Advertisement

ಜಿಲ್ಲೆಗೊಂದು ಸರ್ಕಾರಿ ವೈದ್ಯ ಕಾಲೇಜು

11:44 AM May 05, 2017 | Team Udayavani |

ಬೆಂಗಳೂರು: ಹಳ್ಳಿ ಜನರು, ಬಡವರ ಮಕ್ಕಳು ಹಾಗೂ ತಳಸಮುದಾಯ ದವರು ವೈದ್ಯರಾಗಬೇಕೆಂಬ ಉದ್ದೇಶದಿಂದ ಜಿಲ್ಲೆಗೊಂದು ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪಿಸುವ ಗುರಿ ಇಟ್ಟುಕೊಳ್ಳಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. 

Advertisement

ನಗರದ ಚೌಡಯ್ಯ ಸ್ಮಾರಕ ಭವನದಲ್ಲಿ ಗುರುವಾರ ಸಪ್ತಗಿರಿ ವೈದ್ಯಕೀಯ ಮಹಾವಿದ್ಯಾಲಯ ಹಾಗೂ ಸಂಶೋಧನಾ ಕೇಂದ್ರದ ಪ್ರಥಮ ಪದವಿ ಪ್ರದಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ವೈದ್ಯಕೀಯ ವೃತ್ತಿ ಸೇವಾ ಮನೋಭಾವನೆ ಅಪೇಕ್ಷಿಸುವ ವೃತ್ತಿ. ವೈದ್ಯರಿಗೆ ವ್ಯಾಪಾರಿ ಮನೋಭಾವ ಇರಬಾರದು. ಜನರ ಕಷ್ಟ, ನೋವು ಹಾಗೂ ಬದುಕಿನ ವಾಸ್ತವ ಗೊತ್ತಿದ್ದವರು ಮಾತ್ರ ಕಷ್ಟ, ನೋವು ಮತ್ತು ಬದುಕಿನ ಸ್ಥಿತ್ಯಂತರಗಳಿಗೆ ಪರಿಣಾಮಕಾರಿಯಾಗಿ ಸ್ಪಂದಿಸಬಲ್ಲರು.

ಹಳ್ಳಿ ಜನರಿಗೆ, ಬಡವರಿಗೆ ತಳಸಮುದಾಯಗಳಿಗೆ ಕಡಿಮೆ ವೆಚ್ಚದಲ್ಲಿ ಉತ್ತಮ ಗುಣಮಟ್ಟದ ವೈದ್ಯಕೀಯ ಸೇವೆಗಳು ಸಿಗಬೇಕಾದರೆ, ಆ ವರ್ಗಗಳಿಂದಲೇ ವೈದ್ಯರು ಬರಬೇಕು. ವೈದ್ಯಕೀಯ ಶಿಕ್ಷಣ ವೆಚ್ಚ ದುಬಾರಿ ಆಗಿರುವ ಈಗಿನ ಕಾಲದಲ್ಲಿ ಕಡಿಮೆ ವೆಚ್ಚದಲ್ಲಿ ವೈದ್ಯಕೀಯ ಕೋರ್ಸ್‌ ಪೂರೈಸಲು ಸರ್ಕಾರಿ ವೈದ್ಯಕೀಯ ಕಾಲೇಜುಗಳು ಬೇಕು.

ಅದಕ್ಕಾಗಿ ಜಿಲ್ಲೆಗೊಂದು ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪಿಸುವ ಗುರಿ ಇಟ್ಟುಕೊಳ್ಳಲಾಗಿದ್ದು, ಇಲ್ಲಿಯವರೆಗೆ 23 ಜಿಲ್ಲೆಗಳಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜುಗಳನ್ನು ಸ್ಥಾಪಿಸಲಾಗಿದೆ ಎಂದರು. ಬೇರೆಲ್ಲ ವೃತ್ತಿಗಳಿಗಿಂತ ವೈದ್ಯ ವೃತ್ತಿ ಪವಿತ್ರವಾದದ್ದು. ವೈದ್ಯರು ವ್ಯಾಪಾರಿ ಧೋರಣೆ ಬಿಟ್ಟು, ಸೇವಾ ಮನೋಭಾವನೆ ಅಳವಡಿಸಿಕೊಳ್ಳಬೇಕು ಎಂದು ವೈದ್ಯ ಪದವೀಧರರಿಗೆ ಸಿಎಂ ಕರೆ ನೀಡಿದರು. 

Advertisement

ಕಾರ್ಯಕ್ರಮದಲ್ಲಿ ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ್‌ ಪಾಟೀಲ್‌, ರಾಜೀವಗಾಂಧಿ ಆರೋಗ್ಯ ವಿವಿ ಉಪಕುಲಪತಿ ಡಾ. ಕೆ.ಎಸ್‌. ರವೀಂದ್ರನಾಥ್‌, ನ್ಯಾಷನಲ್‌ ಪಬ್ಲಿಕ್‌ ಸ್ಕೂಲ್‌ ಅಧ್ಯಕ್ಷ ಡಾ. ಕೆ.ಪಿ. ಗೋಪಾಲಕೃಷ್ಣ, ಸಪ್ತಗಿರಿ ವೈದ್ಯಕೀಯ ಮಹಾವಿದ್ಯಾಲಯದ ಅಧ್ಯಕ್ಷ ಜಿ. ದಯಾನಂದ, ನಿರ್ದೇಶಕರಾದ ಜಿ.ಡಿ. ಬಾಲಾಜಿ, ಜಿ.ಡಿ. ಮನೋಜ್‌, ಪ್ರಾಂಶುಪಾಲೆ ಡಾ. ವಿ. ಜಯಂತಿ ಇದ್ದರು. 

