Advertisement

ಕಾಶಿ-ಅಯೋಧ್ಯೆಯ ಅಭಿವೃದ್ಧಿ ಸಂಸ್ಕೃತಿ ಪುನರುತ್ಥಾನದ ಸಂಕೇತ; ಜೋಶಿ

05:45 PM Feb 16, 2022 | Team Udayavani |

ಹುಬ್ಬಳ್ಳಿ: ದೇಶದಲ್ಲಿ ಹಿಂದೂ ಸಂಸ್ಕೃತಿ, ಧಾರ್ಮಿಕತೆ ಪುನರುತ್ಥಾನ ಆಗುತ್ತಿದೆ. ಇದಕ್ಕೆ ಕಾಶಿ, ಅಯೋಧ್ಯೆ ಇನ್ನಿತರ ಸ್ಥಳಗಳ ಸರ್ವಾಗೀಂಣ ಅಭಿವೃದ್ಧಿ ಸಾಕ್ಷಿಯಾಗಿದೆ ಎಂದು ಕೇಂದ್ರ ಸಂಸದೀಯ ವ್ಯವಹಾರಗಳು, ಕಲ್ಲಿದ್ದಲು ಮತ್ತು ಗಣಿ ಸಚಿವ ಪ್ರಹ್ಲಾದ ಜೋಶಿ ಹೇಳಿದರು.

Advertisement

ಸದ್ಗುರು ಸಿದ್ಧಾರೂಢಸ್ವಾಮಿ ರೈಲು ನಿಲ್ದಾಣದಲ್ಲಿ ನವಕಾಶಿ ವೀಕ್ಷಣೆಗೆ ಹೊರಟ ಜಿಲ್ಲೆಯ ಸುಮಾರು 150 ಬಿಜೆಪಿ ಕಾರ್ಯಕರ್ತರಿಗೆ ಶುಭ ಕೋರಿ ಅವರು ಮಾತನಾಡಿದರು. ರಾಜ್ಯದಲ್ಲಿಯೂ ಪ್ರವಾಸೋದ್ಯಮ ಅಭಿವೃದ್ಧಿ ಹಾಗೂ ಧಾರ್ಮಿಕ ಸ್ಥಳಗಳ ಪುನರುತ್ಥಾನಕ್ಕೆ ಮುಂದಾದರೆ ಕೇಂದ್ರದಿಂದ ಅಗತ್ಯ ನೆರವು ದೊರಕಿಸಲು ಪ್ರಾಮಾಣಿಕ ಯತ್ನ ಮಾಡುವುದಾಗಿ ತಿಳಿಸಿದರು.

ಪ್ರಧಾನಿ ನರೇಂದ್ರ ಮೋದಿಯವರ ಇಚ್ಛಾಶಕ್ತಿ ಪರಿಣಾಮ ಕಾಶಿ ಅದ್ಬುತ ರೀತಿಯಲ್ಲಿ ಅಭಿವೃದ್ಧಿ ಪಡಿಸಲಾಗಿದೆ. ಅದೇ ರೀತಿ ಅಯೋಧ್ಯೆ, ಚಾರ್‌ ಧಾಮ್‌, ರಾಮಾನುಜಾಚಾರ್ಯ ಮೂರ್ತಿ ಸ್ಥಾಪನೆ ಇದೊಂದು ಹಿಂದೂ ಸಂಸ್ಕೃತಿ ಪುನರುತ್ಥಾನ ಸಂಕೇತವಾಗಿದೆ. ಕರ್ನಾಟಕದಲ್ಲಿಯೂ ಕಿಷ್ಕಿಂಧೆ, ಧರ್ಮಸ್ಥಳ ಸೇರಿದಂತೆ ಅನೇಕ ತಾಣಗಳು ಇದ್ದು, ಇವುಗಳ ಅಭಿವೃದ್ಧಿಗೆ ಅವಕಾಶಗಳಿವೆ.

ಈ ನಿಟ್ಟಿನಲ್ಲಿ ರಾಜ್ಯ ಸರಕಾರ ಅಗತ್ಯ ಪ್ರಸ್ತಾವನೆ ಸಲ್ಲಿಸಿದರೆ ಕೇಂದ್ರದಿಂದ ನೆರವು ಒದಗಿಸಲು ಪ್ರಾಮಾಣಿಕ ಯತ್ನ ಮಾಡುತ್ತೇನೆ ಎಂದರು. ಆಂಜನೇಯನ ಜನ್ಮಸ್ಥಳ ಬಗ್ಗೆ ಉಂಟಾದ ವಿವಾದ ಹಾಗೂ ಟಿಟಿಡಿಯವರು ತಮ್ಮದೇ ಹನುಮನ ಜನ್ಮಸ್ಥಳವೆಂದು ಅಭಿವೃದ್ಧಿಗೆ ಮುಂದಾಗಿರುವ ಕುರಿತು ಪ್ರತಿಕ್ರಿಯಿಸಿದ ಅವರು, ನಮ್ಮಲ್ಲಿನ ಕಿಷ್ಕಿಂಧೆ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡೋಣ. ಅವರು ಮಾಡುವುದು ಮಾಡಲಿ ಎಂದು ಹೇಳಿದರು. ಬಿಜೆಪಿ ವಿವಿಧ ಮುಖಂಡರು ಪಾಲ್ಗೊಂಡು ಯಾತ್ರಿಗಳಿಗೆ ಶುಭ ಕೋರಿದರು.

Advertisement

Udayavani is now on Telegram. Click here to join our channel and stay updated with the latest news.

Next