Advertisement

ಕೇಂದ್ರದ ತೀರ್ಮಾನ; ರೈತರಿಗೆ ವರದಾನ

07:28 AM Jun 07, 2020 | Lakshmi GovindaRaj |

ಬೆಂಗಳೂರು: ರೈತರ ಆದಾಯ ದ್ವಿಗುಣಗೊಳಿಸುವ ಉದ್ದೇಶದಿಂದ ಕೃಷಿ ಉತ್ಪನ್ನಗಳ ಮಾರಾಟಕ್ಕೆ ಉತ್ತೇಜನ ನೀಡಲು ಸುಗ್ರೀವಾಜ್ಞೆ ಹಾಗೂ ಧಾನ್ಯ, ಬೇಳೆಕಾಳು, ಈರುಳ್ಳಿ, ಆಲೂಗಡ್ಡೆ ದರ ನಿಯಂತ್ರಣ ವ್ಯಾಪ್ತಿಯಿಂದ ಹೊರಗಿಡುವ  ಕೇಂದ್ರ ಸರ್ಕಾರದ ತೀರ್ಮಾನ ರಾಜ್ಯದ ಮಟ್ಟಿಗೆ ಕೃಷಿಯತ್ತ ಒಲವು ತೋರುತ್ತಿರುವವರಿಗೆ ವರದಾನವಾಗಲಿದೆ.

Advertisement

ಜತೆಗೆ, ಒಂದು ದೇಶ ಒಂದು ಮಾರುಕಟ್ಟೆ ವ್ಯವಸ್ಥೆಯಡಿ ರೈತರಿಗೂ ತಮ್ಮ ಉತ್ಪನ್ನ ಯಾರಿಗೆ ಬೇಕಾದರೂ ಮಾರುವ  ವ್ಯವಸ್ಥೆಯಿಂದ ಸ್ಪರ್ಧಾತ್ಮಕ ಮಾರುಕಟ್ಟೆ ನಿರ್ಮಾಣವಾಗಲಿದ್ದು, ವ್ಯವಸ್ಥಿತವಾಗಿ ನಿರ್ವಹಣೆ ಮಾಡಿದರೆ ಕೃಷಿ ಲಾಭದಾಯಕವಾಗಲಿದೆ ಎಂಬ ಆಶಾಭಾವನೆಯೂ ಮೂಡಿದೆ. ಪ್ಯಾನ್‌ಕಾರ್ಡ್‌ ಇದ್ದರೆ ಕೃಷಿ ಉತ್ಪನ್ನ ಖರೀದಿಗೆ ಅವಕಾಶ  ಹಾಗೂ ಯಾರು ಬೇಕಾದರೂ ಇ ಪ್ಲಾಟ್‌ ಫಾರ್ಮ್ಗಳನ್ನು ಸೃಷ್ಟಿಸಿ ಅಲ್ಲಿ ರೈತರು ಉತ್ಪನ್ನ ಮಾರಾಟ ಮಾಡುವುದರಿಂದ ಕೃಷಿ ಉತ್ಪನ್ನಗಳ ಮಾರುಕಟ್ಟೆ ಮೂಲಕ ಸ್ವಯಂ ಉದ್ಯೋಗ ಕೈಗೊಳ್ಳುವವರಿಗೆ ಹೊಸ ಅವಕಾಶ ಸಿಗಲಿದೆ.