ನಾಡಗೀತೆ ಹಾಡದ್ದ‌ಕ್ಕೆ ಮುಖ್ಯಮಂತ್ರಿ ಬೇಸರ
ಸಪ್ತಗಿರಿ ವೈದ್ಯಕೀಯ ಮಹಾವಿದ್ಯಾಲಯದ ಪದವಿ ಪ್ರದಾನ ಕಾರ್ಯಕ್ರಮದಲ್ಲಿ ನಾಡಗೀತೆ ಹಾಡಿಸದಿದ್ದಕ್ಕೆ ಸಿಎಂ ಸಿದ್ದರಾಮಯ್ಯ ಬೇಸರ ವ್ಯಕ್ತಪಡಿಸಿದ ಪ್ರಸಂಗ ನಡೆಯಿತು. ಕಾರ್ಯಕ್ರಮದ ಆರಂಭದಲ್ಲಿ ರಾಷ್ಟ್ರಗೀತೆ ಹಾಡಲಾಯಿತು. ಈ ವೇಳೆ ಎಲ್ಲರೂ ಎದ್ದುನಿಂತು ಗೌರವ ಸೂಚಿಸಿದರು.

ರಾಷ್ಟ್ರಗೀತೆ ಮುಗಿಯುತ್ತಿದ್ದಂತೆ ನಿರೂಪಕರು, ಕಾರ್ಯಕ್ರಮದ ಉದ್ಘಾಟನೆಗೆಂದು ಮುಖ್ಯಮಂತ್ರಿ ಅವರನ್ನು ಆಹ್ವಾನಿಸಿದರು. ಆಗ, ನಾಡಗೀತೆ ಇಲ್ವಾ?, ರಾಷ್ಟ್ರಗೀತೆ ಬಳಿಕ ನಾಡಗೀತೆ ಹಾಡಿಸಬೇಕಲ್ವಾ ಎಂದರು. ಅದಕ್ಕೆ  ವಿದ್ಯಾಲಯದ ಅಧ್ಯಕ್ಷ ಹಾಗೂ ಪ್ರಾಂಶುಪಾಲರು ಏನೋ ಸಮಜಾಯಿಷಿ ನೀಡಿದರು. ಆಯಿತು ಬಿಡಿ ಎಂದು ಬೇಸರದಿಂದಲೇ ಮುಖ್ಯಮಂತ್ರಿ ದೀಪಬೆಳಗಿಸಲು ಅಣಿಯಾದರು.

ಐಎಎಸ್‌, ಐಪಿಎಸ್‌ ಖಯಾಲಿ ಬಿಡಬೇಕು
ಎಂಬಿಬಿಎಸ್‌ ಓದಿದವರು ಆಕರ್ಷಣೆ ಹಾಗೂ ಗತ್ತು ಇರುತ್ತದೆ ಎಂಬ ಕಾರಣಕ್ಕಾಗಿ ಐಎಎಸ್‌ ಹಾಗೂ ಐಪಿಎಸ್‌ ಅಧಿಕಾರಿಗಳಾಗುವ ಖಯಾಲಿ ಬಿಡಬೇಕು ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು. ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಡಾಕ್ಟರ್‌ ಆಗಬೇಕೆಂದು ಎಂಬಿಬಿಎಸ್‌ ಓದಿದವರು ಐಎಎಸ್‌, ಐಪಿಎಸ್‌ ಆಗುವ ಪ್ರವೃತ್ತಿ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗುತ್ತಿದೆ.

ಐಎಎಸ್‌ ಅಧಿಕಾರಿಯಾದರೆ, ಅದೊಂದು ಆಕರ್ಷಕ ಹುದ್ದೆಯಾಗಿರುತ್ತದೆ, ಐಪಿಎಸ್‌ ಅಧಿಕಾರಿಯಾದರೆ ಒಂದು ರೀತಿಯ ಗತ್ತು ಇರುತ್ತದೆ. ಕೈಯಲ್ಲೊಂದು ಪೊಲೀಸ್‌ ದಂಡ ಬರುತ್ತದೆಂಬ ಕಾರಣಕ್ಕೆ ಎಂಬಿಬಿಎಸ್‌ ಓದಿದವರು ಐಎಎಸ್‌, ಐಪಿಎಸ್‌ಗಳಾಗಲು ಹೋಗುತ್ತಾರೆ. ನನ್ನ ಅಭಿಪ್ರಾಯದಲ್ಲಿ ಈ ಪ್ರವೃತ್ತಿ ಒಳ್ಳೆಯದಲ್ಲ ಎಂದು ಹೇಳಿದರು. 

Advertisement

Udayavani is now on Telegram. Click here to join our channel and stay updated with the latest news.

Next