Advertisement

ಜಿಲ್ಲಾ ಬಿಜೆಪಿಯಲ್ಲಿದ್ದ ಅಸಮಾಧಾನ ಶಮನ

03:44 PM Mar 25, 2019 | Team Udayavani |

ತುಮಕೂರು: ಕಳೆದ ಹಲವು ವರ್ಷಗಳಿಂದ ಬಿಜೆಪಿಯಲ್ಲಿದ್ದರೂ ಅತೃಪ್ತರಾಗಿದ್ದ ಮಾಜಿ ಸಚಿವ ಸೊಗಡು ಎಸ್‌.ಶಿವಣ್ಣ ಅವರ ಮನೆಗೆ ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಭೇಟಿ ನೀಡಿ, ಮುಂದಿನ ದಿನಗಳಲ್ಲಿ ಶಿವಣ್ಣ ಅವರಿಗೆ ಪಕ್ಷದಲ್ಲಿ ಸೂಕ್ತ ಸ್ಥಾನಮಾನ ನೀಡಿ, ಗೌರವದಿಂದ ಕಾಣುವುದಾಗಿ ಹೇಳುವ ಮೂಲಕ ಕೆಜೆಪಿ ಮತ್ತು ಬಿಜೆಪಿಗೆ ತೆರೆ ಎಳೆದಿದ್ದಾರೆ.

Advertisement

ತುಮಕೂರಿನ ಊರುಕೆರೆ ಬಳಿಯ ಶಿವಣ್ಣ ನಿವಾಸಕ್ಕೆ ಭಾನುವಾರ ಸಂಜೆ ಮಾಜಿ ಸಂಸದ ಜಿ.ಎಸ್‌.ಬಸವರಾಜ್‌ ಸೇರಿದಂತೆ ಬಿಜೆಪಿಯ ಜಿಲ್ಲಾ ಮುಖಂಡರೊಂದಿಗೆ ಭೇಟಿ ನೀಡಿದ ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಶಿವಣ್ಣ ಅವರೊಂದಿಗೆ ಮಾತನಾಡಿ, ಅವರಲ್ಲಿದ್ದ ಮುನಿಸನ್ನು ದೂರಮಾಡಿ, ಮುಂದಿನ ದಿನದಲ್ಲಿ ಪಕ್ಷ ನಿನಗೆ ಗೌರವ ಸ್ಥಾನಮಾನ ನೀಡುತ್ತದೆ.

ನನ್ನಿಂದಲೂ ತಪ್ಪಾಗಿದೆ. ಮುಂದಿನ ದಿನಗಳಲ್ಲಿ ಎಲ್ಲವನ್ನು ಸರಿಪಡಿಸಿಕೊಂಡು ಹೋಗೋಣ ದೇಶದಲ್ಲಿ ನರೇಂದ್ರ ಮೋದಿ ಅವರು ಮತ್ತೆ ಪ್ರಧಾನಿ ಆಗಬೇಕು ಅದಕ್ಕೆ ತುಮಕೂರಿನಲ್ಲಿ ಸಂಸದರನ್ನು ಗೆಲ್ಲಿಸಬೇಕು ಅದಕ್ಕೆ ನೀವು ಶ್ರಮಿಸಬೇಕು ಎಂದು ತಿಳಿಸಿದರು.

ಅಸಮಾಧಾನ ದೂರ: ಎಲ್ಲಮಾತುಗಳನ್ನು ಕೇಳಿದ ಮೇಲೆ ಪಕ್ಷಕ್ಕಾಗಿ, ಮೋದಿಗಾಗಿ ನಾನು ಕೆಲಸ ಮಾಡುತ್ತೇನೆ ಎಂದು ಬಿ.ಎಸ್‌.ಯಡಿಯೂರಪ್ಪ ಅವರಿಗೆ ತಿಳಿಸಿದರು. ಈ ಮೂಲಕ ಕಳೆದ 5 ವರ್ಷಗಳಿಂದ ಬಿಜೆಪಿಯ ಬಂಡಾಯ ಎಂದೇ ಗುರುತಿಸಿಕೊಂಡಿದ್ದ ಶಿವಣ್ಣ ಪಕ್ಷದ ಮುಖಂಡರ ಸಮ್ಮುಖದಲ್ಲಿ ತಮ್ಮ ಅಸಮಧಾನವನ್ನು ದೂರ ಮಾಡಿಕೊಂಡರು.

ಹಲವಾರು ಬಾರಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಮನೆಗೆ ಬರುತ್ತೇನೆ ಎಂದರೂ ಸಿಗದೇ ಇದ್ದ ಶಿವಣ್ಣ, ಭಾನುವಾರ ಸಂಜೆ ತಮ್ಮ ನಾಯಕರನ್ನು ಆತ್ಮೀಯವಾಗಿ ಸ್ವಾಗತಿಸಿ, ಆತಿಥ್ಯವನ್ನು ಮಾಡಿದರು. ಮನೆಯಲ್ಲಿ ಮಾತುಕತೆಯ ನಂತರ ಎಲ್ಲರೂ ಒಟ್ಟಿಗೆ ಕುಳಿತು ಉಪಹಾರ ಸೇವಿಸಿದರು. ಈ ವೇಳೆ ಎಲ್ಲವನ್ನು ಮರೆತು ಒಟ್ಟಿಗೆ ಕೆಲಸ ಮಾಡಬೇಕು ಎಂದು ಹೇಳಿ ಮಾಜಿ ಸಂಸದ ಜಿ.ಎಸ್‌.ಬಸವರಾಜ್‌ ಮತ್ತು ಮಾಜಿ ಸಚಿವ ಸೊಗಡು ಎಸ್‌.ಶಿವಣ್ಣ ಅವರ ಕೈಗೆ ಕೈ ಕೂಡಿಸಿ, ಒಂದು ಮಾಡಿದರು.

