Advertisement
ಶಿವಮೊಗ್ಗದಲ್ಲಿ ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ತಮ್ಮ ಪುತ್ರ ಕಾಂತೇಶ್‌ಗೆ ಹಾವೇರಿ ಕ್ಷೇತ್ರದ ಬಿಜೆಪಿ ಟಿಕೆಟ್ ಸಿಗದ ಹಿನ್ನೆಲೆಯಲ್ಲಿ ಬಂಡಾಯವೆದ್ದಿದ್ದು, ಈಗಾಗಲೇ ನಾಮಪತ್ರ ಸಲ್ಲಿಸಿ ತಮ್ಮ ಸ್ಪರ್ಧೆಯನ್ನು ಖಾತ್ರಿಪಡಿಸಿದ್ದಾರೆ. ಮೋದಿ, ಅಮಿತ್ ಶಾ ಹೇಳಿದರೂ ಕಣದಿಂದ ಹಿಂದೆ ಸರಿಯುವುದಿಲ್ಲ. ಪಕ್ಷ ಶುದ್ಧೀಕರಣ ವಾಗಬೇಕಿದೆ.
ಕೊಪ್ಪಳದಲ್ಲಿ ಬಿಜೆಪಿ ಸಂಸದ ಸಂಗಣ್ಣ ಕರಡಿ ಟಿಕೆಟ್ ಕೈ ತಪ್ಪಿದ್ದರಿಂದ ಮುನಿಸಿಕೊಂಡಿದ್ದಾರೆ. ವರಿಷ್ಠರಿಂದ ತೇಪೆ ಹಚ್ಚುವ ಯತ್ನ ನಡೆದಿದ್ದರೂ ಸಂಪೂರ್ಣ ಫಲ ನೀಡಿಲ್ಲ. ಈಚೆಗೆ ಕೊಪ್ಪಳ ಹಾಗೂ ಕುಷ್ಠಗಿ ಬೂತ್ ಮಟ್ಟದ ಪ್ರಚಾರ ಸಭೆಯಲ್ಲಿ ಪಾಲ್ಗೊಂಡಿದ್ದು ಬಿಟ್ಟರೆ ಇತರ ಕ್ಷೇತ್ರಗಳಲ್ಲಿ ಅಭ್ಯರ್ಥಿ ಪರ ಪ್ರಚಾರ ನಡೆಸಿಲ್ಲ. ಅಭ್ಯರ್ಥಿ ಡಾ| ಬಸವರಾಜ ನಾಮಪತ್ರ ಸಲ್ಲಿಸುವ ವೇಳೆಯೂ ಬಂದಿರಲಿಲ್ಲ. ಬಿಜೆಪಿ ಯಲ್ಲೇ ಇರುತ್ತೇನೆ. ಆದರೆ ನಾಯಕತ್ವ ವಹಿಸಿಕೊಳ್ಳುವುದಿಲ್ಲ ಎಂದಿರುವುದು ಹಲವು ಪ್ರಶ್ನೆಗಳನ್ನು ಹುಟ್ಟು ಹಾಕಿದೆ. ಕಾಂಗ್ರೆಸ್ ಸೇರುತ್ತಾರೆ ಎಂಬ ಗುಮಾನಿ ಇದ್ದರೂ ಸ್ಪಷ್ಟತೆ ಇಲ್ಲ. ಆದರೆ ಅವರ ಬೆಂಬಲಿಗರು ಸಾಲು ಸಾಲಾಗಿ ಕಾಂಗ್ರೆಸ್ ಸೇರಿದ್ದಾರೆ. ಹೀಗಾಗಿ ಒಳ ಹೊಡೆತದ ಭೀತಿ ಬಿಜೆಪಿ ನಾಯಕರನ್ನು ಕಾಡುತ್ತಿದೆ.
