Advertisement

ಅಭಿವೃದ್ಧಿ ಪ್ರಕ್ರಿಯೆಗೆ ಆಘಾತ

11:46 AM Nov 29, 2018 | |

ಬೆಂಗಳೂರು: ರಾಜ್ಯಕ್ಕೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ತಂದು ಕೊಡುವಲ್ಲಿ ಪ್ರಮುಖ ಪಾತ್ರವಹಿಸಿದ್ದ ಅನಂತಕುಮಾರ್‌ ಅವರ ನಿಧನದಿಂದ ಕೇಂದ್ರ ಸರ್ಕಾರದಿಂದ ರಾಜ್ಯದಲ್ಲಾಗಬೇಕಿದ್ದ ಅಭಿವೃದ್ಧಿ ಪ್ರಕ್ರಿಯೆಗೆ ಆಘಾತವಾದಂತೆ ಎಂದು ಕಂದಾಯ ಸಚಿವ ಆರ್‌ .ವಿ.ದೇಶಪಾಂಡೆ ಅಭಿಪ್ರಾಯಪಟ್ಟರು.

Advertisement

ಅಖೀಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ವತಿಯಿಂದ ಬುಧವಾರ ಎನ್‌.ಆರ್‌.ಕಾಲೋನಿಯ ಶ್ರೀರಾಮಮಂದರದಲ್ಲಿ ಹಮ್ಮಿಕೊಂಡಿದ್ದ ಅನಂತಕುಮಾರ್‌ ಅವರ ಶ್ರದ್ಧಾಂಜಲಿ ಸಭೆಯಲ್ಲಿ ಮಾತನಾಡಿದ ಅವರು, ರಾಜ್ಯಕ್ಕೆ ಅಂತಾರಾಷ್ಟ್ರೀಯಾ ವಿಮಾನ ನಿಲ್ದಾಣ ಘೋಷಣೆಯಾದಾಗ ಮುಖ್ಯ ಪ್ರೋಮೊಟರ್ಗಳು ಎಚ್‌ಎಎಲ್‌ನಲ್ಲಿ ವಿಮಾನ ಹಾರಟವನ್ನು ನಿಲ್ಲಿಸುವಂತೆ ಪಟ್ಟುಹಿಡಿದಿದ್ದರು. ಆದರೆ, ಕೇಂದ್ರ ಸರ್ಕಾರ ಇದಕ್ಕೆ ಒಪ್ಪಿಗೆ ಸೂಚಿಸದೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಯೋಜನೆಯನ್ನೇ ಕೈಬಿಡಲು ಮುಂದಾಗಿತ್ತು. ಆ ಸಮಯದಲ್ಲಿ ಅನಂತಕುಮಾರ ಅವರು ರಾಜ್ಯದಲ್ಲಿ ಕಾಂಗ್ರೆಸ್‌ ಪಕ್ಷವಿದ್ದರು ಪಕ್ಷಭೇದ ಮಾಡದೆ ರಾಜ್ಯ ಪ್ರತಿನಿಧಿಯಾಗಿದ್ದುಕೊಂಡು ವಾಜಪೇಯಿ ಅವರ ಬಳಿ ಮಾತನಾಡಿ, ಅಂದಿನ ಕೇಂದ್ರ ಸಂಪುಟವನ್ನು ಎಚ್‌ಎಎಲ್‌ನಲ್ಲಿ ವಿಮಾನ ಹಾರಟ ನಿಲ್ಲಿಸಲು ಒಪ್ಪಿಸಿದ್ದರು. ಅವರ ಅಂದಿನ ರಾಜ್ಯ ಪರ ಕಾಳಜಿ ಶ್ರಮದಿಂದಲೇ ಅಂತಾರಾಷ್ಟ್ರೀಯಾ ವಿಮಾನ ನಿಲ್ದಾಣವನ್ನು ಬೆಂಗಳೂರಿಗೆ ಬಂದಿತು ಎಂದು ಹೇಳಿದರು.

ಅನಂತಕುಮಾರ್‌ ದೆಹಲಿಯಲ್ಲಿ ಕರ್ನಾಟಕದ ರಾಯಬಾರಿಯಂತಿದ್ದರು, ಕೇಂದ್ರಮಟ್ಟದ ಅನೇಕ ಕೆಲಸ ಕಾರ್ಯಗಳಿಗೆ ಎಲ್ಲಾ ಪಕ್ಷದವರು ಅವರ ಸಹಕಾರ ಪಡೆದಿದ್ದಾರೆ. ಅವರು ರಾಜ್ಯದ ಕೆಲಸ ಎಂದರೆ ಪಕ್ಷಾತೀತವಾಗಿ ನಡೆದುಕೊಳ್ಳುತ್ತಿದ್ದರು. ರಾಜ್ಯದ ಅನೇಕ ಸಮಸ್ಯೆಗಳನ್ನು ಕೇಂದ್ರಕ್ಕೆ ತಿಳಿಸಿ ಖುದ್ದು ನಿಂತು ಕೆಲಸ ಮಾಡಿಸುತ್ತಿದ್ದರು. ರಾಜ್ಯದಲ್ಲಿ ಕೇಂದ್ರದ ಅನೇಕ ಅಭಿವೃದ್ಧಿ ಯೋಜನೆಗಳಿಗೆ ಉಸ್ತುವಾರಿಯಾಗಿದ್ದರು. 

ಅವರ ನಿಧನದಿಂದ ರಾಜ್ಯಕ್ಕೆ ನಷ್ಟವಾಗಿದೆ. ನಮ್ಮ ಗುರುಗಳಾದ ರಾಮಕೃಷ್ಣ ಹೆಗ್ಡೆ ಅವರು ಚುನಾವಣೆ ಸಮಯದಲ್ಲಿ ಮಾತ್ರ ರಾಜಕಾರಣಿಯಾಗಿರು ಆನಂತ ಜನಪ್ರತಿನಿಧಿಯಾಗಿ ಜನರ ಸೇವೆ ಮಾಡು ಎಂದು ಅನೇಕ ಬಾರಿ ಹೇಳುತ್ತಿದ್ದರು. ಆ ಗುಣವನ್ನು ಅನಂತ ಅವರಲ್ಲಿ ನಾವು ಕಂಡಿದ್ದೇವೆ ಎಂದು ತಿಳಿಸಿದರು. ತೇಜಸ್ವಿನಿ ಅನಂತಕುಮಾರ್‌, ಶಾಸಕರಾದ ಸುರೇಶ್‌ ಕುಮಾರ್‌, ಆರ್‌.ಅಶೋಕ್‌, ಉದಯ ಗರುಡಾಚಾರ್‌, ಶಾಸಕ ಎಲ್‌.ಎ.ರವಿಸುಬ್ರಹ್ಮಣ್ಯ, ಮಾಜಿ ಶಾಸಕ ವೈಎಸ್‌ವಿ ದತ್ತ, ಮಹಾಸಭಾ ಅಧ್ಯಕ್ಷ ವೆಂಕಟನಾರಾಯಣ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next