Advertisement

ಸಣ್ಣ ಮಳೆಗೂ ಎದುರಾಗಿದೆ ಜಲಕಂಟಕ

01:00 AM May 14, 2019 | Team Udayavani |

ಬೆಂಗಳೂರು: ಬೊಮ್ಮನಹಳ್ಳಿಯ ಕೋಡಿಚಿಕ್ಕನಹಳ್ಳಿ ಭಾಗದಲ್ಲಿ ಸೋಮವಾರದ ಮಳೆಗೆ ರಸ್ತೆಗಳು ಜಲಾವೃತಗೊಂಡು, ಮನೆಗಳಿಗೆ ನೀರು ನುಗ್ಗಿದ್ದು, ಮೂರು ವರ್ಷಗಳ ಹಿಂದೆ ಮಳೆಯಿಂದ ಸಂಭವಿಸಿದ ಅನಾಹುತಗಳು ಮರುಳಿಸುವ ಆತಂಕ ಎದುರಾಗಿದೆ.

Advertisement

ನಗರದಲ್ಲಿ ಸುರಿದ ಭಾರಿ ಮಳೆಯಿಂದಾಗಿ 2016ರಲ್ಲಿ ಬೊಮ್ಮನಹಳ್ಳಿ ವಲಯದ ಕೋಡಿಚಿಕ್ಕನಹಳ್ಳಿ, ಅರಕೆರೆ, ಅವನಿ ಶೃಂಗೇರಿ, ಸರಸ್ವತಿಪುರ ಸೇರಿದಂತೆ ಹಲವಾರು ಬಡಾವಣೆಗಳಲ್ಲಿ ಪ್ರವಾಹ ಉಂಟಾಗಿ ಜನರು ತೊಂದರೆ ಅನುಭವಿಸಿದ್ದರು.

ಇದೀಗ ಸೋಮವಾರ ಸುರಿದ ಸಣ್ಣ ಮಳೆಗೆ ಕೋಡಿಚಿಕ್ಕನಹಳ್ಳಿ ಹಾಗೂ ಬಿಟಿಎಂ ಬಡಾವಣೆ 6ನೇ ಹಂತದ ಕೆಲವು ರಸ್ತೆಗಳು ಜಲಾವೃತಗೊಂಡಿದ್ದು, ತಗ್ಗು ಪ್ರದೇಶಗಳಿಗೆ ನೀರು ನುಗ್ಗಿ ಜನರು ಸಮಸ್ಯೆ ಅನುಭವಿಸುವಂತಾಗಿದ್ದು, ಮಳೆಗಾಲ ನೆನೆದು ಆತಂಕಪಡುವಂತಾಗಿದೆ.

ಪ್ರತಿವರ್ಷ ಮಳೆಗಾಲದಲ್ಲಿ ನಗರದ ಒಂದಿಲ್ಲೊಂದು ಪ್ರದೇಶವು ಮಳೆಯಿಂದ ಅನಾಹುತಕ್ಕೆ ಒಳಗಾಗುತ್ತಿವೆ. ಮಳೆಗಾಲಕ್ಕೆ ಪಾಲಿಕೆ ಸಜ್ಜಾಗಿದೆ ಎಂಬ ಪಾಲಿಕೆಯ ಅಧಿಕಾರಿಗಳು ಭರವಸೆ ನೀಡಿದರೂ, ಅನಾಹುತಗಳು ಮಾತ್ರ ಮರುಕಳಿಸುತ್ತಲೇ ಇವೆ.

ಸೋಮವಾರ ಬೆಂಗಳೂರು ನಗರ ಹಾಗೂ ಗ್ರಾಮಾಂತರ ಭಾಗಗಳಲ್ಲಿ ಸೋಮವಾರ 2-3 ಸೆಂಟಿ ಮೀಟರ್‌ನಷ್ಟು ಮಳೆಯಾಗಿದ್ದು, ಬನ್ನೇರುಘಟ್ಟ ಮುಖ್ಯರಸ್ತೆ, ಕೋಡಿಚಿಕ್ಕನಹಳ್ಳಿ, ಬಿಟಿಎಂ ಬಡಾವಣೆ 6ನೇ ಹಂತ ಸೇರಿದಂತೆ ಸುತ್ತಮುತ್ತಲಿನ ಬಡಾವಣೆಗಳಲ್ಲಿ ರಸ್ತೆಗಳಲ್ಲಿ ಎರಡು ಮೂರು ಅಡಿಯಷ್ಟು ನೀರು ನಿಂತು ಜನಜೀವನ ಅಸ್ತವ್ಯಸ್ಥಗೊಂಡಿತ್ತು.

