ದಾವಣಗೆರೆ: 2019-20ರ ಆರ್‌ಟಿಇ ಕಾಯ್ದೆ ತಿದ್ದುಪಡಿ ರದ್ದತಿ ಕೋರಿ ರಾಜ್ಯ ಉಚ್ಚ ನ್ಯಾಯಾಲಯದಲ್ಲಿ ದಾವೆ ಹೂಡಿ, ತಡೆಯಾಜ್ಞೆ ತರಲು ಭಾನುವಾರ ಶ್ರೀ ಬೀರಲಿಂಗೇಶ್ವರ ದೇವಸ್ಥಾನದಲ್ಲಿ ನಡೆದ ಖಾಸಗಿ ಆರ್‌ಟಿಇ ಶಾಲೆಗಳ ಮತ್ತು ವಿದ್ಯಾರ್ಥಿ ಪೋಷಕರ ಸಂಘದ ಸಭೆ ನಿರ್ಧರಿಸಿದೆ.
ಖಾಸಗಿ ಆರ್‌ಟಿಇ ಶಾಲೆಗಳ ಮತ್ತು ವಿದ್ಯಾರ್ಥಿ ಪೋಷಕರ ಸಂಘದ ಜಿಲ್ಲಾ ಅಧ್ಯಕ್ಷ ಅಣಬೇರು ಶಿವಮೂರ್ತಿ ಮಾತನಾಡಿ, ಆರ್‌ಟಿಇ ಒಂದು ಶಿಕ್ಷಣ ಹಕ್ಕು ಕಾಯ್ದೆ. ಅದರನ್ವಯ ಪ್ರತಿಷ್ಠಿತ ಖಾಸಗಿ ಶಾಲೆಗಳಲ್ಲಿ ಶೇ. 25ರಷ್ಟು ಸೀಟು ವಿದ್ಯಾರ್ಥಿಗಳಿಗೆ ಮೀಸಲಿಟ್ಟು ಉಚಿತ ಶಿಕ್ಷಣ ನೀಡಬೇಕಾಗಿರುತ್ತದೆ. ಸರ್ಕಾರಿ ಮತ್ತು ಅನುದಾನಿತ ಶಾಲೆಗೆ ಸಂಬಂಧಪಡುವುದೇ ಇಲ್ಲ. ಪೋಷಕರ ಮತ್ತು ವಿದ್ಯಾರ್ಥಿಗಳ ಆಯ್ಕೆಗೆ ಬಿಟ್ಟ ವಿಚಾರ. ಬಡ ಮಕ್ಕಳ ಪರವಾಗಿರುವ ಕಾಯ್ದೆ ತಿದ್ದುಪಡಿಯನ್ನು ರದ್ದುಪಡಿಸಬೇಕು ಎಂದು ಸೋಮವಾರ ಸಂಜೆ ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ಮನವಿ ಸಲ್ಲಿಸಲಾಗುವುದು. ಶುಕ್ರವಾರದೊಳಗೆ ಬೆಂಗಳೂರಿನಲ್ಲಿ ವಿದ್ಯಾರ್ಥಿ ಮತ್ತು ಪೋಷಕರ ಪ್ರತಿಭಟನೆ ನಡೆಸಲಾಗುವುದು ಎಂದು ತಿಳಿಸಿದರು.
