ಮೊಳಕಾಲ್ಮೂರು: ಪತ್ರಕರ್ತೆ, ಚಿಂತಕಿ ಗೌರಿಲಂಕೇಶ್ ಅವರನ್ನು ಗುಂಡಿಕ್ಕಿ ಹತ್ಯೆ ಮಾಡಿರುವವರನ್ನು ಕೂಡಲೇ ಬಂಧಿಸಬೇಕೆಂದು ಒತ್ತಾಯಿಸಿ ಭಾರತ ಕಮ್ಯುನಿಷ್ಟ್ ಪಕ್ಷದ ತಾಲೂಕು ಸಮಿತಿ ಬುಧವಾರ ಪಟ್ಟಣದ ತಾಲೂಕು ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಸಿತು.
ಸಿ.ಪಿ.ಐ.(ಎಂ.) ನ ಜಿಲ್ಲಾ ಕಾರ್ಯದರ್ಶಿ ಡಿ.ಎಂ. ಮಲಿಯಪ್ಪ ಮಾತನಾಡಿ, ಪತ್ರಕರ್ತೆ ಗೌರಿಲಂಕೇಶ್ ಅವರನ್ನು ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆ ಮಾಡಿರುವುದು ಪ್ರಜಾಸತ್ತಾತ್ಮಕ ಕಗ್ಗೊಲೆಯಾಗಿದೆ. ರಾಜ್ಯದಲ್ಲಿ ಕೋಮು ಮತ್ತು ಜಾತಿವಾದಿಗಳು ಎಡಪಂಥೀಯ ಚಿಂತನೆಗಳನ್ನು ಮತ್ತು ಏಳಿಗೆಗಳನ್ನು ಸಹಿಸದೆ ಇಂತಹ ದುಷ್ಕೃತ್ಯಗಳನ್ನು ಎಸಗಲಾಗುತ್ತಿದೆ. ಇದೇ ಮಾದರಿಯಲ್ಲಿ ಸಾಹಿತಿ ಕಲಬುರಗಿ ಅವರನ್ನು ಹತ್ಯೆ ಮಾಡಿ ಎರಡು ವರ್ಷಗಳು ಕಳೆದರೂ ದುಷ್ಕರ್ಮಿಗಳನ್ನು ಬಂಸುವಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಸಂಪೂರ್ಣ ವಿಫಲವಾಗಿವೆ ಎಂದು ದೂರಿದರು.
ಈ ಬೆನ್ನಲ್ಲೆ ಪತ್ರಕರ್ತೆ ಗೌರಿಲಂಕೇಶ್ ಅವರನ್ನು ಹತ್ಯೆ ಮಾಡಿರುವುದು ಅತ್ಯಂತ ಹೇಯ ಕೃತ್ಯ. ಇಂತಹ ಭಯಾನಕ ಘಟನೆಗಳು ರಾಜ್ಯದಲ್ಲಿ ಎಗ್ಗಿಲ್ಲದೆ ನಡೆಯುತ್ತಿರುವುದು ರಾಜ್ಯಾಡಳಿತದ ಭದ್ರತೆಯ ಕೊರತೆ ಕಾಡುತ್ತಿದೆ. ಪತ್ರಕರ್ತೆ ಗೌರಿ ಲಂಕೇಶ್ ಅವರನ್ನು ಹತ್ಯೆ ಮಾಡಿದ ಕೊಲೆ ಗಡುಕರನ್ನು ಕೂಡಲೇ ಬಂಧಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಸಿ.ಐ.ಟಿ.ಯು.ನ ದಾನಸೂರನಾಯಕ ಮಾತನಾಡಿ, ರಾಜ್ಯದಲ್ಲಿ ಎಡಪಂಥೀಯ ಚಿಂತಕರು ಮತ್ತು ಬುದ್ಧಿಜೀವಿಗಳ ಕಗ್ಗೊಲೆ ನಡೆಯುವುದನ್ನು ಕೂಡಲೇ ನಿಲ್ಲಿಸಿ ಅವರನ್ನು ರಕ್ಷಿಸಬೇಕು. ರಾಜ್ಯದಲ್ಲಿ ಹೋರಾಟಗಾರರು ಬುದ್ಧಿಜೀವಿಗಳ ಕಗ್ಗೊಲೆ ನಡೆಯುತ್ತಿದ್ದರೂ ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ವೈಫಲ್ಯ ತೋರಿಸುತ್ತದೆ. ಮುಂದಿನ ದಿನಗಳಲ್ಲಿ ಗೂಂಡರಾಜ್ಯವಾಗುವುದನ್ನು ತಡೆದು ಪ್ರಜಾಸತ್ತಾತ್ಮಕತೆ ಉಳಿಸಲು ಮುಂದಾಗಬೇಕು ಎಂದು ಆಗ್ರಹಿಸಿದರು.
ರಾಜ್ಯ ಪ್ರಾಂತ ರೈತ ಸಂಘದ ತಾಲೂಕು ಅಧ್ಯಕ್ಷ ಎಚ್.ಎ. ಮಾರಣ್ಣ ಮಾತನಾಡಿ, ರಾಜ್ಯದ ಏಳ್ಗೆಗಾಗಿ ಹೋರಾಟ ಮಾಡುವ ಹೋರಾಟಗಾರರನ್ನು ಮತ್ತು ಶೋಷಿತರ ಧ್ವನಿಯಾಗಿರುವ ಬುದ್ಧಿಜೀವಿ ಪತ್ರಕರ್ತರನ್ನು ಹತ್ಯೆ ಮಾಡಿರುವ ಕೊಲೆಗಡುಕರನ್ನು ಕೂಡಲೇ ಬಂಧಿಸಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡಲಾಗುವುದೆಂದು ಎಚ್ಚರಿಸಿದರು. ಶಿರಸ್ತೇದಾರ ಶಿವಣ್ಣ ಅವರಿಗೆ ಗೌರಿ ಲಂಕೇಶ್ ಹಂತಕರನ್ನು ಬಂಧಿಸುವಂತೆ ಆಗ್ರಹಿಸ ಮನವಿ ಸಲ್ಲಿಸಲಾಯಿತು.
ಪ್ರತಿಭಟನೆಯಲ್ಲಿ ಸಿ.ಪಿ.ಐ.( ಎಂ) ನ ಪದಾಧಿಕಾರಿಗಳಾದ ಅಂಜಿನಿ, ಗುರ್ರಪ್ಪ, ಮುರಳಿಕೃಷ್ಣ, ಲಕ್ಷ್ಮಣ, ಜಯಣ್ಣ, ಸ್ತ್ರೀ ಶಕ್ತಿ ಸಂಘದ ಅಧ್ಯಕ್ಷೆ ಸರಸ್ವತಿ, ಕಾರ್ಯಕರ್ತೆಯರಾದ ಸರೋಜಮ್ಮ, ಪರಿಮಳ, ಶಾರದಾ, ಹಸೀನಾಬಿ, ಸರಸ್ವತಿ, ಅನುರಾಧಾ, ರತ್ನಮ್ಮ, ಶಾರದಮ್ಮ, ಲಕ್ಷ್ಮೀ, ಶಾಂತಮ್ಮ, ಸಾರಂಬೀ, ನಾಗಮ್ಮ ಹಾಗೂ ಹೆಚ್ಚಿನ ಕಾರ್ಯಕರ್ತರು ಭಾಗವಹಿಸಿದ್ದರು.