Advertisement

ಅಭಿವೃದ್ಧಿ ಕಾರ್ಯಗಳೇ ಕಾಂಗ್ರೆಸ್‌ ಗೆಲುವಿಗೆ ಶ್ರೀರಕ್ಷೆ

06:25 AM Mar 23, 2018 | Team Udayavani |

ಬೈಂದೂರು ವಿಧಾನಸಭಾ ಕ್ಷೇತ್ರದಲ್ಲಿ ಶಾಸಕ ಕೆ. ಗೋಪಾಲ ಪೂಜಾರಿ ಅವರು ಅಭಿವೃದ್ಧಿಗೆ ಒತ್ತು ನೀಡಿದ್ದು ಇಲ್ಲಿ ಆಗಿರುವ ಅಭಿವೃದ್ಧಿ ಕೆಲಸಗಳೇ ಕಾಂಗ್ರೆಸ್‌ಗೆ ಗೆಲುವು ತಂದು ಕೊಡಲಿವೆ ಎನ್ನುವುದು ಬೈಂದೂರು ಬ್ಲಾಕ್‌ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ಮದನ್‌ ಕುಮಾರ್‌ ಅವರ ಅಭಿಮತ.

Advertisement

ಜಿ.ಪಂ., ತಾ.ಪಂ. ಸದಸ್ಯರಾಗಿ, ಜಿಲ್ಲಾ ಕಾಂಗ್ರೆಸ್‌ ಸಮಿತಿಯ ಸದಸ್ಯರಾಗಿ, ಯುವ ಕಾಂಗ್ರೆಸ್‌ನಲ್ಲಿ ಸಕ್ರಿಯರಾಗಿ ತೊಡಗಿಸಿಕೊಂಡ ಅನುಭವ ಮದನ್‌ ಕುಮಾರ್‌ ಅವರದು.

ಚುನಾವಣೆಗೆ ಪಕ್ಷದ ತಯಾರಿ ಹೇಗಿದೆ ?
ಬೂತ್‌ ಮಟ್ಟದಲ್ಲಿ ಪಕ್ಷವನ್ನು ಸಂಘಟಿಸುವುದರ ಕಡೆಗೆ ಹೆಚ್ಚಿನ ಒತ್ತು ನೀಡಿದ್ದು, ಕ್ಷೇತ್ರದಲ್ಲಿರುವ ಎಲ್ಲ 243 ಬೂತ್‌ಗಳಲ್ಲಿಯೂ ಸಭೆಗಳನ್ನು ನಡೆಸಲಾಗಿದೆ. ಗ್ರಾಮೀಣ ಕಾಂಗ್ರೆಸ್‌ ಸಭೆಗಳನ್ನು ಕೂಡ ಮಾಡಿದ್ದು, ಸರಕಾರದ, ಶಾಸಕರ ಅಭಿವೃದ್ಧಿ ಕೆಲಸಗಳನ್ನು ಜನರಿಗೆ ತಿಳಿಸುವ ಕಾರ್ಯಗಳನ್ನು ಪಕ್ಷದ ಕಾರ್ಯಕರ್ತರು ಮಾಡುತ್ತಿದ್ದಾರೆ.
 
ಅಭ್ಯರ್ಥಿ ಆಯ್ಕೆ ಅಂತಿಮಗೊಂಡಿದೆಯೇ?
ಹೌದು. ನಾಲ್ಕು ಬಾರಿ ಗೆದ್ದಿರುವ ಶಾಸಕ ಗೋಪಾಲ ಪೂಜಾರಿ ಅವರೇ ಮತ್ತೆ ಕಾಂಗ್ರೆಸ್‌ನಿಂದ ಒಮ್ಮತದ ಅಭ್ಯರ್ಥಿಯಾಗಿದ್ದು, ಇದರಲ್ಲಿ ಯಾವುದೇ ಗೊಂದಲವಿಲ್ಲ. 

