Advertisement

ಪ್ರಜಾಪ್ರಭುತ್ವದ ಮೂಲಕವೇ ಕೋಮುವಾದದ ಸೋಲು

11:55 AM Oct 09, 2017 | |

ಬೆಂಗಳೂರು: ಸಮಾಜವಾದವನ್ನು ಹತ್ತಿಕ್ಕುವ ಕೋಮುವಾದದ ಪ್ರಯತ್ನಗಳಿಗೆ ಪ್ರಜಾಪ್ರಭುತ್ವದ ಮೂಲಕವೇ ಸೋಲು ಕಾಣಿಸಬೇಕು ಎಂದು ಸಾಹಿತಿ ಹಾಗೂ ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಅಧ್ಯಕ್ಷ ಡಾ. ಕೆ. ಮರುಳಸಿದ್ದಪ್ಪ ಅಭಿಪ್ರಾಯಪಟ್ಟಿದ್ದಾರೆ.

Advertisement

ಸಮಾಜವಾದಿ ಕ್ರಾಂತಿ ಶತಮಾನೋತ್ಸವದ ಅಂಗವಾಗಿ ಶತಮಾನೋತ್ಸವ ಸಮಿತಿ ಭಾನುವಾರ ರವೀಂದ್ರ ಕಲಾಕ್ಷೇತ್ರದಲ್ಲಿ ಹಮ್ಮಿಕೊಂಡಿದ್ದ “ಸಮಾಜವಾದ ಮತ್ತು ಕನ್ನಡ ಸಾಹಿತ್ಯ’ ವಿಚಾರಗೋಷ್ಠಿ ಉದ್ಘಾಟಿಸಿ ಮಾತನಾಡಿದ ಅವರು, ಬಡವರ, ಶೋಷಿತರ ಮತ್ತು ಶ್ರಮಿಕರ ಪರವಾಗಿ ಇರುವ ಸಮಾಜವಾದವನ್ನು ಹತ್ತಿಕ್ಕುವ ಪ್ರಯತ್ನಗಳು ದೇಶದಲ್ಲಿ ನಡೆಯುತ್ತಿದ್ದು, ಈ ಸಮಾಜವಾದವನ್ನು ರಕ್ಷಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದರು.

ಸಮಾಜವಾದವು ಬಡವರ ಮತ್ತು ಶ್ರಮಿಕರ ಪರವಾಗಿತ್ತು. ಸಾಮ್ರಾಜ್ಯವಾದದ ಕುತಂತ್ರದಿಂದ ಸಮಾಜವಾದ ಸಂಘರ್ಷ ರಾಜಕಾರಣವಾಗಿ ಪರಿವರ್ತನೆಗೊಂಡಿದೆ.  20ನೇ ಶತಮಾನದಲ್ಲಿ ಸಮಾಜವಾದ ಬೇರೂರಿದ್ದರೂ, ಕ್ಷಿಪ್ರವಾಗಿ ತನ್ನ ಅಸ್ತಿತ್ವ ಕಳೆದುಕೊಳ್ಳುತ್ತಿದೆ. ಆರಂಭದಲ್ಲಿ ವಿಶ್ವದ ಮೂರನೇ ಒಂದು ಭಾಗದ ಜನ ಸಮಾಜವಾದವನ್ನು ಒಪ್ಪಿದ್ದರು.

ಆದರೆ 21ನೇ ಶತಮಾನದಲ್ಲಿ 5ನೇ ಒಂದು ಭಾಗದ ಜನರಷ್ಟೇ ಸಮಾಜವಾದವನ್ನು ಒಪ್ಪಿಕೊಂಡಿದ್ದಾರೆ. ಈ ಶತಮಾನದಲ್ಲಿ ಸಮಾಜವಾದದ ಸದ್ಬಳಕೆ ಆಗಬೇಕು. ಕೋಮುವಾದದ ಸರ್ವಾಧಿಕಾರವನ್ನು ವಿರೋಧಿಸುವ ಎಲ್ಲರೂ ಒಟ್ಟಾಗಿ ಸಮಾಜವಾದದ ಬೆಂಬಲಕ್ಕೆ ನಿಲ್ಲಬೇಕು. ಪ್ರಗತಿಪರ ಚಳುವಳಿಗಳ ಬೆಳವಣಿಗೆ ಆದಾಗ ಮಾತ್ರ ಸಮಾಜವಾದದ ನಿಜವಾದ ಬದಲಾವಣೆ ಸಾಧ್ಯ ಎಂದರು.

