Advertisement

ಸರ್ಕಾರದ ಅಂಗಳ ತಲುಪಿದ ವಿದ್ಯಾರ್ಥಿಗಳ ಬೇಡಿಕೆ

02:32 PM Oct 13, 2022 | Team Udayavani |

ಬೆಂಗಳೂರು: ಜ್ಞಾನಭಾರತಿ ಆವರಣದಲ್ಲಿ ಸಾರ್ವಜನಿಕ ವಾಹನ ನಿಷೇಧಿಸುವಂತೆ ಆಗ್ರಹಿಸಿ ವಿದ್ಯಾರ್ಥಿಗಳು ನಡೆಸುತ್ತಿದ್ದ 3 ದಿನಗಳ ಹೋರಾಟ ಬುಧವಾರ ಅಂತ್ಯವಾಗಿದೆ. ಜ್ಞಾನಭಾರತಿ ಆವರಣದಲ್ಲಿ ಒಂದು ತಿಂಗಳೊಳಗೆ ಸಂಚಾರಿ ನಿಯಮ ಪಾಲನೆ ಮಾಡುವುದು ಹಾಗೂ ಕ್ಯಾಂಪಸ್‌ನಲ್ಲಿ ಸಾರ್ವಜನಿಕ ವಾಹನ ನಿಷೇಧ, ಅಪಘಾತಕ್ಕೆ ಒಳಗಾಗಿರುವ ವಿದ್ಯಾರ್ಥಿನಿಗೆ ಪರಿಹಾರ ನೀಡುವ ಕುರಿತು ಸರ್ಕಾರದೊಂದಿಗೆ ಚರ್ಚಿಸಿ ನಿರ್ಧರಿಸುವ ಬಗ್ಗೆ ಬುಧವಾರ ಸಂಜೆ ವಿವಿ ಆಡಳಿತ ಕಚೇರಿಯಲ್ಲಿ ನಡೆದ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ.

Advertisement

3 ಹಂತದಲ್ಲಿ ಪರಿಹಾರ ಕ್ರಮ: ಜ್ಞಾನಭಾರತಿ ಆವರಣದಲ್ಲಿ ಉಂಟಾಗಿರುವ ಸಮಸ್ಯೆಗೆ 3 ಹಂತದಲ್ಲಿ ಪರಿಹಾರ ಕಂಡುಕೊಳ್ಳಲು ಸಭೆಯಲ್ಲಿ ಸಲಹೆಗಳು ಕೇಳಿಬಂದಿವೆ. ಅಲ್ಪಾವಧಿ, ಮಧ್ಯಮ ಮತ್ತು ದೀರ್ಘಾವಧಿ ಪರಿಹಾರ ಕ್ರಮಗಳನ್ನು ಅಧಿಕಾರಿಗಳ ತಂಡ ನೀಡಿದೆ. ಮೊದಲ ಹಂತದಲ್ಲಿ ಒಂದು ತಿಂಗಳೊಳಗೆ ಸಂಚಾರ ನಿಯಮ ಪಾಲನೆಗೆ ಅವಶ್ಯವಿರುವ ಕ್ರಮಗಳನ್ನು ಕೈಗೊಳ್ಳುವುದು. 2 ಮತ್ತು 3ನೇ ಹಂತದಲ್ಲಿ ವಿಶ್ವವಿದ್ಯಾಲಯದ ಭದ್ರತೆ, ರಕ್ಷಣೆ ಕುರಿತ ಕ್ರಮಗಳನ್ನು ಕೈಗೊಳ್ಳಲು ಚರ್ಚಿಸಲಾಗಿದೆ ಎಂದು ವಿವಿ ಕುಲಸಚಿವ ಪ್ರೊ. ಎಂ. ಕೊಟ್ರೇಶ್‌ ತಿಳಿಸಿದ್ದಾರೆ.

