Advertisement

ಅಡ್ಡ ಬಂಡೆಯೇ ದೊಡ್ಡ ಸಮಸ್ಯೆ

11:51 AM Jun 03, 2018 | |

ನಗರದ ಜನರು ಅನುಭವಿಸುತ್ತಿರುವ ಸಂಚಾರ ದಟ್ಟಣೆ, ಪಾರ್ಕಿಂಗ್‌ ರೀತಿಯ ಸಮಸ್ಯೆಗಳ ಪರಿಹಾರಕ್ಕೆ ಕೈಗೆತ್ತಿಕೊಂಡಿರುವ ಕಾಮಗಾರಿಗಳು ರಾಜ್ಯ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಬಹುತೇಕ ಸ್ತಬ್ಧಗೊಂಡಿವೆ. ನೀತಿ ಸಂಹಿತೆ ಜಾರಿಯಾದ ಬಳಿಕ ನಗರದ ಕೇಂದ್ರ ಭಾಗದಲ್ಲಿ ನಡೆಯುತ್ತಿರುವ ಓಕಳಿಪುರ ಅಷ್ಟಪಥ ಕಾಮಗಾರಿ, ಬಹುಮಹಡಿ ಪಾರ್ಕಿಂಗ್‌ ಕಟ್ಟಡ, ಸೇರಿದಂತೆ ಪ್ರಮುಖ ಕಾಮಗಾರಿಗಳು ನಿಂತಲ್ಲೆ ನಿಂತಿದ್ದು, ಇದೀಗ ಮಳೆಗಾಲ ಆರಂಭವಾಗುತ್ತಿರುವ ಹಿನ್ನೆಲೆಯಲ್ಲಿ ಮತ್ತೆರಡು ತಿಂಗಳು ಕಾಮಗಾರಿಗಳು ಆಮೆಗತಿಯಲ್ಲಿ ಸಾಗಲಿವೆ. ಇದರಿಂದ ಸಾರ್ವಜನಿಕರು ತೊಂದರೆ ಅನುಭವಿಸಬೇಕಾಗುತ್ತದೆ.

Advertisement

* ಪಾರ್ಕಿಂಗ್‌ಗೆ ತೆರೆದುಕೊಂಡಿರುವ ಒಂದು ಮಹಡಿ
* ಬಹುಮಹಡಿ ವಾಹನ ನಿಲುಗಡೆ ತಾಣ
* ಓಕಳಿಪುರ ಜಂಕ್ಷನ್‌ನಲ್ಲೂ ಮುಂದೆ ಸಾಗದ ಕೆಲಸ

ಯೋಜನೆ: ನಗರದಲ್ಲಿನ ಪಾರ್ಕಿಂಗ್‌ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಉದ್ದೇಶದಿಂದ ಪಾಲಿಕೆಯಿಂದ ಗಾಂಧಿನಗರದ ಫ್ರೀಡಂ ಪಾರ್ಕ್‌ನಲ್ಲಿ ಬಹುಮಹಡಿ ವಾಹನ ನಿಲುಗಡೆ ತಾಣ ನಿರ್ಮಿಸಲಾಗುತ್ತಿದ್ದು, ಕಾಮಗಾರಿ ಪೂರ್ಣಗೊಂಡ ನಂತರ 556 ಕಾರುಗಳು ಮತ್ತು 500 ದ್ವಿಚಕ್ರ ವಾಹನಗಳ ನಿಲುಗಡೆ ಮಾಡಬಹುದಾಗಿದೆ.