ಸಿದ್ಧಾಂತಗಳಿಗೆ ಚಲನಶೀಲತೆ ಮುಖ್ಯ. ಚಲನಶೀಲ ಹೊಂದಾಣಿಕೆ ಮಾಡಿಕೊಳ್ಳದಿದ್ದರೆ ಸಿದ್ದಾಂತಗಳು ತನ್ನ ಅಸ್ಥಿತ್ವ ಕಳೆದುಕೊಳ್ಳುತ್ತವೆ. ಆರ್ಥಿಕ, ರಾಜಕೀಯ ಸಿದ್ಧಾಂತಗಳು ದೇಶದ ಪರಿಸ್ಥಿತಿಗೆ ಅನುಗುಣವಾಗಿ ಬದಲಾಗುತ್ತಿರುತ್ತವೆ. ಅದೇ ರೀತಿಯಲ್ಲಿ ಸಿದ್ದಾಂತಗಳೂ ಸಹ ಕಾಲಕ್ಕೆ ತಕ್ಕಂತೆ ಬದಲಾಗುತ್ತಿರಬೇಕು.  

Advertisement

ಇಂದಿನ ಪ್ರಸ್ತುತತೆಯೊಂದಿಗೆ ಮಾರ್ಕ್ಸ್ವಾದ, ಅಂಬೇಡ್ಕರ್‌ ವಾದ, ಗಾಂಧಿವಾದ, ಲೋಹಿಯಾವಾದ ಚಲನಶೀಲ ಹೊಂದಾಣಿಕೆ ಮಾಡಿಕೊಳ್ಳುವ ಅವಶ್ಯಕತೆಯಿದೆ. ಕುವೆಂಪು, ತೇಜಸ್ವಿ, ದೇವನೂರು ಮಹದೇವ ಹೀಗೆ ಹಲವಾರು ಸಾಹಿತಿಗಳ ಸಾಹಿತ್ಯದಲ್ಲೂ ಸಮಾಜವಾದದ ವಿಚಾರಗಳಿವೆ. ಒಂದು ರೀತಿಯಲ್ಲಿ ಸಮಾಜವಾದವೇ ಹಕ್ಕುಗಳನ್ನು ಪಡೆದುಕೊಳ್ಳುವ ಆಸೆಯನ್ನು ಹುಟ್ಟಿ ಹಾಕಿದ್ದವು. ಪ್ರಸ್ತುತ ಕಾಲಘಟ್ಟದಲ್ಲಿ ಸಮಾಜವಾದದ ಆಶಯವನ್ನು ಚುರುಕುಗೊಳಿಸುವ ಸಾಹಿತ್ಯ ರಚನೆಗೆ ಒತ್ತು ನೀಡಬೇಕಿದೆ ಎಂದು ಮರುಳಸಿದ್ದಪ್ಪ ಹೇಳಿದರು.

ಕಾರ್ಯಕ್ರಮದಲ್ಲಿ ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷೆ ಡಾ. ವಸುಂಧರಾ ಭೂಪತಿ, ಸಮುದಾಯ ಕರ್ನಾಟಕ ರಾಜ್ಯ ಸಮಿತಿಯ ವಾಸುದೇವ ಉಚ್ಚಿಲ್‌, ಕಮ್ಯುನಿಸ್ಟ್‌ ಪಕ್ಷದ ಮುಖಂಡರಾದ ಕೆ.ಎನ್‌. ಉಮೇಶ್‌, ಕೆ. ಪ್ರಕಾಶ್‌, ವಿಮರ್ಶಕಿ ಡಾ. ಎಂ.ಎಸ್‌. ಆಶಾದೇವಿ ಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next