ಸರ್ಕಾರದ ಮಟ್ಟದಲ್ಲಿ ತೀರ್ಮಾನ: ಆವರಣದೊಳಗೆ ವಾಹನ ಸಂಚಾರ ನಿರ್ಬಂಧಿಸುವುದು ಮತ್ತು ಅಪಘಾತಕ್ಕೆ ಒಳಗಾಗಿರುವ ವಿದ್ಯಾರ್ಥಿನಿಗೆ ಪರಿಹಾರ ಅಥವಾ ಉದ್ಯೋಗ ಕಲ್ಪಿಸುವ ಸಂಬಂಧ ಸರ್ಕಾರದ ಹಂತದಲ್ಲಿ ನಿರ್ಣಯ ಕೈಗೊಂಡು ತೀರ್ಮಾನಿಸಲು ಸಭೆಯಲ್ಲಿ ನಿರ್ಧರಿಸಿದೆ.

ಅಪಘಾತಕ್ಕೆ ಒಳಗಾದ ಮತ್ತೂಬ್ಬ ಸಂಶೋಧನಾ ವಿದ್ಯಾರ್ಥಿ ರಾಮಾಂಜನೇಯ ವಳ್ಳೂರು ಅವರು ನಿಮ್ಹಾನ್ಸ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅವರಿಗೆ ವಿಶ್ವವಿದ್ಯಾಲಯ ವತಿಯಿಂದ ವೈದ್ಯಕೀಯ ವೆಚ್ಚ ಭರಿಸಲು ತೀರ್ಮಾನಿಸಲಾಗಿದೆ. ಸಭೆಯಲ್ಲಿ ಬೆಂ.ವಿವಿ ಕುಲಪತಿ ಪ್ರೊ. ಎಸ್‌.ಎಂ. ಜಯಕರ್‌ ಶೆಟ್ಟಿ, ಪೊಲೀಸ್‌ ಅಧಿಕಾರಿಗಳಾದ ಪಶ್ಚಿಮ ವಿಭಾಗದ ಡಿಸಿಪಿ ಲಕ್ಷ್ಮಣ ನಿಂಬರಗಿ, ಪಶ್ಚಿಮ ಸಂಚಾರ ವಿಭಾಗದ ಡಿಸಿಪಿ ಕುಲದೀಪ್‌ಕುಮಾರ್‌ ಜೈನ್‌, ಬಿಬಿಎಂಪಿ ಜಂಟಿ ನಿರ್ದೇಶಕ ಡಾ. ಎಸ್‌. ನಾಗರಾಜ್‌, ಬಿಎಂಟಿಸಿ ಅಧಿಕಾರಿ ಶ್ರೀನಾಥ್‌, ವಿದ್ಯಾರ್ಥಿ ಸಂಘಟನೆಯ ಸಂಶೋಧನಾ ವಿದ್ಯಾರ್ಥಿ ಲೋಕೇಶ್‌ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.

