Advertisement

ಯೋಜನೆಗಳ ವಿಳಂಬ ನಾಚಿಕೆಗೇಡು

11:33 AM Jan 20, 2018 | Team Udayavani |

ಬೆಂಗಳೂರು: ಸ್ವಾತಂತ್ರ್ಯ ಬಂದು 60 ವರ್ಷ ಕಳೆದರೂ ಮೂಲ ಸೌಕರ್ಯ ಹಾಗೂ ನಿರ್ಮಾಣ ಯೋಜನೆಗಳ ಅನುಮತಿಗಾಗಿ ತಿಂಗಳಾನುಗಟ್ಟಲೇ ಕಾಯಬೇಕಾದ ಸ್ಥಿತಿ ಇರುವುದು ನಾಚಿಕೆಗೇಡಿನ ಸಂಗತಿ ಎಂದು ಉಪರಾಷ್ಟ್ರಪತಿ ಎಂ.ವೆಂಕಯ್ಯನಾಯ್ಡು ವಿಷಾದಿಸಿದರು.

Advertisement

ಬಿಲ್ಡರ್ ಅಸೋಸಿಯೇಷನ್‌ ಆಫ್ ಇಂಡಿಯಾ ಸಂಸ್ಥೆಯು ನಗರದಲ್ಲಿ ಹಮ್ಮಿಕೊಂಡಿದ್ದ 28ನೇ ಸಮ್ಮೇಳನವನ್ನು ಶುಕ್ರವಾರ ಉದ್ಘಾಟಿಸಿ ಮಾತನಾಡಿದ ಅವರು, ತಂತ್ರಜ್ಞಾನ ಇಷ್ಟೆಲ್ಲಾ ಮುಂದುವರಿದಿದ್ದರೂ ಮೂಲ ಸೌಕರ್ಯ, ನಿರ್ಮಾಣ ಯೋಜನೆಗಳಿಗೆ ಅನುಮೋದನೆ ಪಡೆಯಲು 18ರಿಂದ 24 ತಿಂಗಳು ತೆಗೆದುಕೊಳ್ಳುತ್ತಿರುವುದು ಎಷ್ಟು ಸರಿ. ಮುಂಬೈ, ದೆಹಲಿಯಲ್ಲಿ 60 ದಿನದಲ್ಲಿ ಅನುಮೋದನೆ ನೀಡುವ ವ್ಯವಸ್ಥೆಯಿದೆ. ಇದೇ ಮಾದರಿ ದೇಶದೆಲ್ಲೆಡೆ ಜಾರಿಯಾಗಬೇಕು ಎಂದು ಹೇಳಿದರು.

ವ್ಯವಸ್ಥೆ ಬೇಕು: ಯಾವುದೇ ಯೋಜನೆಗೆ 60 ದಿನಗಳಲ್ಲಿ ಅನುಮೋದನೆ ನೀಡದಿದ್ದರೆ 61ನೇ ದಿನ ಯಾಂತ್ರಿಕವಾಗಿ ಅನುಮೋದನೆ ಸಿಗುವ ವ್ಯವಸ್ಥೆ ತರಬೇಕು. ನಿಯಮ ಪಾಲಿಸದ ಅಧಿಕಾರಿ ವಿರುದ್ಧ ಕ್ರಮ ಜರುಗಿಸುವ ವ್ಯವಸ್ಥೆ ಬರಬೇಕು. ಈ ನಿಟ್ಟಿನಲ್ಲಿ ಸರ್ಕಾರಗಳು ಕಾರ್ಯೋನ್ಮುಖವಾಗಬೇಕಿದೆ ಎಂದು ತಿಳಿಸಿದರು.

ಭೂಸ್ವಾಧೀನ ಪ್ರಕ್ರಿಯೆ ಸರಳೀಕರಣ, ನಿರ್ಮಾಣ ಯೋಜನೆಗಳಿಗೆ ಅಗತ್ಯ ನಿರಾಕ್ಷೇಪಣಾ ಪತ್ರ, ಮಂಜೂರಾತಿಗೆ ಏಕಗವಾಕ್ಷಿ ವ್ಯವಸ್ಥೆ, ಸಿಮೆಂಟ್‌ ಬೆಲೆ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಬೇಕೆಂಬ ಸಂಸ್ಥೆಯ ಮನವಿ ಬಗ್ಗೆಯೂ ಕೇಂದ್ರ ಸರ್ಕಾರ ಗಮನ ಹರಿಸಲಿದೆ ಎಂದು ಹೇಳಿದರು. ಈ ಹಿಂದೆ ಕೇಂದ್ರ ನಗರಾಭಿವೃದ್ಧಿ ಸಚಿವನಾಗಿದ್ದಾಗ ರೇರಾ ಕಾಯ್ದೆ ಜಾರಿಗೆ ಪ್ರಯತ್ನ ನಡೆಸಲಾಗಿತ್ತು.

