Advertisement

D.K. Shivakumar: ಚುನಾವಣೆ ಬಂದಾಗ ಮಾತ್ರ ಎಚ್‌ಡಿಕೆಗೆ ಕಣ್ಣೀರು

11:32 PM Nov 03, 2024 | Team Udayavani |

ಮಂಗಳೂರು: ಕುಮಾರಸ್ವಾಮಿಗೆ ಕಣ್ಣೀರು ಬರುವುದು ಚುನಾವಣೆ ಇದ್ದಾಗ ಮಾತ್ರ. ಚನ್ನಪಟ್ಟಣದ ಜನರು ಕಣ್ಣೀರು ಹಾಕಿದಾಗ ಅವರು ಎಲ್ಲಿಗೆ ಹೋಗಿದ್ದರು ಎಂದು ಡಿಸಿಎಂ ಡಿ.ಕೆ. ಶಿವಕುಮಾರ್‌ ಅವರು ಪ್ರಶ್ನಿಸಿದ್ದಾರೆ.

Advertisement

ಮಂಗಳೂರಿನ ವಿಮಾನ ನಿಲ್ದಾಣದಲ್ಲಿ ಶನಿವಾರ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ಚನ್ನಪಟ್ಟಣ ಅಥವಾ ರಾಮನಗರದ ಜನ ಅವರನ್ನು ಶಾಸಕರನ್ನಾಗಿ ಆರಿಸಿದರೂ, ಜಿಲ್ಲೆಗೆ ರಾಷ್ಟ್ರಧ್ವಜ, ಕನ್ನಡಧ್ವಜ ಹಾರಿಸಲು ಯಾಕೆ ಬರಲಿಲ್ಲ? ಚನ್ನಪಟ್ಟಣದ ಜನರ ಅಭಿವೃದ್ಧಿಗೆ ಒಂದು ಕೆಲಸವನ್ನಾದರೂ ಮಾಡಿದ್ದಾರಾ? ಕುಮಾರಸ್ವಾಮಿ ಅಲ್ಲಿನ ಯಾವ ಕೆರೆಗೆ ನೀರು ತುಂಬಿಸಿದ್ದಾರೆ? ಚನ್ನಪಟ್ಟಣದ ಕೆರೆಗಳಿಗೆ ನೀರು ತುಂಬಿಸಿದ್ದು ಯೋಗೇಶ್ವರ್‌. ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದಾಗಲೂ ಆ ಕ್ಷೇತ್ರಕ್ಕೆ ಸಣ್ಣ ಕೆಲಸವನ್ನೂ ಮಾಡಿಲ್ಲ. ಕೇವಲ ಶಾಸಕರಾಗಿದ್ದಾಗ ಬಿಜೆಪಿ ಜತೆ ಹೊಂದಾಣಿಕೆ ಮಾಡಿಕೊಂಡಿದ್ದ ಕುಮಾರಸ್ವಾಮಿ ಅನುದಾನ ತಂದು ಕೆಲಸ ಮಾಡಬೇಕಿತ್ತಲ್ಲವೇ? ಯಾಕೆ ಮಾಡಲಿಲ್ಲ ಎಂದು ಪ್ರಶ್ನಿಸಿದರು.

ಚುನಾವಣೆಗಾಗಿ ಗ್ಯಾರಂಟಿ ಟೀಕೆ
ಗ್ಯಾರಂಟಿ ಯೋಜನೆ ಬಗ್ಗೆ ಪ್ರಧಾನಿ ಟೀಕೆ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಡಿಕೆಶಿ “ಅವರು ಚುನಾವಣೆಗಾಗಿ ಏನು ಬೇಕಾದರೂ ಹೇಳಲಿ. ನಮ್ಮ ಗ್ಯಾರಂಟಿ ಯೋಜನೆಗಳು ಜನರ ಹೊಟ್ಟೆ ತುಂಬಿಸಿ, ಬದುಕು ಕಟ್ಟುತ್ತಿವೆ. ಆ ಮೂಲಕ ದೇಶದ ಅಭಿವೃದ್ಧಿಗೆ ಕಾರಣವಾಗಿವೆ.

ಆರ್ಥಿಕವಾಗಿ ಸಬಲವಾಗಿರುವವರು ದೊಡ್ಡ ಕಂಪೆನಿಯ ಉದ್ಯೋಗಸ್ಥ ಮಹಿಳೆಯರು ನಮಗೆ ಸಾರಿಗೆ ಭತ್ತೆ ಸಿಗುತ್ತಿದೆ. ನಮಗೆ ಶಕ್ತಿ ಯೋಜನೆ ಅಗತ್ಯವಿಲ್ಲ ಎಂದು ಹೇಳಿದ್ದಾರೆ. ಈ ಬಗ್ಗೆ ಮಂತ್ರಿಗಳ ಜತೆ ಚರ್ಚಿಸುತ್ತೇವೆ ಎಂದು ನಾನು ಹೇಳಿದ್ದೆ. ನಮ್ಮ ಯಾವುದೇ ಗ್ಯಾರಂಟಿ ಯೋಜನೆಗಳನ್ನು ಹಿಂಪಡೆಯುವ ಪ್ರಶ್ನೆಯೇ ಇಲ್ಲ. ಈ ಯೋಜನೆಯನ್ನು ನಾವು ಮಂಗಳೂರಿನಲ್ಲೇ ಘೋಷಣೆ ಮಾಡಿದ್ದು, ಇದನ್ನು ನಿಲ್ಲಿಸುವುದಿಲ್ಲ. ಮುಂದಿನ ಅವಧಿಯ ಐದು ವರ್ಷವೂ ಈ ಯೋಜನೆ ಮುಂದುವರಿಯಲಿದೆ. ಬಿಜೆಪಿಯವರು ಕೇವಲ ಭಾವನೆ ಮೇಲೆ ರಾಜಕೀಯ ಮಾಡುತ್ತಾರೆ ಎಂದು ತಿಳಿಸಿದರು.

ಬಿಜೆಪಿ ನಾಯಕರು ಗ್ಯಾರಂಟಿ ಯೋಜನೆಗಳ ವಿರುದ್ಧ ಸರಣಿ ಟ್ವೀಟ್‌ ಮಾಡಿರುವ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ಬಿಜೆಪಿಯವರು ನಮ್ಮ ಗ್ಯಾರಂಟಿ ಯೋಜನೆಗಳನ್ನು ನಕಲು ಮಾಡಿ ಮಧ್ಯಪ್ರದೇಶ, ಹರಿಯಾಣದಲ್ಲೂ ಘೋಷಿಸಿದ್ದಾರೆ. ಈಗ ಮಹಾರಾಷ್ಟ್ರದಲ್ಲಿ ಘೋಷಿಸುತ್ತಿದ್ದಾರೆ. ನಮ್ಮ ಯೋಜನೆ ನಕಲು ಮಾಡುತ್ತಿರುವುದಕ್ಕೆ ಅವರಿಗೆ ಮುಜುಗರವಾಗುತ್ತಿದೆ. ಹೀಗಾಗಿ ಟೀಕೆ ಮಾಡುತ್ತಿದ್ದಾರೆ ಎಂದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next