Advertisement

ಮಹಿಳೆಯರಿಂದ ಸಮಾಜದ ಅಭಿವೃದ್ಧಿ: ಟಿ.ಪಿ. ರಮೇಶ್‌

04:34 PM Mar 25, 2017 | Team Udayavani |

ಮಡಿಕೇರಿ: ಮಹಿಳೆಯರು ಸಮಾಜದ ಅಭಿವೃದ್ಧಿಯ ಶಿಲ್ಪಿಗಳು ಎಂದು ಕರ್ನಾಟಕ ರಾಜ್ಯ ರೇಷ್ಮೆ ಮಾರಾಟ ಮಂಡಳಿ ಅಧ್ಯಕ್ಷ ಟಿ.ಪಿ. ರಮೇಶ್‌ ಅವರು ಅಭಿಪ್ರಾಯಪಟ್ಟಿದ್ದಾರೆ.

Advertisement

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್‌, ಮಹಿಳೆ ಯರ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಜಿಲ್ಲಾ ಸ್ತ್ರೀ ಶಕ್ತಿ ಒಕ್ಕೂಟ ಇವರ ಸಹಯೋಗದಲ್ಲಿ ಗುರುವಾರ ಕಾವೇರಿ ಕಲಾಕ್ಷೇತ್ರದಲ್ಲಿ ನಡೆದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಒಬ್ಬ ಮಹಿಳೆ ತನ್ನ ಕುಟುಂಬದಲ್ಲಿ ತಾಯಿ, ಮಗಳು, ಸೊಸೆ ಎಂಬ ಅತ್ಯಂತ ಪ್ರಮುಖ ಜವಾಬ್ದಾರಿ ಸ್ಥಾನ ವಹಿಸಿದ್ದಾರೆ. ಹಾಗೆಯೇ ಮಹಿಳೆಯು ಸಾಮಾಜಿಕ ವ್ಯವಹಾರಗಳ ಮೂಲಕ ಅರ್ಥಿಕ ಭದ್ರತೆಯನ್ನು ನೀಡಿ ಸಮಾಜದ ಅಭಿವೃದ್ಧಿಯ ಶಿಲ್ಪಿಯಾಗಿ ಮಹತ್ತರ ಕಾರ್ಯ ನಿರ್ವಹಿಸುತ್ತಾರೆ ಎಂದು ಟಿ.ಪಿ. ರಮೇಶ್‌ ಅವರು ಶ್ಲಾ ಸಿದರು.

ಸಮಾಜದಲ್ಲಿ ಮಹಿಳೆಯರು ಮತ್ತು ಪುರುಷರು ಸರಿ ಸಮಾನರು. ಎಲ್ಲಿ ಮಹಿಳೆಯನ್ನು ಪೂಜಿಸುತ್ತಾರೋ ಅಲ್ಲಿ ದೇವರು ನೆಲೆಸಿರುತ್ತಾರೆ ಎನ್ನುವ ಭಾವನೆ ಗ್ರಂಥಗಳಲ್ಲಿ ಅಡಕವಾಗಿದೆ. ಪ್ರತಿ ಮಗುವಿಗೆ ಮನೆಯೇ ಮೊದಲ ಪಾಠ ಶಾಲೆ, ಹಾಗೆಯೇ ತಾಯಿಯೇ ಮೊದಲ ಗುರು, ಮಹಿಳೆಯು ಸಮಾಜ ಹಾಗೂ ದೇಶದ ಅಭಿವೃದ್ದಿಗೆ ಕಾರಣ. ಅವರಿಗೆ ಸಿಗಬೇಕಾದ ಸ್ಥಾನಮಾನ, ಗೌರವ ಕೊಡುವಂತದ್ದು ಎಲ್ಲರ ಕರ್ತವ್ಯವಾಗಿದೆ. ಪ್ರತಿ ಮಹಿಳೆಯು ಸಾಮಾಜಿಕ ವ್ಯವಹಾರಗಳ ಮೂಲಕ ಆರ್ಥಿಕ ಭದ್ರತೆಯನ್ನು ಕಂಡುಕೊಳ್ಳುವಲ್ಲಿ ಮುಂದಾಗಬೇಕು ಎಂದು ಸಲಹೆ ನೀಡಿದರು. “