ಈ ತಿಂಗಳ ಪ್ರಗತಿ: ಮೊದಲ ಹಂತದಲ್ಲಿ ಒಂದು ಮಹಡಿಯನ್ನು ಪಾರ್ಕಿಂಗ್‌ಗಾಗಿ ಸಿದ್ಧಗೊಳಿಸಲಾಗಿದೆ. ಜತೆಗೆ ಎರಡು ಹಂತಗಳ ಕಟ್ಟಡ ನಿರ್ಮಾಣ ಕಾಮಗಾರಿಯ ಎಲ್ಲ ಮೇಲ್ಛಾವಣಿಗಳ ನಿರ್ಮಾಣ ಕಾರ್ಯ ಪೂರ್ಣಗೊಂಡಿರುವುದು ಹೊರತುಪಡಿಸಿ, ಕಳೆದೊಂದು ತಿಂಗಳಲ್ಲಿ ಯಾವುದೇ ಕಾಮಗಾರಿ ನಡೆದಿಲ್ಲ. 

ವಸ್ತುಸ್ಥಿತಿ: ನಾಲ್ಕು ಹಂತಗಳ ಕಾಮಗಾರಿಯ ಪೈಕಿ ಎರಡು ಹಂತಗಳು ಪೂರ್ಣಗೊಳಿಸಿ, ಒಂದು ಮಹಡಿಯಲ್ಲಿ ಪಾರ್ಕಿಂಗ್‌ ಸೇವೆ ಕಲ್ಪಿಸಲು ಅಗತ್ಯ ವ್ಯವಸ್ಥೆ ಕಲ್ಪಿಸಲಾಗಿದ್ದು, ಮೂರನೇ ಹಂತದ ಕಾಮಗಾರಿಗೆ ಪಾಯ ಹಾಕಲಾಗಿದ್ದು, ಕಳೆದೊಂದು ತಿಂಗಳಲ್ಲಿ ಹೆಚ್ಚಿನ ಕಾಮಗಾರಿಯಾಗಿಲ್ಲ. 

Advertisement

ಪಾಲಿಕೆಯ ಎಂಜಿನಿಯರ್‌ ಏನಂತಾರೆ?: ಎರಡು ಹಂತಗಳ ಕಾಮಗಾರಿ ಪೂರ್ಣಗೊಂಡಿರುವ ಎರಡು ಹಂತಗಳ ಮೂರು ಮಹಡಿಗಳ ಕಾಮಗಾರಿ ಪೂರ್ಣಗೊಂಡಿದೆ. ಅದರಂತೆ ಮೂರನೇ ಹಂತದ ಕಾಮಗಾರಿಗೆ ಪಾಯ ಹಾಕಲಾಗಿದೆ. ಮೂರು ಹಂತಗಳ ಕಾಮಗಾರಿ ಪೂರ್ಣಗೊಂಡ ನಂತರದಲ್ಲಿ ಮೂರು ಮಹಡಿಗಳಿಗೆ ಸಂಪರ್ಕಿಸುವ ರ್‍ಯಾಂಪ್‌ಗ್ಳನ್ನು ನಿರ್ಮಿಸಲಾಗುತ್ತದೆ. ನಗರದಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ಕಾಮಗಾರಿ ಶೀಘ್ರ ಪೂರ್ಣಗೊಳಿಸಲು ಸಾಧ್ಯವಾಗುತ್ತಿಲ್ಲ ಎನ್ನುತ್ತಾರೆ ಪಾಲಿಕೆಯ ಎಂಜಿನಿಯರ್‌.

