ಬೆಂಗಳೂರು: ರಾಜ್ಯದಲ್ಲಿ 23 ಹಿಂದೂಗಳನ್ನು ಜಿಹಾದಿಗಳೇ ಕೊಂದಿದ್ದಾರೆಂದು ಆರೋಪ ಮಾಡುತ್ತಿರುವ ಬಿಜೆಪಿ ವಿರುದ್ಧ ದಾಖಲೆ ಬಿಡುಗಡೆ ಮಾಡುವ ಮೂಲಕ ಗೃಹ ಸಚಿವ ರಾಮಲಿಂಗಾರೆಡ್ಡಿ ತಿರುಗೇಟು ನೀಡಿದ್ದಾರೆ.
ಬುಧವಾರ ಪತ್ರಿಕಾಗೋಷ್ಠಿ ನಡೆಸಿ, ಬಿಜೆಪಿ ಆರೋಪ ಮಾಡಿರುವ 22 ಜನರ ಸಾವಿಗೆ ಕಾರಣವಾದ ದಾಖಲೆಗಳನ್ನು
ಬಿಡುಗಡೆ ಮಾಡಿದರು. ಸಂಸದೆ ಶೋಭಾ ಕರಂದ್ಲಾಜೆ 23 ಹಿಂದೂ ಕಾರ್ಯಕರ್ತರನ್ನು ಜಿಹಾದಿಗಳು ಕೊಂದಿದ್ದಾರೆ. ಆದರೂ ರಾಜ್ಯ ಸರ್ಕಾರ ಕಣ್ಣು ಮುಚ್ಚಿ ಕುಳಿತಿದೆ ಎಂದು ಕೇಂದ್ರ ಗೃಹ ಸಚಿವರಿಗೆ ಪತ್ರ ಬರೆದಿದ್ದಾರೆ.
ಅವರು ಕಳಹಿಸಿರುವ ಪಟ್ಟಿಯಲ್ಲಿರುವ ಅಶೋಕ್ ಪೂಜಾರಿ ಎಂಬ ವ್ಯಕ್ತಿ ಇನ್ನೂ ಜೀವಂತವಾಗಿದ್ದಾನೆ. ಸತ್ತವರ ಸಂಖ್ಯೆ ಹೆಚ್ಚಿಸಿಕೊಳ್ಳಲು ಬದಕಿದ್ದವರನ್ನೂ ಸತ್ತವರ ಪಟ್ಟಿಯಲ್ಲಿ ಸೇರಿಸಿದ್ದಾರೆಂದು ಆರೋಪಿಸಿದರು.
ವಸಂತ ಕೋಟ್ಯಾನ್ ಮತ್ತು ರಾಜು ಕನ್ನಡಬಾನೆ ಆತ್ಮಹತ್ಯೆ ಮಾಡಿ ಕೊಂಡಿದ್ದಾರೆ. ಪ್ರಶಾಂತ ಪೂಜಾರಿ, ಡಿ.ಕೆ.ಕುಟ್ಟಪ್ಪ, ಮೈಸೂರು ರಾಜು, ರಾಜೇಶ್ ಕೋಟ್ಯಾನ್, ಮಡಿಕೇರಿಯ ಪ್ರವೀಣ ಪೂಜಾರಿ, ಚರಣ್ ಪೂಜಾರಿ, ಶಿವಮೊಗ್ಗ ವಿಶ್ವನಾಥ, ರುದ್ರೇಶ್, ಶರತ್ ಕೋಮುದ್ವೇಷಕ್ಕೆ ಬಲಿಯಾಗಿದ್ದಾರೆ. 23ರಲ್ಲಿ 9 ಜನರು ಹಿಂದೂ-ಮುಸ್ಲಿಂ ಕೋಮು ದ್ವೇಷದ ಹಿನ್ನೆಲೆಯಲ್ಲಿ ಸಾವಿಗೀಡಾಗಿದ್ದು, ಇಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
10 ಜನರು ವೈಯಕ್ತಿಕ ಕಾರಣ ಹಾಗೂ ಭೂ ವ್ಯವಹಾರದ ಹಿನ್ನೆಲೆಯಲ್ಲಿ ಕೊಲೆಗೀಡಾಗಿದ್ದಾರೆ. ಒಬ್ಬರು ಅಪಘಾತ ದಲ್ಲಿ ಮೃತ ಪಟ್ಟಿದ್ದಾರೆ ಎಂದು ಪಟ್ಟಿ ಬಿಡುಗಡೆ ಮಾಡಿದರು.