Advertisement
ಗಮನವಿರಿಸಿ ಕೇಳುವುದು ಎಷ್ಟು ಮೌಲ್ಯಯುತವಾದುದು, ಎಷ್ಟು ಮಹತ್ವದ್ದು ಎನ್ನುವುದನ್ನು ಜಗತ್ತಿಗೆ ಕಲಿಸಿಕೊಡುವ ಶಕ್ತಿಯನ್ನು ಉಗ್ಗುವಿಕೆಯ ತೊಂದರೆಯನ್ನು ಹೊಂದಿರುವ ವ್ಯಕ್ತಿಗಳು ಹೊಂದಿರುತ್ತಾರೆ. ಪರಿಣಾಮಕಾರಿ ಸಂವಹನವು ಗಮನವಿರಿಸಿ ಕೇಳುವುದನ್ನು ಬಹಳವಾಗಿ ಅಂದರೆ ಶೇ. 90ರಷ್ಟು ಅವಲಂಬಿಸಿದೆ. ಏಕಾಗ್ರತೆಯಿಂದ, ಗಮನ ಇರಿಸಿ ಕೇಳುವುದರ ಮೂಲಕ ಇನ್ನೊಬ್ಬರ ಅನುಭವ ಮತ್ತು ಭಾವನೆಗಳನ್ನು ಆಳವಾಗಿ ಅರ್ಥ ಮಾಡಿಕೊಳ್ಳಲು ಮತ್ತು ವಿಶ್ವಾಸವನ್ನು ಮೂಡಿಸಲು ಸಾಧ್ಯ. ಪ್ರತಿಯೊಬ್ಬರೂ ತಾನು ಹೇಳಿದ್ದನ್ನು ಇನ್ನೊಬ್ಬರು ಕೇಳಿಸಿಕೊಳ್ಳಬೇಕು, ಬೆಲೆ ಕೊಡಬೇಕು ಮತ್ತು ಗಮನಿಸಬೇಕು ಎಂದು ಭಾವಿಸುತ್ತಾರೆ. ಜತೆಗೆ ಉಗ್ಗುವಿಕೆಯ ಮಟ್ಟಿಗೆ ಹೇಳುವುದಾದರೆ, ಕೇಳುಗನು ಹೇಗೆ ವರ್ತಿಸುತ್ತಾನೆ ಎನ್ನುವುದು ಉಗ್ಗುವಿಕೆಯ ಅನುಭವದ ಮೇಲೆ ಗಮನಾರ್ಹವಾದ ಪರಿಣಾಮವನ್ನು ಬೀರಬಲ್ಲುದಾಗಿದೆ.
Related Articles
Advertisement
ಉಗ್ಗುವಿಕೆ ಅಥವಾ ‘ಸ್ಟಟರಿಂಗ್’ ಶೀಘ್ರವಾಗಿ ಪತ್ತೆ ಹಚ್ಚಿ ಸೂಕ್ತವಾದ ಚಿಕಿತ್ಸೆಯನ್ನು ಒದಗಿಸಿದರೆ ಸಂಪೂರ್ಣವಾಗಿ ಗುಣಪಡಿಸಬಹುದಾದ ಒಂದು ಸಮಸ್ಯೆಯಾಗಿದೆ. ಇದಕ್ಕಾಗಿ ನೆರವು ಪಡೆಯಬೇಕಾದ ವೃತ್ತಿಪರ ವ್ಯಕ್ತಿ ಎಂದರೆ ಸ್ಪೀಚ್ ಲ್ಯಾಂಗ್ವೇಜ್ ಪೆಥಾಲಜಿಸ್ಟ್. ಉಗ್ಗುವಿಕೆಯ ಸಮಸ್ಯೆಯನ್ನು ನಿವಾರಿಸಲು ಸ್ಪೀಚ್ ಥೆರಪಿಯ ಮೂಲಕ ಅನೇಕ ತಂತ್ರಗಳು ಮತ್ತು ಕಾರ್ಯವಿಧಾನಗಳು ಇವೆ. ಸ್ಪೀಚ್ ಥೆರಪಿಯ ಅವಧಿಗಳಿಗೆ ಶಿಫಾರಸು ಮಾಡಿರುವಂತೆ ತಪ್ಪದೆ ಹಾಜರಾಗುವುದು ಅತ್ಯವಶ್ಯಕವಾಗಿರುತ್ತದೆ.
ಯಾವುದೇ ವೈದ್ಯಕೀಯ ಚಿಕಿತ್ಸೆಯಲ್ಲಿ ಅನಾರೋಗ್ಯವನ್ನು ಗುಣಪಡಿಸಲು ಔಷಧಗಳನ್ನು ನೀಡಲಾಗುತ್ತದೆ. ಆದರೆ ಸ್ಪೀಚ್ ಥೆರಪಿ ಅಥವಾ ಭಾಷಿಕ-ಮಾತಿನ ಚಿಕಿತ್ಸೆಯು ಹಾಗಲ್ಲ. ಇದೊಂದು ವರ್ತನಾತ್ಮಕ ಚಿಕಿತ್ಸೆಯಾಗಿದ್ದು, ರೋಗಿಯ ಸಕ್ರಿಯ ಪಾಲ್ಗೊಳ್ಳುವಿಕೆ ಅವಶ್ಯಕವಾಗಿರುತ್ತದೆ. ಹೀಗೆ ಸಕ್ರಿಯ ಪಾಲ್ಗೊಳ್ಳುವಿಕೆ, ಚಿಕಿತ್ಸೆಯನ್ನು ಶಿಫಾರಸು ಮಾಡಿರುವಂತೆ ಸರಿಯಾಗಿ ಅನುಸರಿಸುವ ಮೂಲಕ ಉಗ್ಗುವಿಕೆಯ ತೊಂದರೆ ಹೊಂದಿರುವವರು ತಮ್ಮ ಸ್ಪಷ್ಟವಾಗಿ ಮಾತನಾಡುವ ಸಾಮರ್ಥ್ಯದಲ್ಲಿ ಪ್ರಗತಿ ಉಂಟಾಗುವುದನ್ನು ಸ್ವತಃ ಕಾಣಬಹುದು ಮತ್ತು ಆತ್ವವಿಶ್ವಾಸವನ್ನು ವೃದ್ಧಿಸಿಕೊಳ್ಳಬಹುದು.
ಡಾ| ಐಶ್ವರ್ಯಾ ಲಿಝ್ ವರ್ಗೀಸ್, ಅಸೋಸಿಯೇಟ್ ಪ್ರೊಫೆಸರ್, ಆಡಿಯಾಲಜಿ ಮತ್ತು ಸ್ಪೀಚ್ ಲ್ಯಾಂಗ್ವೇಜ್ ಪೆಥಾಲಜಿ ವಿಭಾಗ, ಕೆಎಂಸಿ, ಮಾಹೆ, ಮಣಿಪಾಲ