ದುಡಿಮೆಯೇ ಜೀವನ ಎಂದು ನಿರ್ಧರಿಸಿ ಒಬ್ಬಳೇ ಮಗಳು ಬೆಂಗಳೂರಿಗೆ ಹೋಗಿಬಿಟ್ಟಿದ್ದಾಳೆ. ಅವಳನ್ನು ಮಹಾನಗರದಲ್ಲಿ ಬಿಟ್ಟು, ಊರಲ್ಲಿರುವ ಪೋಷಕರು ಅನುಭವಿಸುವ ತಳಮಳವೆಲ್ಲ ಇಲ್ಲಿ ಅಕ್ಷರರೂಪು ತಾಳಿದೆ. ಒಂದರ್ಥದಲ್ಲಿ ಇದು ಮನೆ ಮನೆಯ ಕಥೆ…
ಹಿಂದೆಲ್ಲಾ ಹೆಣ್ಣು ರಾತ್ರಿ ಹೊರಕ್ಕೆ ಹೋಗುವಂತಿರಲಿಲ್ಲ. ಆದರೆ, ಇಂದು ಗಂಡು ಹೆಣ್ಣು ಎಂಬ ಭೇದವಿಲ್ಲ. ಎಲ್ಲರೂ ಹೊರಗೆ ದುಡಿಯಲೇಬೇಕು ಎನ್ನುವ ಪರಿಸ್ಥಿತಿ ನಿರ್ಮಾಣವಾಗಿದೆ. ಇದರ ಬೆನ್ನಿಗೇ- ನಾನೂ ದುಡಿಯಬೇಕು. ನನ್ನದೂ ಸ್ವಂತ ಗಳಿಕೆ ಇರಬೇಕು ಎಂದು ಹೆಣ್ಣು ಆಸೆ ಪಡುತ್ತಿದ್ದಾಳೆ.
ನಮಗಿರುವ ಒಬ್ಬಳೇ ಮಗಳನ್ನು ದೂರದೂರು ಬೆಂಗಳೂರಿಗೆ ಕಳಿಸುವುದರೊಂದಿಗೆ ಶುರುವಾದ ಮಾನಸಿಕ ತಳಮಳ, ಮಗಳು “ಇಂಜಿನಿಯರಿಂಗ್’ ಓದಿ ಕೆಲಸ ಗಿಟ್ಟಿಸಿಕೊಂಡರೂ ಕಡಿಮೆಯಾಗಿಲ್ಲ. ಒಂದೆಡೆ ಹೆಣ್ಣು ಮಗಳು, ಮತ್ತೂಂದೆಡೆ ಒಬ್ಬಳೇ ಮಗಳು. ಅ ಬೆಂಗಳೂರಿನ ಕಾರ್ಪೊರೇಟ್ ಕಂಪನಿಗಳಲ್ಲಿ ದುಡಿಯುವ ಈ ಹುಡುಗಿಯರು ದುಡಿದು ಮನೆ ಸೇರುವಾಗ ರಾತ್ರಿ 8.30. ಪ್ರತಿದಿನ ಆವಳ “ಪೋನ್ ಕಾಲ್‌ಗೆ ಕಾಯುವುದು, ಸರಿಯಾಗಿ ಪಿ.ಜಿ ಗೆ ಬಂದು ಮುಟ್ಟಿದ್ದಾಳೆ. ಸದ್ಯ ಏನೂ ಸಮಸ್ಯೆಯಿಲ್ಲ ಎಂದು ಸಮಾಧಾನದ ನಿಟ್ಟುಸಿರು ಬಿಡುವ ಮೊದಲೇ, ಮಗಳು ಮಾತಾಡುತ್ತಾಳೆ: “ಅಮ್ಮಾ, ಪಿ.ಜಿಯಲ್ಲಿ ಊಟದ ಸಮಸ್ಯೆ ಕಾಡುತ್ತದೆ. ಇಲ್ಲಿ ದಿನವೂ ಒಂದೇ ಥರದ ಊಟ. ಹಾಗಾಗಿ ಬೇಜಾರಾಗಿ ಹೋಯಿತು’ ಎನ್ನುವ ಮಗಳು… ಹೀಗೆ ಒಂದಿಲ್ಲೊಂದು ಸಮಸ್ಯೆ ಕಾಡುವಾಗ ನಮ್ಮ ಮಾನಸಿಕ ಸ್ಥೈರ್ಯವನ್ನು ಕುಗ್ಗಿಸುತ್ತದೆ.
