ಬ್ರುಸೆಲ್ಸ್/ಲಂಡನ್: ಬ್ರಿಟನ್ ಮತ್ತು ಐರೋಪ್ಯ ಒಕ್ಕೂಟಗಳ ನಡುವೆ ಕಗ್ಗಂಟಾಗಿ ಉಳಿದಿದ್ದ ಬ್ರೆಕ್ಸಿಟ್ ವಾಣಿಜ್ಯ ಒಪ್ಪಂದಕ್ಕೆ ಕೊನೆಗೂ ಸಹಮತ ವ್ಯಕ್ತವಾಗಿದೆ. ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಈ ಬಗ್ಗೆ ಟ್ವೀಟ್ ಮಾಡಿ “ನಾವು ಬ್ರೆಕ್ಸಿಟ್ ವ್ಯಾಪಾರ ಒಪ್ಪಂದ ಸಾಧಿಸಿದ್ದೇವೆ’ ಎಂದು ಟ್ವೀಟ್ ಮಾಡಿದ್ದಾರೆ.
ಜತೆಗೆ ಲಂಡನ್‌ನಲ್ಲಿರುವ ಅಧಿಕೃತ ನಿವಾಸದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ನಾವು ನಮ್ಮ ದೇಶದ ಗಡಿಗಳನ್ನು ಮತ್ತೆ ನಿಯಂತ್ರಣಕ್ಕೆ ತೆಗೆದುಕೊಂಡಿದ್ದೇವೆ’ ಎಂದು ಹೇಳಿಕೊಂಡಿದ್ದಾರೆ.
ಒಪ್ಪಂದ ಅಂತಿಮಗೊಳಿಸುವ ಬಗ್ಗೆ ಬಿರುಸಿನ ಮಾತುಕತೆಗಳು ನಡೆದಿದ್ದವು. ಆದರೆ ಅಂತಿಮವಾಗಿ ಸಹಮತಕ್ಕೆ ಬರಲಾಗಿದೆ. ಮುಂದಿನ ದಿನಗಳಲ್ಲಿ ಸ್ವತಂತ್ರ ರಾಷ್ಟ್ರದ ನೆಲೆಯಲ್ಲಿ ನಮ್ಮ ವ್ಯಾಪಾರ- ಉದ್ದಿಮೆ ವಲಯಗಳನ್ನು ಮತ್ತಷ್ಟು ಅಭಿವೃದ್ಧಿಪಡಿಸಲು ಇದರಿಂದ ಸಾಧ್ಯವಾಗಲಿದೆ ಎಂದು ಜಾನ್ಸನ್ ಹೇಳಿದ್ದಾರೆ.
ಬ್ರುಸೆಲ್ಸ್‌ನಲ್ಲಿ ಮಾತನಾಡಿದ ಐರೋಪ್ಯ ಒಕ್ಕೂಟ ವಾಣಿಜ್ಯ ಆಯುಕ್ತ ಉಸುಲಾ ವಂಡೆರ್ ಲೆಯಾನ್ ಕೂಡ ಪ್ರತಿಕ್ರಿಯೆ ನೀಡಿ, “ಅಂತಿಮವಾಗಿ ನಾವು ಒಪ್ಪಂದಕ್ಕೆ ಸಹಿ ಹಾಕಿದ್ದೇವೆ’ ಎಂದಿದ್ದಾರೆ. ಡಿ.31ರ ಒಳಗಾಗಿ ಹೊಸ ವ್ಯಾಪಾರ ಒಪ್ಪಂದ ಮಾಡಿಕೊಳ್ಳುವ ಬಗ್ಗೆ ಗಡುವು ವಿಧಿಸಲಾಗಿತ್ತು.
2016ರಲ್ಲಿ ನಡೆದಿದ್ದ ಅಭೂತಪೂರ್ವ ಮತದಾನದಲ್ಲಿ ಐರೋಪ್ಯ ಒಕ್ಕೂಟದಿಂದ ಬ್ರಿಟನ್ ಹೊರಬರುವ ಬಗ್ಗೆ ಒಮ್ಮತದ ಜನಾಭಿಪ್ರಾಯ ವ್ಯಕ್ತವಾಗಿತ್ತು. ಆದರೆ ವ್ಯಾಪಾರ ಒಪ್ಪಂದದ ಬಗ್ಗೆ ಯಾವುದೇ ಸಹಮತ ವ್ಯಕ್ತವಾಗಿರಲಿಲ್ಲ. ಒಪ್ಪಂದದ ಬಗ್ಗೆ ಮಿಶ್ರ ಪ್ರತಿಕ್ರಿಯೆಗಳೂ ವ್ಯಕ್ತವಾಗಿವೆ. ಐರೋಪ್ಯ ಒಕ್ಕೂಟ ಮತ್ತು ಬ್ರಿಟನ್‌ನ ಅರ್ಥ ವ್ಯವಸ್ಥೆಗೆ ಇದರಿಂದ ತಕ್ಷಣದ ಲಾಭ ಸಿಗಲಾರದು. ಏಕೆಂದರೆ ಕೊರೊನಾ ಸೋಂಕಿನಿಂದ ಅರ್ಥ ವ್ಯವಸ್ಥೆಗೆ ಭಾರಿ ಹಿನ್ನಡೆ ಉಂಟಾಗಿದೆ ಎಂದಿದ್ದಾರೆ.
ಇದೇ ವೇಳೆ ಹೊಸ ಒಪ್ಪಂದದಿಂದಾಗಿ ಬ್ರಿಟನ್ ಐರೋಪ್ಯ ಒಕ್ಕೂಟ ರಾಷ್ಟ್ರಗಳ ಜತೆಗೆ ವ್ಯಾಪಾರ ವಹಿವಾಟು ನಡೆಸುವ ನಿಟ್ಟಿನಲ್ಲಿ ಹೊಸ ನಿಯಮ ಜಾರಿಗೆ ತರಬೇಕಾಗಿದೆ