ಆರ್‌ಟಿಇ ಪ್ರಪಂಚದ 135 ದೇಶಗಳಲ್ಲಿ ಜಾರಿಯಲ್ಲಿದೆ. ದೇಶದ ಎಲ್ಲಾ ರಾಜ್ಯಗಳಲ್ಲಿ ಬಡ ಮಕ್ಕಳಿಗೆ ಖಾಸಗಿ ಶಾಲೆಗಳಲ್ಲಿ ಉಚಿತ ಶಿಕ್ಷಣ ನೀಡುತ್ತಲಿದ್ದು ಅವರ ಖರ್ಚನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳೆರಡು ಆಯಾ ಶಾಲೆಗಳಿಗೆ ನೀಡುತ್ತಿವೆ. ಈಗಾಗಲೇ 5 ಲಕ್ಷ ವಿದ್ಯಾರ್ಥಿಗಳಿಗೆ ರಾಜ್ಯದ 17,737 ಖಾಸಗಿ ಆಂಗ್ಲಮಾಧ್ಯಮ ಶಾಲೆಗಳು ಶಿಕ್ಷಣ ನೀಡುತ್ತಿವೆ. ಆದರೆ, ರೈತರ ಸಾಲಮನ್ನಾ ಮಾಡಲು ಹಾಗೂ ಬಡ ಮಕ್ಕಳ ವಿದ್ಯಾಭ್ಯಾಸಕ್ಕೆ ನೀಡುತ್ತಿದ್ದ ಸುಮಾರು 500 ಕೋಟಿಗಳನ್ನು ಉಳಿಸಲು ಮುಖ್ಯಮಂತ್ರಿ ಕುಮಾರಸ್ವಾಮಿ ಕೈಗೊಂಡಿರುವ ನಿರ್ಧಾರ ನಿಜಕ್ಕೂ ಬಡ ಮಕ್ಕಳ ಪಾಲಿಗೆ ಬರೆ ಎಳೆದಂತಾಗಿದೆ. ಕೂಡಲೇ ಈ ಹಿಂದೆ ಇದ್ದಂತೆ ಖಾಸಗಿ ಶಾಲೆಯಲ್ಲೂ ಸಹ ಆರ್‌ಟಿಇ ಸೀಟುಗಳನ್ನು ನೀಡಬೇಕು ಎಂದು ಒತ್ತಾಯಿಸಿದರು.
ಆರ್‌ಟಿಇ ಅಡಿಯಲ್ಲಿ ಖಾಸಗಿ ಶಾಲೆಯಲ್ಲಿ ಪ್ರವೇಶ ಪಡೆಯಲು ಇದ್ದ ಆರ್‌ಟಿಇ ಕಾಯ್ದೆಯನ್ನು ತಿದ್ದುಪಡಿ ಮಾಡಿ, ಫೆ. 5 ರಂದು ಸರ್ಕಾರ ಆದೇಶ ಹೊರಡಿಸಿ ಇನ್ನು ಮುಂದೆ ಸರ್ಕಾರಿ ಮತ್ತು ಸರ್ಕಾರಿ ಅನುದಾನಿತ ಶಾಲೆಗಳಲ್ಲಿ ಮಾತ್ರ ಆರ್‌ಟಿಇ ಪ್ರವೇಶಕ್ಕೆ ಅವಕಾಶ ಮಾಡಿಕೊಟ್ಟಿರುವುದು ಆರ್‌ಟಿಇ ಕಾಯ್ದೆಯ ಮೂಲ ಆಶಯಕ್ಕೆ ಧಕ್ಕೆಯಾಗಿದೆ. ಲಕ್ಷಾಂತರ ಬಡ ಮಕ್ಕಳು ಖಾಸಗಿ ಶಾಲೆಯಲ್ಲಿ ಆಂಗ್ಲ ಮಾಧ್ಯಮ ವಿದ್ಯಾಭ್ಯಾಸದಿಂದ ವಂಚಿತರಾಗುತ್ತಿದ್ದಾರೆ. ನಮ್ಮ ಹಕ್ಕನ್ನು ಪಡೆಯಲು ಹೋರಾಟಕ್ಕೆ ಮುಂದಾಗಬೇಕು ಎಂದು ತಿಳಿಸಿದರು.
ಜಿಲ್ಲಾ ಸಂಘದ ಪ್ರಧಾನ ಕಾರ್ಯದರ್ಶಿ ಕೆ. ಬಸವರಾಜಪ್ಪ, ಹರಪನಹಳ್ಳಿ ಎಚ್. ದಾದಾಪೀರ್, ಹೊನ್ನಾಳಿ ಕಣಗಣ್ಣನವರ್ ರಾಜು, ಭಾನುವಳ್ಳಿ ಮಂಜುನಾಥ್, ಅತ್ತಿಗೆರೆ ಪ್ರಸನ್ನ, ಮಲೇಬೆನ್ನೂರು ಸುಜಾತ, ಬಾಬುಜಾನ್, ಪಾರ್ವತಿರಾಜು, ಕರಿಬಸಪ್ಪ, ಕೆ. ನಾಗಪ್ಪ, ಆರ್. ಶಿವಕುಮಾರ್ ಶೆಟ್ಟಿ ಇತರರು ಇದ್ದರು.