹಾಗೇ ಇಲ್ಲ. ಜಿಲ್ಲೆ ಜಿಲ್ಲೆಗಳಿಗೂ ಒಂದೊಂದು ಬಗೆಯ ತಿನಿಸುಗಳನ್ನು ತಯಾರಿಸಲಾಗುತ್ತದೆ. ಇನ್ನು ಕೆಲವರು ತಿನ್ನುವ ಆಹಾರ ವಿಚಿತ್ರವಾಗಿರುತ್ತದೆ. ನೋಡುಗರ ಮನಸ್ಸಿಗೆ ಕಸಿವಿಸಿಯಾಗಿಯೂ ಕಾಣುತ್ತದೆ. ಅಂತಹ ಆಹಾರ ಪದ್ದತಿಗಳು ನಮ್ಮ ಕರ್ನಾಟಕದಲ್ಲಿಯೂ ಇವೆ.
ಹೌದು ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ಕೆಲವು ಭಾಗಗಳಲ್ಲಿ ಜನರ ಆಹಾರ ಪದ್ಧತಿ ವಿಚಿತ್ರವಾಗಿದೆ. ಅದೇನು ಎಂಬುದು ತಿಳಿದರೆ ನಿಮಗೆ ಆಶ್ಚರ್ಯ ಆಗೋದ್ರಲ್ಲಿ ಎರಡು ಮಾತಿಲ್ಲ. ಹಾಗಾದ್ರೆ ಆ ಆಹಾರ ಯಾವುದು ಅಂದ್ರಾ.. ಅದೇ ಮಳೆ ಹುಳು. ಇದನ್ನು ಇಂಗ್ಲಿಷ್ ನಲ್ಲಿ fly termites ಎಂದು ಕರೆಯುತ್ತಾರೆ. ಆದ್ರೆ ಶಿರಾ ಭಾಗದ ಜನರು ಈ ಹುಳುಗಳನ್ನು ‘ಈಸಲು’ ಎಂದು ಕರೆಯುತ್ತಾರೆ.
ಸಾಮಾನ್ಯವಾಗಿ ಈ ಈಸಲು ಹುಳುಗಳು ಮಳೆ ಬಂದಾಗ ಮಣ್ಣಿನೊಳಗಿಂದ ಮೇಲಕ್ಕೆ ಬರುತ್ತವೆ. ಕೆಲವು ಕಡೆ ಹುತ್ತದಲ್ಲಿಯೂ ಈ ಹುಳಗಳು ಗೂಡುಗಳನ್ನು ಮಾಡಿಕೊಂಡು ಇದ್ದು ಮಳೆ ಬಂದಾಗ ಮೇಲೆ ಬರುತ್ತವೆ. ಬೀದಿ ದೀಪದ ಕೆಳಗೆ ಹಾಗೂ ಮನೆಯ ಲೈಟುಗಳ ಕೆಳಗೆ ಹಾರಾಡುವ ಈ ಹುಳುಗಳನ್ನು ಹಿಡಿದು ಜನ ಒಣಗಿಸಿ ತಿನ್ನುತ್ತಾರೆ.
ಹೇಗೆ ತಿನ್ನುತ್ತಾರೆ : ಮಳೆ ಬಂದ ಒಂದೆರಡು ದಿನಗಳಲ್ಲಿ ಈ ಹುಳುಗಳು ಸಾಮಾನ್ಯವಾಗಿ ಹೊರಗಡೆ ಬರುತ್ತವೆ. ಈ ವೇಳೆ ಲೈಟುಗಳ ಸಹಾಯದಿಂದ ಈಸಲುಗಳನ್ನು ಹಿಡಿದು, ಒಣಗಿಸಿ, ರೆಕ್ಕೆಗಳನ್ನು ಬೇರ್ಪಡಿಸಿ ತಿನ್ನುತ್ತಾರೆ.
ಕೆಲವರು ಈ ಹುಳುಗಳನ್ನು ಒಣಗಿಸಿ ಹಾಗೆಯೇ ತಿಂದರೆ. ಇನ್ನು ಕೆಲವರು ಈ ಹುಳುಗಳ ಜೊತೆ ಬೇಯಿಸಿದ ಹುರುಳಿ ಕಾಳು ಮತ್ತು ತೆಂಗಿನ ಕಾಯಿಯನ್ನು ಬೆರೆಸಿ ತಿನ್ನುತ್ತಾರೆ. ಇನ್ನೂ ಕೆಲವರು ಒಣಗಿದ ಈ ಹುಳುಗಳ ಜೊತೆ ಮಂಡಕ್ಕಿ ಮತ್ತು ತೆಂಗಿನ ಕಾಯಿಯನ್ನು ಬೆರೆಸಿ ತಿನ್ನುತ್ತಾರೆ.
ಈ ಈಸಲು ಹುಳುಗಳ ಬಗ್ಗೆ ಶಿರಾ ತಾಲೂಕಿನ ಜನರಿಗೆ ಒಂದು ನಂಬಿಕೆ ಇದೆ. ಅದೇನಂದ್ರೆ ಪಾಂಡವರು ತಾವು ವನವಾಸಕ್ಕೆ ತೆರಳುವಾಗ ತಮ್ಮ ತುಪ್ಪದ ಕುಡಿಕೆಗಳನ್ನು ಹುತ್ತದಲ್ಲಿ ಇಟ್ಟು ಹೋಗಿದ್ದು, ಮುಂದೆ ಆ ಕುಡಿಕೆಗಳೇ ಈಸಲುಗಳಾಗಿವೆ ಎಂದು ನಂಬುತ್ತಾರೆ ಇಲ್ಲಿನ ಜನ. ಒಟ್ಟಾರೆ ನಂಬಿಕೆ ಏನೇ ಇದ್ರು ಶಿರಾ ಜನರ ಈ ಆಹಾರ ಪದ್ದತಿ ವಿಶೇಷ ಮತ್ತು ವಿಚಿತ್ರವಾಗಿದೆ.
ಗಿರೀಶ್ ಗಂಗೇನಹಳ್ಳಿ