Advertisement

ಮೋದಿಗಾಗಿ ಕೆಲಸ: ಈ ವೇಳೆ ಮಾತನಾಡಿದ ಮಾಜಿ ಸಚಿವ ಸೊಗಡು ಶಿವಣ್ಣ, ನಮ್ಮ ಹಿರಿಯ ನಾಯಕರು ನಮ್ಮ ಮನೆಗೆ ಬಂದಿದ್ದಾರೆ. ನಮ್ಮ ನಾಯಕರಾದ ಮೋದಿ ಅವರು ಪ್ರಧಾನಿ ಆಗಬೇಕು ರಾಷ್ಟ್ರ, ಅಂತರಾಷ್ಟ್ರೀಯ ನಾಯಕರು ಅವರು ಯಡಿಯೂರಪ್ಪ ಅವರು ನಮ್ಮ ರಾಜ್ಯ ನಾಯಕರು ಅವರು ಹೇಳಿದ್ದಾರೆ ನಾನು ಕಾಯಾ, ವಾಚಾ, ಮನಸ ಮೋದಿಗಾಗಿ ಪಕ್ಷದ ಪರವಾಗಿ ಕೆಲಸ ಮಾಡುತ್ತೇನೆ ಎಂದು ಹೇಳಿದರು.

ನನ್ನದೊಂದ ನಿವೇದನೆ ಮಾಡಿಕೊಳ್ಳುತ್ತೇನೆ. ನಮ್ಮ ಕಾರ್ಯಕರ್ತರನ್ನು ಪ್ರೀತಿಯಿಂದ ಕಾಣಬೇಕು. ನೀವು ರಾಜ್ಯದಲ್ಲಿ ಓಡಾಡಿ ಪಕ್ಷ ಸಂಘಟನೆ ಮಾಡುತ್ತಿದ್ದಿರಿ. ನನಗೆ ಯಾವುದೇ ಜಾತಿ ಮತ ಗೊತ್ತಿಲ್ಲ. ಅಟಲ್‌, ಅಡ್ವಾನಿ, ಬಿ.ಎಸ್‌.ಯಡಿಯೂರಪ್ಪ ಜೊತೆ ಹೋರಾಟ ಮಾಡಿದವನು. ಈ ಹಿಂದೆ ಎಸ್‌.ಮಲ್ಲಿಕಾರ್ಜುನಯ್ಯ ಅವರನ್ನು ಗೆಲ್ಲಿಸಲು ಯಾವ ರೀತಿ ಕೆಲಸ ಮಾಡಿದ್ದೆವೋ ಅದೇ ರೀತಿ ಕೆಲಸ ಮಾಡಿ, ಗೆಲ್ಲಿಸುತ್ತೇವೆ.

ನೀವು ಗೊಂದಲಕ್ಕೆ ವಿರಾಮ ಹೇಳಬೇಕು. ಸರಿಯಾದ ರೀತಿ ನಿರ್ದೇಶನ ನೀಡಬೇಕು ಎಂದು ಹೇಳಿದರು. ನಾನು ಯಾವುದೇ ಪಕ್ಷದ್ರೋಹ ಮಾಡುವುದಿಲ್ಲ. ನಾನು ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ಕಮಲಕ್ಕೆ ಓಟು ಹಾಕಿದ್ದು, ನಾನು ಮೋದಿಗಾಗಿ ಶ್ರಮಿಸುತ್ತೇನೆ ಎಂದರು.

ಈ ವೇಳೆ ಮಾಜಿ ಸಂಸದ ಜಿ.ಎಸ್‌.ಬಸವರಾಜ್‌, ಶಾಸಕರಾದ ಮಸಾಲೆ ಜಯರಾಂ, ಬಿ.ಸಿ.ನಾಗೇಶ್‌, ಜಿ.ಬಿ.ಜ್ಯೋತಿಗಣೇಶ್‌, ಮಾಜಿ ಶಾಸಕ ಬಿ.ಸುರೇಶ್‌ಗತೌಡ ಸೇರಿದಂತೆ ಹಲವಾರು ಮುಖಂಡರು ಭಾಗವಹಿಸಿದ್ದರು.

ನನ್ನಿಂದ ಶಿವಣ್ಣ ಅವರಿಗೆ ಅನ್ಯಾಯವಾಗಿದೆ. ಅದನ್ನು ಲೋಕಸಭಾ ಚುನಾವಣೆ ನಂತರ ಸರಿ ಪಡಿಸುತ್ತೇನೆ. ಸೂಕ್ತ ಸ್ಥಾನಮಾನವನ್ನು ನೀಡುತ್ತೇನೆ. ಸಣ್ಣ ಪುಟ್ಟ ಭಿನ್ನಾಭಿಪ್ರಾಯವನ್ನು ಬಿಟ್ಟು ಮೋದಿಯವರನ್ನು ಮತ್ತೂಮ್ಮೆ ಪ್ರಧಾನಿಮಾಡಲು ಶ್ರಮಿಸುವುದಾಗಿ ತಿಳಿಸಿದ್ದಾರೆ.
-ಬಿ.ಎಸ್‌.ಯಡಿಯೂರಪ್ಪ, ಮಾಜಿ ಮುಖ್ಯಮಂತ್ರಿ

Advertisement

Udayavani is now on Telegram. Click here to join our channel and stay updated with the latest news.

Next