Advertisement

ಹೂಳು ತೆಗೆಯದ ಪಾಲಿಕೆ: ಬಿಬಿಎಂಪಿ ವತಿಯಿಂದ ಕೋಡಿಚಿಕ್ಕನಹಳ್ಳಿ ಸೇರಿದಂತೆ ಸುತ್ತಮುತ್ತಲಿನ ಬಡಾವಣೆಗಳ ಕಿರುಚಂಡಿಗಳಲ್ಲಿ ಹೂಳು ತೆಗೆಯುವ ಕಾರ್ಯ ನಡೆದಿಲ್ಲ. ಪರಿಣಾಮ ಮಳೆನೀರು ಸಮರ್ಪಕವಾಗಿ ಹರಿದು ಹೋಗದೆ ರಸ್ತೆಗಳಲ್ಲಿ ಉಳಿಯುತ್ತಿದ್ದು, ತಗ್ಗು ಪ್ರದೇಶಗಳಿಗೆ ನುಗ್ಗುತ್ತಿದೆ ಎಂದು ಸ‚§ಳೀಯರು ಆರೋಪಿಸಿದ್ದಾರೆ.

ಮನೆಗಳಿಗೆ ಮ್ಯಾನ್‌ಹೋಲ್‌ ನೀರು: ಕೋಡಿಚಿಕ್ಕನಹಳ್ಳಿಯ ರಸ್ತೆಯಲ್ಲಿ ಜಲಮಂಡಳಿಯಿಂದ ನಿರ್ಮಿಸಿರುವ ಮ್ಯಾನ್‌ಹೋಲ್‌ಗ‌ಳು ಸೋಮವಾರ ಉಕ್ಕಿ ಹರಿದ ಪರಿಣಾಮ, ಸಮೀಪದ ಅಂಗನವಾಡಿ ಹಾಗೂ ತಗ್ಗು ಪ್ರದೇಶದ 5 ಮನೆಗಳಿಗೆ ಒಳಚರಂಡಿ ನುಗ್ಗಿದರ ಪರಿಣಾಮ ನಿವಾಸಿಗಳು ತೊಂದರೆ ಅನುಭವಿಸುವಂತಾಗಿದೆ. ನೀರು ತೆರವುಗೊಳಿಸಿದರೂ ಮನೆಯೆಲ್ಲ ದುರ್ವಾಸನೆ ಹರಡಿರುವುದು ನಿವಾಸಿಗಳಿಗೆ ಕಿರಿಕಿರಿಯುಂಟು ಮಾಡಿದೆ.

ಜಂಟಿ ಆಯುಕ್ತರ ಪರಿಶೀಲನೆ: ಮಳೆಯಿಂದಾಗಿ ಕೋಡಿಚಿಕ್ಕನಹಳ್ಳಿಯ ಕೆಲ ರಸ್ತೆಗಳಲ್ಲಿ ನೀರು ನಿಂತ ಹಿನ್ನೆಲೆಯಲ್ಲಿ ಬೊಮ್ಮನಹಳ್ಳಿ ಜಂಟಿ ಆಯುಕ್ತೆ ಸೌಜನ್ಯ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಜತೆಗೆ ಪಾಲಿಕೆಯಿಂದ ಹೊಸದಾಗಿ ನಿರ್ಮಿಸಿರುವ ರಾಜಕಾಲುವೆಗಳಲ್ಲಿ ಮಳೆನೀರು ಸರಾಗವಾಗಿ ಹರಿಯುತ್ತಿದೆ ಎಂಬುದನ್ನು ಪರಿಶೀಲಿಸಿದರು. ಜತೆಗೆ ಕೂಡಲೇ ರಸ್ತೆಗಳಲ್ಲಿ ನೀರು ನಿಲ್ಲದಂತೆ ಕ್ರಮಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಪಾಲಿಕೆಗೆ ಎಚ್ಚರಿಕೆ ಗಂಟೆ: ಪ್ರಸಕ್ತ ಸಾಲಿನಲ್ಲಿ ಮಳೆಗಾಲಕ್ಕೆ ಸಜ್ಜಾಗಿರುವುದಾಗಿ ಪಾಲಿಕೆಯ ಅಧಿಕಾರಿಗಳು ಭರವಸೆ ನೀಡಿದ್ದಾರೆ. ಆದರೆ, ಈಗಾಗಲೇ ಮುಂಗಾರು ಪೂರ್ವ ಮಳೆಗೆ ಮೂವರು ಅಮಾಯಕರು ಪ್ರಾಣ ಕಳೆದುಕೊಂಡಿದ್ದು, ಹಲವು ಬಡಾವಣೆಗಳಲ್ಲಿ ಪ್ರವಾಹದ ವಾತಾವರಣ ನಿರ್ಮಾಣವಾಗಿದೆ. ಇದೀಗ 2016ರಲ್ಲಿ ಪ್ರವಾಹ ಎದುರಿಸಿದ ಭಾಗಗಳಲ್ಲಿಯೇ ಮತ್ತೆ ಪ್ರವಾಹದ ಆತಂಕ ಎದುರಾಗಿದ್ದು, ಪಾಲಿಕೆಯ ಅಧಿಕಾರಿಗಳು ಶೀಘ್ರ ಎಚ್ಚೆತ್ತುಕೊಂಡು ಸಮಸ್ಯೆ ಪರಿಹಾರಕ್ಕೆ ಮುಂದಾಗಬೇಕಿದೆ.

Advertisement

Udayavani is now on Telegram. Click here to join our channel and stay updated with the latest news.

Next