Advertisement

ಸದಾಶಿವ ವರದಿ ಅನುಷ್ಠಾನಕ್ಕೆ ಒತ್ತಡ ಹೇರಲು ನಿರ್ಧಾರ

12:38 PM Oct 05, 2018 | |

ಬೆಂಗಳೂರು: ಸದಾಶಿವ ಆಯೋಗದ ವರದಿ ಜಾರಿಗೆ ಕೇಂದ್ರಕ್ಕೆ ಶಿಫಾರಸು ಮಾಡಲು ರಾಜ್ಯ ಸರ್ಕಾರವನ್ನು ಒತ್ತಾಯಿಸುವುದು. ವರದಿ ಅನುಷ್ಠಾನಕ್ಕೆ ಕೇಂದ್ರದ ಮೇಲೆ ಒತ್ತಡ ಹೇರುವುದು. ಮಾದಿಗ ಸಮುದಾಯದ ಇಬ್ಬರಿಗೆ ಸಚಿವ ಸ್ಥಾನ ನೀಡುವಂತೆ ಹೋರಾಟ ಮಾಡುವುದು. ಇದು ರಾಜ್ಯ ಮಾದಿಗ ಸಮುದಾಯದ ಮುಖಂಡರ ಸಭೆಯಲ್ಲಿ ಕೈಗೊಳ್ಳಲಾದ ಪ್ರಮುಖ ನಿರ್ಣಯಗಳು. 

Advertisement

ಅ.12ರಂದು ಅರಮನೆ ಮೈದಾನದಲ್ಲಿ ನಡೆಯಲಿರುವ ಕರ್ನಾಟಕ ಆದಿಜಾಂಬವ ಅಭಿವೃದ್ಧಿ ನಿಗಮದ ಉದ್ಘಾಟನಾ ಸಮಾರಂಭಕ್ಕೆ ಪೂರ್ವಭಾವಿಯಾಗಿ ಗುರುವಾರ ಸಂಸದ ಕೆ.ಎಚ್‌.ಮುನಿಯಪ್ಪ, ಮಾಜಿ ಸಚಿವ ಎಚ್‌.ಆಂಜನೇಯ ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಸುದೀರ್ಘ‌ ಚರ್ಚೆ ಮತ್ತು ಕೆಲವು ನಿರ್ಣಯಗಳನ್ನು ಸರ್ವಾನುಮತದಿಂದ ಕೈಗೊಳ್ಳಲಾಯಿತು. 

ನಿರ್ಣಯಗಳ ಜತೆಗೆ ಮೈತ್ರಿ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷರಾದ ಸಿದ್ದರಾಮಯ್ಯ ಅವರು ಸಮುದಾಯದ ಮುಖಂಡರ ಸಭೆ ಕರೆದು ವರದಿ ಅನುಷ್ಠಾನದ ಬಗ್ಗೆ ಚರ್ಚಿಸುವಂತೆ ಮನವಿ ಮಾಡಲು ಸಭೆಯಲ್ಲಿ ಮುಖಂಡರು ನಿರ್ಧರಿಸಿದರು. 

ಸಂಸದ ಕೆ.ಎಚ್‌.ಮುನಿಯಪ್ಪ ಮಾತನಾಡಿ, ಪರಿಶಿಷ್ಟರಲ್ಲಿ ಮತ್ತೂಂದು ಪಂಗಡದ ಸಹೋದರರು (ಬಲಗೈ) ನಮಗಿಂತ ಮುಂದಿದ್ದಾರೆ ಎಂದು ಅಸೂಯೆ ಪಡುವುದು ಬೇಡ. ಬದಲಿಗೆ ಅವರ ಹಾದಿಯಲ್ಲೇ ನಾವು ಸಾಗೋಣ. ಸಹೋದರರ ನಡುವೆ ಸಂಘರ್ಷ ಬೇಡ. ಮಾದಿಗ ಸಮುದಾಯಕ್ಕೆ ಹೆಚ್ಚಿನ ಪಾಲು ಕೊಡಬೇಡಿ ಎಂಬ ಬಗ್ಗೆ ಲೋಕಸಭೆಯಲ್ಲಿ ಕಾಂಗ್ರೆಸ್‌ ಸಂಸದೀಯ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಹಾಗೂ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್‌ ಅವರೊಂದಿಗೆ ಮಾತನಾಡಿದ್ದೇನೆ ಎಂದು ಹೇಳಿದರು.