ಎಪಿಎಂಸಿ ಕಾಯ್ದೆ ತಿದ್ದುಪಡಿ ನಂತರ ಗ್ರಾಮೀಣ ಯುವಕರಿಗೆ ಮಾರುಕಟ್ಟೆ ಮಾಲೀಕರನ್ನಾಗಿಸಲು ಅವಕಾಶ ಕಲ್ಪಿಸುವ ರಾಜ್ಯ ಸರ್ಕಾರದ ಯೋಜನೆಗೂ ಸಹಕಾರಿಯಾಗಲಿದೆ ಎಂದು ಹೇಳಲಾಗಿದೆ. ಆದರೆ, ಇತ್ತೀಚೆಗೆ ರಾಜ್ಯ  ಸರ್ಕಾರದ ಸುಗ್ರೀವಾಜ್ಞೆ ಹಾಗೂ ಕೇಂದ್ರ ಸರ್ಕಾರದ ಪ್ರಸ್ತುತ ತೀರ್ಮಾನದಿಂದ ಎಪಿಎಂಸಿ ವ್ಯವಸ್ಥೆ ಅಸ್ತಿತ್ವ ಕಳೆದುಕೊಳ್ಳುವ ಆತಂ  ಕವೂ ಇದೆ. ದರ ನಿಯಂತ್ರಣ ವ್ಯಾಪ್ತಿಯಿಂದ ಕೆಲವು ಉತ್ಪನ್ನ ಹೊರಗಿಡುವ ತೀರ್ಮಾನದಿಂದ ರೈತರು ತಾವು ಬೆಳೆದ ಉತ್ಪನ್ನಕ್ಕೆ ದರ ನಿಗದಿ ಮಾಡಿಕೊಳ್ಳುವ ಅವಕಾಶ ಸಿಕ್ಕರೂ ಈ ವಿಚಾರದಲ್ಲಿ ರೈತರು, ಗ್ರಾಹಕರು, ವರ್ತಕರ ನಡುವೆ ಸಂಘರ್ಷಕ್ಕೂ ಕಾರಣವಾಗಬಹುದು. ಆಗತ್ಯ ವಸ್ತುಗಳ ಕಾಯ್ದೆಯ ಮೂಲ ಉದ್ದೇಶ ವಿಫ‌ಲವಾಗಬಹುದು ಎಂದು ತಜ್ಞರು ಅಭಿಪ್ರಾಯಪಡುತ್ತಾರೆ.

ಬೆಲೆ ನಿಗದಿ ಅಧಿಕಾರ: ಕೃಷಿ ಉತ್ಪನ್ನ ಮಾರಾಟ (ಉತ್ತೇಜನ ಮತ್ತು ನೆರವು) 2020 ಸುಗ್ರೀವಾಜ್ಞೆ ಯಿಂದಾಗಿ ಧಾನ್ಯಗಳು, ಬೇಳೆ ಕಾಳುಗಳು, ಈರುಳ್ಳಿ, ಆಲೂಗಡ್ಡೆ ಸೇರಿ ಹಲವು ಆಹಾರ ಉತ್ಪನ್ನ ಅಗತ್ಯವಸ್ತುಗಳ ಕಾಯ್ದೆಯಿಂದ ಹೊರಗಿಡುವುದರಿಂದ ರೈತರು ತಾವು ಬೆಳೆದ ಉತ್ಪನ್ನಕ್ಕೆ ತಾವೇ ದರ ನಿಗದಿ ಮಾಡುವ ಅಧಿಕಾರ ಸಿಗಲಿದೆ. ಇದರಿಂ ದ ರೈತನಿಗೆ ದರದ ಖಾತರಿ ಸಿಗಲಿದೆ.

ಬೆಳೆ ಹಾಕುವ ಮುನ್ನವೇ ಖರೀದಿ ಒಪ್ಪಂದವೂ ಮಾಡಿಕೊಳ್ಳುವುದರಿಂದ ರೈತರಿಗೆ  ಕೃಷಿ ಲಾಭದಾಯಕ ಎಂಬ ಭರವಸೆ ಸಿಗಲಿದ್ದು, ಕೃಷಿಯತ್ತ ಮುಖ ಮಾಡಿರುವವರಿಗೂ ಇದರಿಂದ ಮತ್ತಷ್ಟು ಉತ್ತೇಜನ ಸಿಗಬಹುದು ಎಂಬ ಮಾತುಗಳು ಕೇಳಿಬರುತ್ತಿವೆ. ಮಂಡ್ಯದಲ್ಲಿ ಕುಳಿತು ಮುಂಬೈ, ಕೋಲ್ಕತ್ತಾ, ದೆಹಲಿ,  ಹೈದರಾಬಾದ್‌ನ ಮಾರುಕಟ್ಟೆಗೆ ತಮ್ಮ ಉತ್ಪನ್ನ ಮಾರಾಟ ಮಾಡಬಹುದು. ವರ್ತಕರಿಗೂ ದಾಸ್ತಾನು ಮಿತಿ ತೆಗೆದಿರುವ ಕಾರಣ ಹೆಚ್ಚು ಖರೀದಿಯೂ ಆಗಲಿದೆ ಎಂದು ಹೇಳಲಾಗಿದೆ.