ತಿಂಗಳ ಕೆಲಸ ಬಹುತೇಕ ಬಂದ್‌
ಪ.ಕಾರ್ಡ್‌ ರಸ್ತೆ ಸಿಗ್ನಲ್‌ ಫ್ರೀ ಕಾರಿಡಾರ್‌: 
ಯೋಜನೆ: ಸಿಗ್ನಲ್‌ ಮುಕ್ತ ಕಾರಿಡಾರ್‌ ವ್ಯವಸ್ಥೆ ಕಲ್ಪಿಸುವ ಉದ್ದೇಶದಿಂದ ಪಶ್ಚಿಮ ಕಾರ್ಡ್‌ ರಸ್ತೆಯ ಬಸವೇಶ್ವರ ನಗರ, ಮಂಜುನಾಥ ನಗರ ಹಾಗೂ ಶಿವನಗರದಲ್ಲಿ ಮೇಲ್ಸೇತುವೆಗಳನ್ನು ನಿರ್ಮಿಸಲಾಗುದ್ದು, ಯೋಜನೆಯಿಂದ ಕಾರ್ಡ್‌ ರಸ್ತೆ ಸಿಗ್ನಲ್‌ ಮುಕ್ತವಾಗಲಿದೆ. ಈ ತಿಂಗಳ ಪ್ರಗತಿ: ನೀತಿ ಸಂಹಿತೆಗೆ ಜಾರಿಯಾಗುವ ಮೊದಲೇ ಎರಡು ಮೇಲ್ಸೇತುವೆಗಳಿಗೆ ಗರ್ಡ್‌ರ್‌ಗಳ ಅಳವಡಿಕೆ ಕಾರ್ಯ ಪೂರ್ಣಗೊಂಡಿದ್ದು, ರಸ್ತೆ ನಿರ್ಮಾಣ ಕಾಮಗಾರಿ ಸಹ ಆರಂಭಿಸಲಾಗಿತ್ತು. ಕಳೆದ ತಿಂಗಳಲ್ಲಿ ಕಾಮಗಾರಿಯು ಬಹುತೇಕ ಸ್ಥಗಿತಗೊಂಡಿತ್ತು. 

ವಸ್ತುಸ್ಥಿತಿ: ಮಂಜುನಾಥ ನಗರ ಮೇಲ್ಸೇತುವೆ ಕಾಮಗಾರಿ ಪೂರ್ಣಗೊಂಡಿದ್ದು, ಸಣ್ಣಪುಟ್ಟ ಕೆಲಸಗಳು ಬಾಕಿಯಿವೆ. ಇನ್ನು ಬಸವೇಶ್ವನಗರ ಜಂಕ್ಷನ್‌ ಮೇಲ್ಸೇತುವೆ ಕಾಮಗಾರಿ ಅಂತಮ ಹಂತದಲ್ಲಿದೆ. ಆದರೆ, ಚುನಾವಣೆ ಹಿನ್ನೆಲೆಯಲ್ಲಿ ಕಾಮಗಾರಿ ಸ್ಥಗಿತಗೊಳಿಸಿದರಿಂದ ಎರಡು ಯೋಜನೆಗಳು ನಿಂತಲ್ಲೇ ನಿಂತಿವೆ. 

ಗುತ್ತಿಗೆದಾರ: ಎಂ.ವೆಂಕಟರಾವ್‌, ಇನ್ಫಾ ಪ್ರಾಜೆಕ್ಟ್ಸ್, ಪ್ರೈವೇಟ್‌ ಲಿಮಿಟೆಡ್‌

ಬಸವೇಶ್ವರ ನಗರ ಮೇಲ್ಸೇತುವೆ ಕಾಮಗಾರಿ ಪೂರ್ಣ ಗೊಳ್ಳಬೇಕಿದ್ದು, ಮಂಜುನಾಥ ನಗರ ಕಾಮಗಾರಿ ಬಹುತೇಕ ಮುಗಿದಿದೆ. ಡಾಂಬರೀಕರಣ, ತಡೆಗೋಡೆಗಳಿಗೆ ಬಣ್ಣ, ಬೀದಿ ದೀಪ ಅಳವಡಿಕೆಯಂತಹ ಕೆಲಸಗಳು ಬಾಕಿಯಿವೆ.
-ಸಹಾಯಕ ಎಂಜಿನಿಯರ್‌ 

ಶುರುವಾದಲ್ಲೇ ನಿಂತಿದೆ ಮಾರ್ಗ
ನಮ್ಮ ಮೆಟ್ರೋ 2ನೇ ಹಂತ
ಗುತ್ತಿಗೆ ಪಡೆದವರು:
ಅಂತಿಮ ಟೆಂಡರ್‌ ಅವಾರ್ಡ್‌ ಆಗಬೇಕಿದೆ. 

