Advertisement

ಶಿಕ್ಷಣ ಇಲಾಖೆಗೇ ಗೊತ್ತಿಲ್ಲ ಶಾಲೆಯಿಂದ ಹೊರಗುಳಿದ ಮಕ್ಕಳ ಮಾಹಿತಿ!

04:30 PM Dec 17, 2018 | |

ಬಳ್ಳಾರಿ: ಪ್ರಸಕ್ತ ಶೈಕ್ಷಣಿಕ ವರ್ಷ ಕೆಲವೇ ತಿಂಗಳಲ್ಲಿ ಕೊನೆಗೊಳ್ಳಲಿದ್ದು ಇಲ್ಲಿನ ಸಾರ್ವಜನಿಕ ಶಿಕ್ಷಣ ಇಲಾಖೆಯಲ್ಲಿ ಪ್ರಸಕ್ತ ಸಾಲಿನಲ್ಲಿ ಶಾಲೆಯಿಂದ ಹೊರಗುಳಿದ ಮಕ್ಕಳ ಬಗ್ಗೆ ಮಾಹಿತಿಯೇ ಇಲ್ಲ. ಒಂದು ವೇಳೆ ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಪತ್ತೆ ಹಚ್ಚಿದರೂ ಸಹ ಪ್ರಸಕ್ತ ವರ್ಷದ ಶಿಕ್ಷಣದಿಂದ ಅವರು ವಂಚಿತರಾಗಲಿದ್ದಾರೆ.

Advertisement

ಪ್ರತಿವರ್ಷ ಶೈಕ್ಷಣಿಕ ವರ್ಷ ಆರಂಭವಾಗುತ್ತಿದ್ದಂತೆ ಸಾರ್ವಜನಿಕ ಶಿಕ್ಷಣ ಇಲಾಖೆ ಶಾಲೆಯಿಂದ ಹೊರಗುಳಿದ ಮಕ್ಕಳ ಬಗ್ಗೆ ಜಿಲ್ಲೆಯಾದ್ಯಂತ ಸಮೀಕ್ಷೆ ನಡೆಸಿ ವರದಿ ಸಿದ್ಧಪಡಿಸಬೇಕು. ಜಿಲ್ಲೆಯಲ್ಲಿ ಎಷ್ಟು ಮಕ್ಕಳು ಶಾಲೆಯಿಂದ ಹೊರಗುಳಿದಿದ್ದಾರೆ. ಯಾವುದಾದರೂ ಒಬ್ಬ ವಿದ್ಯಾರ್ಥಿ ತಾನು ಓದುತ್ತಿದ್ದ ಶಾಲೆಯನ್ನು ಬಿಟ್ಟಿದ್ದರೆ, ಬೇರೆ ಯಾವ ಶಾಲೆಗೆ ಸೇರಿದ್ದಾನೆ? ಎಲ್ಲೂ ಸೇರಿಲ್ಲವಾದರೆ ಆ ಬಾಲಕ ಎಲ್ಲಿದ್ದಾನೆ? ಏಕೆ ಶಾಲೆ ಬಿಟ್ಟಿದ್ದಾನೆ? ಶಾಲೆಗೆ ಬರದಿರಲು ಕಾರಣವೇನು? ಎಂಬಿತ್ಯಾದಿ ವಿಷಯಗಳನ್ನು ಕಲೆ ಹಾಕಬೇಕು.

ಕಳೆದ 2017-18ನೇ ಸಾಲಿನಲ್ಲಿ ಜಿಲ್ಲೆಯಿಂದ 615 ಮಕ್ಕಳು ಶಾಲೆಯಿಂದ ಹೊರಗುಳಿದಿದ್ದು, ಇದರಲ್ಲಿ 235 ಮಕ್ಕಳನ್ನು ಪುನಃ ಶಾಲೆಗೆ ಸೇರಿಸಿ ಮುಖ್ಯವಾಹಿನಿಗೆ ತರಲಾಗಿದೆ. ಆದರೆ, ಪ್ರಸಕ್ತ ವರ್ಷ ಜಿಲ್ಲೆಯಲ್ಲಿ ಎಷ್ಟು ಮಕ್ಕಳು ಶಾಲೆಯಿಂದ ಹೊರಗುಳಿದಿದ್ದಾರೆ ಎಂಬ ಮಾಹಿತಿ ಸಾರ್ವಜನಿಕ ಶಿಕ್ಷಣ ಇಲಾಖೆ ಬಳಿ ಇಲ್ಲದಿರದಿರುವುದು ಅಚ್ಚರಿಗೆ ಕಾರಣವಾಗಿದೆ.