ಮಾಜಿ ಸಚಿವ ಎಚ್‌.ಆಂಜನೇಯ ಮಾತನಾಡಿ, ನಾವು ಯಾವುದೇ ಸಂಘರ್ಷಕ್ಕೆ ಎಡೆಮಾಡಿಕೊಡದೆ ಎಲ್ಲ ಸಮುದಾಯದ ನಾಯಕರ ವಿಶ್ವಾಸಗಳಿಸಿ ಅವರನ್ನೂ ನಮ್ಮ ಜತೆಗೂಡಿಸಿಕೊಂಡು ನಮ್ಮ ಹಕ್ಕು ಪಡೆಯಬೇಕು. ಯಾರ ಮನಸ್ಸಿಗೂ ನೋವಾಗದಂತೆ ನಡೆದುಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.

Advertisement

ಸದಾಶಿವ ಆಯೋಗದ ವರದಿ ಶಿಫಾರಸು ಜಾರಿ ವಿಳಂಬವಾದರೆ ಸಮುದಾಯದವರಿಗೆ ಜನಸಂಖ್ಯೆಗನುಗುಣವಾಗಿ ಸೌಲಭ್ಯ ಸಿಗದು ಎಂಬ ಕಾರಣಕ್ಕೆ ನಿಗಮ ರಚಿಸುವಂತೆ ಹಿಂದಿನ ಸಿಎಂ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಲಾಗಿತ್ತು. ತಕ್ಷಣ ಅವರು ನಿಗಮ ಮಂಜೂರು ಮಾಡಿದರು.

ಅ.12ರಂದು ನಿಗಮವನ್ನು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಉದ್ಘಾಟಿಸಲಿದ್ದು, ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂದು ಹೇಳಿದರು. ವಿಧಾನ ಪರಿಷತ್‌ ಸದಸ್ಯರಾದ ಆರ್‌.ಧರ್ಮಸೇನಾ, ಆರ್‌.ಬಿ.ತಿಮ್ಮಾಪುರ, ಮಾಜಿ ಸಚಿವೆ ರೇಣುಕಾ ರಾಜೇಂದ್ರನ್‌, ಮಾಜಿ ಶಾಸಕ ತಿಮ್ಮರಾಯಪ್ಪ, ಗಂಗಹನುಮಯ್ಯ, ಮುಖಂಡರಾದ ಆರ್‌.ಲೋಕೇಶ್‌, ರಾಮಕೃಷ್ಣ ಶಿರಹಟ್ಟಿ ಇತರರು ಹಾಜರಿದ್ದರು.

ಕಣ್ಣೊರೆಸುವ ತಂತ್ರ: ಸಭೆ ಆರಂಭವಾದ ಕೆಲ ಹೊತ್ತಿನಲ್ಲೇ ಕೆಲವರು ನಿಗಮ ಸ್ಥಾಪನೆ ಕಣ್ಣೊರೆಸುವ ತಂತ್ರ. ಇದರಿಂದ ಸಮುದಾಯದ ಸಮಗ್ರ ಅಭಿವೃದ್ಧಿ ಅಸಾಧ್ಯ. ಸದಾಶಿವ ವರದಿ ಜಾರಿಗೆ ಆಗ್ರಹಿಸುವುದು ಸಭೆಯ ಗುರಿಯಾಗಬೇಕು ಎಂದು ಒತ್ತಾಯಿಸಿ ಸಭೆಯಿಂದ ಹೊರಹೋಗಲು ಮುಂದಾದರು. ಆಗ ಆಂಜನೇಯ ಅವರು ಸಮಾಧಾನಪಡಿಸಿ ಸಮಾಧಾನ ಪಡೆಸಿದರು.

Advertisement

Udayavani is now on Telegram. Click here to join our channel and stay updated with the latest news.

Next