ಬಾಕಿ ಇರುವ ಕಾಮಗಾರಿ: ಟೆಂಡರ್‌ ಅವಾರ್ಡ್‌, ಮಾರ್ಗದಲ್ಲಿ ಬರುವ ಯುಟಿಲಿಟಿಗಳ ಸ್ಥಳಾಂತರ, ಮರಗಳ ತೆರವು, ಪೈಲಿಂಗ್‌, ಕಂಬಗಳ ನಿರ್ಮಾಣ, ಹಳಿಗಳ ಜೋಡಣೆ, ವಿದ್ಯುತ್‌ ಲೈನ್‌ ಜೋಡಣೆ, ನಿಲ್ದಾಣಗಳ ನಿರ್ಮಾಣ ಕಾಮಗಾರಿ, ಪ್ರಾಯೋಗಿಕ ಸಂಚಾರ.

ಪೂರ್ಣಗೊಳಿಸುವ ಗುರಿ: 27 ತಿಂಗಳು (ಸಿವಿಲ್‌ ಕಾಮಗಾರಿ)

ವಸ್ತುಸ್ಥಿತಿ: ಕಾಮಗಾರಿ ಎಲ್ಲಿ ಶುರುವಾಯೊ¤à ಅಲ್ಲೇ ನಿಂತಿದೆ. ಯಾವುದೇ ಪ್ರಗತಿ ಕಂಡುಬಂದಿಲ್ಲ. ಚುನಾವಣೆಯಿಂದ ಬೆಂಗಳೂರು ಅಭಿವೃದ್ಧಿ ಕಾಮಗಾರಿಗಳು ಬಹುತೇಕ ಮಂಕಾಗಿವೆ. “ನಮ್ಮ ಮೆಟ್ರೋ’ ಕೂಡ ಇದಕ್ಕೆ ಹೊರತಾಗಿಲ್ಲ. ಟೆಂಡರ್‌ಗೆ ಎಲ್ಲ ಸಿದ್ಧವಾಗಿದ್ದರೂ ಮಾದರಿ ನೀತಿಸಂಹಿತೆ ಹಿನ್ನೆಲೆಯಲ್ಲಿ ಟೆಂಡರ್‌ ಕರೆಯುವಂತಿರಲಿಲ್ಲ. ಆದರೆ, ವಾಸ್ತವವಾಗಿ ಮೆಟ್ರೋ ವಿಚಾರದಲ್ಲಿ ಚುನಾವಣೆ ಕೇವಲ ನೆಪ. ಯಾಕೆಂದರೆ, 2014-15ರಲ್ಲೇ ಅನುಮೋದನೆ ದೊರೆತಿದ್ದರೂ ಇದುವರೆಗೆ ಟೆಂಡರ್‌ ಪ್ರಕ್ರಿಯೆಯಲ್ಲೇ ಯೋಜನೆ ಇದೆ.

ವಿಳಂಬಕ್ಕೆ ಕಾರಣ: ನಿಗದಿತ ಯೋಜನಾ ವೆಚ್ಚಕ್ಕಿಂತ ಕಡಿಮೆ ಮೊತ್ತಕ್ಕೆ ಟೆಂಡರ್‌ ಬಿಡ್‌ ಆಗಿದ್ದರಿಂದ ಮರುಟೆಂಡರ್‌ ಕರೆದಿದ್ದು, ಇದರಿಂದ ಮತ್ತಷ್ಟು ವಿಳಂಬವಾದಂತಾಗಿದೆ. ಅಲ್ಲದೆ, ಆರ್‌.ವಿ. ರಸ್ತೆ-ಬೊಮ್ಮಸಂದ್ರ ನಡುವೆ ಜಯದೇವ ಆಸ್ಪತ್ರೆ ಮಾರ್ಗದಲ್ಲಿ ನಕ್ಷೆ ಅಂತಿಮಗೊಳಿಸುವುದೇ ದೊಡ್ಡ ತಲೆನೋವಾಗಿದೆ.

