ಮಲ್ಪೆ: ಕೇಂದ್ರ ಸರಕಾರ ನನೆಗುದಿಯಲ್ಲಿರುವ ರಾಜ್ಯದ ಯೋಜನೆಗಳನ್ನು ಶೀಘ್ರದಲ್ಲಿ ಜಾರಿಗೊಳಿಸಿ ಕರ್ನಾಟಕ ಅಭಿವೃದ್ಧಿಯತ್ತ ಸಾಗುವಂತೆ ಮಾಡಬೇಕೆಂದು ದೆಹಲಿ ಕನ್ನಡಿಗ ತುಳುವೆರ್ ಪತ್ರಿಕೆಗಳ ಸಂಪಾದಕ ಬಾ. ಸಾಮಗ ಆಗ್ರಹಿಸಿದರು.
ಅವರು ಕೊಡವೂರು ಹಳೆವಿದ್ಯಾರ್ಥಿ ಸಂಘ ಮತ್ತು ಯುವಕ ಸಂಘದ ವತಿಯಿಂದ ಕನ್ನಡ ರಾಜ್ಯೋತ್ಸವದಂದು ನಮ್ಮ ನಡಿಗೆ ಕನ್ನಡಕ್ಕಾಗಿ ಮಿಡಿಯುವ ಹಿರಿಯರೆಡೆಗೆ ಕಾರ್ಯಕ್ರಮದಲ್ಲಿ ಹೊರನಾಡಿನಲ್ಲಿ ಕನ್ನಡದ ಕಂಪನ್ನು ಪಸರಿಸುವಲ್ಲಿ ಅಪ್ರತಿಮ ಸೇವೆ ಸಲ್ಲಿಸಿದಕ್ಕಾಗಿ ಕೊಡವೂರು ಲಕ್ಷ್ಮೀ ನಗರದ ಅವರ ಸ್ವಗೃಹದಲ್ಲಿ ಸಮ್ಮಾನ ಸ್ವೀಕರಿಸಿ ಮಾತನಾಡಿದರು.
ಕರ್ನಾಟಕ ಸರಕಾರವು ದಿಲ್ಲಿಯಲ್ಲಿ ಕರ್ನಾಟಕ ಸಂಸ್ಕೃತಿ ಕೇಂದ್ರ ಜನಸಾಮಾನ್ಯರಿಗೆ ಅತಿಥಿಗೃಹ, ಮಹಿಳೆಯರ ಹಾಸ್ಟೆಲ್ ಸ್ಥಾಪಿಸಬೇಕೆಂದು ಮನವಿ ಮಾಡಿದರು.
ಸಾಹಿತಿ ಪೂರ್ಣಿಮಾ ಜನಾರ್ದನ್ ಕನ್ನಡನಾಡು, ನುಡಿಗಾಗಿ ಬಾ. ಸಾಮಗರು ಸಲ್ಲಿಸಿದ ಅನನ್ಯ ಸೇವೆಯನ್ನು ತಿಳಿಸಿದರು. ಯುವಕ ಸಂಘದ ಅಧ್ಯಕ್ಷ ಪ್ರಭಾತ್ ಕೋಟ್ಯಾನ್ ಅಧ್ಯಕ್ಷತೆ ವಹಿಸಿದ್ದರು. ನಗರಸಭಾ ಸದಸ್ಯ ವಿಜಯ ಕೊಡವೂರು. ಶಿಕ್ಷಕಿ ಮಲ್ಲಿಕಾ ದೇವಿ, ಪತ್ರಕರ್ತ ಜನಾರ್ದನ್ ಕೊಡವೂರು, ಹಳೆವಿದ್ಯಾರ್ಥಿ ಸಂಘದ ಅಧ್ಯಕ್ಷ ಬಾಲಕೃಷ್ಣ ಕೊಡವೂರು, ಸಲಹೆಗಾರರಾದ ಟಿ. ರಾಘವೇಂದ್ರ ರಾವ್, ಅಶೋಕ್ ಉದ್ದಿನಹಿತ್ಲು, ಶೇಖರ್ ಮಾಬ್ಯಾನ್, ಶರತ್‌ಚಂದರ್ ಉದ್ದಿನಹಿತ್ಲು ಉಪಸ್ಥಿತರಿದ್ದರು.
ಯುವಕ ಸಂಘದ ಕಾರ್ಯದರ್ಶಿ ದೀಕ್ಷಿತ್ ವಿ. ದೇವಾಡಿಗ ಸ್ವಾಗತಿಸಿದರು. ಸತೀಶ್ ಕೊಡವೂರು ನಿರೂಪಿಸಿದರು. ದೀಪಕ್ ವಿ. ದೇವಾಡಿಗ ವಂದಿಸಿದರು.