ಮಹಿಳೆಯರಿಗೆ ವಿವಿಧ ಇಲಾಖೆ ಹಾಗೂ ಬ್ಯಾಂಕ್‌ಗಳಲ್ಲಿ ಸಿಗುವ ಯೋಜನೆಗಳು ಹಾಗೂ ಸಾಲ ಸೌಲಭ್ಯ ದೊರೆಯುತ್ತಿದೆ. ಆ ನಿಟ್ಟಿನಲ್ಲಿ ಮಹಿಳೆಯರು ಸ್ವಂತ ಉದ್ಯೋಗ ಮಾಡಿಕೊಂಡು ಆರ್ಥಿಕ ಪರಿಸ್ಥಿತಿಯಲ್ಲಿ ಮುಂದೆ ಬರುವ ಪ್ರಯತ್ನ ಆಗಬೇಕು. ಪ್ರತಿ ಮಹಿಳೆಯು ಆತ್ಮವಿಶ್ವಾಸದಿಂದ ಬದುಕು ನಡೆಸುವಂತಾಗಬೇಕು. ಮತ್ತೂಬ್ಬರನ್ನು ಅವಲಂಬಿಸದೆ ಸ್ವತಂತ್ರ ಜೀವನ ಕಟ್ಟಿಕೊಳ್ಳುವಂತಾಗಬೇಕು ಎಂದು ಟಿ.ಪಿ.ರಮೇಶ್‌ ತಿಳಿಸಿದ್ದಾರೆ.

Advertisement

ಕೊಡಗು ಜಿ.ಪಂ. ಸಾಮಾಜಿಕ ನ್ಯಾಯಸ್ಥಾಯಿ ಸಮಿತಿ ಅಧ್ಯಕ್ಷರಾದ ಎಂ.ಕೆ.ವಿಜು ಸುಬ್ರಮಣಿ ಅವರು ಮಾತನಾಡಿ ಸಮಾಜದಲ್ಲಿ ಮಹಿಳೆಯರಿಗೆ ಮಾತೆಯ ಪವಿತ್ರ ಸ್ಥಾನ ದೇಶದಲ್ಲಿದೆ. ಸರ್ಕಾರದಿಂದ ವಿವಿಧ ಉದ್ದೇಶ ಇಟ್ಟುಕೊಂಡು ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಮಹಿಳೆಯರಿಗೆ ಪುರುಷರು ಬೆನ್ನೆಲುಬಾಗಿ ಕೆಲಸ ಮಾಡಬೇಕು. ಸ್ತ್ರೀ ಶಕ್ತಿಗಳು ಒಟ್ಟಾಗಿ ಹೋರಾಡಿದಾಗ ಮಾತ್ರ ನ್ಯಾಯ ದೊರೆಯುತ್ತದೆ ಎಂದು ಹೇಳಿದರು.  

ನಗರಸಭೆ ಅಧ್ಯಕ್ಷರಾದ ಕಾವೇರಮ್ಮ ಸೋಮಣ್ಣ ಅವರು ಮಾತನಾಡಿ ಸಮಾಜದ ಶ್ರೇಯೋಭಿವೃದ್ಧಿಯಲ್ಲಿ ಮಹಿಳೆಯರ ಪಾತ್ರ ಮಹತ್ವದ್ದು ಎಂದು ಅಭಿಪ್ರಾಯಪಟ್ಟರು.

ಮಹಿಳೆಯರು ಶೈಕ್ಷಣಿಕ, ಕ್ರೀಡೆ, ರಾಜಕೀಯ, ವಾಣಿಜ್ಯ, ವಿಜ್ಞಾನ, ಕೃಷಿ ಮತ್ತಿತರ ಕ್ಷೇತ್ರದಲ್ಲಿ ಮುಂದಿದ್ದಾರೆ. ಮನೆಯ ಹೆಣ್ಣು ಮಕ್ಕಳಿಗೆ ಕೊಡುವ ಶಿಕ್ಷಣದಿಂದ ಕುಟುಂಬ ಉತ್ತಮ ಸ್ಥಿತಿಯಲ್ಲಿರಲು ಕಾರಣರಾಗಿದ್ದಾರೆ ಎಂದರು. 
      
ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಉಪ ನಿರ್ದೇಶಕರಾದ ಮಮ್ತಾಜ್‌ ಅವರು ಮಾತನಾಡಿ ಪ್ರತಿಯೊಬ್ಬರೂ ಮಹಿಳೆಯ ಮನಸ್ಥಿತಿಯನ್ನು ಅರಿತುಕೊಳ್ಳಬೇಕು. ಸತಿ ಸಹಗಮನದಂತಹ ಅನಿಷ್ಠ ವ್ಯವಸ್ಥೆಗಳು ತೊಲಗಿದ್ದರೂ ಸಹ ಬಾಲ್ಯವಿವಾಹ, ವರದಕ್ಷಿಣೆ, ಹೆಣ್ಣು ಭ್ರೂಣ ಹತ್ಯೆಯಂತಹ ಪಿಡುಗುಗಳು ಅಲ್ಲಲ್ಲಿ ಕೇಳಿ ಬರುತ್ತಿವೆ.  ವರದಕ್ಷಿಣೆ ಪಡೆಯುವುದಾಗಲಿ, ಕೊಡುವುದಾಗಲಿ ಮಾಡಬಾರದು, ಆಸ್ತಿಯಲ್ಲಿ ಸಹ ಮಹಿಳೆಯರಿಗೆ ಸಮಾನ ಹಕ್ಕಿದೆ ಎಂಬುದನ್ನು ಪ್ರತಿಯೊಬ್ಬರೂ ತಿಳಿಯಬೇಕಿದೆ ಎಂದರು. 

ದೇಶದಲ್ಲಿ ಪ್ರತಿ 100 ಮಹಿಳೆಯರಲ್ಲಿ  ಒಬ್ಬರ ಮೇಲೆ ದೌರ್ಜನ್ಯಗಳು ನಡೆಯುತ್ತಿದೆ. ಆದರೆ ಯಾರೂ ಅದನ್ನು ಬಹಿರಂಗ ಪಡಿಸುವಲ್ಲಿ ಮುಂದಾಗುತ್ತಿಲ್ಲ. ಇಂತಹ ಸಂದರ್ಭದಲ್ಲಿ ಇಲಾಖೆ ಹಾಗೂ ಮಹಿಳಾ ಸಂಘಟನೆಗಳ ನೆರವು ಪಡೆದುಕೊಳ್ಳುವಂತಾಗಬೇಕು. ಪ್ರತಿ ಮಹಿಳೆಯು ಸಹಭಾಗಿತ್ವದಲ್ಲಿ ಬದುಕುವಂತೆ ಆಗಬೇಕು. ಮಹಿಳೆಗಿರುವ ಸಾಮಾಜಿಕ ಕಟ್ಟುಪಾಡುಗಳನ್ನು ತೊರೆದು ಉತ್ತಮ ಜೀವನ ನಡೆಸಬೇಕು ಎಂದು  ಮಮ್ತಾಜ್‌ ಅವರು ತಿಳಿಸಿದರು.   

ಸಮ್ಮಾನ ಕಾರ್ಯಕ್ರಮ
ಜಿಲ್ಲಾ ಮಟ್ಟದ ಅತ್ಯುತ್ತಮ ಸ್ತ್ರೀ ಶಕ್ತಿ ಗುಂಪಾದ ಶನಿವಾರಸಂತೆಯ ತ್ಯಾಗರಾಜ ಕಾಲೋನಿಯ ಸೃಷ್ಟಿ ಸ್ತ್ರೀ ಶಕ್ತಿ, ಮಡಿಕೇರಿ ತಾಲ್ಲೂಕು ಮಟ್ಟದ ಅತ್ಯುತ್ತಮ ಸ್ತ್ರೀ ಶಕ್ತಿ ಗುಂಪಾದ ಭಾಗಮಂಡಲದ ಕೋಕಿಲಾ ಸ್ತ್ರೀ ಶಕ್ತಿ, ವಿರಾಜಪೇಟೆ ತಾಲ್ಲೂಕು ಸ್ತ್ರೀ ಶಕ್ತಿ ಗುಂಪಾದ ಬಾಳಲೆಯ ಶ್ರೀಲಕ್ಷ್ಮೀ  ಸ್ತ್ರೀ ಶಕ್ತಿ ಸಂಘಗಳಿಗೆ ಪ್ರಶಸ್ತಿ ಪತ್ರ ಹಾಗೂ ಬಹುಮಾನ ನಿಡಲಾಯಿತು. ವಿರಾಜಪೇಟೆ ತಾಲ್ಲೂಕಿನ ಕಲ್ಲುಬಾಣಿಯ ಅಂಗನವಾಡಿ ಕಾರ್ಯಕರ್ತೆ ಗಿರಿಜಾ ಅವರಿಗೆ ರಾಷ್ಟ್ರ ಮಟ್ಟದ ಅತ್ಯುತ್ತಮ ಅಂಗನವಾಡಿ ಕಾರ್ಯಕರ್ತೆ ಪ್ರಶಸ್ತಿ ಪಡೆದಿದ್ದು ಅವರನ್ನು ಜಿಲ್ಲಾ ಮಟ್ಟದಲ್ಲಿ ಸಮ್ಮಾನಿಸಲಾಯಿತು.   

Advertisement

Udayavani is now on Telegram. Click here to join our channel and stay updated with the latest news.

Next