Related Articles
ರಾಯಚೂರಿನಲ್ಲಿ ಹಾಲಿ ಸಂಸದ ರಾಜಾ ಅಮರೇಶ್ವರ ನಾಯಕ್‌ಗೆ ಬಿಜೆಪಿ ಟಿಕೆಟ್ ಘೋಷಿಸಿದ್ದರಿಂದ ಮಾಜಿ ಸಂಸದ ಬಿ.ವಿ.ನಾಯಕ ಕಂಗಾಲಾಗಿದ್ದಾರೆ. ಅಭಿಮಾನಿಗಳು “ಗೋ ಬ್ಯಾಕ್ ರಾಜಾ ಅಮರೇಶ್ವರ ನಾಯಕ’ ಘೋಷಣೆಯನ್ನೂ ಕೂಗಿದ್ದರು. ಆದರೆ ಶನಿವಾರ ಬಿಜೆಪಿ ರಾಜ್ಯ ಚುನಾವಣ ಉಸ್ತುವಾರಿ ರಾಧಾಮೋಹನ್ ದಾಸ್ ಅಗರ್ವಾಲ್ ಬಂಡಾಯ ಶಮನ ಮಾಡಲು ಯತ್ನಿಸಿದ್ದಾರೆ. ಅಲ್ಲಿಯೂ “ಗೋ ಬ್ಯಾಕ್’ ಘೋಷಣೆ ಜತೆಗೆ ವಾಗ್ವಾದವೂ ನಡೆದಿದೆ. ಕೊನೆಗೆ ಬಿ.ವಿ.ನಾಯಕ ಕೈಯಿಂದಲೇ ರಾಜಾ ಅಮರೇಶ್ವರ ನಾಯಕ್‌ಗೆ ಬಿ.ಫಾರಂ ಕೊಡಿಸಲಾಗಿದೆ. ಆದರೆ ಪ್ರಚಾರ, ಚುನಾವಣೆ ಕೆಲಸದಲ್ಲಿ ಬಿ.ವಿ.ನಾಯಕ ಎಷ್ಟರಮಟ್ಟಿಗೆ ಸಾಥ್ ನೀಡುತ್ತಾರೆ ಎಂಬುದು ಯಕ್ಷಪ್ರಶ್ನೆಯಾಗಿದೆ.
Advertisement
ಹಿಂದೆ ಸರಿಯದ ನಾಯಿಕಪರಿಶಿಷ್ಟ ಜಾತಿಗೆ ಮೀಸಲಾಗಿರುವ ವಿಜಯಪುರದಲ್ಲಿ ಸಂಸದ ರಮೇಶ ಜಿಗಜಿಣಗಿಗೆ ಬಿಜೆಪಿ ಟಿಕೆಟ್ ನೀಡಿದ್ದರಿಂದ ಆಕಾಂಕ್ಷಿಯಾಗಿದ್ದ ಡಾ| ಬಾಬುರಾಜೇಂದ್ರ ನಾಯಿಕ ಸಿಡಿದೆದ್ದಿದ್ದಾರೆ. ಎ.16ರಂದು ಬಂಡಾಯ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸುವುದಾಗಿ ಘೋಷಿಸಿದ್ದಾರೆ. ಬಂಜಾರ ಸಮುದಾಯಕ್ಕೆ ಅನ್ಯಾಯವಾಗಿದೆ. ಹೊಂದಾಣಿಕೆ ರಾಜಕಾರಣದ ವಿರುದ್ಧ ನನ್ನ ಹೋರಾಟ ನಡೆಯಲಿದೆ. ಪಕ್ಷ ಬಿ ಫಾರಂ ಕೊಟ್ಟರೆ ಒಳ್ಳೆಯದು. ಇಲ್ಲದಿದ್ದರೆ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯುವುದಾಗಿ ನಿರ್ಧರಿಸಿದ್ದಾರೆ. ವಿಜಯಪುರ ಕ್ಷೇತ್ರದಲ್ಲಿ ಬಂಜಾರ ಸಮುದಾಯದ ಸುಮಾರು 2.80 ಲಕ್ಷ ಮತದಾರರಿದ್ದಾರೆ. ಹೀಗಾಗಿ ಬಿಜೆಪಿ ನಾಯಕರಿಗೆ ಇದು ತಲೆನೋವಾಗಿ ಪರಿಣಮಿಸಿದೆ. ಮುಂಬಯಿಯಲ್ಲೇ ಉಳಿದ ಚೌವ್ಹಾಣ್