ಗುತ್ತಿಗೆ ಪಡೆದವರು: ಸಿಂಪ್ಲೆಕ್ಸ್‌ ಇನ್‌ಫ್ರಾಸ್ಟ್ರಕ್ಚರ್‌ ಕಂಪೆನಿ

ಬಾಕಿ ಇರುವ ಕಾಮಗಾರಿ: ಜಯದೇವ ಹೃದ್ರೋಗ ಸಂಸ್ಥೆ ಬಳಿಯ ಮೇಲ್ಸೇತುವೆ ನೆಲಸಮಗೊಳಿಸುವುದು, ಪೈಲಿಂಗ್‌, ಕಂಬಗಳ ನಿರ್ಮಾಣ, ಹಳಿಗಳ ಜೋಡಣೆ, ವಿದ್ಯುತ್‌ ಲೈನ್‌ ಜೋಡಣೆ, ನಿಲ್ದಾಣಗಳ ನಿರ್ಮಾಣ ಕಾಮಗಾರಿ, ಪ್ರಾಯೋಗಿಕ ಸಂಚಾರ.

ಪೂರ್ಣಗೊಳಿಸುವ ಗುರಿ: 27 ತಿಂಗಳು (ಸಿವಿಲ್‌ ಕಾಮಗಾರಿ)

ಶೂನ್ಯ ಪ್ರಗತಿಯೇ ಸಾಧನೆ
ಮುತ್ತುರಾಜ ಜಂಕ್ಷನ್‌ ಅಂಡರ್‌ ಪಾಸ್‌ 
ಯೋಜನೆ:
ಸಿಲ್ಕ್ ಬೋರ್ಡ್‌ ಜಂಕ್ಷನ್‌ನಿಂದ ಮೈಸೂರು ರಸ್ತೆ ಜಂಕ್ಷನ್‌ವರೆಗೆ ಸಿಗ್ನಲ್‌ ಮುಕ್ತ ಕಾರಿಡಾರ್‌ ನಿರ್ಮಿಸುವ ಉದ್ದೇಶದಿಂದ ಮುತ್ತುರಾಜ ಜಂಕ್ಷನ್‌, ಫ‌ುಡ್‌ ವರ್ಲ್ಡ್ ಜಂಕ್ಷನ್‌ ಹಾಗೂ ಜೇಡಿಮರ ಜಂಕ್ಷನ್‌ಗಳಲ್ಲಿ ಅಂಡರ್‌ಪಾಸ್‌ ಮತ್ತು ಡಾಲರ್ ಕಾಲೋನಿ, ಹೊಸಕೆರೆ ಹಳ್ಳಿಯ ಕೆಇಬಿ ಜಂಕ್ಷನ್‌ಗಳಲ್ಲಿ ಮೇಲ್ಸೇತುವೆ ನಿರ್ಮಿಸಲು ಯೋಜನೆ ರೂಪಿಸಲಾಗಿದೆ. 

ಈ ತಿಂಗಳ ಪ್ರಗತಿ: ಎರಡು ತಿಂಗಳ ಹಿಂದೆ ಕುಡಿಯುವ ನೀರು, ಒಳಚರಂಡಿ, ಬೆಸ್ಕಾಂ ಸೇರಿದಂತೆ ಇತರೆ ಸಂಸ್ಥೆಗಳ ಸೇವಾಜಾಲಗಳನ್ನು ಸ್ಥಳಾಂತರಿಸುವುದು ಹಾಗೂ ಕೆಳ ಸೇತುವೆಗೆ ತಡೆಗೋಡೆಗಳ ನಿರ್ಮಾಣ ಕಾರ್ಯ ಆರಂಭಿಸಿರುವುದು ಹೊರತುಪಡಿಸಿ ಯಾವುದೇ ಪ್ರಗತಿಯಾಗಿಲ್ಲ.
 