Advertisement

ರೈತ ಎಲ್ಲಿ ಬೇಕಾದರೂ ತಮ್ಮ ಉತ್ಪನ್ನ ಮಾರಾಟ ಮಾಡಲು ಅವಕಾಶ ಕಲ್ಪಿಸುವುದರಿಂದ ಸ್ಪರ್ಧಾತ್ಮಕ ಮಾರುಕಟ್ಟೆ ಸಿಗಬಹುದು. ಆದರೆ, ಎಪಿಎಂಸಿ ವ್ಯವಸ್ಥೆ ಅಸ್ತಿತ್ವ ಕಳೆದುಕೊಳ್ಳುತ್ತದೆ. ಇನ್ಮುಂದೆ ರೈತರಿಗೆ ನ್ಯಾಯಯುತ ಬೆಲೆ  ದೊರಕಿಸಿಕೊಡಲು ರಚನೆಯಾದ ಎಪಿಎಂಸಿಗಳಿಗೆ ಯಾರೂ ಬರುವುದಿಲ್ಲ. ಹಲವು ಉತ್ಪನ್ನ ದರ ನಿಯಂತ್ರಣ ವ್ಯಾಪ್ತಿಯಿಂದ ಹೊರಗಿಟ್ಟರೆ ಅಗತ್ಯ ವಸ್ತುಗಳ ಕಾಯ್ದೆ ಯಾಕೆ ಎಂಬ ಪ್ರಶ್ನೆಯೂ ಉದ್ಭವಿಸುತ್ತದೆ. ಸುಗ್ರೀವಾಜ್ಞೆಯ ಸಂಪೂರ್ಣ ವಿವರ ದೊರೆತ ನಂತರವೇ ಸ್ಪಷ್ಟತೆ ಸಿಗಲಿದೆ. 
-ಪ್ರಕಾಶ್‌ ಕಮ್ಮರಡಿ, ಕೃಷಿ ಬೆಲೆ ಆಯೋಗ ಮಾಜಿ ಅಧ್ಯಕ್ಷ

ಅಗತ್ಯ ವಸ್ತುಗಳ ಕಾಯ್ದೆ ಕಾಯ್ದೆಯಿಂದ ಕೆಲವು ಕೃಷಿ ಉತ್ಪನ್ನ ಹೊರಗಿಡುವ ತೀರ್ಮಾನ ಸ್ವಾಗತಾರ್ಹ. ಇದರಿಂದ ಸ್ಪರ್ಧಾತ್ಮಕ ಮಾರುಕಟ್ಟೆ ಸಿಗಲಿದ್ದು ರೈತರಿಗೂ ಅನುಕೂಲವಾಗಲಿದೆ. ಆದರೆ, ಎಪಿಎಂಸಿ ಹೊರಗೆ ಎಲ್ಲಿ ಬೇಕಾದರೂ  ಮಾರಾಟ ಮಾಡಬಹುದು ಎಂದಾಗ ಮತ್ತಷ್ಟು ದಲ್ಲಾಳಿಗಳು ಹುಟ್ಟಿಕೊಳ್ಳುವ ಆತಂಕ ಇದ್ದು ಅದನ್ನು ನಿಯಂತ್ರಿಸಬೇಕು.
-ಕುರುಬೂರು ಶಾಂತಕುಮಾರ್‌, ರೈತ ಮುಖಂಡ

* ಎಸ್.ಲಕ್ಷ್ಮಿನಾರಾಯಣ

Advertisement

Udayavani is now on Telegram. Click here to join our channel and stay updated with the latest news.

Next