Advertisement

ಬಗೆಹರಿದ ಬಿಕ್ಕಟ್ಟು, ಒಗ್ಗಟ್ಟಿನ ಮಾತು!

03:45 AM Jan 29, 2017 | Team Udayavani |

ಬೆಂಗಳೂರು: ರಾಜ್ಯ ಬಿಜೆಪಿಯಲ್ಲಿ ಉದ್ಭವಿಸಿದ್ದ ಭಿನ್ನಾಭಿಪ್ರಾಯ ಶಮನವಾದ ಬೆನ್ನಲ್ಲೇ ಭಿನ್ನಮತ ಉದ್ಭವಿಸಲು ಕಾರಣವಾದ ಶಿವಮೊಗ್ಗ ಸೇರಿ ಕೆಲವು ಜಿಲ್ಲೆಗಳ ಪದಾಧಿಕಾರಿಗಳ ಪಟ್ಟಿ ಪರಿಷ್ಕರಣೆ ಕಾರ್ಯಕ್ಕೆ ಪಕ್ಷ ಮುಂದಾಗಿದೆ.

Advertisement

ಪದಾಧಿಕಾರಿಗಳ ಪಟ್ಟಿ ಪರಿಷ್ಕರಣೆ ಕುರಿತಂತೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ರಚಿಸಿರುವ ಬಿಜೆಪಿ
ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ, ಪಕ್ಷದ ರಾಜ್ಯ ಉಸ್ತುವಾರಿ ಮುರಳೀಧರರಾವ್‌, ರಾಷ್ಟ್ರೀಯ ಜಂಟಿ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಬಿ.ಎಲ್‌.ಸಂತೋಷ್‌, ರಾಜ್ಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಪಿ.ಅರುಣ್‌ ಕುಮಾರ್‌ ಅವರ ಸಮಿತಿ ಶೀಘ್ರದಲ್ಲೇ ಸಂಬಂಧಪಟ್ಟ ಜಿಲ್ಲೆಗಳ ಸಭೆ ಕರೆಯುವ ಸಾಧ್ಯತೆ ಇದೆ.

ಈ ಕುರಿತಂತೆ ಚರ್ಚಿಸಲು ಮುಂದಿನ ವಾರ ಅಥವಾ 15 ದಿನಗಳಲ್ಲಿ ಪ್ರಮುಖರ ಸಭೆ ಕರೆಯಲಿದ್ದು, ಈ ಸಭೆಯಲ್ಲಿ
ಯಾವ್ಯಾವ ಜಿಲ್ಲೆಗಳ ನೇಮಕಾತಿ ಕುರಿತಂತೆ ಭಿನ್ನಾಭಿಪ್ರಾಯಗಳಿವೆ ಎಂಬುದನ್ನು ಪರಿಶೀಲಿಸಲಾಗುವುದು. ಬಳಿಕ ಆ ಜಿಲ್ಲೆಯ ಜಿಲ್ಲಾಧ್ಯಕ್ಷರು ಹಾಗೂ ಪ್ರಮುಖರನ್ನು ಕರೆಸಿ ಪದಾಧಿಕಾರಿಗಳ ಪಟ್ಟಿ ಪರಿಷ್ಕರಿಸಲಾಗುವುದು. ಈ ಸಂದರ್ಭದಲ್ಲಿ ಕೆಲವರನ್ನು ಕೈಬಿಟ್ಟು ಸಂಘಟನೆಯಲ್ಲಿ ಇದುವರೆಗೆ ಸಕ್ರಿಯರಾದವರಿಗೆ ಅವಕಾಶ ನೀಡಲಾಗುವುದು ಎಂದು ಮೂಲಗಳು ಹೇಳಿವೆ.