ಸಮೀಕ್ಷೆಯಲ್ಲಿ ವ್ಯತ್ಯಾಸ: ಶಾಲೆಯಿಂದ ಹೊರಗುಳಿದಿದ್ದ ಮಕ್ಕಳನ್ನು ಕಳೆದ ಕೆಲ ವರ್ಷಗಳಿಂದ ಸಾರ್ವಜನಿಕ ಶಿಕ್ಷಣ ಇಲಾಖೆ, ಕಾರ್ಮಿಕ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸೇರಿ ಇನ್ನಿತರೆ ಎನ್‌ಜಿಒಗಳು ಪ್ರತ್ಯೇಕವಾಗಿ ಸಮೀಕ್ಷೆ ನಡೆಸುತ್ತಿದ್ದವು. ಇಲಾಖೆಗಳು ಸಂಗ್ರಹಿಸುತ್ತಿದ್ದ ಶಾಲೆ ಬಿಟ್ಟ ಮಕ್ಕಳ ಅಂಕಿ-ಸಂಖ್ಯೆಗಳಲ್ಲಿ ವ್ಯತ್ಯಾಸ ಕಂಡು ಬರುತ್ತಿತ್ತು. ಶಿಕ್ಷಣ ಇಲಾಖೆ ಅಂಕಿ-ಸಂಖ್ಯೆಗಳು ಒಂದಿದ್ದರೆ, ಕಾರ್ಮಿಕ ಇಲಾಖೆಯ ಅಂಕಿ-ಅಂಶಗಳ ನಡುವೆ ಏರುಪೇರಾಗುತ್ತಿತ್ತು. ಇದರಿಂದ ಯಾವ ಇಲಾಖೆಯ ಅಂಕಿ-ಅಂಶಗಳು ವಾಸ್ತವತೆಗೆ ಹತ್ತಿರವಾಗಿವೆ ಎಂಬುದನ್ನು ಅರಿಯಲು ಆಯಾ ಇಲಾಖೆಗಳ ಅಧಿಕಾರಿಗಳಿಗೂ ತಲೆನೋವಾಗಿ ಪರಿಣಮಿಸುತ್ತಿತ್ತು. ಇದರಿಂದ ಎಲ್ಲ ಇಲಾಖೆಗಳ ಆಯುಕ್ತರು ಸಭೆ ಸೇರಿ ಒಗ್ಗೂಡಿ ಸಮೀಕ್ಷೆ ನಡೆಸುವಂತೆ ನಿರ್ಣಯ ಕೈಗೊಳ್ಳಲಾಗಿದೆ. ಅದರಂತೆ ಈ ಎಲ್ಲ ಇಲಾಖೆಗಳ ಅಧಿಕಾರಿಗಳು ಕಳೆದ ನವೆಂಬರ್‌ ತಿಂಗಳಲ್ಲಿ ಜಿಲ್ಲೆಯಲ್ಲಿ ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಸಮೀಕ್ಷೆ ನಡೆಸಿದ್ದು, ಕಳೆದ ನ.28ಕ್ಕೆ ಸಮೀಕ್ಷೆ ಕಾರ್ಯ ಪೂರ್ಣಗೊಂಡಿದೆ. ಅದನ್ನು ಮತ್ತೂಮ್ಮೆ ಪರಿಶೀಲನೆ ನಡೆಸಿ ಕ್ರೋಢೀಕರಿಸಿ ಮಕ್ಕಳ ಸಂಖ್ಯೆ ಪತ್ತೆ ಹಚ್ಚಬೇಕಿದ್ದು, ಮುಂದಿನ ತಿಂಗಳೊಳಗಾಗಿ ಶಾಲೆಯಿಂದ ಹೊರಗುಳಿದ ಮಕ್ಕಳ ಬಗ್ಗೆ ಸ್ಪಷ್ಟ ಮಾಹಿತಿ ನೀಡಲಾಗುತ್ತದೆ ಎಂಬುದು ಶಿಕ್ಷಣ ಇಲಾಖೆಯ ಅಧಿಕಾರಿಗಳ ಸಮರ್ಥನೆ.

ಹೊರಗುಳಿದ ಮಕ್ಕಳು ಶಿಕ್ಷಣದಿಂದ ವಂಚಿತ: ಜಿಲ್ಲೆಯಲ್ಲಿ ಶಾಲೆಯಿಂದ ಹೊರಗುಳಿಂದ ಮಕ್ಕಳನ್ನು ಪತ್ತೆ ಹಚ್ಚಲು ಪ್ರಸಕ್ತ
ವರ್ಷ ಶಿಕ್ಷಣ ಇಲಾಖೆ, ಕಾರ್ಮಿಕ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಎನ್‌ಜಿಒ ಸಂಸ್ಥೆಗಳು ಸೇರಿ ಒಟ್ಟು 12 ಇಲಾಖೆಗಳಿಂದ ಸಮೀಕ್ಷಾ ಕಾರ್ಯ ನಡೆಸುತ್ತಿದೆ. ಈ ಎಲ್ಲ ಇಲಾಖೆಗಳ ಸಮೀಕ್ಷೆಯಿಂದ ಪತ್ತೆಯಾಗುವ ಮಕ್ಕಳು ಪ್ರಸಕ್ತ ವರ್ಷದ ಶಿಕ್ಷಣದಿಂದ ವಂಚಿತಗೊಳ್ಳುವ ಸಾಧ್ಯತೆಯಿದೆ. ಕಾರಣ, ಪ್ರಸಕ್ತ ಶೈಕ್ಷಣಿಕ ವರ್ಷ ಇನ್ನೆರಡು ತಿಂಗಳಲ್ಲಿ ಪೂರ್ಣಗೊಳ್ಳಲಿದೆ. ಮೇಲಾಗಿ ಶಾಲೆಗಳಲ್ಲೂ ಪಾಠಗಳು ಬಹುತೇಕ ಮುಗಿದಿರುತ್ತದೆ. 