ಚುನಾವಣೆಗೆ ಕಾಂಗ್ರೆಸ್‌ ಪ್ರಮುಖ ಅಜೆಂಡಾಗಳೇನು?
ಬೈಂದೂರು ಭಾಗದಲ್ಲಿ ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡು ಹುಡುಕುವ ನಿಟ್ಟಿನಲ್ಲಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯನ್ನು ನಾಡ, ಪಡುಕೋಣೆಗೆ ವಿಸ್ತರಿಸಲಾಗುವುದು. ಆಸ್ಕರ್‌ ಫೆರ್ನಾಂಡಿಸ್‌ ಅವರ ಆದರ್ಶ ಗ್ರಾಮವಾದ ಶಿರೂರಿನ ಸುಬ್ಬರಾಡಿಯಲ್ಲಿ ವೆಂಟೆಡ್‌ ಡ್ಯಾಂ ನಿರ್ಮಿಸಿ ಉಪ್ಪು ನೀರನ್ನು ಸಿಹಿ ನೀರನ್ನಾಗಿ ಪರಿವರ್ತಿಸಲು ಯೋಜನೆ ಸಿದ್ಧವಾಗಿದೆ. ಬೈಂದೂರಲ್ಲಿ 5 ಕೋ.ರೂ. ವೆಚ್ಚದಲ್ಲಿ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣ, 6 ಕೋ.ರೂ. ವೆಚ್ಚದಲ್ಲಿ ಕೆಎಸ್‌ಆರ್‌ಟಿಸಿ ಡಿಪೋ ನಿರ್ಮಾಣವಾಗಲಿದೆ. ಬೈಂದೂರು ತಾಲೂಕನ್ನು ಘೋಷಿಸಿದ್ದು, ಇದೆಲ್ಲವೂ ಕಾಂಗ್ರೆಸ್‌ ಗೆಲುವಿಗೆ ಪೂರಕವಾಗಲಿದೆ. 

ಪಕ್ಷದಿಂದ ಬೈಂದೂರಿಗೆ ಪ್ರಮುಖ ಆಶ್ವಾಸನೆಗಳೇನು?
ಹೊಸ ತಾಲೂಕಿಗೆ ಅಗತ್ಯವಿರುವ ಎಲ್ಲ ಸೌಕರ್ಯಗಳನ್ನು ತ್ವರಿತಗತಿಯಲ್ಲಿ ಒದಗಿಸಲು ಪ್ರಯತ್ನಿಸಲಾಗುವುದು. ಮೀನುಗಾರರ ಸಮಸ್ಯೆಗೆ ಸೂಕ್ತ ಪರಿಹಾರ, ರೈತರಿಗೆ ಕಡಿಮೆ ಬಡ್ಡಿದರದಲ್ಲಿ ಸಾಲ ಸೌಲಭ್ಯಗಳೆಲ್ಲವನ್ನು ನೀಡಲಾಗುವುದು.

Advertisement

ಕಾಂಗ್ರೆಸ್‌ ಗೆಲ್ಲುವ ವಿಶ್ವಾಸವಿದೆಯೇ?
ಬೈಂದೂರಲ್ಲಿ ಕಾಂಗ್ರೆಸ್‌ ಗೆಲ್ಲುವುದರಲ್ಲಿ ಯಾವುದೇ ಸಂಶಯ ಬೇಡ. ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಶಾಸಕ ಗೋಪಾಲ ಪೂಜಾರಿ ಅವರು ಶ್ರಮಿಸಿದ್ದು, ಹಿಂದೆಂದೂ ಕಾಣದ ಅಭಿವೃದ್ಧಿ ಕಾರ್ಯಗಳು ಇಲ್ಲಿ ಆಗಿವೆ. ಕ್ಷೇತ್ರದ ಮೂಲೆ-ಮೂಲೆಗಳಿಗೂ ರಸ್ತೆ ಸಂಪರ್ಕ, ಸೇತುವೆ ನಿರ್ಮಾಣವಾಗಿದೆ. ಕಳೆದ ಬಾರಿ 33 ಸಾವಿರ ಮತಗಳಿಂದ ಗೆದ್ದಿದ್ದು, ಈ ಬಾರಿ ಅದಕ್ಕಿಂತಲೂ ಅಧಿಕ ಮತಗಳ ಅಂತರದಿಂದ ಗೆಲ್ಲುವ ವಿಶ್ವಾಸವಿದೆ.

  – ಪ್ರಶಾಂತ್‌ ಪಾದೆ

Advertisement

Udayavani is now on Telegram. Click here to join our channel and stay updated with the latest news.

Next