ವಸ್ತುಸ್ಥಿತಿ: ಅಂಡರ್‌ಪಾಸ್‌ ತಡೆಗೋಡೆ ನಿರ್ಮಾಣ ಕಾರ್ಯ ಆರಂಭಿಸಿರುವ ಅಧಿಕಾರಿಗಳು, ತಡೆಗೋಡೆಗಳ ಕಾಮಗಾರಿ ಪೂರ್ಣಗೊಂಡ ಬಳಿಕ ಮಣ್ಣು ಅಗೆಯಲಿದ್ದಾರೆ. ಆದರೆ, ಎರಡು ತಿಂಗಳಲ್ಲಿ ಕಾಮಗಾರಿ ಸ್ತಬ್ಧಗೊಂಡಿದ್ದು, ಮಳೆ ಹಿನ್ನೆಲೆಯಲ್ಲಿ ಮಣ್ಣು ಅಗೆಯುವ ಕೆಲಸಕ್ಕೆ ಮುಂದಾಗಿಲ್ಲ.

ಗುತ್ತಿಗೆದಾರ: ಎಂವಿಆರ್‌,ಇನ್ಫಾ ಪ್ರಾಜೆಕ್ಟ್ಸ್ ಪ್ರೈವೇಟ್‌ ಲಿಮಿಟೆಡ್‌

ಚುನಾವಣೆಯ ಹಿನ್ನೆಲೆಯಲ್ಲಿ ಹೆಚ್ಚಿನ ಕಾಮಗಾರಿ ಕೈಗೊಳ್ಳಲು ಸಾಧ್ಯವಾಗಲಿಲ್ಲ. ಸಾರ್ವಜನಿಕರಿಗೆ ತೊಂದರೆಯಾಗದಂತೆ ಮೊದಲು ತಡೆ ಗೋಡೆ ನಿರ್ಮಿಸಿ ನಂತರ ಮಣ್ಣು ಅಗೆಯಲು ಉದ್ದೇಶಿ ಸಿದ್ದು, ಮಳೆಯಿಂದ ಮಣ್ಣು ಅಗೆಯುವ ಕೆಲಸ ವಿಳಂಬ ವಾಗುತ್ತಿದೆ.
-ಸಹಾಯಕ ಎಂಜಿನಿಯರ್‌

ಕಾಂಕ್ರಿಟ್‌ ಎಲಿಮೆಂಟ್‌ ಅಳವಡಿಕೆ ಕಾರ್ಯಕ್ಕೆ ಸಿದ್ಧತೆ
ಓಕಳಿಪುರ ಜಂಕ್ಷನ್‌ ಅಷ್ಟಪಥ
ಯೋಜನೆ:
ದೇವರಾಜ ಅರಸು ವೃತ್ತದಿಂದ ಓಕಳಿಪುರ ವೃತ್ತದವರೆಗಿನ ಎಂಟು ಪಥದ ಸಿಗ್ನಲ್‌ ಮುಕ್ತ ಕಾರಿಡಾರ್‌ ಯೋಜನೆ. ಈ ಯೋಜನೆಯಿಂದ ಗುಬ್ಬಿ ತೋಟದಪ್ಪ ರಸ್ತೆ, ಶೇಷಾದ್ರಿ ರಸ್ತೆ, ಓಕಳಿಪುರ ರಸ್ತೆ ಹಾಗೂ ಕೃಷ್ಣಮಿಲ್‌ ರಸ್ತೆಗಳಲ್ಲಿನ ಸಂಚಾರ ಸಿಗ್ನಲ್‌ ಮುಕ್ತವಾಗಲಿದೆ.