ಕಂಪನಿಗಳಲ್ಲಿ ಇರುವ ವೀಕೆಂಡ್ ಡಿನ್ನರ್ ಪಾರ್ಟಿ ಮಕ್ಕಳಿಗೆ ಮಜಾ. ನಮಗೋ ಸಜಾ. ಅ ರಾತ್ರಿ ಅವಳು ಪಾರ್ಟಿ ಮುಗಿಸಿ “ಪಿ.ಜಿ’ ಸೇರುವವರೆಗೆ ನಮ್ಮ ತಳಮಳ, ಆತಂಕ ತಪ್ಪಿದ್ದಲ್ಲ. ಬದುಕಿಗೂ ಭಾವನೆಗೂ ಹೋರಾಟ. ಬದುಕು ಬೇಕು ಎಂದರೆ ಭಾವನೆ ಸಾಕು ಎನ್ನುತ್ತದೆ. ನಮ್ಮ ಬದುಕಿನ ಏರಿಳಿತದೊಂದಿಗೆ ಮಗಳ ಭವಿಷ್ಯವನ್ನೂ ನೋಡಬೇಕು. ಒಮ್ಮೊಮ್ಮೆ ಮನಸ್ಸು ಕೇಳುತ್ತದೆ: ಬದುಕು ಇಲ್ಲೂ ಇಲ್ಲವಾ? ನಗರಕ್ಕೆ ಹೋಗಲೇಬೇಕಾ? ಇದೆಲ್ಲಾ ಯಾಕೆ ಇಂದಿನ ಜನಾಂಗಕ್ಕೆ ಅರ್ಥ ಆಗುವುದಿಲ್ಲ? ಇಂದು ಬದುಕಿನ ಗುರಿಯನ್ನು ತಲುಪುವ ನೆಪದಲ್ಲಿ ಹಳ್ಳಿಗಳು ಬರಡಾಗುತ್ತಿವೆ. ನಗರ ಜನಸಂಖ್ಯೆಯಿಂದ ತುಂಬಿ ತುಳುಕುತ್ತಿದೆ. ಏನಾಗಬಹುದು ಮುಂದೆ? ಎಂಬ ಪ್ರಶ್ನೆ ಪೆಡಂಭೂತದಂತೆ ಕಾಡುತ್ತಿದೆ.
ಇರುವ ಒಬ್ಬ ಮಗಳನ್ನು ಬೆಂಗಳೂರಿಗೆ ಕಳಿಸಿ ಒಂದು ರೀತಿಯಲ್ಲಿ ಅನಾಥಪ್ರಜ್ಞೆಯನ್ನು ನಮಗೆ ನಾವೇ ತಂದುಕೊಂಡಂತಾಗಿದೆ. ಇನ್ನು ನಮ್ಮ ಮುಂದಿನ ಭವಿಷ್ಯವೇನು? ನಾವು ಅ ಗೊಂದಲದ ಗೂಡಾದ ಬೆಂಗಳೂರಿಗೆ ಹೋಗಬೇಕೆ? ಅಲ್ಲಿ ಉಳಿಯಲು ಸಾಧ್ಯವಾ? ಎಂಬ ಪ್ರಶ್ನೆ ಭೂತಾಕಾರವಾಗಿದೆ.
“ಅಮ್ಮಾ, ಮನೆಗೆ ಬರಬೇಕು. ಸ್ವಲ್ಪ ದಿನ ನಮ್ಮ ಮನೆಯ ಪ್ರಶಾಂತ ವಾತಾವರಣದಲ್ಲಿ ಇರಬೇಕು ಅನ್ನಿಸ್ತಿದೆ. ಈ ಕೆಲಸ ಸಾಕಾಗಿ ಹೋಯಿತು. ತಿಂಗಳಿಗೆ ಇರುವ ಒಂದು ರಜೆಯನ್ನು ಸೇರಿಸಿಕೊಂಡು ಬರುತ್ತೇನಮ್ಮ’ ಎಂದು ಮಗಳು ಹೇಳುವಾಗ ನನ್ನ ಕಣ್ಣುಗಳು ಹನಿಗೂಡುತ್ತವೆ. ಮನಸ್ಸು ಭಾರವಾಗುತ್ತದೆ. “ನೀನು ಬಾ ಮಗಳೇ. ನಿನ್ನ ನೆಮ್ಮದಿ ಖುಷಿಯನ್ನು ಕಸಿದುಕೊಳ್ಳುತ್ತಿರುವ ಆ ಕೆಲಸ ಬಿಟ್ಟುಬಿಡು’ ಎನ್ನುವ ಮನಸ್ಸಾಗುತ್ತದೆ. ಆದರೆ, ಮುಂದಿನ ಅವಳ ಜೀವನ ಅಲ್ಲಿಯೇ ಇರುವುದನ್ನು ನೆನೆದಾಗ ಮಾತು ಮರೆತು ಹೋಗುತ್ತದೆ. ಮನ ತಳಮಳಿಸುತ್ತದೆ.
ಮನೆಗೆ ಬಂದ ಮಗಳು, ಮನೆ, ತೋಟ, ನಾವು ಕೆಲಸ ಮಾಡುವ ಸ್ಕೂಲು ಎಲ್ಲವನ್ನೂ ಕಂಡು ಸಂಭ್ರಮಿಸುತ್ತಾಳೆ. ಮೂರು ದಿನದ ರಜೆ ಬಹ ಬೇಗನೆ ಮುಗಿದು ಹೋಗುತ್ತದೆ. ಹೊರಡುವ ಸಮಯ ಹತ್ತಿರಾದಂತೆಲ್ಲ ಅವಳಿಗೆ ಅಪ್ಪ- ಅಮ್ಮನನ್ನು ಬಿಟ್ಟು ಹೋಗುವ ಬೇಸರವಿರುತ್ತದೆ. ಮಗಳು ಬೆಂಗಳೂರಿಗೆ ಹೋದ ದಿನ ಮನೆ ಮೌನವಾಗುತ್ತದೆ. ಮನಸ್ಸು ಭಾರವಾಗುತ್ತದೆ. ಇದೇ ಬದುಕಲ್ಲವೇ?
– ಲಕ್ಷ್ಮೀ ಎನ್. ಭಟ್ಟ, ಯಲ್ಲಾಪುರ