ರೇರಾ ಕಾಯ್ದೆಯನ್ನು ಬಿಲ್ಡರ್‌ಗಳಿಗೆ ತೊಂದರೆ ನೀಡಲು ತಂದಿದ್ದಲ್ಲ. ಕೆಲ ಗುತ್ತಿಗೆದಾರರು ಗ್ರಾಹಕರ ವಿಶ್ವಾಸ ಕಳೆದುಕೊಂಡಿದ್ದಕ್ಕೆ ಇಡೀ ಉದ್ಯಮಕ್ಕೆ ಕೆಟ್ಟ ಹೆಸರು ಬರುವಂತಾಗಿತ್ತು. ಸಾಕಷ್ಟು ಚರ್ಚೆ ನಡೆಸಿ ಆನ್‌ಲೈನ್‌ ಅನುಮೋದನೆ ವ್ಯವಸ್ಥೆ ಕಲ್ಪಿಸುವುದನ್ನು ಅಂತಿಮಗೊಳಿಸಲಾಗಿತ್ತು. ಇದರಿಂದ ಭ್ರಷ್ಟಾಚಾರ, ಅನಗತ್ಯ ವಿಳಂಬಕ್ಕೆ ತಡೆ ಬೀಳಲಿದೆ ಎಂದು ತಿಳಿಸಿದರು.

Advertisement

ಕಾಲ್ಪನಿಕ ಬೆಲೆ ಏರಿಕೆ ಬೇಡ: ರಿಯಲ್‌ ಎಸ್ಟೇಟ್‌ ಕ್ಷೇತ್ರವು ದೇಶದಲ್ಲಿ ಎರಡನೇ ಅತಿ ಹೆಚ್ಚು ಉದ್ಯೋಗ ಸೃಷ್ಟಿ ಕ್ಷೇತ್ರವಾಗಿದೆ. ಮುಂದಿನ ಒಂದು ದಶಕದಲ್ಲಿ ಉದ್ಯಮ ಶೇ.30ರಷ್ಟು ಬೆಳೆವಣಿಗೆ ಕಾಣುವ ನಿರೀಕ್ಷೆ ಇದೆ.ಬೆಂಗಳೂರು, ಹೈದರಾಬಾದ್‌, ಚೆನ್ನೈನಲ್ಲಿನ ಭೂಮಿ ಬೆಲೆ ವಾಷಿಂಗ್ಟನ್‌, ನ್ಯೂಯಾರ್ಕ್‌ ಭೂಮಿ ಬೆಲೆಗೆ ಸಮಾನವಾಗಿದೆ.

ಕಾಲ್ಪನಿಕವಾಗಿ ಬೆಲೆ ಏರಿಕೆ ಮಾಡಿದರೆ ಪ್ರಯೋಜನವಾಗದು. ಭೂಮಿ ಬೆಲೆ ವಾಸ್ತವಿಕವಾಗಿದ್ದರೆ ಗ್ರಾಹಕರಿಗೂ ಹೊರೆಯಾಗದು. ಕಾರ್ಪೋರೇಟ್‌ ಸಾಮಾಜಿಕ ಹೊಣೆಗಾರಿಕೆ ದಾನವಲ್ಲ. ಸಮಾಜ ಒಳಿತಿಗೆ ಉದಾರವಾಗಿ ನೆರವು ನೀಡಿದರೆ ಆರ್ಥಿಕ ಅಸಮಾನತೆ ನಿವಾರಿಸಲು ಸಹಕಾರಿಯಾಗಲಿದೆ ಎಂದರು.

ಕೊರತೆ: ರಾಜ್ಯಪಾಲ ವಿ.ಆರ್‌.ವಾಲಾ ಮಾತನಾಡಿ, 15- 20 ವರ್ಷಗಳ ಹಿಂದೆ ಎಂಜಿನಿಯರಿಂಗ್‌, ಆರ್ಕಿಟೆಕ್ಟ್ ಪದವಿ ಪಡೆದವರು ಇಂದಿಗೂ ಪ್ರಸ್ತುತತೆ ಕಂಡುಕೊಳ್ಳಬೇಕಾದರೆ ಅತ್ಯಾಧುನಿಕ ತಂತ್ರಜ್ಞಾನ ಬಳಸಿಕೊಳ್ಳುವತ್ತ ಗಮನ ಹರಿಸಬೇಕು.