ಬೀದರ್ ಲೋಕಸಭೆ ಕ್ಷೇತ್ರದಲ್ಲಿ ಔರಾದ್ ಕ್ಷೇತ್ರದ ಶಾಸಕ ಪ್ರಭು ಚೌವ್ಹಾಣ್ ಹಾಗೂ ಬಸವಕಲ್ಯಾಣ ಶಾಸಕ ಶರಣು ಸಲಗರ ಭಾರೀ ವಿರೋಧದ ನಡುವೆಯೂ ಸಂಸದ ಭಗವಂತ ಖೂಬಾಗೆ ಬಿಜೆಪಿ ಮತ್ತೆ ಟಿಕೆಟ್ ನೀಡಿದ್ದರಿಂದ ಅಸಮಾಧಾನದ ಹೊಗೆಯಾಡುತ್ತಿದೆ. ಪ್ರಭು ಚೌವ್ಹಾಣ್ ಆರೋಗ್ಯ ಸಮಸ್ಯೆ ನೆಪವೊಡ್ಡಿ ಮುಂಬಯಿಯಲ್ಲೇ ಉಳಿದುಕೊಂಡಿದ್ದಾರೆ. ಲೋಕಸಭೆ ಚುನಾವಣೆ ಮುಗಿಯುವವರೆಗೆ ಕ್ಷೇತ್ರದತ್ತ ಸುಳಿಯುವ ಸಾಧ್ಯತೆ ಕಡಿಮೆ. ಇನ್ನು ಶಾಸಕ ಶರಣು ಸಲಗರ ಪಕ್ಷದ ವರಿಷ್ಠರು ಜಿಲ್ಲೆಗೆ ಬಂದಾಗ ಮಾತ್ರ ಕಾಣಿಸಿಕೊಳ್ಳುತ್ತಿದ್ದಾರೆ. ತವರು ಕ್ಷೇತ್ರದಲ್ಲಿ ಅಭ್ಯರ್ಥಿ ಪ್ರಚಾರಕ್ಕೆ ತೆರಳಿದಾಗ ಮೇಲ್ನೋಟಕ್ಕೆ ಸಾಥ್ ನೀಡುತ್ತಿದ್ದಾರೆ. ಹಾಲಿ ಶಾಸಕರೇ ಪ್ರಚಾರದಿಂದ ವಿಮುಖರಾಗಿದ್ದರಿಂದ ಒಳ ಹೊಡೆತ ಭೀತಿ ಎದುರಾಗಿದೆ. ದಿಂಗಾಲೇಶ್ವರ ಸ್ವಾಮೀಜಿ ಸ್ಪರ್ಧೆ
ಧಾರವಾಡ ಕ್ಷೇತ್ರದಲ್ಲಿ ಬಿಜೆಪಿ ಹಾಲಿ ಸಂಸದ, ಕೇಂದ್ರ ಸಚಿವ ಪ್ರಹ್ಲಾದ ಜೋಷಿ ಲಿಂಗಾಯತರಿಗೆ ಅನ್ಯಾಯ ಮಾಡಿದ್ದಾರೆ ಎಂದು ಸಿಡಿದೆದ್ದಿರುವ ಬಾಲೆಹೊಸೂರಿನ ಫಕ್ಕೀರ ದಿಂಗಾಲೇಶ್ವರ ಸ್ವಾಮೀಜಿ ಕಣಕ್ಕಿಳಿಯುವುದಾಗಿ ಘೋಷಿಸಿದ್ದು ಕಾಂಗ್ರೆಸ್, ಬಿಜೆಪಿ ಎರಡೂ ಪಕ್ಷಗಳಿಗೆ ಭೀತಿ ಹುಟ್ಟಿಸಿದೆ. ಧಾರವಾಡ ಕ್ಷೇತ್ರದಲ್ಲಿ ಸ್ವಾಮೀಜಿಯೊಬ್ಬರು ಕಣಕ್ಕಿಳಿಯುತ್ತಿರುವುದು ಇದೇ ಮೊದಲು. ಅಲ್ಲದೇ ಪ್ರಬಲ ಲಿಂಗಾಯತ ಶ್ರೀಗಳೇ ಆಗಿರುವುದರಿಂದ ಲೆಕ್ಕಾಚಾರ ಜೋರಾಗಿ ನಡೆದಿದೆ. ಕಾಂಗ್ರೆಸ್ ಅಭ್ಯರ್ಥಿ ವಿನೋದ ಅಸೂಟಿ ಬದಲು ಶ್ರೀಗಳನ್ನೇ ಪಕ್ಷಕ್ಕೆ ಸೇರಿಸಿಕೊಂಡು ಕಣಕ್ಕಿಳಿಸುವ ಇಲ್ಲವೇ ಬಾಹ್ಯ ಬೆಂಬಲ ಕೊಡುವ ಚರ್ಚೆಗಳೂ ನಡೆದಿವೆ. ಒಂದು