ಪ್ರಮುಖ ತೀರ್ಮಾನಗಳು
*ವಿವಿ ಆವರಣದೊಳಗಿರುವ 28 ಅವೈಜ್ಞಾನಿಕ ರಸ್ತೆ ಉಬ್ಬುಗಳು (ಹಂಪ್ಸ್‌)ಗಳಿದ್ದು, ಅವುಗಳನ್ನು ತೆರವುಗೊಳಿಸಿ ಹೊಸದಾಗಿ ಅಳವಡಿಸುವುದು. ಹಂಪ್ಸ್‌ ಗಳ ಹಿಂದೆ-ಮುಂದೆ ಸೂಚನ ಫ‌ಲಕ ಹಾಗೂ ಬಿಳಿ ಬಣ್ಣದಲ್ಲಿ ಲೈನ್ಸ್‌ ಬರೆಯುವುದು.
* ಜ್ಞಾನಭಾರತಿಯ ಎಲ್ಲ ಪ್ರಮುಖ ರಸ್ತೆಗಳಿಗೆ ಬೀದಿ ದೀಪ ಮತ್ತು ಭದ್ರತಾ ದೃಷ್ಟಿಯಿಂದ
ಅವಶ್ಯವಿರುವ ಕಡೆ ಸಿಸಿ ಕ್ಯಾಮೆರಾ ಅಳವಡಿಸುವುದು.
* 150 ಬ್ಯಾರಿಕೇಡ್‌ಗಳನ್ನು ಅಳವಡಿಸುವ ಜತೆಗೆ ವಾಹನಗಳ ವೇಗಕ್ಕೆ ಕಡಿವಾಣ ಹಾಕುವುದು.
ಕನಿಷ್ಠ ವೇಗಮಿತಿಯಲ್ಲಿ ಚಲಿಸುವಂತೆ ಗಮನ ಹರಿಸುವುದು. ವಾಹನಗಳ ವೇಗ ಮಿತಿ
ಪಾಲನೆ ಮಾಡುವುದು
* ಸಂಚಾರಿ ಪೊಲೀಸರು ಸಂಚಾರ ನಿಯಮ ಉಲ್ಲಂಘಿಸುವವರಿಗೆ (ಹೆಲ್ಮೆಟ್‌ ಧರಿಸದಿರುವುದು, ಅತಿ ವೇಗ) ದಂಡ ವಿಧಿಸುವಂತಹ ಕ್ರಮ ಜರುಗಿಸುವುದು.
*ಕಾನೂನು ಮತ್ತು ಸುವ್ಯವಸ್ಥೆ ಕಾಯ್ದುಕೊಳ್ಳುವುದಕ್ಕಾಗಿ ಕಾಂಪೌಂಡ್‌ ನಿರ್ಮಿಸುವುದು. ವಿಶ್ವವಿದ್ಯಾಲಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಭದ್ರತಾ ಸಿಬ್ಬಂದಿ ನಿರ್ವಹಣೆ ಮಾಡುವುದಕ್ಕಾಗಿ ನಿವೃತ್ತ ಸೇನಾಧಿಕಾರಿ/ಪೊಲೀಸ್‌ ಅಧಿಕಾರಿ ನೇಮಿಸುವುದು. ಭದ್ರತಾ ಸಮಿತಿ ರಚಿಸುವುದು. (ಪ್ರಸ್ತುತ 3 ಪಾಳಿಯಲ್ಲಿ 153 ಮಂದಿ ಕಾರ್ಯನಿರ್ವಹಣೆ)
* ಅನಧಿಕೃತ ಅಂಗಡಿ ಮುಂಗಟ್ಟುಗಳನ್ನು ತೆರವು ಮಾಡುವುದು. ಶೈಕ್ಷಣಿಕ ಚಟುವಟಿಕೆಗಳಿಗೆ ಹೆಚ್ಚಿನ ಗಮನ ಹರಿಸಲು ಇನ್ನಿತರ ಕ್ರಮ ಕೈಗೊಳ್ಳುವುದು.
* ಸುಗಮ ಸಂಚಾರಕ್ಕಾಗಿ ಮೇಲ್ಸೇತುವೆ ಅಥವಾ ಅಂಡರ್‌ಪಾಸ್‌ ನಿರ್ಮಾಣ ಮಾಡುವುದು.
* ಪ್ರಸ್ತುತ ಜಾರಿಯಲ್ಲಿರುವ ರಾತ್ರಿ 10ರಿಂದ ಬೆಳಗ್ಗೆ 6ರ ವರೆಗಿನ ವಾಹನ ಸಂಚಾರ ನಿಯಮವನ್ನು ಎಂದಿನಂತೆ ಪಾಲನೆ ಮಾಡುವುದು
* ಬೆಳಗ್ಗೆ 6 ರಿಂದ ರಾತ್ರಿ 8 ರವರೆಗೆ ಸಾರ್ವಜನಿಕ ವಾಹನಗಳು ಸಂಚರಿಸಲು ಅವಕಾಶ ಮಾಡಿಕೊಡುವುದು.

Advertisement
Advertisement

Udayavani is now on Telegram. Click here to join our channel and stay updated with the latest news.

Next