ರಬಕವಿ-ಬನಹಟ್ಟಿ; ನಗರಸಭೆ ವ್ಯಾಪ್ತಿಯಲ್ಲಿ ಮೊದಲ ಹಂತದಲ್ಲಿ ಒಟ್ಟು 88 ಕಿಮೀ ನಷ್ಟು ಒಳಚರಂಡಿ ಕಾಮಗಾರಿಯನ್ನು ಕಳೆದ ಐದು ವರ್ಷದ ಹಿಂದೆ ಆರಂಭಿಸಿ ಎರಡು ವರ್ಷದಿಂದ ಸಾರ್ವಜನಿಕರಿಗೆ ಅನುಕೂಲವಾಗುವಂತೆ ಬಳಸಲು ಶೌಚಗೃಹಗಳಿಗೆ ಸಂಪರ್ಕ ಕಲ್ಪಿಸಿದ್ದಾರೆ.
ಕಾಮಗಾರಿ ವೈಜ್ಞಾನಿಕ ತಳಹದಿಯಲ್ಲಿ ಮಾಡಿಲ್ಲ, ಇದು ಕಾಟಾಚಾರಕ್ಕೆ ಎಂಬಂತೆ ಮಾಡಿ ಮುಗಿಸಿದ್ದಾರೆಂದು ಇಲ್ಲಿನ ಸಾರ್ವಜನಿಕರು ಆರೋಪಿಸುತ್ತಿದ್ದಾರೆ. ಬನಹಟ್ಟಿ ಪೊಲೀಸ್ ಠಾಣೆ ಎದುರಿನ ರಸ್ತೆ ಮಧ್ಯ ಭಾಗದಲ್ಲಿ ಚೇಂಬರ್ ಒಡೆದು ಶೌಚದ ನೀರು ಹೊರಬಂದು ಗಬ್ಬು ವಾಸನೆಯಿಂದ ಜನರು ಮೂಗು ಮುಚ್ಚಿಕೊಂಡು ಹೋಗುವಂತಾಗಿದೆ.
ರಸ್ತೆ ಉದ್ದಕ್ಕೂ ಹರಿದು ಹೋಗುವುದರಿಂದ ಪಕ್ಕದಲ್ಲಿಯೇ ಹೊಟೇಲ್‌ಗಳು ಅನೇಕ ಮಳಿಗೆಗಳು, ಶಾಲೆ ಕಾಲೇಜುಗಳು, ದೇವಸ್ಥಾನಗಳು ಇರುವುದರಿಂದ ಜನ ಇದನ್ನು ತುಳಿದುಕೊಂಡೇ ಹೋಗಬೇಕು. ಅಲ್ಲದೆ ವಾಹನಗಳು ವೇಗವಾಗಿ ಹೋಗುವುದರಿಂದ ಈ ನೀರು ರಸ್ತೆ ಪಕ್ಕದಲ್ಲಿ ಹೋಗುವ ಪಾದಚಾರಿಗಳಿಗೂ ಸಿಡಿಯು ವುದರಿಂದ ಇಲ್ಲಿನ ಜನ ಸಂಬಂಧಿಸಿದ ಅಧಿಕಾರಿಗಳಿಗೆ ಹಿಡಿಶಾಪ ಹಾಕುತ್ತಿದ್ದಾರೆ.
ಇದು ತೀರ ನಾಚಿಕೆಯಾಗುವಂತ ಸಂಗತಿಯಾಗಿದೆ ಎನ್ನುತ್ತಾರೆ ಇಲ್ಲಿನ ನಿವಾಸಿಗರು. ಕೂಡಲೆ ಈ ಒಳಚರಂಡಿ ನಿರ್ವಹಣೆ ಮಾಡುವ ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಅಥವಾ ನಗರಸಭೆ ಆರೋಗ್ಯ ಇಲಾಖೆ ಅಧಿಕಾರಿಗಳು ಸ್ಥಳ ಪರಿಶೀಲಿಸಿ ಈ ಗಬ್ಬು ವಾಸನೆಯಿಂದ ಮುಕ್ತರನ್ನಾಗಿಸಬೇಕು ಎಂದು ಇಲ್ಲಿನ ನಿವಾಸಿ ಶಂಕರೆಪ್ಪ ಗೆದ್ದಪ್ಪನವರ ಒತ್ತಾಯಿಸಿದ್ದಾರೆ.
ನಗರಸಭೆ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ವಿಷಯ ತಿಳಿಸಿ ಅಲ್ಲಿನ ಚೇಂಬರ್‌ನಿಂದ ಹೊರಬರುವ ಶೌಚದ ನೀರನ್ನು ಸರಾಗವಾಗಿ ಚೇಂಬರ್ ಮೂಲಕ ಹೋಗುವಂತೆ ಮತ್ತು ನೀರು ಹೊರಬರದಂತೆ ಮಷಿನ್‌ಗಳ ಮುಖಾಂತರ ಸರಿಪಡಿಸಲು ತಕ್ಷಣ ಕ್ರಮ ತೆಗೆದು ಕೊಳ್ಳುತ್ತೇವೆ
. -ಶ್ರೀನಿವಾಸ ಜಾಧವ ಪೌರಾಯುಕ್ತರು ನಗರಸಭೆ