Advertisement

ಆದಿಲ್‌ಶಾಹಿ ಕಾಲದ ನೀರು ಪೂರೈಕೆಯ ಗಾರೆ ಕೊಳವೆ ಪತ್ತೆ

06:11 PM Oct 08, 2020 | sudhir |

ವಿಜಯಪುರ: ಆದಿಲ್‌ಶಾಹಿ ಸುಲ್ತಾನರ ಆಡಳಿತ ಕಾಲದಲ್ಲಿ ರಾಜಧಾನಿಯಾಗಿದ್ದ ವಿಜಯಪುರ ನಗರಕ್ಕೆ ನೀರು ಪೂರೈಸುವುದಕ್ಕಾಗಿ ತಾಂತ್ರಿಕವಾಗಿ ಬಳಕೆಯಲ್ಲಿದ್ದ ಪರ್ಶಿಯನ್‌ ತಂತ್ರಜ್ಞಾನದ ಇಟ್ಟಂಗಿ-ಗಾರೆ ಪೈಪ್‌ಲೈನ್‌ ಪತ್ತೆ ಹಚ್ಚುವಲ್ಲಿ
ನಗರದ ಇತಿಹಾಸ ಸಂಶೋಧಕರರೊಬ್ಬರು ಯಶಸ್ವಿಯಾಗಿದ್ದಾರೆ.

Advertisement

ಸಿಕ್ಯಾಬ್‌ ಕಾಲೇಜಿನ ಇತಿಹಾಸ ಪ್ರಾಧ್ಯಾಪಕ ಡಾ| ಮುಸ್ತಾಕ್‌ ಅಹಮ್ಮದ್‌ ಇನಾಮದಾರ ಅವರು ಬಿಲಾಲ ಬಿಲವರ ಮತ್ತು ಅಮಿತ್‌ ಹುದ್ದಾರ ಸಹಾಯದಿಂದ ಐತಿಹಾಸಿಕ ನೀರು ಪೂರೈಕೆಯ ಮಣ್ಣಿನ ಪೈಪ್‌ಲೈನ್‌ ಪತ್ತೆ ಹಚ್ಚಿದ್ದಾರೆ. ನೀರು ಸರಬರಾಜಿಗಾಗಿ ಮಣ್ಣಿನಿಂದ ನಿರ್ಮಿಸಿರುವ ಪರ್ಶಿಯನ್‌ ತಂತ್ರಜ್ಞಾನದ ಐತಿಹಾಸಿಕ ನೀರಿನ ಕೊಳವೆ ನಗರದ ಆಸಾರ
ಮಹಲಿನ ಮುಂಭಾಗದಲ್ಲಿ ಪತ್ತೆಯಾಗಿದೆ. ಪಾನಿ ಮಹಲಿನಿಂದ ಬಂದ ಈ ಪೈಪ್‌ ಒಡೆದಿದ್ದು, ಒಂದು ಟಿಸಿಳು ಎಡ ಬದಿಯಲ್ಲಿನ ಯಾಖುತ್‌ ಧಾಬೋಲಿಯತ್ತ ತೆರಳಿದರೆ, ಇನ್ನೊಂದು ಟಿಸಿಳು ಆಸರ ಮಹಲ್‌ ಹೊರ ಭಾಗದದಲ್ಲಿ ಹಾಯ್ದು ಜುಮ್ಮಾ ಮಸೀದಿ ಕಡೆಗೆ ಸಾಗುತ್ತದೆ ಎಂದು ವಿವರಿಸಿದ್ದಾರೆ.

ಇದನ್ನೂ ಓದಿ :ಸ್ಟಾಕ್ ಹೋಮ್: ಅಮೆರಿಕದ ಕವಯತ್ರಿಗೆ ಪ್ರತಿಷ್ಠಿತ ನೊಬೆಲ್ ಸಾಹಿತ್ಯ ಪ್ರಶಸ್ತಿ

ಆದಿಲ್‌ ಶಾಹಿ ಅರಸದ ವೈಭವಯುತ ನಗರ ಜಲ ಸಂರಕ್ಷಣೆ ಹಾಗೂ ಜಲ ವಿತರಣೆ ವಿಷಯದಲ್ಲಿ ತಾಂತ್ರಿಕವಾಗಾಗಿ ಅತ್ಯಂತ ಸುಧಾರಿತ ತಂತ್ರಜ್ಞಾನ ಹೊಂದಿತ್ತು. ಹೀಗಾಗಿ ದೇಶ-ವಿದೇಶದಿಂದ ಬಂದ ಅನೇಕರು ಇಲ್ಲೇ ನೆಲೆಸಿದ್ದರು. ಹೀಗಾಗಿ ನಗರದಲ್ಲಿ
10 ಲಕ್ಷ ಜನಸಂಖ್ಯೆಯಿಂದಾಗಿ ಉಪ ನಗರಗಳು ಹುಟ್ಟಿಕೊಂಡವು. ಜನರಿಗೆ ಅಗತ್ಯ ಪ್ರಮಾಣದ ನೀರು ಪೂರೈಸಲು ಆದಿಲ್‌ಶಾಹಿ ಅರಸರು ಅನೇಕ ಬೃಹತ್‌ ಕೆರೆ, ಬಾವಿಗಳನ್ನು ನಿರ್ಮಿಸಿ, ನೀರು ಪೂರೈಕೆಗಾಗಿ ಕಾಲುವೆ ಹಾಗೂ ಮಣ್ಣಿನ ಕೊಳವೆ ಮಾರ್ಗಗಳನ್ನು
ನಿರ್ಮಿಸಿದ್ದನ್ನು ಕಾಣಬಹುದು.