ಶುಕ್ರವಾರ ಅಮಿತ್‌ ಶಾ ಜತೆಗೆ ನಡೆದ ಸಭೆಯಲ್ಲಿ ಪದಾಧಿಕಾರಿಗಳ ನೇಮಕ ವಿಚಾರವೇ ಪ್ರಮುಖವಾಗಿ ಚರ್ಚೆಯಾಗಿದೆ. ಈ ಅಂಶವೇ ಪಕ್ಷದಲ್ಲಿ ಭಿನ್ನಮತ ಸೃಷ್ಟಿಯಾಗಿ ಸಂಗೊಳ್ಳಿ ರಾಯಣ್ಣ ಬ್ರಿಗೇಡ್‌ ಸೃಷ್ಟಿಯಾಗಲು
ಕಾರಣವಾಯಿತು ಎಂದು ಕೆ.ಎಸ್‌.ಈಶ್ವರಪ್ಪ ಹೇಳುವಾಗ ರಾಷ್ಟ್ರೀಯ ಜಂಟಿ ಪ್ರಧಾನ ಕಾರ್ಯದರ್ಶಿ (ಸಂಘಟನೆ)
ಬಿ.ಎಲ್‌.ಸಂತೋಷ್‌ ಅವರೂ ಸಹಮತ ವ್ಯಕ್ತಪಡಿಸಿದರು. ಆ ವೇಳೆ ಗೊಂದಲ ಇರುವುದನ್ನು ಬಿಎಸ್‌ವೈ ಅವರೂ
ಒಪ್ಪಿಕೊಂಡರು ಎನ್ನಲಾಗಿದೆ. ಈ ಕಾರಣಕ್ಕಾಗಿ ಸಮಿತಿ ರಚಿಸಿದ ಅಮಿತ್‌ ಶಾ, ಪದಾಧಿಕಾರಿಗಳ ಪಟ್ಟಿಯನ್ನು ಶೀಘ್ರ ಪರಿಷ್ಕರಿಸಬೇಕು ಎಂದು ತಾಕೀತು ಮಾಡಿದ್ದಾರೆ.

ಅದರಂತೆ ತಕ್ಷಣದಿಂದಲೇ ಈ ಪ್ರಕ್ರಿಯೆ ಆರಂಭಿಸಲು ಯಡಿಯೂರಪ್ಪ ಸೇರಿ ಸಮಿತಿಯಲ್ಲಿದ್ದವರು ತೀರ್ಮಾನಿಸಿದ್ದಾರೆ.

Advertisement

ಶಾ ರೂಲಿಂಗ್‌ : ಯಾರೇ ಆಗಲಿ, ಅಸಮಾಧಾನವಿದ್ದರೆ ಯಾವುದೇ ಕಾರಣಕ್ಕೂ ಅದನ್ನು ಬಹಿರಂಗಪಡಿಸಿ ಪಕ್ಷ
ಸಂಘಟನೆಗೆ ಧಕ್ಕೆ ಮಾಡಬಾರದು ಎಂದು ಅಮಿತ್‌ ಶಾ ರೂಲಿಂಗ್‌ ನೀಡಿದರು. ಇದಾದ ಬಳಿಕ ಬಿಎಸ್‌ವೈ ಮತ್ತು
ಈಶ್ವರಪ್ಪ ಭಿನ್ನಮತ ಮರೆತು ಒಟ್ಟಾಗಿ ಹೋಗುವುದಾಗಿ ಭರವಸೆ ನೀಡಿದರು. 

ಗೊಂದಲಕ್ಕೆ ಕ್ಷಮೆ ಕೇಳಿದ ನಾಯಕರು
ಭಿನ್ನಮತ ಮರೆತು ದೆಹಲಿಯಿಂದ ಬೆಂಗಳೂರಿಗೆ ಬಂದಿಳಿದಿರುವ ಯಡಿಯೂರಪ್ಪ ಮತ್ತು ಕೆ.ಎಸ್‌.ಈಶ್ವರಪ್ಪ , ಇದೀಗ
ಒಟ್ಟಾಗಿ ರಾಜ್ಯದಲ್ಲಿ ಪಕ್ಷ ಸಂಘಟನೆ ಮಾಡಿ ಅಧಿಕಾರಕ್ಕೆ ಬರುವ ಮಾತುಗಳನ್ನು ಆಡಿದ್ದಾರೆ. ದೆಹಲಿಯಿಂದ ಶನಿವಾರ ವಿಮಾನದ ಮೂಲಕ ಒಟ್ಟಾಗಿ ಬಂದು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿಳಿದ ಇಬ್ಬರೂ ಸುದ್ದಿಗಾರರೊಂದಿಗೆ ಮಾತನಾಡಿ, ಆಗಿರುವ ಗೊಂದಲ ಕ್ಷಮಿಸಿ ಎಂದು ಜನರಲ್ಲಿ ಕೇಳಿ ಪಕ್ಷ ಸಂಘಟನೆ ಮಾಡುತ್ತೇವೆ ಎಂದರು. ಯಡಿಯೂರಪ್ಪ ಮಾತನಾಡಿ, ನಮ್ಮ ನಡುವೆ ಇದ್ದ ಕೆಲ ಭಿನ್ನಾಭಿಪ್ರಾಯಗಳನ್ನು ವರಿಷ್ಠರ ಸಮ್ಮುಖದಲ್ಲಿ
ಬಗೆಹರಿಸಿಕೊಂಡಿದ್ದೇವೆ. ಅಲ್ಲದೆ, ಬ್ರಿಗೇಡ್‌ನ‌ಲ್ಲಿ ಪಾಲ್ಗೊಂಡಿದ್ದವರನ್ನು ಪಕ್ಷದಿಂದ ಅಮಾನತುಗೊಳಿಸಿದವನ್ನು ವಾಪಸ್‌ ಸೇರಿಸಿಕೊಳ್ಳಲಾಗುವುದು ಎಂದು ತಿಳಿಸಿದರು. ಈಶ್ವರಪ್ಪ ಮಾತನಾಡಿ, ನಮ್ಮ ನಡುವಿನ ಗೊಂದಲ ನಿವಾರಣೆಯಾಗಿದೆ. ಇನ್ನುಮುಂದೆ ಬಿಜೆಪಿ ಮತ್ತು ನಾನು ಬ್ರಿಗೇಡ್‌ನಿಂದ ದೂರ ಇರುತ್ತೇವೆ. ಬ್ರಿಗೇಡ್‌ ಏನು ಮಾಡುತ್ತಾರೆ ಎಂಬುದು ಗೊತ್ತಿಲ್ಲ. ರಾಜಕೀಯ ವಿಚಾರ ಬಂದಾಗ ಬ್ರಿಗೇಡ್‌ನ‌ಲ್ಲಿ ಇರುವುದಿಲ್ಲ. ಯಡಿಯೂರಪ್ಪ ಅವರನ್ನು ಮುಂದಿನ ಮುಖ್ಯಮಂತ್ರಿಯಾಗಿ ಮಾಡಲು ನಾವೆಲ್ಲರೂ ಸೇರಿ ಹೋರಾಟ ಮಾಡುತ್ತೇವೆ ಎಂದರು. ಈ ಮಧ್ಯೆ, ತಮ್ಮ ನಡುವಿನ ಗೊಂದಲ ಬಗೆಹರಿದಿರುವುದರಿಂದ ಬೆಂಬಲಿಗರಲ್ಲೂ ಗೊಂದಲ ದೂರ ಮಾಡಲು ಯಡಿಯೂರಪ್ಪ ಮತ್ತು ಈಶ್ವರಪ್ಪ ಭಾನುವಾರ ಪ್ರತ್ಯೇಕವಾಗಿ ಬೆಂಬಲಿಗರ ಸಭೆ ಕರೆದಿದ್ದಾರೆ ಎನ್ನಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next