Advertisement

ಇಂಥ ಸಂದರ್ಭದಲ್ಲಿ ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಪತ್ತೆ ಹಚ್ಚಿ ಪುನಃ ಮರಳಿ ಶಾಲೆಗೆ ಕರೆತಂದು ಮುಖ್ಯವಾಹಿನಿಗೆ ತಂದರೂ, ಆ ಮಕ್ಕಳಿಗೆ ಪೂರ್ಣ ಪ್ರಮಾಣದ ಪಾಠಗಳು ಲಭ್ಯವಾಗುವುದು ಕಷ್ಟ. ಪರಿಣಾಮ ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಪತ್ತೆ ಹಚ್ಚಿದರೂ ಶಿಕ್ಷಣ ಇಲಾಖೆಯ ವಿಳಂಬ ಧೋರಣೆಯಿಂದ ಪ್ರಸಕ್ತ ವರ್ಷ ಶಿಕ್ಷಣದಿಂದ ವಂಚಿತರಾಗುವ ಸಾಧ್ಯತೆಯಿದೆ.

12 ಇಲಾಖೆಗಳಿಂದ ಮಕ್ಕಳ ಸರ್ವೇ
ಶಾಲೆಯಿಂದ ಹೊರಗುಳಿದ ಮಕ್ಕಳ ಪತ್ತೆಕಾರ್ಯವನ್ನು 12 ಇಲಾಖೆಗಳ ಅಧಿಕಾರಿಗಳಿಂದ ಸರ್ವೇ ನಡೆಸಲಾಗುತ್ತದೆ.
ಸಾರ್ವಜನಿಕ ಶಿಕ್ಷಣ ಇಲಾಖೆ, ಪೊಲೀಸ್‌ ಇಲಾಖೆ, ಕಾರ್ಮಿಕ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮತ್ತು ಸರ್ಕಾರೇತರ ಸಂಘ-ಸಂಸ್ಥೆಗಳ ಸಹಯೋಗದಲ್ಲಿ ಸಮೀಕ್ಷಾ ಕಾರ್ಯ ನಡೆಯುತ್ತಿದೆ.

ಶಾಲೆಯಿಂದ ಹೊರಗುಳಿದ ಮಕ್ಕಳ ಪತ್ತೆಗಾಗಿ ಕಳೆದ ನವೆಂಬರ್‌ ತಿಂಗಳಲ್ಲಿ ಸಮೀಕ್ಷೆ ನಡೆಸಲಾಗಿತ್ತು. ಶಿಕ್ಷಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಕಾರ್ಮಿಕ ಇಲಾಖೆ ಸೇರಿ ಒಟ್ಟು 12 ಇಲಾಖೆಗಳು ಸಮೀಕ್ಷಾ ಕಾರ್ಯದಲ್ಲಿ ಭಾಗಿಯಾಗಿವೆ. ಮಕ್ಕಳ ಸಂಖ್ಯೆಯನ್ನು ಕ್ರೋಢೀಕರಿಸಲಾಗುತ್ತಿದೆ. ಇನ್ನೊಂದು ತಿಂಗಳಲ್ಲಿ ಶಾಲೆಯಿಂದ ಎಷ್ಟು ವಿದ್ಯಾರ್ಥಿಗಳು ಹೊರಗುಳಿದಿದ್ದಾರೆ. ಎಷ್ಟು ವಿದ್ಯಾರ್ಥಿಗಳನ್ನು ಮುಖ್ಯವಾಹಿನಿಗೆ ತರಲಾಗಿದೆ ಎಂಬ ಮಾಹಿತಿ
ಲಭ್ಯವಾಗಲಿದೆ. ಕಳೆದ ವರ್ಷ 615 ವಿದ್ಯಾರ್ಥಿಗಳು ಶಾಲೆಯಿಂದ ಹೊರಗುಳಿದಿದ್ದು, 235 ವಿದ್ಯಾರ್ಥಿಗಳನ್ನು
ಮುಖ್ಯವಾಹಿನಿಗೆ ತರಲಾಗಿದೆ. ಪ್ರಸಕ್ತ ವರ್ಷ ಇನ್ನು ಪ್ರಕ್ರಿಯೆ ನಡೆಯುತ್ತಿದೆ.
ಎನ್‌.ಶ್ರೀಧರನ್‌, ಡಿಡಿಪಿಐ, ಬಳ್ಳಾರಿ.

„ವೆಂಕೋಬಿ ಸಂಗನಕಲ್ಲು

Advertisement

Udayavani is now on Telegram. Click here to join our channel and stay updated with the latest news.

Next