ವೇಳೆ ಕಾಂಗ್ರೆಸ್ ಲೆಕ್ಕಾಚಾರ ಅನುಷ್ಠಾನವಾಗದಿದ್ದರೆ ಶ್ರೀಗಳು ಎ. 18ರಂದು ಪಕ್ಷೇತರರಾಗಿ ನಾಮಪತ್ರ ಸಲ್ಲಿಸುವುದು ಬಹುತೇಕ ನಿಶ್ಚಿತವಾಗಿದೆ. ಹೀಗಾಗಿ ತ್ರಿಕೋನ ಸ್ಪರ್ಧೆ ಏರ್ಪಡುವ ಸಾಧ್ಯತೆ ಇದೆ. ದಾವಣಗೆರೆ: ವಿನಯಕುಮಾರ ಸ್ಪರ್ಧೆ
ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಬಂಡಾಯ ಅಭ್ಯರ್ಥಿಯಾಗಿ ಜಿ.ಬಿ.ವಿನಯಕುಮಾರ್ ನಾಮಪತ್ರ ಸಲ್ಲಿಸಿ ಅಖಾಡಕ್ಕಿಳಿದಿದ್ದಾರೆ. ಡಾ| ಪ್ರಭಾ ಮಲ್ಲಿಕಾರ್ಜುನ್‌ಗೆ ಟಿಕೆಟ್ ಘೋಷಿಸಿದ ಬಳಿಕ ವಿನಯಕುಮಾರ್ ಆಕ್ರೋಶ ತಣಿಸಲು ಸ್ವತಃ ಸಿಎಂ ಸಿದ್ದರಾಮಯ್ಯ, ಕಾಗಿನೆಲೆ ಮಠದ ಶ್ರೀ ನಿರಂಜನಾನಂದಪುರಿ ಸ್ವಾಮೀಜಿ ಸಮ್ಮುಖದಲ್ಲಿ ಸಂಧಾನವೂ ನಡೆದಿತ್ತು. ಆದರೆ ವಿನಯಕುಮಾರ್ ಸಂಧಾನಕ್ಕೆ ಒಪ್ಪದೆ ನಾಮಪತ್ರ ಸಲ್ಲಿಸಿ ಕಾಂಗ್ರೆಸ್‌ನ ನಿದ್ದೆಗೆಡಿಸಿದ್ದಾರೆ. ಕಾಂಗ್ರೆಸ್ ವರಿಷ್ಠರಿಂದ ಹಾಗೂ ಕುರುಬ ಸಮಾಜದ ಪ್ರಮುಖರ ಸಮ್ಮುಖದಲ್ಲಿ ಇನ್ನೊಂದು ಹಂತದಲ್ಲಿ ವಿನಯಕುಮಾರ್ ಮನವೊಲಿಸುವ ಪ್ರಯತ್ನ ಮುಂದುವರಿದಿದೆ. ಒಂದು ವೇಳೆ ವಿನಯಕುಮಾರ್ ಪಟ್ಟು ಸಡಿಲಿಸದಿದ್ದರೆ ಕುರುಬ ಮತಗಳು ಚದುರದಂತೆ ನೋಡಿಕೊಳ್ಳುವ ತಂತ್ರಗಾರಿಕೆಯ ಭಾಗವಾಗಿ ಕ್ಷೇತ್ರದಲ್ಲಿ ಪ್ರಚಾರಕ್ಕೆ ಸಿಎಂ ಸಿದ್ದರಾಮಯ್ಯ ಅವರನ್ನೇ ಆಹ್ವಾನಿಸುವ ಲೆಕ್ಕಾಚಾರಗಳೂ ಕಾಂಗ್ರೆಸ್‌ನಲ್ಲಿ ನಡೆದಿವೆ. ಅನಂತಕುಮಾರ ಹೆಗಡೆ ತಟಸ್ಥ
ಬಿಜೆಪಿ ಫೈರ್ ಬ್ರ್ಯಾಂಡ್, 6 ಸಲ ಸಂಸದರಾಗಿದ್ದ ಸಂಸದ ಅನಂತಕುಮಾರ್ ಹೆಗಡೆಗೆ ಉತ್ತರ ಕನ್ನಡ ಲೋಕಸಭೆ ಟಿಕೆಟ್ ಕೈತಪ್ಪಿದ್ದು ಮಾಜಿ ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ ಬಿಜೆಪಿಯಿಂದ ಕಣಕ್ಕಿಳಿದಿದ್ದಾರೆ. ಅನಂತಕುಮಾರ್ ಬಂಡಾಯ ಏಳದಿದ್ದರೂ ರಾಜಕೀಯ ಚಟುವಟಿಕೆಗಳಿಂದ ದೂರ ಉಳಿದು ತಟಸ್ಥರಾಗಿದ್ದಾರೆ. ಕಾಗೇರಿ ಪರ ಪ್ರಚಾರಕ್ಕೂ ಬರುತ್ತಿಲ್ಲ. ಫೈರ್ ಬ್ರಾಂಡ್ ಬೆಂಬಲಿಗರು ಕೂಡ ಅಂತರ ಕಾಯ್ದುಕೊಂಡಿದ್ದಾರೆ. ಅನಂತಕುಮಾರ್ ಜತೆ ಸಂಧಾನಕ್ಕೆ ತೆರಳಿದ್ದ ಶಾಸಕ ಹರತಾಳು ಹಾಲಪ್ಪ ಅವರ ಗನ್‌ಮ್ಯಾನ್‌ನ ಕಪಾಳಕ್ಕೆ ಹೊಡೆದು ಕಳಿಸಿದ್ದರಿಂದ ಹಾಲಪ್ಪ ಅತ್ತ ಹೋಗುತ್ತಿಲ್ಲ. ಕಾಗೇರಿ ಭೇಟಿಗೂ ಅವಕಾಶ ನೀಡಿಲ್ಲ. ಇದರ ಜತೆಗೆ ಯಲ್ಲಾಪುರ ಕ್ಷೇತ್ರದ ಬಿಜೆಪಿ ಶಾಸಕ ಹೆಬ್ಟಾರ್ ಕೂಡ ಪಕ್ಷದ ಚಟುವಟಿಕೆಯಿಂದ ದೂರ ಉಳಿದಿದ್ದಾರೆ. ಇತ್ತೀಚೆಗೆ ಹೆಬ್ಟಾರ್ ಪುತ್ರ ವಿವೇಕ್ ಕಾಂಗ್ರೆಸ್ ಸೇರಿದ್ದು ಕೂಡ ಬಿಜೆಪಿ ನಾಯಕರಿಗೆ ತಳಮಳ ಉಂಟು ಮಾಡಿದೆ. ಹೀಗಾಗಿ ಇಲ್ಲಿ ಬಹಿರಂಗ ಬಂಡಾಯಕ್ಕಿಂತ ಒಳ ಹೊಡೆತ ಜೋರಾಗಿದೆ. ಬಾಗಲಕೋಟೆಯಲ್ಲಿ ವೀಣಾ ನಡೆ ನಿಗೂಢ
ಬಾಗಲಕೋಟೆ ಕ್ಷೇತ್ರದ ಟಿಕೆಟ್‌ಗಾಗಿ ದಿಲ್ಲಿವರೆಗೆ ಎಡತಾಕಿದರೂ ಕೈ ಕೊಟ್ಟಿದ್ದರಿಂದ ವೀಣಾ ಕಾಶಪ್ಪನವರ ಕಂಗಾಲಾಗಿದ್ದಾರೆ. ಸಿಎಂ ಸಂಧಾನದ ಬಳಿಕ ಪತಿ ವಿಜಯಾನಂದ ಕಾಶಪ್ಪನವರ್ ಪಕ್ಷದ ಪರ ಕೆಲಸ ಮಾಡುವುದಾಗಿ ಹೇಳಿದ್ದರೂ ಪತ್ನಿ ವೀಣಾ ನಡೆ ಮಾತ್ರ ಇನ್ನೂ ನಿಗೂಢವಾಗಿದೆ. ಎರಡು ಬಾರಿ ಬೆಂಬಲಿಗರ ಸಭೆ ನಡೆಸಿದ್ದು ಗ್ರಾಪಂ ಮಟ್ಟದಲ್ಲಿ ಜನಾಭಿಪ್ರಾಯ ಸಂಗ್ರಹಿಸುತ್ತಿದ್ದಾರೆ. ಯುಗಾದಿ ಬಳಿಕ ಅಂತಿಮ ನಿರ್ಧಾರ ಹೇಳುವುದಾಗಿ ಪ್ರಕಟಿಸಿದ್ದ ವೀಣಾ, ಈವರೆಗೂ ಕ್ಷೇತ್ರದಲ್ಲಿ ಕಾಣಿಸಿಕೊಳ್ಳದೆ ತಟಸ್ಥರಾಗಿ ಉಳಿದಿದ್ದಾರೆ. ಸಚಿವ ಶಿವಾನಂದ ಪಾಟೀಲ್ ಪುತ್ರಿ ಸಂಯುಕ್ತಾ ಕಣಕ್ಕಿಳಿದಿದ್ದು ವೀಣಾ ಅಕ್ಕ ಪ್ರಚಾರಕ್ಕೆ ಬರುತ್ತಾರೆ ಎಂಬ ವಿಶ್ವಾಸದಲ್ಲಿದ್ದಾರೆ.