ಚೆನ್ನೈ: ದೀಪಾವಳಿ ಹಬ್ಬಕ್ಕೆ ರಿಲೀಸ್ ಆದ ಕಾಲಿವುಡ್ನ ʼಅಮರನ್ʼ (Amaran) ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಸಖತ್ ಸದ್ದು ಮಾಡುತ್ತಿದೆ.
ಶಿವಕಾರ್ತಿಕೇಯನ್ (Sivakarthikeyan), ಸಾಯಿ ಪಲ್ಲವಿ (Sai Pallavi) ʼಅಮರನ್ʼ ನೋಡಿ ಪ್ರೇಕ್ಷಕರು ಫಿದಾ ಆಗಿದ್ದಾರೆ. ಅಭಿನಯ, ಕಥೆ, ಮೇಕಿಂಗ್ ಸೇರಿದಂತೆ ʼಅಮರನ್ʼ ಎಲ್ಲಾ ವಿಭಾಗದಲ್ಲೂ ಮೋಡಿ ಮಾಡಿದೆ.
ಮೇಜರ್ ಮುಕುಂದ್ ವರದರಾಜನ್ ಪಾತ್ರಕ್ಕೆ ಶಿವಕಾರ್ತಿಕೇಯನ್ ಜೀವ ತುಂಬಿದ್ದಾರೆ. ಇತ್ತ ಸಾಯಿಪಲ್ಲವಿ ಅವರ ಮುದ್ದಾದ ಅಭಿನಯ ಪ್ರೇಕ್ಷಕರ ಮನಗೆದ್ದಿದೆ.
ʼಅಮರನ್ʼ ಸಿನಿಮಾದಲ್ಲಿನ ಒಂದು ದೃಶ್ಯ ಚೆನ್ನೈ ಮೂಲಕ ವಿದ್ಯಾರ್ಥಿಯೊಬ್ಬನಿಗೆ ಇಕ್ಕಟ್ಟಿನ ಪರಿಸ್ಥಿತಿಯನ್ನು ತಂದಿಟ್ಟಿರುವ ಬಗ್ಗೆ ʼದಿ ಹಿಂದೂʼ ವರದಿ ಮಾಡಿದೆ.
ಏನಿದು ಘಟನೆ?: ʼಅಮರನ್ʼ ಸಿನಿಮಾದಲ್ಲಿ ಮೇಜರ್ ಮುಕುಂದ್ ವರದರಾಜನ್ ಅವರ ಪತ್ನಿಯ ಪಾತ್ರದಲ್ಲಿ ಸಾಯಿಪಲ್ಲವಿ (ಇಂಧೂ ರೆಬೆಕ್ಕಾ ವರ್ಗೀಸ್) ಕಾಣಿಸಿಕೊಂಡಿದ್ದಾರೆ. ಸಿನಿಮಾದಲ್ಲಿ ಸಾಯಿಪಲ್ಲವಿ ಕಾಗದವೊಂದರಲ್ಲಿ ತಮ್ಮ ಮೊಬೈಲ್ ನಂಬರ್ ವೊಂದನ್ನು ಬರೆದು ಶಿವಕಾರ್ತಿಕೇಯನ್ ಅವರ ಬಳಿ ಎಸೆಯುವ ದೃಶ್ಯವಿದೆ. ಈ ಕಾಗದದಲ್ಲಿ ಎರಡು ನಂಬರ್ ಇರುತ್ತದೆ.
ಈ ನಂಬರ್ ಈಗ ವಿದ್ಯಾರ್ಥಿಗೆ ತಲೆ ನೋವಿನ ವಿಷಯವಾಗಿ ಕಾಡಿದೆ. ಅಸಲಿಗೆ ವಿಷಯ ಏನಂದರೆ ಕಾಗದದಲ್ಲಿ ಸಾಯಿಪಲ್ಲವಿ ಬರೆದ ನಂಬರ್ ಗಳಿಗೆ ಪ್ರೇಕ್ಷಕರು ಕರೆ ಮಾಡಿದ್ದಾರೆ. ಇದರಲ್ಲಿ ಒಂದು ನಂಬರ್ ಚಾಲ್ತಿಯಲ್ಲಿ ಇಲ್ಲ. ಆದರೆ ಇನ್ನೊಂದು ನಂಬರ್ ಚೆನ್ನೈನ ವಿದ್ಯಾರ್ಥಿ ವಾಗೀಶನ್ ವಿವಿ ಎನ್ನುವವನದ್ದು.
ಸಿನಿಮಾ ನೋಡಿದವರು ಕಾಗದದಲ್ಲಿನ ನಂಬರ್ ನಿಜವಾಗಿಯೂ ಸಾಯಿಪಲ್ಲವಿ ಅವರ ನಂಬರ್ ಆಗಿದೆ ಅಥವಾ ಮೇಜರ್ ಮುಕುಂದ್ ವರದರಾಜನ್ ಅವರ ಪತ್ನಿ ಇಂಧೂ ರೆಬೆಕ್ಕಾ ವರ್ಗೀಸ್ ಅವರ ನಂಬರ್ ಆಗಿರಬಹುದೆಂದು ನೂರಾರು ಕರೆಗಳನ್ನು ಮಾಡಿದ್ದಾರೆ.
ಎಲ್ಲ ಕರೆಗಳಿಗೆ ಉತ್ತರಿಸಿ ಉತ್ತರಿಸಿ ವಾಗೀಶನ್ ಸುಸ್ತಾಗಿದ್ದಾನೆ. ಇದಲ್ಲದೆ ಟ್ರೂ ಕಾಲರ್ನಲ್ಲಿ ಯಾರೋ ಕಿಡಿಗೇಡಿಗಳು ವಾಗೀಶನ್ ಅವರ ನಂಬರ್ ಗೆ ರೆಬೆಕ್ಕಾ ಅವರ ಹೆಸರು ಸೇರಿಸಿ ಎಡಿಟ್ ಮಾಡಿದ್ದಾರೆ. ಇದು ವಾಗೀಶನ್ ಮತ್ತಷ್ಟು ಸಂಕಷ್ಟ ತಂದಿಟ್ಟಿದೆ.
ಸದ್ಯ ವಾಗೀಶನ್ ತನ್ನ ಈ ಸಂಖ್ಯೆಯನ್ನು ಬ್ಯಾಂಕ್ ಹಾಗೂ ಇತರೆ ದಾಖಲೆಗಳಿಗೆ ನೀಡಿದ್ದು, ತಕ್ಷಣಕ್ಕೆ ಬದಲು ಮಾಡಲು ಆಗುತ್ತಿಲ್ಲ.
ಇನ್ನೊಂದೆಡೆ ಪೋನ್ ನಂಬರ್ ಎಸೆಯುವ ದೃಶ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.