ಬೆಂಗಳೂರು: ಭೂಪಸಂದ್ರ ಡಿ ನೊಟಿಫಿಕೇಶನ್ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪಾತ್ರ ಇಲ್ಲ. ಸುಪ್ರೀಂ ಕೋರ್ಟ್ ಆದೇಶದಂತೆ ನಾವು ನಮ್ಮ ಜಮೀನು ವಾಪಸ್ ಪಡೆದಿದ್ದೇವೆ ಎಂದು ಭೂಪಸಂದ್ರ ಜಮೀನು ಮಾಲಿಕ ಕೃಷ್ಣ ಪ್ರಸಾದ್ ಹೇಳಿದ್ದಾರೆ.
ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 1976 ರಲ್ಲಿಯೇ ಆರ್‌ಎಂವಿ 2 ನೇ ಹಂತಕ್ಕೆ ರಾಜ್ಯ ಸರ್ಕಾರ ಜಮೀನು ವಶ ಪಡಿಸಿಕೊಂಡಿತ್ತು. ಆದರೆ, ವಶಪಡಿಸಿಕೊಂಡ ಎಲ್ಲ ಜಮೀನನ್ನು ಯೋಜನೆಗೆ ಬಳಸಿಕೊಳ್ಳದಿದ್ದರಿಂದ ಕೋರ್ಟ್ ರೈತರ ಜಮೀನು ರೈತರಿಗೆ ವಾಪಸ್ ನೀಡಿ ಎಂದು ಆದೇಶ ನೀಡಿತ್ತು.
ಅದರ ಆಧಾರದಲ್ಲಿ ನಮ್ಮ ಜಮೀನು ನಮಗೆ ಬಂದಿದೆ. ಇದರಲ್ಲಿ ಯಾವುದೇ ರಾಜಕೀಯ ವ್ಯಕ್ತಿಗಳ ಹಸ್ತಕ್ಷೇಪ ಇಲ್ಲ. ಬಿಜೆಪಿ ನಾಯಕ ಬಿ.ಜೆ. ಪುಟ್ಟಸ್ವಾಮಿ ಆರೋಪಿಸಿದಂತೆ ಭೂಪಸಂದ್ರದ ಸರ್ವೆ ನ. 20, 21ರ 6 ಎಕರೆ 38 ಗುಂಟೆ ಜಮೀನು ಸರ್ಕಾರ ವಶಪಡಿಸಿಕೊಂಡ ಯೋಜನೆ ಜಾರಿಯಾಗದ ಹಿನ್ನೆಲೆಯಲ್ಲಿ ವಾಪಸ್ ನೀಡಿದ್ದಾರೆ.
ಅದರಲ್ಲಿ ಡಿ ನೋಟಿಫಿಕೇಶನ್ ಮಾಡುವ ಅಗತ್ಯವೇ ಇಲ್ಲ. ನಮ್ಮ ಜಮೀನು ಪಡೆಯಲು ನಾವು ಯಾವುದೇ ರಾಜಕೀಯ ಪ್ರಭಾವ ಬಳಸಿಲ್ಲ ಹಾಗೂ ಯಾರಿಗೂ ಮನವಿ ಸಲ್ಲಿಸಿಲ್ಲ ಎಂದರು. ಸರ್ಕಾರ ನಿಗದಿತ ಯೋಜನೆಗೆ ಜಮೀನು ಬಳಸಿಕೊಳ್ಳದ ಹಿನ್ನೆಲೆಯಲ್ಲಿ ಬಿಡಿಎ ಕಾಯ್ದೆ ಪ್ರಕಾರ ಜಮೀನು ನಮಗೆ ವಾಪಸ್ ಬಂದಿದೆ.
ಜಮೀನಿಗೆ ಸಂಬಂಧ ಇಲ್ಲದಿರುವ ಯಾವುದೋ ವ್ಯಕ್ತಿ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದ್ದರು. ಅದನ್ನು ಪರಿಶೀಲಿಸುವಂತೆ ಮುಖ್ಯಮಂತ್ರಿ ಮನವಿ ಪತ್ರದ ಮೇಲೆ ಬರೆದಿದ್ದಾರೆ. ಆದರೆ, ಅದು ನಮಗೆ ಸಂಬಂಧವಿಲ್ಲದ ವಿಷಯ. ಹೀಗಾಗಿ ರಾಜ್ಯಪಾಲರು ಈ ಜಮೀನಿನ ಬಗ್ಗೆ ಮುಖ್ಯಮಂತ್ರಿ ತನಿಖೆಗೆ ಆದೇಶ ನೀಡಬಾರದು ಎಂದು ಮನವಿ ಮಾಡಿದರು.