ಹಾಗೆಯೇ ಕುಶಲ ಕಾರ್ಮಿಕರ ಕೊರತೆ ತೀವ್ರವಾಗಿದ್ದು, ಇದನ್ನು ಸೃಷ್ಟಿಸಲು ಒತ್ತು ನೀಡಬೇಕು ಎಂದು ಸಲಹೆ ನೀಡಿದರು. ಬಿಎಐ ರಾಷ್ಟ್ರೀಯ ಅಧ್ಯಕ್ಷ ವಿಜಯ ರಾಘವ ರೆಡ್ಡಿ, “ನಿರ್ಮಾಣ ಹಾಗೂ ಮೂಲ ಸೌಕರ್ಯ ಯೋಜನೆಗಳಿಗೆ ನಾನಾ ಸಂಸ್ಥೆಗಳಿಂದ ಅನುಮೋದನೆ ಪಡೆಯುವಲ್ಲಿ ವಿಳಂಬವಾಗುತ್ತಿದ್ದು, 18 ರಿಂದ 24 ತಿಂಗಳು ಬೇಕಾಗಲಿದೆ.

ಇದರಿಂದ ನಿರ್ಮಾಣ ವೆಚ್ಚದ ಜತೆಗೆ ಕಾಮಗಾರಿಯೂ ವಿಳಂಬವಾಗುತ್ತಿದೆ. ಕಾರ್ಮಿಕ ಕಾನೂನು ಸೇರಿದಂತೆ ಇತರೆ ಕೆಲ ನಿಯಮಗಳನ್ನು ಸರಳಗೊಳಿಸಬೇಕು ಎಂದು ಮನವಿ ಮಾಡಿದರು. ಬಿಎಐ ಸಮ್ಮೇಳನದ ಅಧ್ಯಕ್ಷ ಭೀಷ್ಮ ಆರ್‌. ರಾಧಾಕೃಷ್ಣನ್‌, ಮುಖ್ಯ ಪೋಷಕ ಬಿ.ಸೀನಯ್ಯ ಇತರರು ಉಪಸ್ಥಿತರಿದ್ದರು.

ಬೆಡ್‌ರೂಂ, ಬಾತ್‌ರೂಂ ಹಣ ಬ್ಯಾಂಕ್‌ಗೆ: ನೋಟು ಅಮಾನ್ಯದಿಂದ ಹಣವೆಲ್ಲಾ ಬ್ಯಾಂಕ್‌ಗಳಿಗೆ ವಾಪಸ್ಸಾಗಿದೆ. ಬ್ಯಾಂಕ್‌ಗೆ ಹಣ ವಾಪಸ್‌ ತರುವುದೇ ಕೇಂದ್ರ ಸರ್ಕಾರದ ಉದ್ದೇಶವಾಗಿತ್ತು. ವಿಳಾಸದೊಂದಿಗೆ 16ರಿಂದ 17 ಲಕ್ಷ ಕೋಟಿ ರೂ. ಹಣ ವಾಪಸ್ಸಾಗಿದೆ. ಬೆಡ್‌ರೂ, ಬಾತ್‌ರೂಂ, ಪಿಲ್ಲೋ ಕೆಳಗಿದ್ದ ಹಣವೆಲ್ಲಾ ಬ್ಯಾಂಕ್‌ಗೆ ಬಂದಿದೆ. ಇದರಲ್ಲಿ ಕಪ್ಪು ಹಣ, ಬಿಳಿ ಹಣ ಯಾರದ್ದು ಎಂಬುದನ್ನು ಪತ್ತೆ ಹಚ್ಚುವ ಜವಾಬ್ದಾರಿ ಆರ್‌ಬಿಐನದ್ದು. ಆ ಕಾರ್ಯ ಈಗಾಗಲೇ ಆರಂಭವಾಗಿದೆ.

ಜಿಎಸ್‌ಟಿ ಜಾರಿಯಾದ ಒಂದು ವರ್ಷದಲ್ಲಿ ತೆರಿಗೆಗಳು ಇಳಿಕೆಯಾಗಲಿದ್ದು, ಆದಾಯ ಹೆಚ್ಚಾಗಿದೆ. ಜತೆಗೆ ವ್ಯಾಪಾರ- ವ್ಯವಹಾರಸ್ಥರಿಗೆ ಮಧ್ಯವರ್ತಿಗಳ ಹಾವಳಿ, ಕಿರುಕುಳ ತಪ್ಪಲಿದೆ. 2018-19ನೇ ಸಾಲಿನಲ್ಲಿ ದೇಶದ ಆರ್ಥಿಕತೆ ಶೇ.7.2ರಷ್ಟು ಬೆಳವಣಿಗೆಯಾಗುವ ನಿರೀಕ್ಷೆ ಇದೆ.
-ಎಂ.ವೆಂಕಯ್ಯನಾಯ್ಡು, ಉಪರಾಷ್ಟ್ರಪತಿ

Advertisement

Udayavani is now on Telegram. Click here to join our channel and stay updated with the latest news.

Next