ಆದಿಲ್‌ಶಾಹಿ ಅರಸರ ಕಾಲದ ಈ ಜಲ ಕೊಳವೆ (ಪೈಪ್‌) ಪತ್ತೆ ಮಾಡಿದ್ದು, ಮಹಮ್ಮದ ಆದಿಲ್‌ ಶಹಾನ ಕಾಲದಲ್ಲಿ ನಿರ್ಮಿಸಿದ್ದಾಗಿ ಹೇಳುತ್ತಾರೆ. ರಾಜಧಾನಿ ನಗರಕ್ಕೆ ನೀರು ಪೂರೈಕೆ ಮಾಡಲು ನಗರದ ಹೊರ ವಲಯದಲ್ಲಿ ಬೇಗಂ ತಲಾಬ (ಕೆರೆ)
ನಿರ್ಮಿಸಿ, ಅಲ್ಲಿಂದ ನಗರಕ್ಕೆ ನೀರನ್ನು ಸರಬರಾಜು ಮಾಡಲಾಯಿತು. ರಾಜರ ಆದೇಶದಂತೆ ನಗರಕ್ಕೆ ನೀರು ಸರಬರಾಜು ಮಾಡಲು ಅಗತ್ಯ ಇದ್ದ ಕೊಳವೆ ನಿರ್ಮಾಣದ ಹೊಣೆಯನ್ನು ಮನಗೂಳಿ ನಾಡಗೌಡರು ನಿಭಾಯಿಸಿದ್ದರು. ಸದರಿ ನೀರಿನ
ಕೊಳವೆ ಬೇಗಂ ತಲಾಬದಿಂದ ನವಬಾಗ, ಅರ್ಕಿಲ್ಲಾ, ಪಾನಿ ಮಹಲ್‌ ಮೂಲಕ ಹಾದು ಆಸರ ಮಹಲ್‌, ಜುಮ್ಮಾ ಮಸೀದಿ ಕೊನೆಗೆ ಗೋಳಗುಮ್ಮಟ ಸೇರುತ್ತದೆ ಎಂದು ಮುಸ್ತಾಕ್‌ ಇನಾಮದಾರ ವಿಶ್ಲೇಷಿಸಿದ್ದಾರೆ.

Advertisement

ಇದನ್ನೂ ಓದಿ :ಮಹದಾಯಿ ವಿಚಾರದಲ್ಲಿ ಗೋವಾ ಸಿಎಂ ಸಣ್ಣತನ ಪ್ರದರ್ಶನ: ಕೋನರಡ್ಡಿ

ಭೂಮಿಯಿಂದ ಎತ್ತರದಲ್ಲಿ ಕಟ್ಟೆಯನ್ನು ಕಟ್ಟಿ ಅದರ ಮೇಲೆ ಈ ಮಣ್ಣಿನ ಕೊಳವೆ ಇಟ್ಟು ಇಟ್ಟಂಗಿ ಮತ್ತು ಗಾರೆ ಬಳಸಿ ಕೊಳವೆಗೆ ಹಾನಿಯಾಗದಂತೆ ಅತ್ಯಂತ ವ್ಯವಸ್ಥಿತ ರೀತಿಯಲ್ಲಿ ನಿರ್ಮಿಸಲಾಗಿದೆ.

ಸುಮಾರು 5 ಶತಮಾನ ಗತಿಸಿದರೂ ನೀರು ಸರಬರಾಜಿ ಮಣ್ಣಿನ ಪೈಪ್‌ಲೈನ್‌ ಹಾನಿಯಾಗದೆ ಉಳಿದಿದೆ. ಇದು ಆದಿಲ್‌ ಶಾಹಿ ಅರಸರ ಕಾಲದಲ್ಲಿ ಜಲ ಸಂರಕ್ಷಣೆ ಹಾಗೂ ಪೂರೈಕೆಯಲ್ಲಿದ್ದ ಅದ್ಭುತ ತಂತ್ರಜ್ಞಾನಕ್ಕೆ ಸಾಕ್ಷಿ ಎಂದು ಮುಸ್ತಾಕ್‌ ವಿವರಿಸಿದ್ದಾರೆ.
ಜಿಲ್ಲಾಡಳಿತ ಮತ್ತು ಪುರಾತತ್ವ ಇಲಾಖೆ ಗಮನ ಹರಿಸಿ ಈ ಕೊಳವೆಯನ್ನು ಉಳಿಸಿ ಮುಂದಿನ ಜನಾಂಗಕ್ಕೆ ಹಿಂದಿನ ತಂತ್ರಜ್ಞಾನ ತಿಳಿದುಕೊಳ್ಳುವ ಕೆಲಸ ಮಾಡಬೇಕು.

Advertisement

Udayavani is now on Telegram. Click here to join our channel and stay updated with the latest news.

Next