ಈ ತಿಂಗಳ ಪ್ರಗತಿ: ಎಂಟು ಪಥಗಳ ಪೈಕಿ ಈಗಾಗಲೇ ಮೂರು ಪಥಗಳಲ್ಲಿ ಸಾರ್ವಜನಿಕರ ಸಂಚಾರ ಅವಕಾಶ ಮಾಡಿಕೊಡಲಾಗಿದ್ದು, ಆರ್‌.ಜೆ.ಕಲ್ಯಾಣ ಮಂಟಪ ಹಾಗೂ ಕೋಡೆ ವೃತ್ತದ ಕಡೆಗೆ ಹೋಗುವ ಕಡೆಗಳಲ್ಲಿ ರೈಲ್ವೆ ಹಳಿಗಳಿಗೆ ಒಟ್ಟು 4 ಕಾಂಕ್ರೀಟ್‌ ಎಲಿಮೆಂಟ್‌ ಅಳವಡಿಕೆ ಕಾರ್ಯಕ್ಕೆ ಸಿದ್ಧತೆ ನಡೆಸಲಾಗಿದೆ.

ವಸ್ತುಸ್ಥಿತಿ: ಒಂದು ಮೇಲ್ಸೇತುವೆ ಹಾಗೂ ಅಂಡರ್‌ಪಾಸ್‌ನಲ್ಲಿ ಪೂರ್ಣ ಪ್ರಮಾಣದ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದ್ದು, ನಗರದಲ್ಲಿ ಹಲವು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಅಂಡರ್‌ಪಾಸ್‌ನಲ್ಲಿ ನೀರು ನಿಂತು ವಾಹನ ಸವಾರರು ತೊಂದರೆ ಅನುಭವಿಸುವಂತಾಗಿದೆ. ಮಳೆಯ ಹಿನ್ನೆಲೆಯಲ್ಲಿ ಯಾವುದೇ ಹೊಸ ಕಾಮಗಾರಿ ಕೈಗೆತ್ತಿಕೊಂಡಿಲ್ಲ. 

ಗುತ್ತಿಗೆದಾರ: ಸಿಂಪ್ಲೆಕ್ಸ್‌ ಇನ್‌ಫ್ರಾಸ್ಟ್ರಕ್ಚರ್‌,ಪ್ರೈವೇಟ್‌ ಲಿಮಿಟೆಡ್‌

ರೈಲ್ವೆ ನಿಲ್ದಾಣದಿಂದ ನಗರಕ್ಕೆ ಸಂಪರ್ಕಿಸುವ ಲೂಪ್‌, ಮಲ್ಲೇಶ್ವರದಿಂದ ರೈಲ್ವೆ ನಿಲ್ದಾಣಕ್ಕೆ ಸಂಪರ್ಕಿಸುವ ಲೂಪ್‌-2 ನಿರ್ಮಾಣ ಹಾಗೂ ರೈಲ್ವೆ ಹಳಿ ಕಳೆಗೆ 4 ಎಲಿಮೆಂಟ್‌ ಅಳವಡಿಸಲು ಸಿದ್ಧತೆ ಮಾಡಿಕೊಳ್ಳಲಾಗಿದ್ದು, ರೈಲ್ವೆ ಇಲಾಖೆ ಸಹಭಾಗಿತ್ವದಲ್ಲಿ ಕೆಲಸ ಕೈಗೆತ್ತಿಕೊಳ್ಳಲಾಗುವುದು.
-ಸಹಾಯಕ ಎಂಜಿನಿಯರ್‌ 

ಮಾಹಿತಿ: ವೆಂ. ಸುನೀಲ್‌ ಕುಮಾರ್‌, ವಿಜಯ್‌ಕುಮಾರ್‌ ಚಂದರಗಿ

Advertisement

Udayavani is now on Telegram. Click here to join our channel and stay updated with the latest news.

Next